ಲ್ಯಾಪ್‌ಟಾಪ್‌ಗೆ ಒದ್ದು ಕೆಲಸ ಮಾಡಿಸಿಕೊಳ್ಳಿ
ಯಂತ್ರಾಂಶ (ಹಾರ್ಡ್‌ವೇರ್) ಮತ್ತು ತಂತ್ರಾಂಶ (ಸಾಫ್ಟ್‌ವೇರ್) ಗಳ ವ್ಯತ್ಯಾಸವನ್ನು ವಿವರಿಸುವಾಗ ನಾನು ಸ್ವಲ್ಪ ಹಾಸ್ಯಮಯವಾಗಿ ಈ ರೀತಿ ಹೇಳುತ್ತಿದ್ದೆ -“ತಂತ್ರಾಂಶವೆಂದರೆ ಕಣ್ಣಿಗೆ ಕಾಣಿಸದ್ದು. ಯಂತ್ರಾಂಶವೆಂದರೆ ಕಣ್ಣಿಗೆ ಕಾಣಿಸುವಂತದ್ದು. ನಿಮಗೆ ನಿಮ್ಮ ಗಣಕದ ಮೇಲೆ ಕೋಪ ಬಂದರೆ, ಯಂತ್ರಾಂಶವನ್ನು ಅಂದರೆ ಕಣ್ಣಿಗೆ ಕಾಣಿಸುವ ಗಣಕದ ಭಾಗಗಳನ್ನು, ಸಿಟ್ಟಿನಿಂದ ಒದೆಯಬಹುದು”. ಈಗ ಬಂದ ಸುದ್ದಿಯಂತೆ ಇನ್ನು ಮುಂದೆ ನೀವು ಲ್ಯಾಪ್‌ಟಾಪ್‌ಗಳನ್ನು ಒದ್ದು ಕೆಲಸ ಮಾಡಿಸಿಕೊಳ್ಳಬಹುದು. ಐಬಿಎಂನವರು ಒಂದು ತಂತ್ರಾಂಶವನ್ನು ಅಭಿವೃದ್ದಿಪಡಿಸಿದ್ದಾರೆ. ಅದರ ಪ್ರಕಾರ ಲ್ಯಾಪ್‌ಟಾಪ್‌ಗಳನ್ನು ಕುಟ್ಟುವ ಮೂಲಕ ಅದಕ್ಕೆ ಆದೇಶ ನೀಡಬಹುದು. ಧ್ವನಿ ಮೂಲಕ ಆದೇಶ ನೀಡುವ ತಂತ್ರಜ್ಞಾನ ಈಗಾಗಲೇ ಬಳಕೆಯಲ್ಲಿದೆ. ಆದರೆ ಕುಟ್ಟುವ ಮೂಲಕ ಆದೇಶ ನೀಡುವುದು ಹೊಸತು. ಹಾಗೆಂದು ಯಾವುದೇ ಲ್ಯಾಪ್‌ಟಾಪ್‌ನ್ನು ಕುಟ್ಟುವ ಮೂಲಕ ಆದೇಶ ನೀಡುವ ಹಾಗಿಲ್ಲ. ಮೂರು ವರ್ಷಗಳ ಈಚೆಗೆ ತಯಾರಾಗಿರುವ ಐಬಿಎಂ (ಈಗ ಲೆನೋವಾ) ಲ್ಯಾಪ್‌ಟಾಪ್‌ಗಳಲ್ಲಿ ಅಲುಗಾಡುವಿಕೆಯನ್ನು ಅರ್ಥಮಾಡಿಕೊಳ್ಳಬಲ್ಲ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಈ ತಂತ್ರಜ್ಞಾನಕ್ಕೆ ಸರಿಯಾಗಿ ಐಬಿಎಂನವರು ಈಗ ಹೊಸದಾಗಿ ತಯಾರಿಸಿರುವ ತಂತ್ರಾಂಶವನ್ನು ಅಳವಡಿಸಕೊಳ್ಳುವ ಮೂಲಕ “ಕುಟ್ಟುವ” ಆದೇಶ ನೀಡಬಹುದು. ಒಂದು ಸಲ ಕುಟ್ಟಿದರೆ (ಒದ್ದರೆ ಎಂದು ನಾನು ಹೇಳಿದ್ದು ಉತ್ಪ್ರೇಕ್ಷೆಗಾಗಿ ಮಾತ್ರ) ಗಣಕ ಚಾಲೂ, ಎರಡು ಸಲ ಕುಟ್ಟಿದರೆ ಬಂದ್, ಹೀಗೆ ಆದೇಶಗಳನ್ನು ನೀವು ಗ್ರಾಹಕೀಯಗೊಳಿಸಿಕೊಳ್ಳಬಹುದು. ಇನ್ನು ಮುಂದೆ “ಕಂಪ್ಯೂಟರ್‌ಗೆ ಒದೆಯೋಣ ಎನ್ನುವಷ್ಟು ಸಿಟ್ಟು ಬಂತು” ಎಂದು ಹೇಳುವಾಗ ಎಚ್ಚರವಿರಲಿ.
ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.