Press "Enter" to skip to content

5ಜಿ – ಅತಿ ವೇಗದ ಮೊಬೈಲ್ ಅಂತರಜಾಲ

ಅತ್ಯಂತ ಕ್ಲಿಷ್ಟವಾದ ಶಸ್ತ್ರಚಿಕಿತ್ಸೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಎಲ್ಲ ಅತ್ಯಾಧುನಿಕ ಸೌಲಭ್ಯಗಳು, ಪರಿಣತ ವೈದ್ಯರು ಎಲ್ಲ ಇದ್ದಾರೆ. ಶಸ್ತ್ರಚಿಕಿತ್ಸೆಯನ್ನು ಅಮೆರಿಕದಿಂದ ನುರಿತ ವೈದ್ಯರು ವಿಡಿಯೋ ಕಾನ್ಫೆರೆನ್ಸ್ ಮೂಲಕ ವೀಕ್ಷಿಸಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಅಲ್ಲಿಯ ವೈದ್ಯರ ಸಲಹೆಯಂತೆ ಒಂದು ಸೂಕ್ಷ್ಮ ಅಂಗವನ್ನು ಕತ್ತರಿಸಿ ಮುಂದಿನ ಹೆಜ್ಜೆಯ ಬಗ್ಗೆ ಅಮೆರಿಕದಿಂದ ಮಾರ್ಗದರ್ಶನಕ್ಕಾಗಿ ಕಾಯುತ್ತಿದ್ದಾರೆ. ಆಗ ಅಂತರಜಾಲ ಸಂಪರ್ಕ ನಿಧಾನವಾಗಿ ತಡೆತಡೆದು ಬರತೊಡಗುತ್ತದೆ. ಇಂತಹ ಸಂದರ್ಭಗಳು ಮುಂದೆ 5ಜಿ ಬಂದಾಗ ಆಗಲಾರದು.

ಅಕ್ಟೋಬರ್ 1 ರಂದು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಭಾರತದಲ್ಲಿ 5ಜಿ ಮೊಬೈಲ್ ಅಂತರಜಾಲ ಸಂಪರ್ಕ ತಂತ್ರಜ್ಞಾನವನ್ನು ಉದ್ಘಾಟಿಸಿದರು. ಈ ತಂತ್ರಜ್ಞಾನವು ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಲಿದೆ ಎಂದು ನರೇಂದ್ರ ಮೋದಿಯವರು ಹೇಳಿದರು. ಏನಿದು 5ಜಿ ಅಂದರೆ? ಈ ಸಂಚಿಕೆಯಲ್ಲಿ ಅದರ ಬಗ್ಗೆ ಸ್ಥೂಲವಾಗಿ ತಿಳಿದುಕೊಳ್ಳೋಣ.

5ಜಿ (G=generation) ಅಂದರೆ ಐದನೇ ತಲೆಮಾರಿನ ತಂತ್ರಜ್ಞಾನ ಎಂದು ಅರ್ಥ. ಐದನೇ ತಲೆಮಾರು ಬರುವ ಮೊದಲು 1ನೆ, 2ನೆ, 3ನೇ ಮತ್ತು 4ನೇ ತಲೆಮಾರುಗಳು ಇದ್ದಿರಬೇಕಲ್ಲವೇ? ಹೌದು. ಅವುಗಳು ಕ್ರಮವಾಗಿ, 1G, 2G, 3G ಮತ್ತು 4G ತಂತ್ರಜ್ಞಾನಗಳು. ಇವು ಮೊಬೈಲ್ ಫೋನ್ ಕ್ಷೇತ್ರದಲ್ಲಿ ತಂತ್ರಜ್ಞಾನವು ಹಾದು ಬಂದ ಮಜಲುಗಳು ಎನ್ನಬಹುದು. ಅದನ್ನು ಕೋಷ್ಟಕ ರೂಪದಲ್ಲಿ ನೀಡಲಾಗಿದೆ-

ತಂತ್ರಜ್ಞಾನದ ಮಜಲುವರ್ಷತಂತ್ರಜ್ಞಾನದ ವೈಶಿಷ್ಟ್ಯ
1G1980ಅನಲಾಗ್ ಧ್ವನಿ
2G1990ಡಿಜಿಟಲ್ ಧ್ವನಿ
3G2000ಮೊಬೈಲ್ ಡಾಟಾ
4G2010ಮೊಬೈಲ್ ಬ್ರಾಡ್‌ಬ್ಯಾಂಡ್
5G2016ಅತಿ ವೇಗದ ಅಂತರಜಾಲ ಸಂಪರ್ಕ
 ಇವು ತಂತ್ರಜ್ಞಾನವು ಜಾಗತಿಕವಾಗಿ ಬಂದ ವರ್ಷ. ಭಾರತಕ್ಕೆ ಬಂದ ವರ್ಷಗಳಲ್ಲ.

