ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೧

– ಡಾ| ಎಂ. ಚಿದಾನಂದ ಮೂರ್ತಿ

ಕೆಲವರಿಗೆ ಕರ್ನಾಟಕವನ್ನು ಪ್ರೀತಿಸುವುದು ಸಂಕುಚಿತ ದೃಷ್ಟಿಯೆನ್ನಿಸುತ್ತದೆ. ಅವರಿಗೆ ಭಾರತ ಮಾತ್ರ ಮುಖ್ಯ ; ರಾಷ್ಟ್ರಪ್ರೇಮವೊಂದೇ ದೇಶಪ್ರೇಮ. ಕರ್ನಾಟಕ ಪ್ರೇಮ ಎಂಬ ಮಾತು ಅವರಿಗೆ ಅರ್ಥಹೀನ. ಕನ್ನಡ ನಾಡು, ಕನ್ನಡ ನುಡಿಗಳನ್ನು ಕೊಂಡಾಡುವುದು ಅವರಿಗೆ ರಾಷ್ಟ್ರದ್ರೋಹವಾಗಿಯೂ ಕಂಡಿದೆ. ಭಾರತೀಯ ಸಂಸ್ಕೃತಿಯೊಂದು ಇರುವಂತೆ ಕರ್ನಾಟಕ ಸಂಸ್ಕೃತಿಯೆಂಬುದೊಂದು ಅವರ ಪಾಲಿಗೆ ಇಲ್ಲ. ಇದು ಸರಿಯೋ? ವಿಚಾರ ಮಾಡೋಣ.
ಭಾರತ ಒಂದು ರಾಷ್ಟ್ರ. ಅದನ್ನು ಸಂವಿಧಾನವು ಒಂದು `ಒಕ್ಕೂಟ’ (ಯೂನಿಯನ್) ಎಂದು ಕರೆದೆ. ಎಂದರೆ ಅದು ಹಲವು ಪ್ರಾಂತಗಳ ಒಂದು ಒಕ್ಕೂಟ; ಅಮೆರಿಕ ಸಂಯುಕ್ತ ಸಂಸ್ಥಾನವಿದ್ದಂತೆ. ಭಾರತದ ವಿಸ್ತಾರವನ್ನು ಗಮನಿಸಿ. ಅದರಲ್ಲಿ ಸೇರ್ಪಡೆಯಾಗಿರುವ ಪ್ರಾಂತಗಳಲ್ಲಿ ಹಲವು ಪ್ರಾಂತಗಳು ಯೂರೋಪಿನ ಹಲವು ಸ್ವತಂತ್ರ ರಾಷ್ಟ್ರಗಳಿಗಿಂತ ದೊಡ್ಡದಾಗಿವೆ. ಮಧ್ಯಪ್ರದೇಶ, ಆಂಧ್ರ, ಅಷ್ಟೇಕೆ ಕರ್ನಾಟಕ ಯೂರೋಪಿನ ಸ್ಪೆಯಿನ್, ಪೋರ್ಚುಗಲ್‌ಗಳಿಗಿಂತ ಎಷ್ಟೋ ಪಾಲು ದೊಡ್ಡದಾಗಿವೆ. ಇದನ್ನು ನಾವು ನೆನಪಿಡಬೇಕು.

