Press "Enter" to skip to content

ಥೋಮ್ಸನ್ ಸ್ಮಾರ್ಟ್‌ ಟಿವಿ 49 ಓಎಟಿಎಚ್9000

ಉತ್ತಮ ಆಂಡ್ರೋಯಿಡ್ ಟಿವಿ

ಜನವರಿ 2018ರಲ್ಲಿ ಭಾರತದಲ್ಲಿ ಟಿ.ವಿ. ಮಾರಾಟ ಪ್ರಾರಂಭಿಸಿದ ಥೋಮ್ಸನ್ ಮೂಲತಃ ಫ್ರಾನ್ಸ್ ದೇಶದ್ದು. ಭಾರತದಲ್ಲಿ ಈ ಕಂಪೆನಿ ಸೂಪರ್ ಪ್ಲಾಸ್ಟ್ರೋನಿಕ್ಸ್ ಕಂಪೆನಿಯಿಂದ ತನ್ನ ಟಿ.ವಿ.ಗಳನ್ನು ತಯಾರಿಸಿ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಮಾಡುತ್ತಿದೆ. ಭಾರತದಲ್ಲೇ ತಯಾರಿಸಿ ಎಂಬ ಘೋಷಣೆಗೆ ಅನುಗುಣವಾಗಿ ಇದು ಭಾರತದಲ್ಲೇ ತನ್ನ ಟಿ.ವಿ.ಗಳನ್ನು ತಯಾರಿಸುತ್ತಿದೆ. ಹಲವು ಸ್ಮಾರ್ಟ್ ಟಿ.ವಿ. ಮತ್ತು ಮಾಮೂಲಿ ಫ್ಲಾಟ್ ಟಿ.ವಿ.ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಥೋಮಸ್ನ್ ಕಂಪೆನಿ ಒಂದೂವರೆ ವರ್ಷದಲ್ಲಿ ಅಂತರಜಾಲದ ಮೂಲಕ ಮಾರಾಟವಾಗುತ್ತಿರುವ ಬ್ರ್ಯಾಂಡ್‌ಗಳಲ್ಲಿ ಗಣನೀಯವಾದ ಸ್ಥಾನವನ್ನು ಪಡೆದಿದೆ. ಥೋಮ್ಸನ್ ಸ್ಮಾರ್ಟ್‌ಟಿವಿ 49 ಓಎಟಿಎಚ್9000 (Thomson 49 OATH 9000) ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು

ಮಾದರಿ ಎಲ್‌ಇಡಿ ಸ್ಮಾರ್ಟ್‌ಟಿವಿ
ಪರದೆ ಗಾತ್ರ 49 ಇಂಚು
ಪರದೆ 3840 x 2160 ಪಿಕ್ಸೆಲ್ ರೆಸೊಲೂಶನ್‌ನ ಎಲ್‌ಇಡಿ
ಪ್ರೋಸೆಸರ್ ನಾಲ್ಕು ಹೃದಯಗಳ (A53), Mali-T860
ಮೆಮೊರಿ 2.5 + 16 ಗಿಗಾಬೈಟ್
ಸ್ಪೀಕರ್ 15W x 2
ಕಿಂಡಿಗಳು (ports) ಯುಎಸ್‌ಬಿ (2), ಎಚ್‌ಡಿಎಂಐ (3), AV(1), ಎತರ್‌ನೆಟ್ (1), 3.5 ಮಿ.ಮೀ. ಹೆಡ್‌ಫೋನ್ (1)
ಸಂಪರ್ಕ ವೈಫೈ, ಎತರ್‌ನೆಟ್, ಬ್ಲೂಟೂತ್
ವಿಡಿಯೋ ಫೈಲ್ ಬೆಂಬಲ AVI, MKV, MOV, MPEG-1, VOB, DAT
ಗಾತ್ರ 1000 x 620 x 145 ಮಿ.ಮೀ.
ಕಾರ್ಯಾಚರಣ ವ್ಯವಸ್ಥೆ ಆಂಡ್ರೋಯಿಡ್ 8.0
ಬೆಲೆ ₹ 34,999