5ಜಿ ಯಲ್ಲಿ 11 ಬ್ಯಾಂಡ್‌ಗಳಿವೆ. ಭಾರತದಲ್ಲಿ ಎಲ್ಲ ಮೊಬೈಲ್ ಸೇವೆ ನೀಡುವವರು ಎಲ್ಲ ಬ್ಯಾಂಡ್‌ಗಳಲ್ಲಿ 5ಜಿ ನೀಡುತ್ತಾರೆಂದಿಲ್ಲ. ಈಗಿನ ಮಾಹಿತಿಯಂತೆ ಜಿಯೋ 8, ಏರ್‌ಟೆಲ್ 5 ಮತ್ತು ವೊಡಾಫೋನ್ 5 ಬ್ಯಾಂಡ್‌ಗಳಲ್ಲಿ 5ಜಿ ಸೇವೆಗಳನ್ನು ನೀಡುತ್ತಾರೆ-

ಜಿಯೋ – 700 MHz, 800 MHz, 900 MHz, 1800 MHz, 2100 MHz, 2500 MHz, 3300 MHz ಮತ್ತು 26 GHz

ಏರ್‌ಟೆಲ್ – 900 MHz, 1800 MHz, 2100 MHz, 3300 MHz ಮತ್ತು 26 GHz

ವಿಐ – 1800 MHz, 2100 MHz, 2500 MHz, 3300 MHz and 26 GHz

ಸದ್ಯಕ್ಕೆ ಭಾರತದ ಕೆಲವೇ ಪ್ರಮುಖ ನಗರಗಳಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಗಿದೆ. ಆಯಾ ನಗರದಲ್ಲೂ ಕೆಲವು ಆಯ್ದ ಸ್ಥಳಗಳಲ್ಲಿ ಮಾತ್ರ ಈ ಸೇವೆ ಲಭ್ಯವಿದೆ.

5ಜಿ ಸಂಪರ್ಕವು ಅತಿ ವೇಗದ ಅಂತರಜಾಲ ಸಂಪರ್ಕವನ್ನು ಸಾಧ್ಯವಾಗಿಸುತ್ತದೆ. 4ಜಿ ಸಂಪರ್ಕಕ್ಕೆ ಹೋಲಿಸಿದರೆ ಅದು 10 ರಿಂದ 100 ಪಟ್ಟು ಹೆಚ್ಚಿನ ವೇಗವನ್ನು ಸಾಧಿಸಬಲ್ಲುದು. 4ಜಿ ಸಂಪರ್ಕದಲ್ಲಿ ಒಂದು ದೊಡ್ಡ ಗಾತ್ರದ ಫೈಲು ಡೌನ್‌ಲೋಡ್ ಆಗಲು ಸುಮಾರು 10 ಸೆಕೆಂಡು ಬೇಕಿದ್ದಲ್ಲಿ ಅದೇ ಫೈಲು 5 ಜಿ ಸಂಪರ್ಕದಲ್ಲಿ ಕೇವಲ 1 ಸೆಕೆಂಡಿನಲ್ಲಿ ಡೌನ್‌ಲೋಡ್ ಆಗಬಲ್ಲುದು. ಇದರಿಂದಾಗಿ ಹಲವು ಪ್ರಯೋಜನಗಳಾಗಲಿವೆ. ಮೊದಲನೆಯದಾಗಿ ಅಂತರಜಾಲದ ಮೂಲಕ ವಿಡಿಯೋ ನೋಡುವವರಿಗೆ ಉತ್ತಮ ಗುಣಮಟ್ಟದ ವಿಡಿಯೋ ವೀಕ್ಷಣೆಯನ್ನು ಸರಾಗವಾಗಿ ಮಾಡಬಹುದು. ಒಂದು ಸಿನಿಮಾವನ್ನು ಅಂತರಜಾಲದಲ್ಲಿ ಆಪ್‌ಗಳ ಮೂಲಕ ನೋಡುವವರಿಗೆ ಈ ಅನುಭವವಾಗಿರಬಹುದು.  ಹೈಡೆಫಿನಿಶನ್ ಎಂದು ಆಯ್ಕೆ ಮಾಡಿಕೊಂಡರೆ ಹಲವು ಸಲ ಸಿನಿಮಾವನ್ನು ಸರಾಗವಾಗಿ ನೋಡಲು ಆಗುವುದೇ ಇಲ್ಲ. ಅಗಾಗ ಅದು ನಿಲ್ಲುತ್ತದೆ. ಇದಕ್ಕೆ ಬಫರಿಂಗ್ ಎನ್ನುತ್ತಾರೆ. ಸಾಮಾನ್ಯವಾಗಿ ನಾವು ಅಂತಹ ಸಂದರ್ಭಗಳಲ್ಲಿ ಕಡಿಮೆ ಗುಣಮಟ್ಟಕ್ಕೆ ಆಯ್ಕೆಯನ್ನು ಬದಲಾಯಿಸಿಕೊಳ್ಳುತ್ತೇವೆ. 5ಜಿ ಬಂದಾಗ ಈ ಸಮಸ್ಯೆ ಇರುವುದಿಲ್ಲ. ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೋಗಳನ್ನು ಕೂಡ ಯಾವುದೇ ತಡೆಯಿಲ್ಲದೆ (ಬಫರಿಂಗ್ ಇಲ್ಲದೆ) ಅಂತರಜಾಲದಿಂದ ವೀಕ್ಷಿಸಬಹುದು.