ಇನ್ನು ಸಂಸ್ಕೃತಿಯನ್ನು ನೋಡೋಣ. ಯೂರೋಪಿಗೆ ಪ್ರತ್ಯೇಕವಾದ ಸಂಸ್ಕೃತಿ ಇದೆಯೆಂದರೆ ಉಂಟು; ಇಲ್ಲ ಎಂದರೆ ಇಲ್ಲ. ಅಲ್ಲಿನ ಎಲ್ಲ ರಾಷ್ಟ್ರಗಳಲ್ಲೂ ಕ್ರಿಶ್ಚಿಯನ್ ಮತ. ಎಲ್ಲ ರಾಷ್ಟ್ರಗಳ ಆಹಾರ ವಿಧಾನ, ಉಡುಪು ಬಹುತೇಕ ಒಂದೇ. ಎಲ್ಲರೂ ಆರ್‍ಯನ್ ಬುಡಕಟ್ಟಿನವರು. ಅಲ್ಲಿನ ಒಟ್ಟು ಸಂಸ್ಕೃತಿಗೆ ಗ್ರೀಕ್, ರೋಮನ್ ಸಂಸ್ಕೃತಿಗಳು ತವರು. ಹೀಗಿದ್ದೂ, ಅಲ್ಲಿನ ಒಂದು ರಾಷ್ಟ್ರದ ಸಂಸ್ಕೃತಿ ಇನ್ನೊಂದು ರಾಷ್ಟ್ರದ ಛಾಯೆ ಅಲ್ಲ. ಏಕೆಂದರೆ ಸಾಕಷ್ಟು ಭಾಷಾವೈವಿಧ್ಯವಿದೆ. ಇಂಗ್ಲಿಷ್ ಮಾತನಾಡುವವನಿಗೆ ಫ್ರೆಂಚ್, ಫ್ರೆಂಚ್ ಮಾತನಾಡುವವನಿಗೆ ಜರ್ಮನ್, ಜರ್ಮನ್ ಮಾತುಗನಿಗೆ ರಷಿಯನ್ ಅರ್ಥವಾಗುವುಲ್ಲ. ಸ್ವಿಟ್ಸರ್ಲೆಂಡಿನಲ್ಲಿ ಫ್ರೆಂಚ್, ಜರ್ಮನ್, ಇಟಾಲಿಯನ್ ಈ ಮೂರು ಭಾಷೆಗಳೂ ಅಧಿಕೃತ ಭಾಷೆಗಳು.

ಈಗ ಭಾರತಕ್ಕೆ ಬರೋಣ. ಭಾರತೀಯ ಸಂಸ್ಕೃತಿಯೆಂಬುದೊಂದು ಉಂಟು ಎಂದರೆ ಉಂಟು; ಇಲ್ಲ ಎಂದರೆ ಇಲ್ಲ. ಉಂಟು ಎಂದು ವಾದಿಸುವವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕರ್ಮ ಸಿದ್ಧಾಂತ ಹಬ್ಬಿರುವುದನ್ನು ಎತ್ತಿ ತೋರಿಸಬಹುದು. ಆದರೆ ಇಲ್ಲಿ ಏಕತೆಗಿಂತ ವೈವಿಧ್ಯವೇ ಹೆಚ್ಚು. ಕಾಶ್ಮೀರದ ಜನರ ಉಡುಪು, ಬಂಗಾಲಿಗಳ ಉಡುಪು, ಕನ್ನಡಿಗರ ಉಡುಪು ಬೇರೆ ಬೇರೆ. ಆಹಾರ ವಿಧಾನಗಳಲ್ಲೂ ಸಾಕಷ್ಟು ಭೇದವಿದೆ. ಬುಡಕಟ್ಟಿನ ದೃಷ್ಟಿಯಿಂದ ನೋಡಿದರೆ ಹಲವು ಭಿನ್ನ ಜನಾಂಗಗಳು ಭಾರತದಲ್ಲಿ ಕಾಣಿಸುತ್ತವೆ. ಇಲ್ಲಿ ಹಿಂದೂ, ಮುಸಲ್ಮಾನ, ಕೆಸ್ತ, ಪಾರ್ಸಿ, ಸಿಖ್ ಇವೇ ಮೊದಲಾದ ಮತ ಧರ್ಮಗಳ ಅನುಯಾಯಿಗಳು ಇದ್ದಾರೆ. ಭಾಷೆಗಳ ದೃಷ್ಟಿಯಿಂದ ನೋಡಿದರೆ ಭಾರತದಲ್ಲಿ ನಾಲ್ಕು ಭಿನ್ನ ವಂಶಗಳಿಗೆ ಸೇರಿದ ಹಲವಾರು ಭಾಷೆಗಳಿವೆ. ದ್ರಾವಿಡ ಮೂಲದ ಭಾಷೆಗಳೇ ಇಪ್ಪತ್ತೆರಡು ಇವೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಎಂಬ ಮುಂದುವರಿದ ದ್ರಾವಿಡ ಭಾಷೆಗಳಲ್ಲದೆ, ದ್ರಾವಿಡ ವಂಶಕ್ಕೆ ಸೇರಿದ ಗಿರಿಜನ ಭಾಷೆಗಳುಂಟು. ಹೀಗೆಯೇ ಹಲವು ಆರ್‍ಯನ್ ಭಾಷೆಗಳೂ, ಮುಂಡಾ ಮತ್ತು ಆಸ್ಟೋ – ಏಷಿಯಾಟಿಕ್ ಭಾಷೆಗಳೂ ಭಾರತದಲ್ಲ್ಲಿವೆ. ಇವುಗಳಲ್ಲಿ ಅನೇಕ ಭಾಷೆಗಳು ಪ್ರಬುದ್ಧವಾಗಿದ್ದು, ಸಾವಿರಾರು ವರ್ಷಗಳ ಸುದಿರ್ಘವೂ ಸಂಪದ್ಭರಿತವೂ ಆದ ಚರಿತ್ರೆಯನ್ನು ಹೊಂದಿವೆ. ಯೂರೊಪಿನ ಹಲವು ಭಾಷೆಗಳಿಗಿಂತ ಅಥವಾ ಅವುಗಳಷ್ಟೇ ಬೆಳೆವೆ. ಅಷ್ಟೇ ಸಮೃದ್ಧವಾದ ಸಾಹಿತ್ಯವನ್ನು ಹೊಂದಿವೆ. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಇತ್ಯಾದಿ ರಾಜ್ಯಗಳ ಜಾನಪದಸಂಪತ್ತು, ಶಿಲ್ಪಸಂಪತ್ತು ವಿಶಿಷ್ಟವೂ ವೈವಿಧ್ಯಮಯವೂ ಆಗಿವೆ.

