ಬಿಲ್ ಗೇಟ್ಸ್‌ಗೂ ಉಪ್ಪಿಟ್ಟೇ?

ನಾನು ಮೊದಲೇ ಎಚ್ಚರಿಸುತ್ತೇನೆ. ನೀವು ಉಪ್ಪಿಟ್ಟು ಪ್ರಿಯರಾದರೆ ಈ ಬ್ಲಾಗನ್ನು ಓದಬೇಡಿ. ಓದಿದ ನಂತರ ಮೆಣಸು ಜಾಸ್ತಿ ಹಾಕಿದ ಉಪ್ಪಿಟ್ಟನ್ನು ತಿಂದವರಂತೆ ಮುಖ ಸಿಂಡರಿಸಿಕೊಂಡರೆ ನಾನು ಹೊಣೆಯಲ್ಲ.

ದಶಂಬರ ೯, ೨೦೦೫ರಂದು ಬಿಲ್ ಗೇಟ್ಸ್ ಬೆಂಗಳೂರಿಗೆ ಬಂದಿದ್ದರು. ಅರಮನೆ ಮೈದಾನದಲ್ಲಿ ಅದ್ದೂರಿ ಕಾರ್ಯಕ್ರಮವಿತ್ತು. ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಒಂದು ಪ್ರಶ್ನೆ ಹೀಗಿತ್ತು “ನೀವು ದೆಹಲಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನಾನು ಸಮೋಸ ತಿಂದೆ. ಚೆನ್ನಾಗಿತ್ತು ಎಂದು ಹೇಳಿದ್ದಿರಿ. ದಕ್ಷಿಣ ಭಾರತದ ಯಾವ ತಿಂಡಿ ತಿಂದಿರಿ? ನಿಮಗೆ ಇಷ್ಟವಾಯಿತೆ?”. ಅದಕ್ಕೆ ಬಿಲ್ ಗೇಟ್ಸ್ ಅವರು “ನನಗೆ ಈ ದಿನ ಬೆಳಿಗ್ಗೆ ಉಪ್ಮ (ಉಪ್ಪಿಟ್ಟು) ಕೊಟ್ಟಿದ್ದರು” ಎಂದು ಹೇಳಿದರು. ಅದು ಇಷ್ವಾಯಿತೇ ಇಲ್ಲವೇ ಎಂಬುದನ್ನು ಅವರು ತಿಳಿಸಲಿಲ್ಲ.

ಬಿಲ್ ಗೇಟ್ಸ್ ಮಾತು ಅಲ್ಲಿರಲಿ. ನನಗಂತೂ ಉಪ್ಪಿಟ್ಟು ಅಷ್ಟೇನೂ ಇಷ್ಟದ ತಿಂಡಿಯಲ್ಲ. ನಾನು ಮಾತ್ರವಲ್ಲ, ನಮ್ಮ ಮನೆಯಲ್ಲಿ ಎರಡು ಮಕ್ಕಳೂ ಅಷ್ಟೆ. ಬೇರೆ ಯಾವ ತಿಂಡಿಯೂ ಇಲ್ಲವಾದಲ್ಲಿ ಮಾತ್ರ ಉಪ್ಪಿಟ್ಟು ತಿನ್ನುತ್ತಾರೆ. ನಾನು ಗಮನಿಸಿದಂತೆ ನಾನೊಬ್ಬನೇ ಅಲ್ಲ. ಬಹುಪಾಲು ಗಂಡಸರು ಉಪ್ಪಿಟ್ಟನ್ನು ಇಷ್ಟಪಡುವುದಿಲ್ಲ. ಆದರೆ ವಿಚಿತ್ರಾನ್ನದ ಅಡುಗೆ ಭಟ್ಟರು ತಮ್ಮ ಒಂದು ಕಾಲಂನಲ್ಲಿ “ಉಪ್ಪಿಟ್ಟೋ ಉಪ್ಪಿಟ್ಟು ಗೋವಿಂದ ಉಪ್ಪಿಟ್ಟು” ಎಂದು ಹಾಡಿದ್ದಾರೆ. ಅವರ ಎಕ್ಸೆಪ್ಶನ್ ಬಿಟ್ಟು ಬಿಡೋಣ. ಗಂಡಸರು ಉಪ್ಪಿಟ್ಟನ್ನು ಹೆಚ್ಚಾಗಿ ಇಷ್ಟ ಪಡುವುದಿಲ್ಲ ಎನ್ನುವುದಕ್ಕೆ ನನಗೆ ಒಂದು ಕಾರಣ ಇದೆ.

