Press "Enter" to skip to content

ಜಾಲತಾಣ ವಿಳಾಸಗಳ

ಸಾರ್ವತ್ರಿಕ ಸ್ವೀಕೃತಿ

ಅಂತರಜಾಲ ತಾಣಗಳು ಮತ್ತು ಅವುಗಳ ವಿಳಾಸ ಅಂದ ಕೂಡಲೆ ನಮಗೆ ನೆನಪಾಗುವುದು ಇಂಗ್ಲಿಷ್ ಭಾಷೆಯಲ್ಲಿರುವ www ನಿಂದ ಪ್ರಾರಂಭವಾಗುವ ವಿಳಾಸಗಳು. ಉದಾಹರಣೆಗೆ www.google.com, www.vishvakannada.com, ಇತ್ಯಾದಿ. ಇದರಲ್ಲಿ www ಅಂದರೆ world-wide web ಅಂದರೆ ವಿಶ್ವವ್ಯಾಪಿ ಜಾಲ. ಎರಡನೆಯ ಭಾಗ google ಅಥವಾ vishvakannada ಜಾಲತಾಣದ ಹೆಸರು. ಮೂರನೆಯ ಭಾಗ .com ಅಂದರೆ commercial ಎಂದು. ಇದು .net, .org, ಇತ್ಯಾದಿ ಮೂರಕ್ಷರದ ಅಥವಾ .in, .gov.in, ಇತ್ಯಾದಿ ಇರಬಹುದು. ಇಲ್ಲಿ .in ಅಂದರೆ India ಅಂದರೆ ಭಾರತ. ಈ ವಿಳಾಸಗಳು ಇಂಗ್ಲಿಷಿನಲ್ಲೇ ಯಾಕಿರಬೇಕು? ಪ್ರಪಂಚದಲ್ಲಿ ಸರಿಸುಮಾರು 6000 ಭಾಷೆಗಳಿವೆ. ಅವುಗಳಲ್ಲಿ ಇಂಗ್ಲಿಷ್ ಕೂಡ ಒಂದು ಭಾಷೆಯಷ್ಟೆ. ಹಾಗಿರುವಾಗ ಜಾಲತಾಣ ವಿಳಾಸಗಳು ಯಾಕೆ ಇಂಗ್ಲಿಷಿನಲ್ಲೇ ಇರಬೇಕು? ಹಾಗೇನು ಇಲ್ಲ. ಈಗ ಜಾಲತಾಣ ವಿಳಾಸಗಳು ಜಗತ್ತಿನ ಹಲವಾರು ಭಾಷೆಗಳಲ್ಲಿರಬಹುದು. ಇವುಗಳಲ್ಲಿ ಭಾರತೀಯ ಭಾಷೆಯೂ ಸೇರಿವೆ. ಅಂದರೆ ಈಗ ಭಾರತೀಯ ಭಾಷೆಗಳಲ್ಲೂ ಜಾಲತಾಣ ವಿಳಾಸ ಪಡೆದುಕೊಳ್ಳಬಹುದು. ಆದರೆ ಸದ್ಯಕ್ಕೆ ಅವು .ಭಾರತ, .भारत, .భారత, .ഭാരത, ಇತ್ಯಾದಿಗಳಿಗೆ ಮಾತ್ರ ಸೀಮಿತವಾಗಿದೆ. ಡೊಮೈನ್ ನೇಮ್‌ಗಳ ಈ ಭಾಗಕ್ಕೆ ಟಾಪ್ ಲೆವೆಲ್ ಡೊಮೈನ್ (Top Level Domain, TLD) ಎನ್ನುತ್ತಾರೆ. ಈ ಭಾಗದ .in ಗೆ ಪರ್ಯಾಯವಾದ .ಭಾರತ ಎಂಬುದು ಭಾರತೀಯ ಲಿಪಿಗಳಲ್ಲೂ ಲಭ್ಯ. ಈ ಡೊಮೈನ್‌ಗಳ ಬೆಲೆ ತುಂಬ ಇಲ್ಲ. ವರ್ಷಕ್ಕೆ ಸುಮಾರು ರೂ.500 ಆಗಬಹುದಷ್ಟೆ. ಇಂಗ್ಲಿಷಿನಲ್ಲಿ .news, .cooporation, .info, ಇತ್ಯಾದಿ ನಮಗೆ ಬೇಕಾದ ರೀತಿಯಲ್ಲಿ ಹೆಸರು ಪಡೆದುಕೊಳ್ಳಬಹುದು. ಭಾರತೀಯ ಭಾಷೆಗಳಿಗೆ ಈ ಸೌಲಭ್ಯ ಇನ್ನೂ ಬಂದಿಲ್ಲ. ಅಂದರೆ ಕನ್ನಡದಲ್ಲಿ .ಪತ್ರಿಕೆ, .ಮಾಧ್ಯಮ, .ಸುದ್ದಿ, .ಚಲನಚಿತ್ರ, ಇತ್ಯಾದಿ ನಮಗಿಷ್ಟಬಂದ ಟಾಪ್ ಲೆವೆಲ್ ಡೊಮೈನ್ ಪಡೆದುಕೊಳ್ಳುವ ಸೌಲಭ್ಯ ಬಂದಿಲ್ಲ.