ರಚನೆ ಮತ್ತು ವಿನ್ಯಾಸ

ಗ್ಯಾಜೆಟ್‌ಲೋಕ ಅಂಕಣದಲ್ಲಿ ಹಿಂದೊಮ್ಮೆ ಥೋಮ್ಸನ್ ಟಿ.ವಿ.ಯೊಂದರ ಬಗ್ಗೆ ವಿಮರ್ಶೆ ಬರೆದಿದ್ದೆ. ಅಲ್ಲಿ ಬರೆದ ಹಲವು ವಾಕ್ಯಗಳು ಇಲ್ಲಿಯೂ ಪ್ರಸ್ತುತ. ಆದುದರಿಂದ ಅವುಗಳನ್ನು ಹಾಗೆಯೇ ಬಳಸುತ್ತಿದ್ದೇನೆ. ಈ ಟಿವಿಯ ರಚನೆ ಮತ್ತು ವಿನ್ಯಾಸ ಪರವಾಗಿಲ್ಲ. ಇದರಲ್ಲಿ ಅದ್ಭುತ ಎಂದು ಹೇಳುವಂತಹದ್ದೇನೂ ಇಲ್ಲ. ಪರದೆಗಿಂತ ತುಂಬ ಹೆಚ್ಚಿನ ದೇಹ ಇದಕ್ಕಿಲ್ಲ. ದಪ್ಪವೂ ಕಡಿಮೆ ಇದೆ. ಅದಕ್ಕೆ ಅವರು ಒಂದು ಪಟ್ಟಿ (ಫ್ರೇಂ) ನೀಡಿದ್ದಾರೆ. ಇದರಿಂದಾಗಿ ಪರದೆಗೆ ಹಾನಿಯಾಗುವುದನ್ನು ತಡೆಗಟ್ಟಬಹುದು. ಹಿಂದುಗಡೆ ಸ್ವಲ್ಪ ಕೆಳಗಡೆ ಪ್ರಮುಖ ಇಲೆಕ್ಟ್ರಾನಿಕ್ ಭಾಗಗಳು ಇರುವ ಅಂಗ ಇದೆ. ಅದು ಸ್ವಲ್ಪ ದಪ್ಪ ಇದೆ. ಇದರೊಳಗಡೆ ಸ್ಪೀಕರುಗಳಿವೆ ಹಾಗೂ ಇದರ ಒಂದು ಪಕ್ಕದಲ್ಲಿ ಕಿಂಡಿಗಳಿವೆ. ಈ ಟಿವಿಯನ್ನು ಗೋಡೆಗೆ ನೇತುಹಾಕಬಹುದು ಅಥವಾ ಇದರ ಸ್ಟ್ಯಾಂಡ್ ಮೇಲೆ ಇಡಬಹುದು. ಸ್ಟ್ಯಾಂಡ್ ನೀಡಿದ್ದಾರೆ. ಗೋಡೆಗೆ ನೇತುಹಾಕಲು ಆಗತ್ಯ ಜೋಡಣೆಗಳನ್ನು ನೀಡಿಲ್ಲ. ಅವನ್ನು ಪ್ರತ್ಯೇಕವಾಗಿ ಕೊಳ್ಳಬೇಕು. ಮನೆಯಲ್ಲಿ ಇದು ನೋಡಲು ಸುಂದರವಾಗಿ ಕಾಣಿಸುತ್ತದೆ.

ಹಿಂದುಗಡೆ ಕೆಳಭಾಗದಲ್ಲಿರುವ ದಪ್ಪದ ಭಾಗದಲ್ಲಿ ಪವರ್ ಕೇಬಲ್, ಯುಎಸ್‌ಬಿ, ಎಚ್‌ಡಿಎಂಐ, ಆಡಿಯೋ, ಇಥರ್‌ನೆಟ್ ಪೋರ್ಟ್, ಇತ್ಯಾದಿ ಕಿಂಡಿಗಳು ಇವೆ. ಮೇಜಿನ ಅಥವಾ ಟಿ.ವಿ. ಸ್ಟ್ಯಾಂಡಿನ ಮೇಲೆ ಇಡಲು ಬೇಕಾದ ಕಾಲುಗಳನ್ನು ಜೋಡಿಸಿ ಇಟ್ಟರೆ ಸುಂದರವಾಗಿ ಕಾಣುತ್ತದೆ. 

