ಚಿನಕುರಳಿ-೦೩
ಮರ್ಕಟ
ನೆನಪಿನ ಶಕ್ತಿಯನ್ನು ಹೆಚ್ಚಿಸುವ ಟಾನಿಕ್ ಮಾರುಕಟ್ಟೆಗೆ ಬಂದಿದೆ.
ಆದರೆ ಅಂಗಡಿಯಲ್ಲಿ ಹೋಗಿ ಕೇಳಲು ಅದರ ಹೆಸರೇ ಮರೆತು ಹೋಗಿದೆಯಲ್ಲ?!
ಜೈಲು ಸುಧಾರಣೆಗೆ ಹಲವು ಲಕ್ಷ ರೂಪಾಯಿಗಳನ್ನು ಸಚಿವರೊಬ್ಬರು ಘೋಷಿಸಿದ್ದಾರೆ.
ಸಚಿವರು ತುಂಬ ಮುಂದಾಲೋಚನೆಯಿಂದಲೇ ಇದನ್ನು ಮಾಡಿರಬೇಕು.
ಮಂಗ ಮತ್ತು ನಾಯಿಯ ಸ್ನೇಹ ಹಿರೇಕೋಗಲೂರಿನಿಂದ ಹಾಗೂ ನಾಯಿ ಮತ್ತು ಕೋಳಿಯ ಸ್ನೇಹ ಯಲ್ಲಾಪುರದಿಂದ ವರದಿಯಾಗಿವೆ.
ಒಬ್ಬರಿಗೊಬ್ಬರು ನಾಯಿ, ಮಂಗ, ಬೆಕ್ಕು, ಕೋಳಿಗಳಂತೆ ಕಚ್ಚಾಡುವ ಮಂದಿ ಜೊತೆ ಸೇರಿ ದೇಶವನ್ನು ಆಳುತ್ತಿರುವಾಗ ಎಲ್ಲಾ ಸಾಧ್ಯ.
ದಂತಚೋರ ವೀರಪ್ಪನ್ ತನ್ನ ಬಗ್ಗೆ ಚಲನಚಿತ್ರ ತಯಾರಿಸಬೇಕೆಂಬ ಆಶಯ ವ್ಯಕ್ತಪಡಿಸಿದ್ದಾನೆ.
ಮುಖ್ಯ ಭೂಮಿಕೆ ನಿರ್ವಹಿಸಲು ತಾನೇ ಸ್ವತಃ ಸಿದ್ಧ ಎಂದು ಹೇಳಿದ ಬಗ್ಗೆ ವರದಿಯಾಗಿಲ್ಲ.
ಬೆಂಗಳೂರಿನಲ್ಲಿ ಮನೆಗಳಿಗೆ ಹವಾನಿಯಂತ್ರಣಕ್ಕೆ ವಿದ್ಯುತ್ತು ಸರಬರಾಜು ನಿಲ್ಲಿಸಿರುವುದಾಗಿ ಕೆ.ಇ.ಬಿ. ಪ್ರಕಟಿಸಿದೆ.
ಹವಾನಿಯಂತ್ರಿತ ನಗರ ಎಂಬ ಹೆಸರಿರಲು ಮನೆಗಳಿಗೇಕೆ ಪ್ರತ್ಯೇಕ ಹವಾನಿಯಂತ್ರಣ ಎಂಬ ಆಲೋಚನೆ ಇರಬಹುದೆ?
(೧೯೯೭)