ಡಾ| ರಾಜ್‌ಕುಮಾರ್‌ರವರ ವಿಶೇಷ ಪರಿಚಯ

– ಗಂಗಾಧರ ಮೊದಲಿಯಾರ್

ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ಡಾ| ರಾಜ್‌ಕುಮಾರ್ ಅವರದೇ ಒಂದು ಪ್ರತ್ಯೇಕ ಅಧ್ಯಾಯ. ಕನ್ನಡ ಚಿತ್ರರಂಗದ ಪುಟಪುಟವನ್ನೂ ಆವರಿಸಿಕೊಂಡಿರುವ ಡಾ| ರಾಜ್‌ಕುಮಾರ್ (ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ) ಕನ್ನಡ ಚಿತ್ರರಂಗ ಕಂಡ ವರ್ಣರಂಜಿತ ನಾಯಕ ನಟ. ೧೨ ವರ್ಷದ ಬಾಲ ನಟನಾಗಿರುವಾಗಲೇ ಚಲನಚಿತ್ರರಂಗ ಪ್ರವೇಶಿಸಿದ ಡಾ|ರಾಜ್‌ಕುಮಾರ್ ೬೩ ವರ್ಷ ತುಂಬಿರುವ ಕನ್ನಡ ಚಿತ್ರರಂಗದಲ್ಲಿ ೪೩ ವರ್ಷಗಳಿಂದ ಹಾಸುಹೊಕ್ಕಾಗಿದ್ದಾರೆ. ಅವರು ಅಭಿನಯಿಸದ ಪಾತ್ರವೇ ಇಲ್ಲ. ಅವರು ನಡೆದು ಬಂದ ಹಾದಿಯೇ ಒಂದು ಚರಿತ್ರೆ. ಹೀಗಾಗಿ ಭಾರತ ಸರ್ಕಾರ, ಚಲನಚಿತ್ರ ಪಿತಾಮಹ ದಾದಾಸಾಹೇಬ ಫಾಲ್ಕೆ ಅವರ ಹೆಸರಿನಲ್ಲಿ ನೀಡುವ, ರಾಷ್ಟ್ರದ ಪ್ರತಿಷ್ಠಿತ ಪ್ರಶಸ್ತಿ “ಫಾಲ್ಕೆ ಪ್ರಶಸ್ತಿ” ಯನ್ನು ೧೯೯೬ರಲ್ಲಿ ಡಾ| ರಾಜ್‌ಕುಮಾರ್ ಅವರಿಗೆ ನೀಡಿ ಗೌರವಿಸಿದೆ. ಕನ್ನಡ ಚಲನಚಿತ್ರರಂಗದಲ್ಲಿ ಈ ಪ್ರಶಸ್ತಿ ಪಡೆದ ಮೊದಲಿಗರು ಡಾ| ರಾಜ್‌ಕುಮಾರ್.

ಹನ್ನೆರಡು ವರ್ಷದ ಬಾಲಕನಾಗಿರುವಾಗ ಭಕ್ತ ಪ್ರಹ್ಲಾದ (೧೯೪೨) ಚಿತ್ರದಲ್ಲಿ ಬಾಲನಟನಾಗಿ ಎಸ್. ಪಿ. ಮುತ್ತುರಾಜ ಕಾಣಿಸಿಕೊಂಡರು. ನನ್ನ ಜೀವನದ ಪ್ರಥಮ ಚಿತ್ರ ಪ್ರಹ್ಲಾದ ಎಂದು ಡಾ| ರಾಜ್‌ಕುಮಾರ್, ದೀಪಾವಳಿ ಸಂಚಿಕೆ (೧೯೬೩)ಯೊಂದಕ್ಕೆ ನೀಡಿದ ಬರಹದಲ್ಲಿ ತಿಳಿಸಿದ್ದಾರೆ. ನಂತರ ೧೯೫೨ರಲ್ಲಿ ಮಹಾತ್ಮ ಪಿಕ್ಚರ್ಸ್‌ರವರ ತಯಾರಿಕೆಯಲ್ಲಿ ಶ್ರೀನಿವಾಸ ಕಲ್ಯಾಣದಲ್ಲಿ ಋಷಿಯೊಬ್ಬನ ಪಾತ್ರ ಸಿಕ್ಕಿತು. ಸಪ್ತ ಋಷಿಗಳಲ್ಲಿ ಒಬ್ಬರಾಗಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು. ಒಂದೇ ಒಂದು ಸಂಭಾಷಣೆ ಹೇಳುವ ಅವಕಾಶ ದೊರಕಿತು. ಬಿಡುಗಡೆಯಾದ ನಂತರ ಚಿತ್ರದಲ್ಲಿ ಸಂಭಾಷಣೆ ಇತ್ತೋ ಇಲ್ಲವೋ ಎಂಬುದು ರಾಜಕುಮಾರ್ ಅವರಿಗೂ ನೆನಪಿಲ್ಲ. ೧೯೫೪ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ನಾಯಕ. ನಿರ್ದೇಶಕ ಎಚ್. ಎಲ್. ಎನ್. ಸಿಂಹ ಅವರಿಂದ ಮುತ್ತುರಾಜ್‌ಗೆ “ರಾಜ್‌ಕುಮಾರ್” ಎಂಬ ಹೊಸ ಹೆಸರಿನ ನಾಮಕರಣ. ಒಡಹುಟ್ಟಿದವರು (೧೯೯೪) ವರೆಗೆ ೨೦೫ ಚಿತ್ರಗಳ ಜನಪ್ರಿಯ ನಾಯಕ ನಟರಾಗಿ ರಾಜ್‌ಕುಮಾರ್ ಕನ್ನಡಿಗರ ಕಣ್ಮಣಿ. (ಇತ್ತೀಚಿನ ಶಬ್ದವೇಧಿ ಡಾ| ರಾಜ್‌ಕುಮಾರ್ ಅವರ ೨೦೬ನೇ ಚಿತ್ರವಾಗಿದೆ).