ವಾಸ್ತವವಾಗಿ ಭಾರತೀಯ ಸಂಸ್ಕೃತಿಯೆಂಬುದು ಪ್ರತ್ಯೇಕವಾಗಿ ಇಲ್ಲ. ಕರ್ನಾಟಕ ಸಂಸ್ಕೃತಿ, ತಮಿಳು ಸಂಸ್ಕೃತಿ, ತೆಲುಗು ಸಂಸ್ಕೃತಿ, ಮಹಾರಾಷ್ಟ್ರ ಸಂಸ್ಕೃತಿ ಅವೇ ಮೊದಲಾದ ಸದೃಶವೂ ಭಿನ್ನವೂ ಆದ ಸಂಸ್ಕೃತಿಗಳ ಸಮಷ್ಟಿರೂಪವೇ ಭಾರತೀಯ ಸಂಸ್ಕೃತಿ. ಈ ಬಿಡಿ ಸಂಸ್ಕೃತಿಗಳನ್ನು ಬೇರ್ಪಡಿಸಿ ಭಾರತೀಯ ಸಂಸ್ಕೃತಿ ಇಲ್ಲ. ಎಂದರೆ, ಭಾರತೀಯ ಸಂಸ್ಕೃತಿಯನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಇದರ ಅರ್ಥವೆಂದರೆ ಭಾರತದಲ್ಲಿ ಒಂದೊಂದು ಪ್ರಾಂತಕ್ಕೂ ವಿಶಿಷ್ಟ ಜೀವನ ವಿಧಾನವಿದೆ. ಆ ವಿಶಿಷ್ಟ ಸಂಸ್ಕೃತಿಯನ್ನು ಗುರುತಿಸುವುದು, ಪ್ರೀತಿಸುವುದು ಭಾರತೀಯ ಸಂಸ್ಕೃತಿಯನ್ನು ಪ್ರೀತಿಸಿದಂತೆಯೇ.

ಉತ್ತರ ಪ್ರದೇಶದಂತಹ ಪ್ರಾಂತದ ಸಂಸ್ಕೃತಿಯೇ ಭಾರತದ ಸಂಸ್ಕೃತಿಯೆಂದೂ, ಸಂಸ್ಕೃತವೋ ಹಿಂದಿಯೋ ಆ ಸಂಸ್ಕೃತಿಯ ಅಭಿವ್ಯಕ್ತಿಯೆಂದೂ ಭಾವಿಸುವುದು ಸಂಕುಚಿತ ದೃಷ್ಟಿಯೆಂಬಲ್ಲ್ಲಿ ಅನುಮಾನವಿಲ್ಲ. ಭಾರತದ ಅಖಂಡತೆಯನ್ನು ಉಳಿಸಲು ಭಾರತದ ಎಲ್ಲ ಭಾಷೆಗಳಿಗೆ, ಎಲ್ಲ ಪ್ರಾದೇಶಿಕ ಸಂಸ್ಕೃತಿಗಳಿಗೆ ಸಮಾನ ಸ್ಥಾನ-ಮಾನ, ಗೌರವ, ಪ್ರೋತ್ಸಾಹಗಳು ದೊರಕುವುದು ಅಗತ್ಯವಾಗಿದೆ. ಕರ್ನಾಟಕ ಸಂಸ್ಕೃತಿಯನ್ನು ಪ್ರೀತಿಸುವುದು ರಾಷ್ಟ್ರಪ್ರೇಮದ ನಿಜವಾದ ಕುರುಹು ಎಂಬಲ್ಲ್ಲಿ ಅನುಮಾನವಿಲ್ಲ.