ಒಮ್ಮೆ ನಾನು ಕರ್ನಾಟಕ ಸರಕಾರದ ಒಂದು ಸಂಸ್ಥೆಯವರಿಗೆ ಗಣಕ ತರಬೇತಿ ಕಾರ್ಯಾಗಾರ ನಡೆಸಿದ್ದೆ. ಅದರಲ್ಲಿ ಉದಾಹರಣೆಯಾಗಿ ಇಡ್ಲಿ, ದೋಸೆ, ಉಪ್ಪಿಟ್ಟು ಎಂದು ಟೈಪಿಸತೊಡಗಿದೆ. ಕೂಡಲೆ ಎಲ್ಲ ಗಂಡಸರು ಒಕ್ಕೊರಲಿನಿಂದ ಘೋಷಿಸಿದರು “ಉಪ್ಪಿಟ್ಟು ಬೇಡವೇ ಬೇಡ”. ಅಲ್ಲಿದ್ದ ಮಹಿಳಾಮಣಿಗಳೆಲ್ಲ ಒಟ್ಟಾಗಿ ಗಂಡಸರನ್ನು ವಿರೋಧಿಸಿದರು “ಉಪ್ಪಿಟ್ಟು ಇರಲಿ”. ಉಪ್ಪಿಟ್ಟು ಪರ ಮತ್ತು ವಿರೋಧವಾಗಿ ಸ್ವಲ್ಪ ಹೊತ್ತು ವಾಗ್ವಾದ ನಡೆಯಿತು. ನಾನು ಅಧಿಕಾರ ಚಲಾಯಿಸಿ ಆ ವಾದವನ್ನು ನಿಲ್ಲಿಸ ಪಾಠ ಮುಂದುವರೆಸಿದೆ.

ನಾನು ಮುಂಬಯಿಯ ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿದ್ದಾಗ (ಈಗಲೂ ನಾನು ಮಾನಸಿಕವಾಗಿ ವಿಜ್ಞಾನಿಯೇ) ಕ್ಯಾಂಟೀನಿನಲ್ಲಿ ದೊರೆಯುವ ಉಪ್ಪಿಟ್ಟನ್ನು ಕಾಂಕ್ರೀಟ್ ಎನ್ನುತ್ತಿದ್ದವು. ಈ ಪದ ನನ್ನದೇ ಸಂಶೋಧನೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಅದೇ ಪದವನ್ನು ಇನ್ನೂ ಕೆಲವರು ಬೆಂಗಳೂರಿನಲ್ಲಿ ಬಳಸುವುದನ್ನು ನಾನು ಗಮನಿಸಿದ್ದೇನೆ.

ನನ್ನ ಸ್ನೇಹಿತ ಕೃಷ್ಣಾನಂದ ಎಂಬವರಿದ್ದಾರೆ. ಉಪ್ಪಿಟ್ಟು ಪ್ರಿಯರಾದ ಅಪರೂಪದ ಗಂಡಸರು. ಒಮ್ಮೆ ನನಗೆ ಹೇಳಿದರು. “ನಿಮ್ಮ ಉಪ್ಪಿಟ್ಟು ಬಗೆಗಿನ ಅಭಿಪ್ರಾಯವನ್ನು ಬದಲಿಸುತ್ತೇನೆ. ನಾಳೆ ಬೆಳಿಗ್ಗೆ ನಮ್ಮ ಮನೆಗೆ ತಿಂಡಿಗೆ ಬನ್ನಿ” ಎಂದು. ನಾನು ಹೋದೆ. ಉಪ್ಪಿಟ್ಟು ತಿಂದೆ. ಉಪ್ಪಿಟ್ಟು ತುಂಬಾ ಚೆನ್ನಾಗಿಯೇ ಇತ್ತು. ಆದರೇನಂತೆ. ಉಪ್ಪಿಟ್ಟು ಉಪ್ಪಿಟ್ಟೇ. ಅದಕ್ಕೊಂದು ಮಿತಿಯಿದೆ ತಾನೆ. ಎಷ್ಟೇ ಚೆನ್ನಾಗಿದ್ದರೂ ಅದು ಉಪ್ಪಿಟ್ಟಿನ ಮಿತಿಯನ್ನು ಮೀರಲಾರದು.

ಮುಗಿಸುವ ಮುನ್ನ: ಬಿಲ್ ಗೇಟ್ಸ್‌ಗೂ ಉಪ್ಪಿಟ್ಟೇ ಹರ ಹರಾ ಶ್ರೀ ಚೆನ್ನ ಉಪ್ಪಿಟ್ಟೇಶ್ವರಾ!

Leave a Reply