ಮೈಸೂರು ಜಿಲ್ಲೆ ಚಾಮರಾಜನಗರದ (ಈಗ ಚಾಮರಾಜನಗರವೇ ಜಿಲ್ಲೆಯಾಗಿದೆ) ಬಳಿ ಇರುವ ದೊಡ್ಡ ಗಾಜನೂರಿನಲ್ಲಿ ೧೯೨೯ರ ಏಪ್ರಿಲ್ ೨೪ರಂದು ಮುತ್ತುರಾಜನ ಜನನ. ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಎಂದರೆ ಆ ಕಾಲದಲ್ಲಿ ರಂಗಭೂಮಿಯ ದೊಡ್ಡ ಹೆಸರು. ರೌದ್ರಪಾತ್ರಗಳಿಗೆ ಹೆಸರಾಗಿದ್ದ ಪುಟ್ಟಸ್ವಾಮಯ್ಯನವರು ಗುಬ್ಬಿ ಕಂಪನಿಯಲ್ಲಿ ಕಲಾವಿದರಾಗಿದ್ದರು. ಬಡತನದಿಂದಾಗಿ ಮುತ್ತುರಾಜ್ ವಿದ್ಯಾಭ್ಯಾಸ ಅರ್ಧಕ್ಕೆ ನಿಂತಿತು. ಗುಬ್ಬಿ ಕಂಪನಿಯೇ ವಿಶ್ವವಿದ್ಯಾನಿಲಯವಾಯಿತು. ತಂದೆಯನ್ನು ನೆರಳಿನಂತೆ ಹಿಂಬಾಲಿಸಿದ ಮುತ್ತುರಾಜ್‌ಗೆ ಅವರಿಂದಲೇ ತರಬೇತಿಯಾಯಿತು. ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರ ವಹಿಸುತ್ತಿದ್ದರು. ರಾಜ್‌ಕುಮಾರ್ ಜೀವನದಲ್ಲಿ ತಂದೆ ಬೀರಿರುವ ಪ್ರಭಾವ ಅಪಾರ. ಫಾಲ್ಕೆ ಪ್ರಶಸ್ತಿ ಪ್ರಕಟವಾದಾಗ ಅವರು ಮೊದಲು ನೆನಪಿಸಿಕೊಂಡದ್ದು ತಂದೆ ಹೇಳಿದ ಮಾತುಗಳನ್ನೇ : “ಇಂತಹ ಸಾಧನೆ ನಿನ್ನಿಂದ ಸಾಧ್ಯ” ಎಂದು ಪುಟ್ಟಸ್ವಾಮಯ್ಯನವರು ಮಗನ ಭವಿಷ್ಯವನ್ನು ಅಂದೇ ನುಡಿದಿದ್ದರು. ಅದು ನಿಜವಾಯಿತು. “ನನ್ನ ತಂದೆ ರಂಗದ ಮೇಲೆ ಹುರಿಮೀಸೆ ತಿರುಗಿಸುತ್ತಾ, ಆರ್ಭಟಿಸುತ್ತಾ ರಂಗ ಪ್ರವೇಶಿಸಿದರೆಂದರೆ ಎಂತಹವರಿಗೂ ಒಂದು ಬಾರಿ ನಡುಕ ಬರುತ್ತಿತ್ತು” ಎಂದು ತಂದೆಯವರ ಅಭಿನಯವನ್ನು ಬಣ್ಣಿಸುವ ರಾಜ್‌ಕುಮಾರ್ ಅವರಿಗೆ ತಂದೆಯ ಅಭಿನಯ ಬಲು ಪ್ರಿಯ. ನಾನೂ ಅದೇ ರೀತಿ ಮಾಡಬೇಕೆಂದು “ಭಕ್ತ ಪ್ರಹ್ಲಾದ” ಚಿತ್ರದಲ್ಲಿ ಹಿರಣ್ಯಕಶಿಪು ಪಾತ್ರದಲ್ಲಿ ಅವರಂತೆ ಅಭಿನಯಿಸಲು ಸಾಧ್ಯವೇ ಎಂದು ಪ್ರಯತ್ನಿಸಿದೆ. ಆದರೆ ಬರಲಿಲ್ಲ ಎಂದು ಹೇಳುತ್ತಾರೆ. ೧೯೪೨ರಲ್ಲಿ ತಯಾರಾದ `ಪ್ರಹ್ಲಾದ’ ಚಿತ್ರದಲ್ಲಿ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಹಿರಣ್ಯಕಶಿಪು ಪಾತ್ರದಲ್ಲಿ ಅಭಿನಯಿಸಿದ್ದರು. ಗುಬ್ಬಿ ಕಂಪನಿಯಲ್ಲಿ ಪುಟ್ಟಸ್ವಾಮಯ್ಯನವರು ಅಭಿನಯಿಸುತ್ತಿದ್ದಾಗ ಮುತ್ತುರಾಜುವಿಗೆ “ಕೃಷ್ಣಲೀಲಾ” ನಾಟಕದಲ್ಲಿ ಸಣ್ಣ ಪಾತ್ರ ದೊರೆತ್ತಿತ್ತು. ಕೆಲ ದಿನಗಳ ನಂತರ ಪುಟ್ಟಸ್ವಾಮಯ್ಯನವರು ಗುಬ್ಬಿ ಕಂಪನಿ ತೊರೆದು ಎಂ. ವಿ. ಸುಬ್ಬಯ್ಯ ನಾಯ್ಡು ಅವರ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿಗೆ ಸೇರಿದಾಗ ಅಕಸ್ಮಾತ್ತಾಗಿ ಮುತ್ತುರಾಜ್‌ಗೆ “ಅಂಬರೀಷ” ನಾಟಕದಲ್ಲಿ ಅಂಬರೀಷನ ತಮ್ಮ ರಮಾಕಾಂತನ ಪಾತ್ರ ದೊರಕಿತು. ಅನಂತರ “ಕುರುಕ್ಷೇತ್ರ” ನಾಟಕದಲ್ಲಿ ತಂದೆ ಭೀಮನಾದರೆ ಮಗ ಅರ್ಜುನ. ರಾಜ್‌ಕುಮಾರ್‌ಗೆ ಇದು ರಂಗತಾಲೀಮು. ೧೯೫೧ರಲ್ಲಿ ತಂದೆ ಪುಟ್ಟಸ್ವಾಮಯ್ಯನವರ ನಿಧನ.

ಬಂದೆರಗಿದ ಅಘಾತದಿಂದ ತತ್ತರಿಸಿದ ಮುತ್ತುರಾಜ್, ಮತ್ತೆ ಗುಬ್ಬಿ ಕಂಪನಿ ಸೇರಿ “ಭೂ ಕೈಲಾಸ” ನಾಟಕದಲ್ಲಿ ಅಭಿನಯಿಸಿದರು. ಗುಬ್ಬಿ ಕಂಪನಿ ಅಲ್ಲದೆ, ಶ್ರೀ ಸಾಹಿತ್ಯ ಮಂಡಲಿ, ಶೇಷಾಚಾರ್ಯರ ಶೇಷಕಮಲ ನಾಟಕ ಮಂಡಳಿಯಲ್ಲಿಯೂ ರಾಜ್‌ಕುಮಾರ್ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ.

೧೯೫೪ರಲ್ಲಿ ಗುಬ್ಬಿ ಕರ್ನಾಟಕ ಫಿಲಂಸ್ ಅವರು ಬೇಡರ ಕಣ್ಣಪ್ಪ ಚಿತ್ರ ತಯಾರಿಸುವ ಸಲುವಾಗಿ ನಾಯಕನ ಶೋಧನೆಯಲ್ಲಿದ್ದರು. ಗುಬ್ಬಿ ವೀರಣ್ಣ ಹಾಗೂ ಎಚ್. ಎಲ್. ಎನ್. ಸಿಂಹ ಅವರುಗಳು ಮುತ್ತುರಾಜ್‌ನನ್ನು ಆಯ್ಕೆ ಮಾಡಿ ಸ್ಕ್ರೀನ್ ಟೆಸ್ಟ್‌ಗಾಗಿ ಮದರಾಸಿಗೆ ಕಳುಹಿಸಿದರು. ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಒಬ್ಬರ ಉದಯದ ಕಾಲ ಸನ್ನಹಿತವಾಗುತ್ತಿತ್ತು. “ಬೇಡರ ಕಣ್ಣಪ್ಪ” ಪಾತ್ರ ಅಭಿನಯಿಸಲು ಮುತ್ತುರಾಜ್ ಆಯ್ಕೆ ನಡೆಯಿತು. ಮುಂದಿನದು ಇತಿಹಾಸ. ಚಿತ್ರ ಶತದಿನ ಓಡಿತು. ಎಲ್ಲೆಡೆ ಸನ್ಮಾನ. ರಾಜ್‌ಕುಮಾರ್ ಅಭಿನಯದ ಪ್ರಶಂಸೆ. ಇದು ಕನ್ನಡದಲ್ಲಿ ತಾರಾಮೌಲ್ಯ ಉದಯಕ್ಕೂ ಕಾರಣವಾಯಿತು. ಬೇಡರ ಕಣ್ಣಪ್ಪ ರಾಷ್ಟ್ರೀಯ ಪ್ರಶಸ್ತಿಗಳಿಸಿದ ಮೊದಲ ಚಿತ್ರವಾಗಿಯೂ ದಾಖಲೆಯಲ್ಲಿ ಸೇರಿತು. ಸೋದರಿ (೧೯೫೫), ೧೯೫೬ರಲ್ಲಿ ಭಕ್ತ ವಿಜಯ, ಹರಿಭಕ್ತ ಹಾಗೂ ಓಹಿಲೇಶ್ವರ ಚಿತ್ರಗಳಲ್ಲಿ ಅಭಿನಯಿಸಿದ ರಾಜ್‌ಕುಮಾರ್ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಸರಿಸಾಟಿಯಿಲ್ಲದ ಅಭಿನಯ ನೀಡಿದರು. ಮೊದಲು ಮೂರು ವರ್ಷಗಳೂ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದ್ದರಿಂದಾಗಿ ೧೯೫೭ರಲ್ಲಿ ತೆರೆಕಂಡ ರಾಯರ ಸೊಸೆ ಚಿತ್ರದ ಬಗ್ಗೆ ಎಲ್ಲರಲ್ಲೂ ಸಹಜವಾಗಿಯೇ ಕುತೂಹಲವಿತ್ತು. ರಾಜ್‌ಕುಮಾರ್ ಸಾಮಾಜಿಕ ಚಿತ್ರದಲ್ಲಿ ಹೇಗೆ ಕಾಣುತ್ತಾರೆ ಎಂಬ ಕೌತುಕವಿತ್ತು. ಇದು ರಾಜ್‌ಕುಮಾರ್ ಅಭಿನಯದ ಮೊದಲ ಸಾಮಾಜಿಕ ಚಿತ್ರವಾಯಿತು.

