ರಘು ದೀಕ್ಷಿತ್
ಅಂತಾರಾಷ್ಟ್ರೀಯ ಕನ್ನಡ ಸಂಗೀತಗಾರ
– ಡಾ| ಯು. ಬಿ. ಪವನಜ
ಹೊಸ ತಲೆಮಾರಿನ ಸಂಗೀತ ಸಂಯೋಜಕ ಗಾಯಕರಲ್ಲಿ ರಘು ದೀಕ್ಷಿತ್ ಅವರದು ಒಂದು ವಿಶಿಷ್ಟ ಸ್ಥಾನ. ಇತರೆ ಯಾವುದೇ ಸಂಗೀತಗಾರರ ಪಂಗಡಕ್ಕೆ ಅವರನ್ನು ಸೇರಿಸಲಾಗುವುದಿಲ್ಲ. ಸ್ವಲ್ಪ ಮಟ್ಟಿಗೆ ಇಂಡಿಪಾಪ್ ಅಂದುಕೊಂಡರೂ ಗಮನಕೊಟ್ಟು ಆಲಿಸಿದರೆ ಅವರದು ತಮ್ಮದೇ ಪ್ರತ್ಯೇಕ ವಿಭಾಗ ಅನ್ನಿಸುವುದು. ತಮ್ಮದೇ ಆದ ಒಂದು ಸಂಸ್ಥೆ “ದಿ ರಘು ದೀಕ್ಷಿತ್ ಪ್ರಾಜೆಕ್ಟ್” ಎಂಬ ಹೆಸರಿನಲ್ಲಿ ಸ್ಥಾಪಿಸಿ ತಮ್ಮ ಸಂಗೀತವನ್ನು ಪ್ರಪಂಚಾದ್ಯಂತ ಹಂಚಿದ್ದಾರೆ. ಹಲವು ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ಇವರ ಸ್ನಾತಕೋತ್ತರ ಪದವಿ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಜೈವರಸಾಯನಿಕಶಾಸ್ತ್ರದಲ್ಲಿ. ಜೊತೆಗೆ ಭರತನಾಟ್ಯದಲ್ಲಿ ವಿದ್ವತ್. ಕೆಲವು ಕಾಲ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೆಲಸ. ಕೊನೆಗೊಮ್ಮೆ ಅದೆಲ್ಲವನ್ನು ಬಿಟ್ಟು ಸಂಗೀತವೇ ನನ್ನ ಕಾರ್ಯಕ್ಷೇತ್ರ ಎಂಬುದನ್ನು ಕಂಡುಕೊಂಡು ಕೆಲಸ ತ್ಯಜಿಸಿ ಪೂರ್ಣಪ್ರಮಾಣದಲ್ಲಿ ಸಂಗೀತದಲ್ಲಿ ತೊಡಗಿಸಿಕೊಂಡು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ. ತುಂಬ ಭರವಸೆಯ ಹೊಸ ಸಂಗೀತಗಾರ ಎಂಬ ಜಾಗತಿಕ ಮಟ್ಟದ ಪ್ರಶಸ್ತಿಯನ್ನು ಸಾಂಗ್‌ಲೈನ್ಸ್‌ನಿಂದ ಪಡೆದಿದ್ದಾರೆ.
ಇವರ ಸಂಗೀತದ ಕಥೆಯೂ ಒಂದು ರೀತಿಯಲ್ಲಿ ಕುವೆಂಪು ಅವರಂತೆ. ಅವರಿಗೆ ವಿದೇಶಿಯರೊಬ್ಬರು ಇಂಗ್ಲಿಶಿನಲ್ಲಿ ಯಾಕೆ ಬರೆಯುತ್ತೀಯಾ, ನಿನ್ನ ಮಾತೃಭಾಷೆಯಲ್ಲೇ ಬರೆ ಎಂದು ಹೇಳಿದುದರಿಮದ ಅವರು ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದರು. ರಘು ದೀಕ್ಷಿತ್ ಅವರೂ ಪ್ರಾರಂಭದಲ್ಲಿ ಇಂಗ್ಲಿಶ್ ಹಾಡುಗಳನ್ನು ನುಡಿಸುತ್ತಿದ್ದರು. ವಿದೇಶೀಯರೊಬ್ಬರು ನೀನು ನಿನ್ನ ಭಾಷೆಯಲ್ಲೇ ಹಾಡು ಎಂದು ಹೇಳಿದುದರಿಂದ ಕನ್ನಡದಲ್ಲಿ ಹಾಡಲು ಪ್ರಾರಂಭಿಸಿದರು. ನಂತರ ಹಿಂದಿಯನ್ನೂ ಸೇರಿಸಿಕೊಂಡರು. ಕನ್ನಡ ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋದ ಖ್ಯಾತಿ ರಘು ದೀಕ್ಷಿತ್ ಅವರದು. ಯಾವ ದೇಶದಲ್ಲೇ ಹೋಗಿ ಹಾಡಲಿ ಅವರು ಕನ್ನಡ ಹಾಡನ್ನು ಹಾಡಲು ಮರೆಯುವುದಿಲ್ಲ. ಈಗಿನ ಯುವ ಪೀಳಿಗೆಯವರಿಗೆ ತುಂಬ ಅಚ್ಚುಮೆಚ್ಚಿನ ಗಾಯಕ ರಘು ದೀಕ್ಷಿತ್. ಸೈಕೋ ಚಿತ್ರದಲ್ಲಿ ಅವರು ಸಂಗೀತ ನೀಡಿ ಹಾಡಿದ “ನಿನ್ನ ಪೂಜೆಗೆ ಬಂದೆ” ಹಾಡು ಎಲ್ಲರ ಬಾಯಲ್ಲಿ ನಲಿದಾಡುತ್ತಿದೆ. ಅವರು ಕನ್ನಡ ಹಾಡಿನ ಜೊತೆ ಕನ್ನಡಿಗರು ತೊಡುವ ಲುಂಗಿಯನ್ನೂ ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ರಘು ದೀಕ್ಷಿತ್ ಟ್ವಿಟ್ಟರಿನಲ್ಲಿ ತುಂಬ ಚಟುವಟಿಕೆಯಿಂದಿರುತ್ತಾರೆ. ಬಹುಮಂದಿ ಖ್ಯಾತನಾಮರು ಟ್ವಿಟ್ಟರ್ ಅನ್ನು ತಮ್ಮ ಪ್ರಚಾರಕ್ಕೆ ಮಾತ್ರ ಬಳಸಿಕೊಳ್ಳುತ್ತಾರೆ. ಅವರು ಇತರೆ ಮಂದಿ ಜೊತೆ ವ್ಯವಹರಿಸುವುದು ತುಂಬ ಕಡಿಮೆ. ಅಂದರೆ ಅವರು ಇತರರ ಟ್ವೀಟ್‌ಗಳಿಗೆ ಉತ್ತರಿಸುವುದು ಕಡಿಮೆ. ಆದರೆ ರಘು ದೀಕ್ಷಿತ್ ಹಾಗಲ್ಲ. ನನಗೆ ಅವರ ಸಂಪರ್ಕ ಆದುದೇ ಟ್ವಿಟ್ಟರ್ ಮೂಲಕ. ನಾವು ಟ್ವಿಟ್ಟ್‌ನಲ್ಲಿ ಒಬ್ಬರನ್ನೊಬ್ಬರು ಹಲವು ಸಲ ಕಾಲೆಳೆದಿದ್ದೇವೆ. ನಮ್ಮ ಇನ್ನೊಬ್ಬ ಸ್ನೇಹಿತ ರಘು ಅವರಿಗೆ “ನಾನು ನಿಮ್ಮ ಫ್ಯಾನ್, ನಿಮ್ಮ ರೀತಿಯೇ ಗಡ್ಡ ಬಿಟ್ಟಿದ್ದೇನೆ” ಎಂದು ಟ್ವೀಟ್ ಮಾಡಿದಾಗ “ಹಾಗಿದ್ದರೆ ಇಂದಿನ ನನ್ನ ಕಾರ್ಯಕ್ರಮಕ್ಕೆ ಲುಂಗಿ ಉಟ್ಟುಕೊಂಡು ಬಾ” ಎಂದು ರಘು ಉತ್ತರಿಸಿದ್ದರು. ತಮ್ಮ ಲುಂಗಿಯನ್ನು ದಾರದಿಂದ ಕಟ್ಟಲಾಗಿದೆ, ವೆಲ್‌ಕ್ರೋ ಬಳಸಲಾಗಿದೆ ಎಂದೂ ಗುಟ್ಟು ಬಿಟ್ಟುಕೊಟ್ಟಿದ್ದರು.
