ಭೈರಪ್ಪನವರ `ಆವರಣ' ಬ್ಯಾನ್ ಆಗುತ್ತಂತೆ?
– [http://mitramaadhyama.co.in|ಬೇಳೂರು ಸುದರ್ಶನ]
ಕಾವೇರಿ ವಿಷಯ ತಣ್ಣಗಾದ ಮೇಲೆ `ಆವರಣ’ ದ ಶಾಖ ಹಬ್ಬುವ ಲಕ್ಷಣಗಳು ಗೋಚರಿಸುತ್ತಿವೆ.
ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
ಐದು ವರ್ಷಗಳ ಹಿಂದಿನ ಮಾತು. ನಾನು ಆಗ ದಿನಪತ್ರಿಕೆಯೊಂದರ ಮ್ಯಾಗಜಿನ್‌ಗಾಗಿ ಎಸ್.ಎಲ್. ಭೈರಪ್ಪನವರ ಸಂದರ್ಶನ ಮಾಡಲು ಇಬ್ಬರು ಸಹೋದ್ಯೋಗಿಗಳೊಂದಿಗೆ ಮೈಸೂರಿಗೆ ಹೋಗಿದ್ದೆ. ಭೈರಪ್ಪನವರ ಮನೆಯಲ್ಲೇ ಇಡೀ ದಿನ ವಾಸ. ಬೆಳಗ್ಗೆಯಿಂದ ಸಂಜೆವರೆಗೆ ಅವರ ಆತಿಥ್ಯದ ನಡುವೆಯೇ ಸಂದರ್ಶನ. ಇನ್ನಷ್ಟೇ ಬಿಡುಗಡೆಯಾಗಲಿರುವ `ಮಂದ್ರ’ದ ನೆರಳಿನಲ್ಲಿ ಈ ಸಂದರ್ಶನಕ್ಕೆ ವಿಶೇಷ ಮಹತ್ವ ಬಂದಿತ್ತು.
ಸಂದರ್ಶನದ ಪ್ರಶ್ನೆಗಳನ್ನು ಮೊದಲೇ ಕಳಿಸಿದ್ದರಿಂದ ಅವರೂ ಉತ್ತರಗಳನ್ನು ಸಿದ್ಧ ಮಾಡಿ ಉಕ್ತಲೇಖನ ನೀಡಿದ್ದು ವಿಚಿತ್ರ ಅನ್ನಿಸಿದ್ದು ನಿಜ. ಆದರೆ ಪ್ರಶ್ನೆ ಕೇಳಿದ ಕೂಡಲೇ ಬಾಯಿಗೆ ಬಂದ ಹಾಗೆ ಗಳಹುವ, ಮರುದಿನ ಪತ್ರಕರ್ತರೇ ತಮ್ಮನ್ನು ತಪ್ಪಾಗಿ ಉಲ್ಲೇಖಿಸಿದ್ದಾರೆ ಎಂದು ಗೂಬೆ ಕೂರಿಸುವ ವರ್ತನೆಗಳ ಹಿನ್ನೆಲೆಯಲ್ಲಿ ಭೈರಪ್ಪ ಮಾಡಿದ್ದು ಸರಿ ಅನ್ನಿಸಿತ್ತು.
ಔಪಚಾರಿಕ ಸಂದರ್ಶನದ ಕೊನೆಗೆ ಅನೌಪಚಾರಿಕವಾಗಿ ಮಾತು ಹರಿಯಿತು. ಸುದೀರ್ಘ ಉತ್ತರಗಳನ್ನು ಕೊಟ್ಟು ಕೊಂಚ ಬಳಲಿದಂತೆ ಕಂಡ ಭೈರಪ್ಪನವರು ಎಂಥ ಪ್ರಶ್ನೆಗೂಉತ್ತರ ನೀಡಿಯಾರೇ ಎಂಬ ಅನುಮಾನ, ಕುತೂಹಲ ನಮಗಿತ್ತು. ನನ್ನ ಸಹೋದ್ಯೋಗಿ ಪತ್ರಕರ್ತೆ ಕೇಳಿಯೇ ಬಿಟ್ಟಳು: ರಾಮಜನ್ಮ ಭೂಮಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಈ ಪ್ರಶ್ನೆಯೂ ಅನಿರೀಕ್ಷಿತ; ನಾನೂ ಅನೌಪಚಾರಿಕವಾಗೇ ಉತ್ತರ ನೀಡುತ್ತೇನೆ, ಪ್ರಕಟನೆಗೆ ಅಲ್ಲ ಎಂದು ಭೈರಪ್ಪನವರು ಸುಮಾರು ಮುಕ್ಕಾಲು ತಾಸು ತಾವು ಅಧ್ಯಯನ ಮಾಡಿದ ಸಂಗತಿಗಳನ್ನು ನಮಗೆ ವಿವರಿಸಿದರು. ಮುಸ್ಲಿಮ್ ದಾಳಿಯ ಸಂಗತಿಗಳನ್ನು, ಇಸ್ಲಾಮೀ ಚಿಂತನೆಯ ಕೆಲವು ಸಂಗತಿಗಳನ್ನು ಅವರು ನೇರವಾಗಿ ಗ್ರಂಥಗಳನ್ನು ಉಲ್ಲೇಖಿಸಿಯೇ ವಿವರಿಸಿದರು. ಇದೆಲ್ಲವನ್ನೂ ನೀವು ಬರೆಯಬಾರದು ಎಂದೇನಿಲ್ಲ. ಆದರೆ ಹೀಗೆ ಬರೆಯುವುದರಿಂದ ಸಾಹಿತ್ಯದ ಕುರಿತಾದ ಸಂದರ್ಶನದ ಕೇಂದ್ರಗಮನ ಹೊರಟುಹೋಗುತ್ತದೆ. ಅಲ್ಲದೆ ಇದ್ನೆಲ್ಲ ಸಂಕ್ಷಿಪ್ತವಾಗಿ ಬರೆಯುವುದೂ ಆಗದ ಕೆಲಸ. ಮುಂದೆ ನೋಡೋಣ ಎಂದು ಭೈರಪ್ಪನವರು ಹೇಳಿದರು. ನಾವು ಅವರ ಮಾತನ್ನು ಒಪ್ಪಿದೆವು. ಅವರು ಭಾರತದ ಇತಿಹಾಸದ ಬಗ್ಗೆ ಮಾಡಿದ ಈ ವಿಶೇಷ ಖಾಸಗಿ ಉಪನ್ಯಾಸ ಪ್ರಕಟವಾಗಲಿಲ್ಲ.
ಆದರೆ ಈಗ ಎಸ್.ಎಲ್.ಭೈರಪ್ಪ ಬಂಡೆದ್ದಿದ್ದಾರೆ. ದಶಕಗಳ ಕಾಲ ಅವರು ಕಟ್ಟಿಕೊಂಡು ಬಂದಿದ್ದ ಸಹನೆ ಈಗ ಕಟ್ಟೆ ಒಡೆದಿದೆ. ಅವರೇ ತಮ್ಮ ಸುತ್ತ ಕಟ್ಟಿಕೊಂಡಿದ್ದ ಆವರಣದ ಗೋಡೆಗಳು ಕುಸಿದು ಬಿದ್ದಿವೆ.
`ಆವರಣ’ ಕಾದಂಬರಿಯ ಮೂಲಕ ಭೈರಪ್ಪನವರು ಕಲಾತ್ಮಕತೆಯನ್ನಾದರೂ ಬಲಿಕೊಟ್ಟು ಇತಿಹಾಸದ ಬಗ್ಗೆ ತಾನು ಕಂಡ ಸತ್ಯವನ್ನು ಹೇಳಿಬಿಡಬೇಕು ಎಂದು ಹಟ ತೊಟ್ಟು ಹೆಜ್ಜೆ ಇಟ್ಟಿದ್ದಾರೆ. ಅಧ್ಯಯನದ ಸಂಗತಿಗಳನ್ನು ಕಾದಂಬರಿಯ ರೂಪದಲ್ಲಿ ನೀಡುವಾಗ ಇರುವ ತೊಡಕುಗಳನ್ನು ಅವರು ಎದುರಿಸಿದ್ದಾರೆ. `ಸಾರ್ಥ’ದಲ್ಲಿ ಕೇವಲ ಐತಿಹಾಸಿಕ ಕಥೆ ಹರಿದಿದ್ದರೆ ಇಲ್ಲಿ ಸಮಕಾಲೀನ ಪಾತ್ರಗಳ ಮೂಲಕ ಇಂದಿನ ಕಥೆ, ಹಿಂದಿನ ಕಥೆ – ಎಲ್ಲವೂ ಅನಾವರಣಗೊಳ್ಳುತ್ತವೆ.