ಇದರಲ್ಲೂ ಅವರ ಅಭಿನಯ ಪ್ರಶಂಸೆಗೆ ಪಾತ್ರವಾಯಿತು. ರಾಜ್‌ಕುಮರ್‌ಗೆ ಆನಂತರ ಹಿನ್ನಡೆಯೇ ಇಲ್ಲ. ಅಣ್ಣ ತಂಗಿ, ಚಂದವಳ್ಳಿಯ ತೋಟ, ದೂರದ ಬೆಟ್ಟ, ಮೇಯರ್ ಮುತ್ತಣ್ಣ, ಮಣ್ಣಿನ ಮಗ ಮೊದಲಾದ ಚಿತ್ರಗಳಲ್ಲಿ ಗ್ರಾಮೀಣ ಬದುಕಿನ ನೈಜ ಚಿತ್ರಣ ಅಭಿನಯ ಕಂಡುಬಂದರೆ, ಸಂಧ್ಯಾರಾಗ, ನಾಂದಿ, ಕಸ್ತೂರಿ ನಿವಾಸ, ಬಂಗಾರದ ಮನುಷ್ಯ, ಜೀವನ ಚೈತ್ರಗಳಲ್ಲಿ ಮನ ಮಿಡಿಯುವ ಅಭಿನಯ ನೀಡಿದ್ದಾರೆ. ಭೂ ಕೈಲಾಸದ ರಾವಣ, ಮಹಿಷಾಸುರ ಮರ್ದಿನಿಯಲ್ಲಿ ಮಹಿಷಾಸುರ, ಸತಿಶಕ್ತಿಯಲ್ಲಿ ರಕ್ತಾಕ್ಷ, ಭಕ್ತ ಪ್ರಹ್ಲಾದದಲ್ಲಿ ಹಿರಣ್ಯಕಶಿಪು ದಾನವ ಪಾತ್ರಗಳನ್ನು ವಹಿಸಿಕೊಂಡು ತಮ್ಮ ಅಭಿನಯ ಸಾಮರ್ಥ್ಯ ಮೆರೆದಿದ್ದಾರೆ. ಇಮ್ಮಡಿ ಪುಲಕೇಶಿ, ರಣಧೀರ ಕಂಠೀರವ, ಶ್ರೀ ಕೃಷ್ಣದೇವರಾಯ, ಮಯೂರ ಐತಿಹಾಸಿಕ ಚಿತ್ರಗಳಲ್ಲೂ ಸೈ ಎನಿಸಿಕೊಂಡಿದ್ದಾರೆ. ಸತ್ಯ ಹರಿಶ್ಚಂದ್ರ, ಪುರಂದರದಾಸ, ಸಂತ ತುಕಾರಾಂ, ಕನಕದಾಸ, ಮಂತ್ರಾಲಯ ಮಹಾತ್ಮೆ, ಸರ್ವಜ್ಞ, ಕವಿರತ್ನ ಕಾಳಿದಾಸಗಳ ಮೂಲಕ ಭಕ್ತಿ ಪಾತ್ರಗಳ ತಲ್ಲೀನತೆಯನ್ನು ತೋರಿಸಿದ್ದಾರೆ. ಜೇಡರ ಬಲೆ ಮೂಲಕ ಸಿ. ಐ. ಡಿ. ೯೯೯ ತರಹದ ಬಾಂಡ್ ಪಾತ್ರಗಳಲ್ಲೂ ತಮ್ಮ ಅಭಿನಯ ಸಾಮರ್ಥ್ಯವನ್ನು ವಿಸ್ತರಿಸಿಕೊಂಡಿದ್ದಾರೆ. ರಾಜ್‌ಕುಮಾರ್ ಅಭಿನಯದ ೨೦೦ ಚಿತ್ರಗಳಲ್ಲೂ ವೈವಿಧ್ಯಮಯ ಅಭಿನಯ ಕಾಣಬಹುದು.

ಭಾಗ್ಯದ ಬಾಗಿಲು (೧೯೬೮) ಚಿತ್ರದ ಮೂಲಕ ಶತಚಿತ್ರಗಳನ್ನು ರಾಜ್‌ಕುಮಾರ್ ಪೂರೈಸಿದಾಗ ಅದುವರೆಗೆ ವರನಟ ಎಂದು ಕರೆಸಿಕೊಳ್ಳುತ್ತಿದ್ದ ಅವರು “ನಟ ಸಾರ್ವಭೌಮ”ರಾದರು. ಶತಚಿತ್ರಗಳಲ್ಲಿ ಅಭಿನಯಿಸಿದ ಪ್ರಥಮ ನಟ ಎಂಬ ಕೀರ್ತಿಯೂ ಇವರದಾಯಿತು. ಈ ಸಂದರ್ಭದಲ್ಲಿ ನಾಡಿನಾದ್ಯಂತ ಸನ್ಮಾನಗಳ ಸುರಿಮಳೆ. ಇವರ ಅಭಿನಯದ ನೂರು ಚಿತ್ರಗಳ ತುಣುಕುಗಳನ್ನೂ ಸೇರಿಸಿ “ನಟ ಸಾರ್ವಭೌಮ” ಎಂಬ ಚಿತ್ರ ತಯಾರಿಸಿದ್ದು ನಟನೊಬ್ಬನಿಗೆ ಸಂದ ಗೌರವ. ಗಂಧದ ಗುಡಿ (೧೯೭೩) ಚಿತ್ರದ ಮೂಲಕ ರಾಜ್‌ಕುಮಾರ್ ೧೫೦ ಚಿತ್ರಗಳನ್ನು ಪೂರೈಸಿದ ನಟರೆನಿಸಿದಾಗ ಅವರನ್ನು ಸನ್ಮಾನಿಸಿ “ರಸಿಕರ ರಾಜ” ಬಿರುದು ನೀಡಲಾಯಿತು. ನಂತರದ ದಿನಗಳಲ್ಲಿ ರಾಜಕುಮಾರ್ ಅವರನ್ನು ಹುಡುಕಿ;ಕೊಂಡು ಬಾರದ ಪ್ರಶಸ್ತಿಗಳಿಲ್ಲ. ರಾಜ್ ಅಭಿಮಾನಿಗಳ ಸಂಖ್ಯೆ ಬೃಹತ್ತಾಗಿ ಬೆಳೆಯಿತು. ೧೯೭೬ರಲ್ಲಿ ಮೈಸೂರು ವಿಶ್ವವಿದ್ಯಾಲಯ ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ೧೯೮೩ರಲ್ಲಿ ಭಾರತ ಸರ್ಕಾರ “ಪದ್ಮಭೂಷಣ” ನೀಡಿ ಗೌರವಿಸಿತು. ೧೯೯೩ರಲ್ಲಿ ರಾಜ್ಯ ಸರ್ಕಾರ “ಕರ್ನಾಟಕ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಿತು. ೧೯೯೬ರಲ್ಲಿ “ಫಾಲ್ಕೆ ಪ್ರಶಸ್ತಿ”ಯ ಕಿರೀಟ. ದೇವತಾ ಮನುಷ್ಯ (೧೯೮೯) ಚಿತ್ರದ ಮೂಲಕ ರಾಜಕುಮಾರ್ ೨೦೦ ಚಿತ್ರಗಳ ಅಭಿನಯ ಪೂರೈಸಿದರು. (ಅಂಕಿ ಅಂಶಗಳ ಪ್ರಕಾರ ಶಿವ ಮೆಚ್ಚಿದ ಕಣ್ಣಪ್ಪ ಅವರ ೨೦೦ನೇ ಚಿತ್ರವಾಗುತ್ತದೆ. ಆದರೆ ಆ ಚಿತ್ರದಲ್ಲಿ ಗೌರವ ನಟರಾಗಿರುವುದರಿಂದ ಅದನ್ನು ದಾಖಲೆಗೆ ಪರಿಗಣಿಸದೆ “ದೇವತಾ ಮನುಷ್ಯ” ಚಿತ್ರವನ್ನೇ ೨೦೦ನೇ ಚಿತ್ರ ಎಂದು ಹೆಸರಿಸಲಾಗುತ್ತಿದೆ.)