ಇಂಗ್ಲಿಷಿನ ಡೊಮೈನ್ ಹೆಸರುಗಳು

ಜಾಲತಾಣ ವಿಳಾಸ ಕನ್ನಡದಲ್ಲಿ ಬಂದಾಗ ಅದರ ಜೊತೆ ಇಮೈಲ್ ಕೂಡ ಇರಬೇಕಲ್ಲ? ಅಂದರೆ ವಿಶ್ವಕನ್ನಡ.ಭಾರತ ಎಂಬ ಜಾಲತಾಣದ ಜೊತೆ ಪವನಜ@ವಿಶ್ವಕನ್ನಡ.ಭಾರತ ಇಮೈಲ್ ಸಾಧ್ಯವಿದೆ. ಅದು ಇದೆ ಕೂಡ. ಅದೇ ರೀತಿ ಇತರೆ ಇಮೈಲ್‌ಗಳೂ ಸಾಧ್ಯವಿದೆ. ಕರ್ನಾಟಕ ಸರಕಾರದ ಜಾಲತಾಣದ ವಿಳಾಸ ಕನ್ನಡದಲ್ಲೂ ಇದೆ. ಅದು ಕರ್ನಾಟಕ.ಸರ್ಕಾರ.ಭಾರತ. ಭಾರತದ ಬೇರೆ ರಾಜ್ಯಗಳು ಇದೇ ರೀತಿ ತಮ್ಮ ತಮ್ಮ ಭಾಷೆಗಳಲ್ಲಿ ತಮ್ಮ ಸರ್ಕಾರದ ಜಾಲತಾಣಗಳಿಗೆ ತಮ್ಮದೇ ಭಾಷೆಯಲ್ಲಿ ಜಾಲತಾಣ ವಿಳಾಸ ಪಡೆದುಕೊಂಡಿದ್ದಾರೋ ಎಂದು ನನಗೆ ಗೊತ್ತಿಲ್ಲ. ಕರ್ನಾಟಕ ಸರ್ಕಾರವು ಕನ್ನಡದಲ್ಲಿ ಜಾಲತಾಣ ವಿಳಾಸವನ್ನೆನೋ ಪಡೆದುಕೊಂಡಿದೆ. ಆದರೆ ಕನ್ನಡದಲ್ಲಿ ಇಮೈಲ್ ವಿಳಾಸ ಪಡೆದುಕೊಂಡಿದೆಯೋ ಎಂದು ನನಗೆ ಮಾಹಿತಿ ಇಲ್ಲ. ಕರ್ನಾಟಕ ಸರ್ಕಾರದ ಇ-ಆಡಳಿತ ವಿಭಾಗವನ್ನು ಈ ಬಗ್ಗೆ ವಿಚಾರಿಸಲು ಯಾವುದೇ ಉತ್ತರ ಬಂದಿಲ್ಲ.