ಇಸ್ಲಾಮೀ ಆಕ್ರಮಣದ ಪ್ರಮುಖ ಹೆಜ್ಜೆಗುರುತುಗಳನ್ನು ಅವರು ಸಮಕಾಲೀನ ಪಾತ್ರವೊಂದರ ಮೂಲಕ ಹೇಳಿಸಿದ್ದಾರೆ. `ಆವರಣ’ ನಿಷೇಧಕ್ಕೆ ಒಳಗಾದರೂ ಆದೀತು ಎಂಬ ಅನುಮಾನದಿಂದಲೋ ಏನೋ, ಅದನ್ನು ನ್ಯಾ|| ಎಂ. ರಾಮಾಜೋಯಿಸರು, ಹಾರ್‍ನಹಳ್ಳಿ ಅಶೋಕ್ ಈ ಕಾದಂಬರಿಯನ್ನು ಓದಿದ್ದಾರೆ ಎಂದು ಮುನ್ನುಡಿಯಲ್ಲೇ ಉಲ್ಲೇಖಿಸಿ `ಸಾಮಾಜಿಕ ಕೇವಿಯಟ್’ ಪಡೆದಿದ್ದಾರೆ. ಕಾದಂಬರಿಯ ಕೊನೆಯಲ್ಲಿ ಕಥಾ ನಾಯಕಿಯಿಂದಲೇ ಉಲ್ಲೇಖಿತ ಗ್ರಂಥಗಳ ಪಟ್ಟಿಯನ್ನೂ ದಾಖಲಿಸಿದ್ದಾರೆ. ಕಾದಂಬರಿಯು ನಿಷೇಧವಾಗುವ ಬಗ್ಗೆಯೂ ಕಥೆಯಲ್ಲೇ ದೃಶ್ಯವೊಂದನ್ನು ಕಾಣಿಸಿದ್ದಾರೆ.
ಕಾದಂಬರಿಯ ಒಂದು ಪಾತ್ರದಲ್ಲಿ ದೇಶದ ಟಿಪಿಕಲ್ ಬುದ್ಧಿಜೀವಿ ಸಾಹಿತಿಯೊಬ್ಬರನ್ನು ಬೇಕಾಬಿಟ್ಟಿ ಅಣಕಿಸಿದ್ದಾರೆ. ಬಹುಶಃ ತಮ್ಮ ಆತ್ಮಕಥೆ `ಭಿತ್ತಿ’ಯಲ್ಲಿಹೇಳಲಾಗದ ಮತ್ತು ಆನಂತರ ನಡೆದ ಸಂಗತಿಗಳನ್ನು ಅವರು ಕಾದಂಬರಿಯಲ್ಲಿ ಹೆಣೆದಿದ್ದಾರೆ ಎಂದೇ ಅನಿಸುತ್ತದೆ. ಔರಂಗಜೇಬನ ಚರಿತ್ರೆಯನ್ನು ಯಾವ ಎಗ್ಗೂ ಇಲ್ಲದೆ, ಪದಬಳಕೆಯ ಸಂಯಮವನ್ನೂ ಅಲ್ಲಲ್ಲಿ ಮೀರಿ ಬಿಡಿಸಿಟ್ಟಿದ್ದಾರೆ. ಸಂಘಪರಿವಾರವು ಸದಾ ಹೇಳಿಕೊಂಡು ಬಂದಿರುವ ಸಂಗತಿಗಳನ್ನು ಅವರು ಕಥೆಯಲ್ಲಿ ವ್ಯಾಪಕವಾಗಿ ಚೆದುರಿಸಿ ದಾಖಲಿಸಿದ್ದಾರೆ.
`ಈಗ ನನ್ನನ್ನು ಏನು ಬೇಕಾದರೂ ಮಾಡಿಕೊಳ್ಳಿ’ ಎಂದು ಭೈರಪ್ಪನವರು ಸವಾಲು ಎಸೆದು ನಿಂತಹಾಗೆ ಕಾಣಿಸುತ್ತದೆ. ಕಮ್ಯುನಿಸ್ಟ್ ಸಿದ್ಧಾಂತಿಗಳು, ಸೆಕ್ಯುಲರಿಸ್ಟ್ ಎಂಬ ಹಣೆಪಟ್ಟಿ ಹಚ್ಚಿಕೊಂಡ ಬುದ್ಧಿಜೀವಿಗಳು, ಯಾರೋ ಬರೆದ ಇತಿಹಾಸವನ್ನೇ ಮತ್ತೆ ಗಿಣಿಪಾಠದ ಹಾಗೆ ಪಠ್ಯಗಳಲ್ಲಿ ಸೇರಿಸುವ ಸರ್ಕಾರ – ಎಲ್ಲವನ್ನೂ ಒಮ್ಮೆಗೇ ತರಾಟೆಗೆ ತೆಗೆದುಕೊಂಡಿದ್ದಾರೆ. ಅದಕ್ಕೇ ಹೇಳಿದ್ದು…