ರಾಜ್‌ಕುಮರ್ ಅಭಿನಯಸಿದ ಬಂಗಾರದ ಮನುಷ್ಯ (೧೯೭೨) ಚಲನಚಿತ್ರರಂಗದಲ್ಲೇ ಒಂದು ದಾಖಲೆ ನಿರ್ಮಿಸಿತು. ಬೆಂಗಳೂರಿನ ಸ್ಟೇಟ್ಸ್ ಚಿತ್ರಮಂದಿರದಲ್ಲಿ ದಿನವಹಿ ೩ ಪ್ರದರ್ಶನಗಳಲ್ಲಿ ೭೭ ವಾರ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿತು. ನಂತರ ಕೆಂಪೇಗೌಡ ಚಿತ್ರಮಂದಿರದಲ್ಲಿ ಬೆಳಗಿನ ಆಟದಲ್ಲಿ ಮುಂದುವರೆದು ೧೦೪ ವಾರಗಳ ಕಾಲ ಪ್ರದರ್ಶನಗೊಂಡಿತು. ಈ ದಾಖಲೆಯನ್ನು ಬೇರೆ ಯಾವ ಚಿತ್ರವೂ ಸರಿಗಟ್ಟಿಲ್ಲ. ರಾಜ್‌ಕುಮಾರ್ ತ್ರಿಪಾತ್ರಗಳಲ್ಲಿ ಅಭಿನಯಿಸಿದ ಶಂಕರ ಗುರು ಮತ್ತೊಂದು ದಾಖಲೆ ನಿರ್ಮಿಸಿದ ಚಿತ್ರ. ಸತತವಾಗಿ ಒಂದು ವರ್ಷ ಕಾಲ ನಡೆದು ಈ ಚಿತ್ರ ಇತಿಹಾಸ ಸೃಷ್ಟಿಸಿತು. ನಂತರದ ದಿನಗಳಲ್ಲಿ ಆ ರೀತಿಯ ದಾಖಲೆ ಅವರದೇ ಅಭಿನಯದ ಜೀವನ ಚೈತ್ರ ದ್ದಾಗಿದೆ. ರಾಜ್‌ಕುಮಾರ್ ಅವರ ಯಶಸ್ಸಿನಲ್ಲಿ ಅವರ ಪತ್ನಿ ಶ್ರೀಮತಿ ಪಾರ್ವತಮ್ಮ ಅವರ ಪಾತ್ರವೂ ಬಹಳ ಮುಖ್ಯವಾದದ್ದು. ಚಲನಚಿತ್ರ ತಯಾರಿಕಾ ಸಂಸ್ಥೆ ಸ್ಥಾಪಿಸಿ, ಮಹತ್ವದ, ಉತ್ತಮ ಕಥಾ ವಸ್ತುಗಳಿರುವ ಚಿತ್ರಗಳನ್ನು ತಯಾರಿಸುತ್ತಿರುವ, ವಿತರಣಾ ಕ್ಷೇತ್ರದಲ್ಲಿಯೂ ಇರುವ ಶ್ರೀಮತಿ ಪಾರ್ವತಮ್ಮ ಚಿತ್ರರಂಗದಲ್ಲಿ ಗಣ್ಯ ನಿರ್ಮಾಪಕಿ ಎನಿಸಿದ್ದಾರೆ.