ಅಂತರಜಾಲ ಸಂಪರ್ಕದಲ್ಲಿ ವೇಗ ಮಾತ್ರವಲ್ಲ. ಲಾಟೆನ್ಸ್ ಎಂಬ ಇನ್ನೊಂದು ಗುಣವೈಶಿಷ್ಟ್ಯವಿದೆ. ಒಂದು ಜಾಲತಾಣ ವೀಕ್ಷಣೆ, ಫೈಲು ಡೌನ್‌ಲೋಡ್, ಸ್ಟ್ರೀಮಿಂಗ್ ವಿಡಿಯೋದ ಪ್ರಾರಂಭವು ಕೂಡಲೇ ಆಗದೆ, ಒಂದು ಚಿಕ್ಕ ಸಮಯ ಕಳೆದ ನಂತರ ಪ್ರಾರಂಭವಾಗುವುದನ್ನು ಗಮನಿಸಿರಬಹುದು. ಇದನ್ನೇ ಲಾಟೆನ್ಸ್ ಎನ್ನುತ್ತಾರೆ. 4ಜಿ ಸಂಪರ್ಕದಲ್ಲಿ ಇದು ಸಾಮಾನ್ಯವಾಗಿ 20 ಮಿಲ್ಲಿ ಸೆಕೆಂಡಿನಿಂದ 100 ಮಿ.ಸೆ. ಕೂಡ ಇರಬಹುದು. ವಿಡಿಯೋ ಕಾಫೆರೆನ್ಸ್‌ಗಳಲ್ಲಿ ಈ ಲಾಟೆನ್ಸ್ ಕಡಿಮೆ ಇದ್ದಷ್ಟೂ ಉತ್ತಮ. ಇಲ್ಲವಾದಲ್ಲಿ ಮಾತನಾಡುತ್ತಿದ್ದಾಗ ವಿಡಿಯೋ ಅಲ್ಲಲ್ಲಿ ಸ್ವಲ್ಪ ಕಾಲ ನಿಲ್ಲುತ್ತದೆ. ಈ ನಿಲ್ಲುವ ಸಮಯ ಒಂದು ಸೆಕೆಂಡಿಗಿಂತಲೂ ಕಡಿಮೆ ಇರಬಹುದು. ಆದರೂ ಕೆಲವು ಸಂದರ್ಭಗಳಲ್ಲಿ ಸೆಕೆಂಡು ಮಾತ್ರವಲ್ಲ ಮಿಲ್ಲಿ ಸೆಕೆಂಡು ಕೂಡ ಮುಖ್ಯವಾಗುತ್ತದೆ. 3ಜಿಯಲ್ಲಿ ಇನ್ನೂ ಜಾಸ್ತಿ ಇರುತ್ತದೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ರೋಗಿಗೆ ಶಸ್ತ್ರ ಚಿಕಿತ್ಸೆ ನಡೆಯುತ್ತಿದೆ. ಅಮೆರಿಕದಿಂದ ಕೆಲವು ಪರಿಣತ ವೈದ್ಯರು ವಿಡಿಯೋ ಮೂಲಕ ಶಸ್ತ್ರಚಿಕಿತ್ಸೆಯನ್ನು ವೀಕ್ಷಿಸುತ್ತಾ ಅಲ್ಲಿಂದ ಮಾರ್ಗದರ್ಶನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಡಿಯೋ ಮಿಲ್ಲಿಸೆಕೆಂಡಿನಷ್ಟು ಕಾಲವೂ ನಿಲ್ಲಬಾರದು. ಇದು ಒಂದು ಉದಾಹರಣೆ ಮಾತ್ರ. ಇಂತಹ ಹಲವು ಉದಾಹರಣೆಗಳಿವೆ.