`ಅವರೇನು? ಎರಡು ದಿನ ಅಧ್ಯಯನ ಮಾಡಿಬಿಟ್ಟರೆ ಸಾಕಾ?’ ಎಂದು ಗಿರೀಶ್ ಕಾರ್ನಾಡ್ ಗೇಲಿ ಮಾಡಿದ್ದರು, ತೀರಾ ಇತ್ತೀಚೆಗೆ. ಟಿಪ್ಪು ಸುಲ್ತಾನ್ ವಿಷಯದ ಗದ್ದಲ ಎದ್ದಾಗ ಭೈರಪ್ಪನವರು ಒಂದು ಪುಟದ ಪ್ರತಿಕ್ರಿಯೆಯನ್ನು ಬರೆದು ತಮ್ಮ ಅಧ್ಯಯನಶೀಲತೆಯನ್ನು ಕಾರ್ನಾಡ್ ಮುಖಕ್ಕೆ ರಾಚಿದ್ದರು. ಆಗಲೇ ಭೈರಪ್ಪ ಯಾಕೋ ಬದಲಾಗಿದ್ದಾರೆ ಅನ್ನಿಸಿತ್ತು. ಈಗ ‘ಆವರಣ’ದೊಂದಿಗೆ ಭೈರಪ್ಪನವರ ಪಾತ್ರಪ್ರವೇಶ ಬಹುತೇಕ ಸಂಪೂರ್ಣವಾಗಿದೆ. ಸದ್ದಿಲ್ಲದೆ ಬರೆಯುತ್ತ ಸಾರ್ವಜನಿಕ ಬದುಕಿನಲ್ಲಿ ಇಂಥ ಸಂಗತಿಗಳ ಬಗ್ಗೆ ಹೆಚ್ಚಿಗೇನೂ ಹೇಳದೇ ಇದ್ದ ಭೈರಪ್ಪ ಈಗ ಯಾಕೆ ಆಕ್ರೋಶಭರಿತರಾಗಿದ್ದಾರೆ? ಅವರ ಬರವಣಿಗೆಯ ಶೈಲಿಯಲ್ಲಿ ಯಾಕೆ ಕ್ರೌರ್ಯವೂ ಸೇರಿಕೊಂಡಿದೆ? `ಆವರಣ’ದ ಕೆಲವು ಸನ್ನಿವೇಶಗಳು ಭಯ ಹುಟ್ಟಿಸುವುದರ ಜೊತೆಗೆ ನಾಲ್ಕು ದಿನ ನಿದ್ದೆಯನ್ನೂ ಕೆಡಿಸುತ್ತದೆ.
`ಈ ಬಗ್ಗೆ ನಾನು ಖುದ್ದಾಗಿ ದಿಲ್ಲಿಯಲ್ಲಿ ಮೂಲಗ್ರಂಥಗಳನ್ನು ಹುಡುಕಿ ಸಾವಿರಾರು ರೂಪಾಯಿ ಖರ್ಚು ಮಾಡಿ ತಂದು ಓದುತ್ತಿದ್ದೇನೆ. ಆದ್ದರಿಂದ ಇಲ್ಲಿ ನಾನು ಹೇಳಿದ್ದೆಲ್ಲವೂ ಈಗ್ರಂಥಗಳ ಉಲ್ಲೇಖಗಳೇ ಹೊರತು ಬೇರೇನಲ್ಲ’ ಎಂದು ಭೈರಪ್ಪ ಅಂದು ನಮಗೆ ಹೇಳಿದ್ದರು. ಅವರು ಹೇಳಿದ ಆ ಭಯಾನಕ ವಿವರಣೆಗಳೂ `ಆವರಣ’ದಲ್ಲಿ ದಾಖಲಾಗಿವೆ.
ಸರ್ಕಾರ `ಆವರಣ’ವನ್ನು ಬ್ಯಾನ್ ಮಾಡುತ್ತದೆ ಎಂಬ ಹಿನ್ನೆಲೆಯಲ್ಲಿ ಪುಸ್ತಕದ ಸಾವಿರಾರು ಪ್ರತಿಗಳು ನೇಪಥ್ಯದಲ್ಲೇ ಮಾರಾಟವಾಗಿವೆ. ಬಿಡುಗಡೆಯೇ ಆಗದ ಈ ಪುಸ್ತಕ ಈಗ ಮರುಮುದ್ರಣ ಕಾಣುತ್ತಿದೆ.
ಮುಂದೇನು? ಕಾವೇರಿ ವಿಷಯ ತಣ್ಣಗಾದ ಮೇಲೆ `ಆವರಣ’ ದ ಶಾಖ ಹಬ್ಬುವ ಲಕ್ಷಣಗಳು ಗೋಚರಿಸುತ್ತಿವೆ.