ರಾಜ್‌ಕುಮಾರ್ ಹಿನ್ನಲೆಗಾಯಕರೂ ಆಗುವ ಮೂಲಕ ವಾಕ್ಚಿತ್ರ ಪರಂಪರೆಯಲ್ಲಿ ಆರಂಭಕಾಲದ ಕೊಂಡಿಯನ್ನು ಉಳಿಸಿಕೊಂಡಿದ್ದಾರೆ. ವಾಕ್ಚಿತ್ರದ ಆರಂಭ ಕಾಲಕ್ಕೆ ಎಂ. ವಿ. ಸುಬ್ಬಯ್ಯ ನಾಯ್ಡು, ಆರ್. ನಾಗೇಂದ್ರರಾವ್, ಕೆಂಪರಾಜ್, ಹೊನ್ನಪ್ಪ ಭಾಗವತರ್ ಎಲ್ಲರೂ ನಾಯಕ ನಟರೂ ಆಗಿದ್ದರಲ್ಲದೆ, ತಮ್ಮ ಪಾತ್ರದ ಹಾಡುಗಳನ್ನು ತಾವೇ ಹಾಡಬೇಕಿತ್ತು. ಆ ಕಾಲದಲ್ಲಿ ಅಭಿನಯದ ಜತೆಗೆ ಕಂಠ ಕೂಡ ಕಲಾವಿದನೊಬ್ಬನಿಗೆ ಬಹಳ ಅಗತ್ಯ ಅರ್ಹತೆಯಾಗಿತ್ತು. ಆದರೆ ರಾಜ್‌ಕುಮಾರ್ ಚಿತ್ರರಂಗ ಪ್ರವೇಶಿಸುವ ವೇಳೆಗೆ (೧೯೫೪) ಹಿನ್ನಲೆಗಾಯಕರು ಕಾಣಿಸಿಕೊಂಡಿದ್ದರು. ಹಲವಾರು ಸಂಗೀತ ನಿರ್ದೇಶಕರೂ ಇದ್ದರು. ಹೀಗಾಗಿ ರಾಜ್‌ಕುಮಾರ್ ಅವರಿಗೆ ಮೊದಲ ಚಿತ್ರದಲ್ಲೇ ಹಾಡುವ ಅವಕಾಶ ದೊರಕಲಿಲ್ಲ. ಆರಂಭದ ರಾಜ್‌ಕುಮಾರ್ ಚಿತ್ರಗಳಲ್ಲಿ ಟಿ.ಎಂ.ಸೌಂದರರಾಜನ್, ಶೀರ್ಕಾಳಿ ಗೋವಿಂದರಾಜನ್, ಎಂ. ಎಂ. ರಾಜಾ ಮೊದಲಾದವರು ಹಿನ್ನಲೆ ಗಾಯಕರಾಗಿದ್ದರು. ನಂತರ ಪಿ. ಬಿ. ಶ್ರೀನಿವಾಸ್ ಅವರು ರಾಜ್‌ಕುಮಾರ್ ಪಾತ್ರಗಳಿಗೆ ಹಾಡಲಾರಂಭಿಸಿದ್ದು ಹೊಸ ಬೆಳವಣಿಗೆಯಾಯಿತು. ಪಿ. ಬಿ. ಶ್ರೀನಿವಾಸ್ ಅವರ ಕಂಠ ರಾಜ್‌ಕುಮಾರ್ ಅವರಿಗೆ ಕರಾರುವಕ್ಕಾಗಿ ಹೊಂದಿಕೆಯಾಗುತ್ತಿದ್ದುದರಿಂದ ಯಶಸ್ಸು ಕಟ್ಟಿಟ್ಟ ಬುತ್ತಿಯಾಯಿತು.

೧೯೭೪ರಲ್ಲಿ ಕನ್ನಡ ಚಿತ್ರರಂಗದಲ್ಲಿ ಒಂದು ದೊಡ್ಡ ಬೆಳವಣಿಗೆ. ರಾಜ್‌ಕುಮಾರ್ ಗಾಯಕರಾಗಿ ಯಶಸ್ವಿಯಾದದ್ದು. ಆ ಹಾಡು ಅಭಿಮಾನಿಗಳಿಗೆ ಬಹಳ ಇಷ್ಟವಾದದ್ದು. ಸಂಪತ್ತಿಗೆ ಸವಾಲ್ ಚಿತ್ರಕ್ಕಾಗಿ ರಾಜ್‌ಕುಮಾರ್ “ಯಾರೇ ಕೂಗಾಡಲಿ ಊರೇ ಹೋರಾಡಲಿ… ನಿನ್ನ ನೆಮ್ಮದಿಗೆ ಭಂಗವಿಲ್ಲ… ಎಮ್ಮೇsss ನಿನಗೆ ಸಾಟಿಯಿಲ್ಲ….” ಎಂದು ಹಾಡಿದರು. ಇದು ಅಪಾರ ಜನಪ್ರಿಯತೆ ಪಡೆಯಿತು. ನಟನಾಗಿ ರಾಜ್‌ಕುಮಾರ್ ಎಷ್ಟು ಜನಪ್ರಿಯರೋ, ಗಾಯಕರಾಗಿಯೂ ಈಗ ಅಷ್ಟೇ ಜನಪ್ರಿಯ. ಜಿ. ಕೆ. ವೆಂಕಟೇಶ ಸಂಗೀತ ನಿರ್ದೇಶನದಲ್ಲಿ ರಾಜ್‌ಕುಮಾರ್ ತಮ್ಮ ಪ್ರಥಮ ಗೀತೆ ಹಾಡಿದರು. ಆ ಪರಂಪರೆ ಹಾಗೆಯೇ ಮುಂದುವರೆಯಿತು. ಹಾಗೆ ನೋಡಿದರೆ ರಾಜ್‌ಕುಮಾರ್ ಹಾಡಿರುವುದು ಇದೇ ಮೊದಲೇನಲ್ಲ. ೧೯೫೯ರಲ್ಲಿ “ಮಹಿಷಾಸುವ ಮರ್ದಿನಿ” ಚಿತ್ರದಲ್ಲಿ ರಾಜ್‌ಕುಮಾರ್ ಅವರು ಯುಗಳ ಗೀತೆಯೊಂದನ್ನು ಹಾಡಿದ್ದಾರೆ. ಈ ಚಿತ್ರಕ್ಕೂ ಜಿ. ಕೆ. ವೆಂಕಟೇಶ ಅವರೇ ಸಂಗೀತ ನಿರ್ದೇಶಕರು. ೧೯೫೬ರಲ್ಲಿ ಹರಿಭಕ್ತ ಚಿತ್ರದಲ್ಲಿ ಮಧ್ಯಮಾವತಿ ಮತ್ತು ಮೋಹನರಾಗದಲ್ಲಿ ಶ್ಲೋಕವೊಂದನ್ನು ಹಾಡಿದ್ದಾರೆ. ೧೯೫೬ರಲ್ಲಿಯೇ ಓಹಿಲೇಶ್ವರ ಚಿತ್ರದಲ್ಲಿ ಘಂಟಸಾಲ ಅವರು ರೆಕಾರ್ಡಿಂಗ್‌ಗೆ ಬರಲಾಗದ್ದರಿಂದ ಶರಣು ಶಂಭೋ… ಎಂಬ ಶ್ಲೋಕವನ್ನೂ ಜಿ. ಕೆ. ವೆಂಕಟೇಶ, ರಾಜ್‌ಕುಮಾರ್ ಅವರಿಂದಲೇ ಹಾಡಿಸಿದರು.