ಮಾಹಿತಿ ತಂತ್ರಜ್ಞಾನದ ಹಲವು ಅಂಗಗಳಲ್ಲಿ ಅಂತರಜಾಲ, ಅದರೊಳಗೆ ಅಡಕವಾದ ವಿಶ್ವವ್ಯಾಪಿ ಜಾಲ, ಇಮೈಲ್ ಎಲ್ಲ ಸೇರಿವೆ. ಇವೆಲ್ಲದರ ನಡುವೆ ಪರಸ್ಪರ ಮಾಹಿತಿ ವರ್ಗಾವಣೆ ಆಗುತ್ತಿರುತ್ತದೆ. ಅದರಲ್ಲೂ ಪ್ರಮುಖವಾದುದು ಇಮೈಲ್. ಅಂತಾರಾಷ್ಟ್ರೀಯ ಡೊಮೈನ್ ನೇಮ್ (Internationalised Domain Name, IDN) ಎಂಬುದು ಈ ವ್ಯವಸ್ಥೆಯ ಒಂದು ಪ್ರಮುಖ ವಿಷಯವಾಗುತ್ತಿದೆ. ಅಂದರೆ ಇಂಗ್ಲಿಷ್ ಅಲ್ಲದೆ ಇತರೆ ಭಾಷೆಗಳಲ್ಲೂ ಜಾಲತಾಣ ವಿಳಾಸಗಳ ಬಳಕೆ. ಜಾಲತಾಣ ವಿಳಾಸ ಮತ್ತು ಇಮೈಲ್ ವಿಳಾಸಗಳು ಇಂಗ್ಲಿಷ್ ಅಲ್ಲದೆ ಇತರೆ ಭಾಷೆಗಳಲ್ಲೂ ಇರಬಹುದು ಎಂದೆನಲ್ಲ? ಇಲ್ಲಿ ಸ್ವಲ್ಪ ತೊಂದರೆ ಇನ್ನೂ ಉಳಿದುಕೊಂಡಿದೆ. ಹಲವು ಸಂವಹನ ತಂತ್ರಾಂಶಗಳು ಇನ್ನೂ ಹಳೆಯ ತಂತ್ರಜ್ಞಾನವನ್ನೇ ಬಳಸುತ್ತಿವೆ. ಅವುಗಳು ಇಂಗ್ಲಿಷ್ ಅಲ್ಲದ ಇತರೆ ವಿಳಾಸಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಇಂಗ್ಲಿಷ್ ಅಲ್ಲದ ವಿಳಾಸಗಳು ಯುನಿಕೋಡ್ ಬಳಸುತ್ತವೆ. ಹಳೆಯ ತಂತ್ರಾಂಶಗಳು ಯುನಿಕೋಡನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಇದರಿಂದಾಗಿ ಹಲವು ಇಮೈಲ್ ತಂತ್ರಾಂಶಗಳಲ್ಲಿ ಇಂಗ್ಲಿಷ್ ಅಲ್ಲದ ಇಮೈಲ್ ವಿಳಾಸವನ್ನು ಬಳಸಲು ಆಗುವುದಿಲ್ಲ.