ಕರ್ನಾಟಕ ಸಂಸ್ಕೃತಿಯು ಭಾರತದ ಸಂಸ್ಕೃತಿಗಳಲ್ಲಿ ಒಂದು ವೈಶಿಷ್ಟ ವನ್ನು ಪಡೆದಿದೆ. ಈ ವೈಶಿಷ್ಟ ವಿರುವುದರಿಂದಲೇ ಅದನ್ನು ಕರ್ನಾಟಕ ಸಂಸ್ಕೃತಿ ಎಂದು ನಾವು ಗುರುತಿಸುತ್ತೇವೆ. ಆ ವೈಶಿಷ್ಟ ಯಾವುದು, ಅದು ಎಷ್ಟು ಬಗೆಗಳಲ್ಲಿ ಕಾಣಿಸಿಕೊಂಡಿದೆ? ಕರ್ನಾಟಕ ಸಂಸ್ಕೃತಿಯು ಭಾರತೀಯ ಸಂಸ್ಕೃತಿಗೆ ಅಥವಾ ವಿಶ್ವ ಸಂಸ್ಕೃತಿಗೆ ಕೊಟ್ಟಿರುವ ಕೊಡುಗೆಗಳೇನು? ವಿಚಾರ ಮಾಡೋಣ.

ಒಂದು ಸಂಸ್ಕೃತಿಯೆಂದರೆ ಆ ಜನಾಂಗದ ಜೀವನ ವಿಧಾನ; ಅದರ ಚರಿತ್ರೆ. ಕರ್ನಾಟಕ ಸಂಸ್ಕೃತಿಗೆ ಎರಡೂವರೆ ಸಾವಿರ ವರ್ಷಗಳ ವೈಭವಯುತ ಚರಿತ್ರೆಯಿದೆ. ಇಲ್ಲಿ ಆಳಿದ ದೊರೆಗಳು ಭಾರತಾದ್ಯಂತ ಮತ್ತು ಭಾರತದ ಹೊರಗೂ ಕರ್ನಾಟಕದ ಕೀರ್ತಿಯನ್ನು ಹಬ್ಬಿಸಿದರು. ಹರ್ಷನನ್ನು ಸೋಲಿಸಿದ ಇಮ್ಮಡಿ ಪುಲಕೇಶಿಯ ಆಸ್ಥಾನಕ್ಕೆ ಇರಾನಿನ ದೊರೆ ರಾಯಭಾರಿಗಳನ್ನು ಕಳಿಸಿಕೊಟ್ಟಿದ್ದ. ವಿಜಯನಗರದ ಕೃಷ್ಣದೇವರಾಯನ ಕೀರ್ತಿ ಹೊರದೇಶಗಳಿಗೂ ಹಬ್ಬಿತ್ತು. ಕನ್ನಡದ ದೊರೆಗಳ ಔದಾರ್ಯವೂ ಅಷ್ಟೇ ದೊಡ್ಡದು. ಕಂಚಿಯ ಪಲ್ಲವ ದೊರೆಗಳು ಚಾಲುಕ್ಯರನ್ನು ಸೋಲಿಸಿ ಬಾದಾಮಿಯನ್ನು ಸುಟ್ಟರು. ಆದರೆ ಅದೇ ಚಾಲುಕ್ಯ ವಂಶದ ದೊರೆ ವಿಜಯಾದಿತ್ಯನು ಮುಂದೆ ಪಲ್ಲವರನ್ನು ಸೋಲಿಸಿ ಕಂಚಿಯನ್ನು ವಶಪಡಿಸಿಕೊಂಡರೂ ಅದನ್ನು ಸುಡದೆ ಆಲ್ಲಿನ ದೇವಾಲಯದ ಐಶ್ವರ್ಯವನ್ನು ಕಂಡು ಅದನ್ನು ಆ ದೇವಾಲಯಕ್ಕೇ ಬಿಟ್ಟುಕೊಡುತ್ತಾನೆ. ಈ ಔದಾರ್ಯ ಕನ್ನಡಿಗರಿಗೆ ಮಾತ್ರ ಸಾಧ್ಯ. ಕನ್ನಡಿಗರ ಶೌರ್‍ಯ ಪರಂಪರೆ ಭಾರತದಲ್ಲೆಲ್ಲ ಮನೆಮಾತಾಗಿತ್ತು. ಕರ್ನಾಟಕದಲ್ಲಿರುವಷ್ಟು ವೀರಗಲ್ಲುಗಳು ಭಾರತದಲ್ಲಿ ಮತ್ತೆಲ್ಲೂ ದೊರಕವು. ಚಾಲುಕ್ಯರ `ಕರ್ನಾಟಕ ಬಲ’ ಎಂಬ ಹೆಸರಿನ ಸೇನೆಯು ಇಡೀ ಭಾರತದಲ್ಲಿ ಅಜೇಯವೆಂದು ಪ್ರಖ್ಯಾತವಾಗಿತ್ತು. ಕರ್ನಾಟಕವು ಎಲ್ಲ ಮತಗಳಿಗೂ ಆಶ್ರಯವನ್ನು ಕೊಟ್ಟಿತ್ತು. ಶೈವ, ವೈಷ್ಣವ, ಬೌದ್ಧ, ಜೈನಗಳೆಂಬ ನಾಲ್ಕು ಮತಗಳು ಇಲ್ಲಿ ಆಶ್ರಯವನ್ನು ಪಡೆದು ಅಭಿವೃದ್ಧಿ ಯನ್ನು ಹೊಂದಿದವು. ಕರ್ನಾಟಕದ ಪರಮತ ಸಹಿಷ್ಣುತೆಗೆ ಇನ್ನೊಂದು ಹೆಸರು. “ದೇವನೊಬ್ಬ ನಾಮ ಹಲವು” ಎಂಬ, “ಮನುಷ್ಯ ಜಾತಿ ತಾನೊಂದೆ ವಲಂ” ಎಂಬ ಶಾಶ್ವತ ಸತ್ಯಗಳನ್ನು ಸಾರಿದ ನಾಡು ಇದು. ದಕ್ಷಿಣ ಭಾರತದ ಸಂಗೀತ ಪರಂಪರೆಗೆ “ಕರ್ನಾಟಕ ಸಂಗೀತ” ವೆಂದು ಹೆಸರು. ಆ ಸಂಗೀತ ಪರಂಪರೆ ಹುಟ್ಟಿ ಬೆಳೆದುದು ಕರ್ನಾಟಕದಲ್ಲಿ ಎಂಬುದನ್ನು ವಿದ್ವಾಂಸರು ಒಪ್ಪಿಕೊಂಡಿದ್ದಾರೆ. ಪುರಂದರದಾಸರಂತಹ ವಾಗ್ಗೇಯಕಾರರೂ ನಿಜಗುಣ ಶಿವಯೋಗಿಯಂತಹ ಶಾಸ್ತ್ರಕರ್ತರೂ ಇಲ್ಲಿ ಕಾಣಿಸಿಕೊಂಡರು.