೧೯೬೨ರಲ್ಲಿ ದೇವಸುಂದರಿ ಎಂಬ ಚಿತ್ರದಲ್ಲಿ ರಾಜ್‌ಕುಮಾರ್ ನರಸಿಂಹರಾಜು ಅವರ ಪಾತ್ರಕ್ಕೆ ಯುಗಳ ಗೀತೆಯೊಂದನ್ನೂ ಹಾಡಿದ್ದಾರೆ. ಈ ಹಾಸ್ಯ ಗೀತೆಯನ್ನು ರಾಜ್‌ಕುಮಾರ್, ಸರೋಜಿನಿ ಪಟ್ಟಾಭಿ ಹಾಡಿದ್ದರು. ಆನಂತರ ರಾಜ್‌ಕುಮಾರ್ ಬೇರೆ ಯಾವ ನಟನಿಗೂ ಕಂಠದಾನ ಮಾಡಿಲ್ಲ. ತಮ್ಮ ಪುತ್ರ ಶಿವರಾಜ್‌ಕುಮಾರ್ ಅವರಿಗೆ ೧೯೯೪ರಲ್ಲಿ ರಾಜ್‌ಕುಮಾರ್ ಕಂಠದಾನ ಮಾಡಿದ್ದಾರೆ. ಗಂಧದ ಗುಡಿ ಭಾಗ-೨ ಚಿತ್ರದಲ್ಲಿ “ನಾವಾಡುವ ನುಡಿಯೇ ಕನ್ನಡ ನುಡಿ” ಹಾಗೂ “ಸಮರ” (೧೯೯೫) ಚಿತ್ರದಲ್ಲಿನ ಹಾಡನ್ನು ಶಿವರಾಜ್‌ಕುಮಾರ್ ಅವರಿಗಾಗಿಯೇ ಹಾಡಿದ್ದಾರೆ. ಕುಮಾರ್ ಬಂಗಾರಪ್ಪ ಅವರಿಗಾಗಿ ಅಶ್ವಮೇಧದಲ್ಲಿ ಹಾಡಿದ್ದಾರೆ. ತಾವೇ ನಾಯಕನಟನಾಗಿ, ತಮ್ಮ ಹಾಡುಗಳನ್ನು ತಾವೇ ಹಾಡುತ್ತಾ ವಾಕ್ಚಿತ್ರ ಆರಂಭಕಾಲದ ಪರಂಪರೆಯನ್ನು ಈಗಲೂ ಎತ್ತಿ ಹಿಡಿದಿರುವ ಭಾರತದ ಏಕೈಕ ನಟ ರಾಜ್‌ಕುಮಾರ್ ನಾಯಕನಟನಾಗಿ ಚಿತ್ರರಂಗ ಪ್ರವೇಶಿಸಿರುವ ಅವರ ಮತ್ತೊಬ್ಬ ಪುತ್ರ ರಾಘವೇಂದ್ರ ರಾಜ್‌ಕುಮಾರ್ ಈ ನಾಯಕ-ಗಾಯಕ ಪರಂಪರೆಯನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ. ಅವರು ನಾಯಕನಾಗಿರುವ ಎಲ್ಲ ಚಿತ್ರಗಳಿಗೂ ಅವರೇ ಹಿನ್ನಲೆ ಗಾಯಕರು.

ಸಂಪತ್ತಿಗೆ ಸವಾಲ್ ಎಮ್ಮೆ ಹಾಡಿನ ನಂತರ ಮಯೂರ ಎಂಬ ಐತಿಹಾಸಿಕ ಚಿತ್ರದಲ್ಲಿ “ನಾನಿರುವುದೆ ನಿಮಗಾಗಿ” ಎಂದು ಹಾಡಿ ಮತ್ತಷ್ಟು ಜನಪ್ರಿಯರಾದರು. ಆನಂತರದ ದಿನಗಳಲ್ಲಿ ಅವರ ಎಲ್ಲ ಚಿತ್ರದಲ್ಲೂ ಹಿನ್ನಲೆಗಾಯನ ಅವರ ಪಾಲಿನದೇ ಆದವು. ತಮ್ಮ ಹಾಡುಗಳಿಗೆ ಶಾಸ್ತ್ರಿಯ ಸಂಗೀತದ ಸ್ಪರ್ಶವನ್ನೂ ಅವರು ನೀಡುವುದರಿಂದಾಗಿ ಜೀವನ ಚೈತ್ರದ ಹಾಡುಗಳು ಜನಪ್ರಿಯವಾದವು. ಈ ಚಿತ್ರದ ಹಿನ್ನಲೆ ಗಾಯನಕ್ಕಾಗಿ ಅವರು ೧೯೯೨ರ ಸಾಲಿನ ಕೇಂದ್ರ ಸರ್ಕಾರದ ಶ್ರೇಷ್ಠ ಹಿನ್ನಲೆ ಗಾಯಕ ಪ್ರಶಸ್ತಿಯನ್ನೂ ಪಡೆದರು.