ರಘು ದೀಕ್ಷಿತ್ ಜೊತೆ ಲೇಖಕರು
ನಿಮ್ಮ ಸಂದರ್ಶನವನ್ನು ವಿಶ್ವಕನ್ನಡಕ್ಕಾಗಿ ನಡೆಸಬೇಕು ಎಂದು ಟ್ವೀಟ್ ಮಾಡಿದಾಗ, ಖಂಡಿತ, ಇಮೈಲ್ ಮೂಲಕ ಮಾಡೋಣ ಎಂದಿದ್ದರು. ಆದರೆ ನನಗೆ ಯಾಕೋ ಇಮೈಲ್ ಮೂಲಕ ಸಂದರ್ಶನ ಮಾಡಲು ಇಷ್ಟವಾಗಲಿಲ್ಲ. ಹಾಗೆ ಮಾಡಿದರೆ ಕೆಲವು ಪೂರ್ವನಿರ್ಧಾರಿತ ಪ್ರಶ್ನೆಗಳು ಮತ್ತು ಅವಕ್ಕೆ ಉತ್ತರಗಳು ಅಷ್ಟೇ ಸಿಗುತ್ತಿದ್ದವು. ಆದರೆ ಉತ್ತರವನ್ನು ಹೊಂದಿಕೊಂಡು ಮುಂದಿನ ಪ್ರಶ್ನೆ ಕೇಳಲಾಗುವುದಿಲ್ಲ. ಸೂಕ್ತ ಸಮಯಕ್ಕೆ ಕಾಯುತ್ತಿದ್ದೆ. ಮೈಸೂರಿನ ಜೆ.ಸಿ. ಕಾಲೇಜಿನಲ್ಲಿ ಅವರ ಕಾರ್ಯಕ್ರಮ ಇದೆ ಎಂದು ತಿಳಿದೊಡನೆ ಅವರಿಗೆ ಸಂದರ್ಶನಕ್ಕೆ ಸಮಯ ಕೊಡಬೇಕು ಎಂದು ಟ್ವೀಟ್ ಮಾಡಿದೆ. ಆಗಲಿ ಎಂದು ಉತ್ತರ ಬಂತು. “ಕಾರ್ಯಕ್ರಮಕ್ಕೆ ಮೊದಲು ವೇದಿಕೆ ಮತ್ತು ಧ್ವನಿ ವ್ಯವಸ್ಥೆಯನ್ನು ಪರೀಕ್ಷಿಸಲಿದೆ. ಆಗ ಅಲ್ಲಿಗೆ ಬನ್ನಿ” ಎಂದರು. ಅಂತೇಯೇ ಅಲ್ಲಿ ಹೋಗಿ ಅವರಿಗೆ ಕಾಯುತ್ತಿದ್ದೆ. ಅವರು ಬಂದೊಡನೆ ನನ್ನ ಪರಿಚಯ ಹೇಳಿದೆ. “ಹೇಗಿತ್ತೂರಿ ಮಧ್ಯಾಹ್ನದ ನಳಪಾಕ ಹೋಟೆಲಿನ ಊಟ” ಎಂದು ಬಾಂಬ್ ಹಾಕಿದರು. ಮೈಕ್‌ನವನು ಇಂಗ್ಲಿಶಿನಲ್ಲಿ ಮಾತನಾಡಿದಾಗ “ಕನ್ನಡದಲ್ಲಿ ಮಾತನಾಡಯ್ಯ” ಎಂದು ರೇಗಿದರು. ಕಾರ್ಯಕ್ರಮದ ಆಯೋಜಕರಿಗೆ “ಇಲ್ಲಿ ಹಾಕಿರುವ ಕುರ್ಚಿಗಳನ್ನೆಲ್ಲ ತೆಗೆದುಬಿಡಿ, ನನ್ನ ಕಾರ್ಯಕ್ರಮದಲ್ಲಿ ಯಾರೂ ಕುಳಿತುಕೊಳ್ಳಬಾರದು, ಎಲ್ಲರೂ ಡ್ಯಾನ್ಸ್ ಮಾಡುತ್ತಿರಬೇಕು” ಎಂದು ತಾಕೀತು ಮಾಡಿದರು.
ನಂತರ ಅವರ ಜೊತೆ ಒಂದು ಗಂಟೆ ಕಾಲ ಕಳೆದು ನಡೆಸಿದ ಸಂದರ್ಶನ ಇಲ್ಲಿದೆ.
ಹಾಗೆಯೇ ಇವನ್ನೂ ನೋಡಿ:
- ಮೈಸೂರಿನ ಜೆ.ಸಿ. ಕಾಲೇಜಿನಲ್ಲಿ ರಘು ದೀಕ್ಷಿತ್ ಕಾರ್ಯಕ್ರಮದ ಛಾಯಾಚಿತ್ರಗಳು (ಪವನಜರಿಂದ).
- ರಘು ದೀಕ್ಷಿತ್ ಅವರ ಅಧಿಕೃತ ಜಾಲತಾಣ.
- ವಿಕಿಪೀಡಿಯದಲ್ಲಿ ರಘು ದೀಕ್ಷಿತ್ ಬಗ್ಗೆ.