ಕರ್ನಾಟಕದ ದೇವಾಲಯಗಳ ಶಿಲ್ಪಗಳ ಸೌಂದರ್‍ಯ ಅವರ್ಣನೀಯ. ಎಲಿಫೆಂಟಾ, ಎಲ್ಲೋರ, ಅಜಂತ ಗುಹಾಂತರ್ದೇವಾಲಯಗಳನ್ನು ಕೊರೆಸಿದವರು ಕನ್ನಡಿಗರು. ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳು ಭಾರತೀಯ ವಾಸ್ತುಶಿಲ್ಪ ಕಾರ್‍ಯಾಗಾರಗಳೆಂದೇ ಪ್ರಖ್ಯಾತವಾಗಿವೆ. ಗೊಮ್ಮಟನ ಮೂರ್ತಿಯ ನಿರಾಡಂಬರ ಭವ್ಯತೆ ವಿಶ್ವದಲ್ಲಿ ಮತ್ತೆಲ್ಲೂ ಕಾಣದು. ಬೇಲೂರು, ಹಳೇಬೀಡು, ಸೋಮನಾಥಪುರಗಳಲ್ಲಿನ ಹೊಯ್ಸಳ ದೇವಾಲಯಗಳ ಸೂಕ್ಷ ಕುಸುರಿ ಕೆಲಸಕ್ಕೆ ಸರಿಸಾಟಿ ಮತ್ತೊಂದಿಲ್ಲ. ಕನ್ನಡಭಾಷೆ ಮಧುರವಾದುದು. ಅದು ಎಂತಹ ಸಂಕೀರ್ಣ ಆಲೋಚನೆಗಳನ್ನೂ ಉನ್ನತ ಭಾವನೆಗಳನ್ನೂ ವ್ಯಕ್ತಪಡಿಸಬಲ್ಲದು. ತಮಿಳು ಸಂಸ್ಕೃತವನ್ನು ಬಿಟ್ಟರೆ ಅದೇ ಭಾರತದ ಪ್ರಾಚೀನ ಭಾಷೆ. ಕನ್ನಡದಲ್ಲಿ ಶ್ರೇಷ್ಠ ಸಾಹಿತ್ಯ ಕಾಣಿಸಿಕೊಂಡ ಹತ್ತನೆಯ ಶತಮಾನದಲ್ಲಿ ಹಿಂದಿ ಭಾಷೆ ಇನ್ನೂ ಹುಟ್ಟಿಯೇ ಇರಲಿಲ್ಲ. ಪಂಪ, ರನ್ನ, ಜನ್ನ, ನಾಗವರ್ಮ, ನಾಗಚಂದ್ರ, ಬಸವ, ಅಲ್ಲಮ, ಮಹಾದೇವಿಯಕ್ಕ, ಕುಮಾರವ್ಯಾಸ ಪುರಂದರದಾಸರಂತಹ ಶ್ರೇಷ್ಠ ಕವಿಗಳಿಗೆ ಜನ್ಮ ಕೊಟ್ಟ ನಾಡಿದು. ಸ್ತ್ರೀಯ ಬೆಳವಣಿಗೆಗೆ ಪ್ರೋತ್ಸಾಹ ಇಲ್ಲಿ ಸಿಕ್ಕಿತು. ವಿಶ್ವದಲ್ಲೇ ವಿಶಿಷ್ಟವಾದುದೆನ್ನಬಹುದಾದ ಕ್ರಾಂತಿ ಎಂಟುನೂರು ವರ್ಷಗಳ ಹಿಂದೆ ನಡೆದುದು ಕರ್ನಾಟಕದಲ್ಲಿ. ಅದರ ಫಲವಾಗಿ ಮೂಡಿಬಂದ ವಚನ ಸಾಹಿತ್ಯಕ್ಕೆ ವಿಶಿಷ್ಟ ಸ್ಥಾನವಿದೆ. ಕನ್ನಡ ಶಾಸನಗಳ ಸಾಹಿತ್ಯ ಶೈಲಿ ಇಡೀ ಭಾರತದಲ್ಲಿ ಮತ್ತೊಂದೆಡೆ ಕಾಣಸಿಗದು. ಈ ಎಲ್ಲ ಬಿಡಿಲಕ್ಷಣಗಳನ್ನು ಒಟ್ಟಿಗೆ ಸೇರಿಸಿ ನೋಡಿದಾಗ ಕರ್ನಾಟಕ ಸಂಸ್ಕೃತಿಯ ಭಾಗವಾಗಿ ಬಂದಿರುವ ಜನರಲ್ಲಿ ಸಹೃದಯತೆ, ಸನ್ನಡತೆಗಳು ಎರಡನೆಯ ಸ್ವಭಾವವಾಗಿ ಸೇರಿಹೋಗಿವೆ. ಇತರ ಜನರ ಮತ್ತು ಭಾಷಾ ಸಾಹಿತ್ಯಗಳ ಪ್ರಭಾವಕ್ಕೆ ಒಳಗಾಗಿಯೂ ಕರ್ನಾಟಕ ಸಂಸ್ಕೃತಿಯು ತನ್ನ ವ್ಯಕ್ತಿತ್ವವನ್ನು ಬಿಟ್ಟುಕೊಟ್ಟಿಲ್ಲ.

ನಾವು ಕನ್ನಡಿಗರು, ನಾವು ಒಂದು ಶ್ರೀಮಂತ ಸಂಸ್ಕೃತಿಯ ಪರಂಪರೆಯ ವಾರಸುದಾರರು ಎಂಬ ಸಂಗತಿ ನಮ್ಮ ಅಭಿಮಾನವನ್ನು ಗಗನದೆತ್ತರಕ್ಕೆ ಎತ್ತುವಂತಾಗ ಎಂದು ನಾನು ಹಾರೈಸುತ್ತೇನೆ.

ನೋಡಿ: –
[http://vishvakannada.com/node/195|ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೨]
[http://vishvakannada.com/node/196|ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೩]
[http://vishvakannada.com/node/219|ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೪]
[http://vishvakannada.com/node/220|ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೫]

Leave a Reply