ಆಂಡ್ರೋಯಿಡ್

ಇದರ ಕಾರ್ಯಾಚರಣ ವ್ಯವಸ್ಥೆ ಸ್ವಲ್ಪ ಹಳೆಯ ಆಂಡ್ರೋಯಿಡ್ 8.0. ಆಂಡ್ರೋಯಿಡ್‌ನ ಹಲವು ಆಪ್‌ಗಳು ಇದರಲ್ಲಿವೆ. ಆದರೂ ಕೆಲವು ಅತೀ ಅಗತ್ಯದ ಆಪ್‌ಗಳು ಇಲ್ಲ. ಗೂಗ್ಲ್ ಪ್ಲೇ ಸ್ಟೋರಿನಿಂದ ಕೆಲವು ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಹಾಕಿಕೊಳ್ಳಬಹುದು. ಇದು ಶುದ್ಧ ಆಂಡ್ರೋಯಿಡ್ ಎಂದು ಅವರು ಹೇಳಿಕೊಂಡರೂ ಹಾಗೆಂದು ನನಗೆ ಅನ್ನಿಸಲಿಲ್ಲ. ಕಿರುತಂತ್ರಾಂಶಗಳ (ಆಪ್) apk ಫೈಲ್‌ಗಳನ್ನು ಎಲ್ಲಿಂದಾದರೂ (ಉದಾ – apkpure.com) ತಂದು ಇದಕ್ಕೆ ಹಾಕಿದರೂ ಹಲವು apk ಫೈಲ್‌ಗಳನ್ನು ಇದು ಕೆಲಸ ಮಾಡಲು ಬಿಡುವುದಿಲ್ಲ. ಉದಾಹರಣೆಗೆ ಅಮೆಝಾನ್‌ನವರ ಪ್ರೈಮ್ ವಿಡಿಯೋ.  ಆದರೂ ಈ ಟಿ.ವಿ.ಯು ಥೋಮ್ಸನ್‌ನವರದೇ ಹಳೆಯ ಆವೃತ್ತಿಯ ಟಿ.ವಿ.ಗಿಂತ ಈ ವಿಷಯದಲ್ಲಿ ಎಷ್ಟೋ ಸುಧಾರಿಸಿದೆ ಎನ್ನಬಹುದು. ಈ ಟಿ.ವಿ.ಯ ದೂರನಿಯಂತ್ರಕದಲ್ಲಿ ಗೂಗ್ಲ್‌ಗೆ ಧ್ವನಿಯ ಮೂಲಕ ಆದೇಶ ನೀಡುವ ಸವಲತ್ತು ಇದೆ. ಇದು ನಿಜಕ್ಕೂ ಚೆನ್ನಾಗಿದೆ. ಆದರೆ ಈ ಸವಲತ್ತನ್ನು ಚಾಲನೆ ಮಾಡುವುದ ಹೇಗೆ ಎಂದು ಅವರ ಕೈಪಿಡಿಯಲ್ಲಿ ಸರಿಯಾಗಿ ನಮೂದಿಸಿಲ್ಲ. ಸ್ವಲ್ಪ ಕಸರತ್ತು ಮಾಡಿ ಅದನ್ನು ಪತ್ತೆ ಹಚ್ಚಬೇಕು!

ಪರದೆ

ಪರದೆಯ ರೆಸೊಲೂಶನ್ ಮತ್ತು ಗುಣಮಟ್ಟ ಉತ್ತಮವಾಗಿದೆ. ಬಣ್ಣಗಳ ಪುರುತ್ಪತ್ತಿ ಉತ್ತಮವಾಗಿದೆ ಮತ್ತು ನೈಜವಾಗಿದೆ. ಹೈಡೆಫಿನಿಶನ್ ವಿಡಿಯೋಗಳನ್ನು ವೀಕ್ಷಿಸುವ ಅನುಭವವೂ ಚೆನ್ನಾಗಿದೆ. ಇದು ಕಂಪೆನಿಯವರು ಹೇಳಿಕೊಂಡ ಪ್ರಕಾರ 4k ರೆಸೊಲೂಶನ್‌ನ ಪರದೆಯುಳ್ಳ ಟಿವಿ. 4k ರೆಸೊಲೂಶನ್‌ನ ವಿಡಿಯೋಗಳನ್ನು ಯಾವುದೇ ಅಡೆತಡೆಯಿಲ್ಲದೆ ಪ್ಲೇ ಮಾಡಬಹುದು. ಯುಟ್ಯೂಬ್‌ನಲ್ಲಿರುವ 4k ವಿಡಿಯೋಗಳನ್ನು ಪ್ಲೇ ಮಾಡಿ ನೋಡಿದೆ. ಅವೆಲ್ಲ ಚೆನ್ನಾಗಿ ಪ್ಲೇ ಆದವು. ವೀಕ್ಷಣೆಯ ಅನುಭವ ಅತ್ಯುತ್ತಮವಾಗಿದೆ ಎನ್ನಬಹುದು.

ಆಡಿಯೋ

ಇದರ ಸ್ಪೀಕರುಗಳು ಕೆಳಮುಖವಾಗಿವೆ. ಟಿ.ವಿ.ಯನ್ನು ಅದರ ಕಾಲುಗಳನ್ನು ಜೋಡಿಸಿ ಮರದ ಮೇಜಿನ ಮೇಲೆ ಇಟ್ಟರೆ ಸ್ಪೀಕರಿನ ಧ್ವನಿ ಮರದ ಮೇಲ್ಮೈಯಿಂದ ಪ್ರತಿಫಲಿಸಿ ಉತ್ತಮ ಅನುಭವ ನೀಡುತ್ತದೆ. ಟಿವಿಯನ್ನು ಗೋಡೆಗೆ ನೇತುಹಾಕಿದರೆ ಇದರಿಂದ ವಂಚಿತರಾಗುತ್ತೀರಿ. ಆಡಿಯೋ ಒಂದು ಮಟ್ಟಿಗೆ ತೃಪ್ತಿಯನ್ನು ನೀಡುತ್ತದೆ. ಟಿ.ವಿ.ಯ ಧ್ವನಿಯನ್ನು ನಿಮ್ಮಲ್ಲಿ ಉತ್ತಮ ಆಂಪ್ಲಿಫೈಯರ್ ಇದ್ದರೆ ಅದಕ್ಕೆ ಜೋಡಿಸಿ ಇನ್ನೂ ಉತ್ತಮ ಸಂಗೀತದ ಅನುಭವ ಪಡೆಯಬಹುದು.