ಸಾಮಾಜಿಕ ಕಾಳಜಿ, ಕಳಕಳಿಯನ್ನು ಸಂದರ್ಭ ಬಂದಾಗಲೆಲ್ಲಾ ರಾಜ್‌ಕುಮಾರ್ ವ್ಯಕ್ತಪಡಿಸಿದ್ದಾರೆ. ೧೯೬೨ರಲ್ಲಿ ಪ್ರವಾಹ ಪರಿಹಾಹ ನಿಧಿ ಸಂಗ್ರಹ ಕಾರ್ಯಕ್ಕೆ ಉತ್ಸಾಹದಿಂದ ತಮ್ಮನ್ನು ತೊಡಗಿಸಿಕೊಂಡ ದಿನಗಳಿಂದ ಆರಂಭಿಸಿ, ೧೯೯೬ ರಲ್ಲಿ ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಕನ್ನಡ ಚಿತ್ರಗಳಿಗೆ ಚಲನಚಿತ್ರಮಂದಿರಗಳನ್ನು ಒದಗಿಸಬೇಕೆಂಬ ಚಳವಳಿಯವರೆಗೆ ಅವರು ಮುಂಚೂಣಿಯಲ್ಲೇ ಇದ್ದಾರೆ. ೧೯೮೨ರಲ್ಲಿ ಗೋಕಾಕ್ ವರದಿ ಜಾರಿಗೆ ಒತ್ತಾಯಿಸಿ ರಾಜ್ಯದಾದ್ಯಂತ ನಡೆದ ಚಳವಳಿಯ ನೇತೃತ್ವವನ್ನು ರಾಜ್‌ಕುಮಾರ್ ವಹಿಸಿದ್ದರು. ಚಳವಳಿಗೆ ಗಂಭೀರ ಸ್ವರೂಪ ಬಂದದ್ದು ಡಾ| ರಾಜ್‌ಕುಮಾರ್ ಚಳವಳಿಗೆ ಧುಮುಕಿದಾಗಲೇ. ರಾಜ್‌ಕುಮಾರ್ ಒಂದು ಶಕ್ತಿಯಾಗಿ ಗೋಚರಿಸಿದ್ದೂ ಆಗಲೇ.

ಕೃಪೆ: ಕನ್ನಡ ಸಿನಿಮಾ ಇತಿಹಾಸ ಪುಟಗಳಲ್ಲಿ
ಮುದ್ರಣ : ೧೯೯೮, ಪುಟ ೨೧೬, ಬೆಲೆ: ೨೭೫
ಪ್ರಕಾಶಕರು: ಕನ್ನಡ ಪುಸ್ತಕ ಪ್ರಾಧಿಕಾರ, ಚಾಮರಾಜಪೇಟೆ, ಬೆಂಗಳೂರು-೫೬೦೦೧೮.

(೨೦೦೦)

12 Responses to ಡಾ| ರಾಜ್‌ಕುಮಾರ್‌ರವರ ವಿಶೇಷ ಪರಿಚಯ

  1. Ravichandra BS, Sidlaghatta

    Rajakumar ge rjakumar saati

  2. SANTHOSH

    GOD MAN

  3. K A KHAN

    Kannada naadu kanda aprateema naija Kannadiga, hrudayavantha dayalu…kannadigara hemme……….

  4. Kiran CS

    Rajanna yavagalu ajara amaara..

  5. jeevappa

    Nange avra bagge helodikke shabdagale illa. Vyaktitvada hindiruva vyaktiye namma rajanna.

  6. Govindaraju

    He was simply great.

  7. mallikarjun

    god…….

  8. Deepak

    Dr.Raj Kumar ge jai, bangarada manushya matte hutti ba.

  9. G Vijayakumaar

    Rajakumar obba magadarshi aritukollorige, tilidu nadedare innu uttama mattakke sadhisabahudu avara anubhava.

  10. malu d

    annavrige yaru sari satiyalla

  11. ಹರ್ಷಿತ್. ಪಿ

    ಅಣ್ಣಾ ಎಂದರೆ ನಮ್ಮಣ್ಣ……ನಟಸಾರ್ವಬೌಮ, ರಸಿಕರ ರಾಜ, ಕನ್ನಡ ಕಲಾಕೌಸ್ತುಭ, ಗಾನ ಗಂಧರ್ವ,ಕರ್ನಾಟಕ ರತ್ನ, ಕಂಟಕಿ ಕರ್ನಲ್, ವರನಟ,ಧ್ರುವತಾರೆ,ಮೇರುನಟ,ಅಣ್ಣವ್ರು, ಪದ್ಮಭೂಶಣ ಪ್ರಶಸ್ತಿ, ದಾದಾ ಸಾಹೇಬ್ ಪ್ರಶಸ್ತಿ….ಇತ್ಯಾದಿ ಪ್ರಶಸ್ತಿಗಳ ಪುರಸ್ಕೃತ ಡಾ.ರಾಜಕುಮಾರ್ ರವರಿಗೆ ನನ್ನ ದೊಡ್ಡ ಸಾಷ್ಟಾಂಗ ನಮಸ್ಕಾರಗಳು………..ಹಾಗೂ ಈ ಲೇಖನ ಬರೆದವರಿಗೂ ನನ್ನ ನಮನ……..ಧನ್ಯವಾದಗಳು……

  12. shankar

    kannadakobbare anna ANNA RAJANNA

Leave a Reply