ಜಾಲತಾಣ ವಿಳಾಸ ಮತ್ತು ಇಮೈಲ್ ವಿಳಾಸಗಳು ಯುನಿಕೋಡ್ ಬಳಸಿದಾಗ, ಅಂದರೆ ಇಂಗ್ಲಿಷ್ ಅಲ್ಲದೆ ಇತರೆ ಭಾಷೆಗಳನ್ನೂ ಬಳಸಿದಾಗ ಅವುಗಳನ್ನು ಅರ್ಥ ಮಾಡಿಕೊಂಡು ಸಮರ್ಥವಾಗಿ ಬಳಸಿಕೊಳ್ಳುವುದು ಎಲ್ಲ ಸಂದರ್ಭಗಳಲ್ಲಿ ಸಾಧ್ಯವಾದಾಗ ಅದನ್ನು universal acceptance ಎನ್ನುತ್ತಾರೆ. ಇದನ್ನು ಕನ್ನಡದಲ್ಲಿ ಸಾರ್ವತ್ರಿಕ ಸ್ವೀಕೃತಿ ಎನ್ನಬಹುದು. ಈ ಬಗ್ಗೆ ಐಕಾನ್‌ನಲ್ಲಿ ಒಂದು ವಿಭಾಗವಿದೆ. ಐಕಾನ್ ಎಂದರೆ ಇಂಟರ್‌ನೆಟ್ ಕಾರ್ಪೊರೇಶನ್ ಫಾರ್ ಅಸೈನ್ಡ್ ನೇಮ್ಸ್ ಆಂಡ್ ನಂಬರ್ಸ್ (Internet Corporation for Assigned Names and Numbers, ICANN).  ಇದೊಂದು ಸರಕಾರೇತರ, ಲಾಭ ನಷ್ಟಗಳಿಲ್ಲದ ಸಂಸ್ಥೆ. ಇದನ್ನು ಸಮುದಾಯದ ಜನರೇ ನಡೆಸುವುದು. ಇದಕ್ಕೆ ಯಾರು ಬೇಕಾದರೂ ಕೊಡುಗೆ ನೀಡಬಹುದು. ಜಗತ್ತಿನ ಎಲ್ಲ ಜಾಲತಾಣಗಳ ಹೆಸರುಗಳ ಉಸ್ತುವಾರಿ ಇದರ ಕೆಲಸ. ಐಕಾನ್‌ನಲ್ಲಿ ಸಾರ್ವತ್ರಿಕ ಸ್ವೀಕೃತಿಗಾಗಿ ಇರುವ ವಿಭಾಗವು ಈ ಬಗ್ಗೆ ಹಲವು ಕೆಲಸಗಳನ್ನು ಮಾಡುತ್ತಿದೆ. ಎಲ್ಲ ತಂತ್ರಾಂಶಗಳಲ್ಲಿ, ಜಾಲತಾಣಗಳನ್ನು ವೀಕ್ಷಿಸುವ ತಂತ್ರಾಂಶಗಳಲ್ಲಿ (ಬ್ರೌಸರುಗಳಲ್ಲಿ), ಇಮೈಲ್ ತಂತ್ರಾಂಶಗಳಲ್ಲಿ, ಪ್ರೋಗ್ರಾಮ್ಮಿಂಗ್ ಭಾಷೆಗಳಲ್ಲಿ, ಹೀಗೆ ತಂತ್ರಾಂಶ ಕ್ಷೇತ್ರದ ಹಲವು ಅಂಗಗಳಲ್ಲಿ ಸಾರ್ವತ್ರಿಕ ಸ್ವೀಕೃತಿ ಸರಿಯಾಗಿ ಕೆಲಸ ಮಾಡುತ್ತಿದೆಯೋ ಎಂದು ಪರಿಶೀಲಿಸುವುದು ಇದರ ಕೆಲಸ. ಹೀಗೆ ಪರಿಶೀಲಿಸಿ ಎಲ್ಲೆಲ್ಲಿ ಸುಧಾರಣೆ ಆಗಬೇಕು ಎಂದು ಸೂಚನೆಗಳನ್ನು ಆಯಾ ತಂತ್ರಾಂಶಗಳ ಒಡೆಯರಿಗೆ ಅದು ಕಾಲಕಾಲಕ್ಕೆ ನೀಡುತ್ತದೆ. ಮುಕ್ತ ತಂತ್ರಾಂಶವಾದರೆ ತಾನೆ ಹಣ ಖರ್ಚು ಮಾಡಿ ಅದನ್ನು ಸರಿಪಡಿಸುತ್ತದೆ. ಐಕಾನ್‌ನ ಸಾರ್ವತ್ರಿಕ ಸ್ವೀಕೃತಿ ವಿಭಾಗಕ್ಕೆ ಯಾರು ಬೇಕಾದರೂ ಸೇರಿಕೊಂಡು ತಮ್ಮಿಂದಾದ ಕೊಡುಗೆ ನೀಡಬಹುದು. ಅದರ ಕೆಲಸಗಳಲ್ಲಿ ಸಕ್ರಿಯವಾಗಿ ಭಾಗವಹಿಸಬಹುದು. ಅದು ಹೇಗೆ ಎನ್ನುತ್ತೀರಾ? ನಿಮಗೆ ಆಸಕ್ತಿ ಇದ್ದಲ್ಲಿ http://uasg.tech  ಜಾಲತಾಣಕ್ಕೆ ಭೇಟಿ ನೀಡಿ ಎಲ್ಲ ವಿವರಗಳನ್ನು ಓದಬಹುದು. ಅಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.

[ಲೇಖಕರು ಐಕಾನ್‌ನ ಸಾರ್ವತ್ರಿಕ ಸ್ವೀಕೃತಿ ವಿಭಾಗಕ್ಕೆ ಉಪಾಧ್ಯಕ್ಷರಾಗಿದ್ದವರು]

ಡಾ| ಯು.ಬಿ. ಪವನಜ

gadgetloka @ gmail . com

Be First to Comment

Leave a Reply

Your email address will not be published. Required fields are marked *