ಇದರಲ್ಲಿ 15 ವ್ಯಾಟ್‌ನ ಎರಡು ಸ್ಪೀಕರುಗಳಿವೆ. ಆಡಿಯೋ ಇಂಜಿನ್ ಸುಮಾರಾಗಿದೆ. ಆದರೆ ಸ್ಪೀಕರುಗಳ ಗುಣಮಟ್ಟ ಅಷ್ಟೇನೂ ತೃಪ್ತಿದಾಯಕವಾಗಿಲ್ಲ. ಇದರಲ್ಲಿ ಸಬ್‌ವೂಫರ್ ಔಟ್‌ಪುಟ್ ಇದೆ. ಉತ್ತಮ ಧ್ವನಿ ಬೇಕಿದ್ದಲ್ಲಿ ಪ್ರತ್ಯೇಕ ಆಂಪ್ಲಿಫೈಯರ್ ಮತ್ತು ಸ್ಪೀಕರುಗಳು ಇದ್ದಲ್ಲಿ ಅದಕ್ಕೆ ಜೋಡಿಸುವುದೇ ಉತ್ತಮ.

ಸಂಪರ್ಕ ಹಾಗೂ ಸವಲತ್ತುಗಳು

ಇದರಲ್ಲಿ ಡಿಎಲ್‌ಎನ್‌ಎ ಇದೆ. ಇದರಲ್ಲೇ ಕ್ರೋಮ್‌ಕಾಸ್ಟ್ ಅಡಕವಾಗಿದೆ. ಅಂದರೆ ಈ ಟಿವಿಯನ್ನು ನಿಮ್ಮ ಸ್ಮಾರ್ಟ್‌ಫೋನಿಗೆ ಇನ್ನೊಂದು ಪರದೆಯಾಗಿ ಕೂಡ ಬಳಸಬಹುದು. ಅದಕ್ಕೆ ಕಾಸ್ಟಿಂಗ್ ಎನ್ನುತ್ತಾರೆ. ಹಾಗೆ ಬಳಸಬೇಕಾದರೆ ಟಿವಿ ಮತ್ತು ಫೋನ್ ಎರಡೂ ಒಂದೇ ವೈಫೈ ಜಾಲದಲ್ಲಿ ಇರತಕ್ಕದ್ದು. ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಅಥವಾ ಟ್ಯಾಬ್ಲೆಟ್‌ಗಳಲ್ಲಿರುವ ಫೋಟೋಗಳನ್ನು ಚಿಕ್ಕ ಪರದೆಯಲ್ಲಿ ವೀಕ್ಷಿಸುವ ಬದಲಿಗೆ ಈ ಟಿವಿಯನ್ನು ಫೋನಿಗೆ ಇನ್ನೊಂದು ಪರದೆಯನ್ನಾಗಿಸಿ ದೊಡ್ಡ ಗಾತ್ರದಲ್ಲಿ ವೀಕ್ಷಿಸಬಹುದು. ಫೋನಿನಿಂದ ವಿಡಿಯೋಗಳನ್ನೂ ಪ್ಲೇ ಮಾಡಬಹುದು. ಗಣಕಕ್ಕೆ ಮೋನಿಟರ್ ಆಗಿಯೂ ಬಳಸಬಹುದು. ಆದರೆ ರಿಲಯನ್ಸ್ ಜಿಯೊಟಿವಿಯನ್ನು ಈ ರೀತಿಯಲ್ಲಿ ಕಾಸ್ಟಿಂಗ್ ಮಾಡಲು ಅದು ಅನುಮತಿಸುವುದಿಲ್ಲ.

ಒಟ್ಟಿನಲ್ಲಿ ನೀಡುವ ಬೆಲೆಗೆ ತಕ್ಕ ಉತ್ಪನ್ನ ಎನ್ನಬಹುದು.

-ಡಾ| ಯು.ಬಿ. ಪವನಜ

gadgetloka AT gmail DOT com

Be First to Comment

Leave a Reply

Your email address will not be published. Required fields are marked *