5ಜಿ ತಂತ್ರಜ್ಞಾನವು ಭಾರತಕ್ಕೆ ಹಲವು ರೀತಿಯಲ್ಲಿ ವರದಾನವಾಗಲಿದೆ. ಕೆಲವು ಪ್ರಮುಖ ಸಂದರ್ಭಗಳನ್ನು ನೋಡೋಣ. ವಸ್ತುಗಳ ಅಂತರಜಾಲ (IoT = Internet of Things) ಕ್ಷೇತ್ರದಲ್ಲಿ ಗಣನೀಯ ಸುಧಾರಣೆ ಆಗಲಿದೆ. ಕೃಷಿ ಕ್ಷೇತ್ರದಲ್ಲಿ ಅತಿ ವೇಗದ ಅಂತರಜಾಲ ಮತ್ತು ಕಡಿಮೆ ಲಾಟೆನ್ಸ್‌ನಿಂದಾಗಿ ಲಾಭವಾಗಲಿದೆ. ಆರೋಗ್ಯ ಕ್ಷೇತ್ರದ ಒಂದು ಉದಾಹರಣೆಯನ್ನು ಈಗಾಗಲೇ ನೀಡಲಾಗಿದೆ. ಶಿಕ್ಷಣದ ವಿಷಯಕ್ಕೆ ಬಂದರೆ ಉತ್ತಮ ಗುಣಮಟ್ಟದ ವಿಡಿಯೋ ವೀಕ್ಷಣೆಯ ಸೌಲಭ್ಯದಿಂದಾಗಿ ಆನ್‌ಲೈನ್ ತರಗತಿಗಳಿಗೆ ತುಂಬ ಪ್ರಯೋಜನವಾಗಲಿದೆ. ಸಾರಿಗೆ ನಿಯಂತ್ರಣವನ್ನು ನಿಜಸಮಯದಲ್ಲಿ ಉತ್ತಮವಾಗಿ ಮಾಡಬಹುದು.      

ಎಲ್ಲರಿಗೂ ಈ 5ಜಿ ಸೌಲಭ್ಯ ದೊರಕಲಿದೆಯೇ ಎಂದು ಕೇಳಿದರೆ ಸದ್ಯಕ್ಕೆ ಇಲ್ಲ ಎಂಬುದೇ ಉತ್ತರ. ಎಲ್ಲರಿಗೂ ಲಭ್ಯವಾಗಲು ಬಹುಶಃ ಒಂದರಿಂದ ಎರಡು ವರ್ಷಗಳೇ ಬೇಕಾಗಬಹುದು. ಈಗಾಗಲೇ ಸ್ಮಾರ್ಟ್‌ಫೋನ್ ಇರುವವರು 5ಜಿ ಪಡೆಯಲು ಏನು ಮಾಡಬೇಕು? ನಿಮ್ಮ ಫೋನಿನಲ್ಲಿ 5ಜಿ ಸೌಲಭ್ಯ ಇದೆಯಾದಲ್ಲಿ ಅದನ್ನು ಚಾಲನೆ ಮಾಡಿಕೊಂಡರೆ ಸಾಕು. ನಿಮ್ಮ ಸ್ಥಳದಲ್ಲಿ 5ಜಿ ಸೇವೆ ಬಂದಾಗ ತಾನಾಗಿಯೇ ನಿಮಗೆ ಲಭ್ಯವಾಗುವುದು. ನಿಮ್ಮದು ಹಳೆಯ 5ಜಿ ಸೌಲಭ್ಯವಿಲ್ಲದ ಫೋನಾದರೆ ಹೊಸ ಫೋನ್ ಕೊಳ್ಳುವುದೇ ಪರಿಹಾರ. ಅಂತಹ ಫೋನ್‌ಗಳಿಗೆ ಸಾಫ್ಟ್‌ವೇರ್ ನವೀಕರಣ ಮೂಲಕ 5ಜಿ ಪಡೆಯಲು ಸಾಧ್ಯವಿಲ್ಲ.

ಡಾ| ಯು.ಬಿ. ಪವನಜ

gadgetloka @ gmail . com

ದಿ : 01-10-2022

Be First to Comment

Leave a Reply

Your email address will not be published. Required fields are marked *