ನಂ.1 ಆಗುವುದು ಹೇಗೆ?
ಶೀರ್ಷಿಕೆ ಓದಿದ ತಕ್ಷಣ ನಿಮ್ಮ ಮನದಲ್ಲಿ ಏನು ಆಲೋಚನೆ ಬಂದಿರಬಹುದು ಎಂಬುದನ್ನು ನಾನು ಊಹಿಸಬಲ್ಲೆ. ವ್ಯಕ್ತಿತ್ವ ವಿಕಸನದ ಬಗ್ಗೆ ಕೊರೆಯಲು ಹೊರಟಿದ್ದೇನೆ ಎಂದುಕೊಂಡಿದ್ದೀರಾ? ಖಂಡಿತ ಇಲ್ಲ. ನೀವು ನಿಜವಾಗಿಯೂ ನಂ.1 ಆಗಬೇಕಿದ್ದರೆ ಅದರ ಬಗ್ಗೆ ಮಾರುಕಟ್ಟೆಯಲ್ಲಿ ಬೇಕಾದಷ್ಟು ಪುಸ್ತಕಗಳಿವೆ. ಕೊಂಡು ಓದಬಹದು. ಅವುಗಳನ್ನು ಕೊಂಡರೆ ನೀವು ನಂ.1 ಆಗುತ್ತೀರೋ ಇಲ್ಲವೋ, ಆದರೆ, ಪುಸ್ತಕ ಬರೆದವರು ಮತ್ತು ಪ್ರಕಾಶಿಸಿದವರು ನಂ.1 ಆಗುತ್ತಾರೆ.
ಇರಲಿ. ಅದನ್ನು ಬಿಟ್ಟು ಬಿಡಿ. ಈಗ ವಿಷಯಕ್ಕೆ ಬರೋಣ. ಬೆಂಗಳೂರಿನ ಎಫ್.ಎಂ. ರೇಡಿಯೋ ಕೇಂದ್ರಗಳನ್ನು ಕೇಳಿದ್ದೀರಾ? ಅವರು ಮಾತನಾಡುವ ಕನ್ನಡ, ಕ್ಷಮಿಸಿ, ಕಂಗ್ಲಿಷ್ ಕೇಳಿದ್ದೀರಾ? ಅದರ ಬಗ್ಗೆ ಪ್ರತ್ಯೇಕವಾಗಿ ಬರೆಯುವಷ್ಟಿದೆ. ಈಗಿನ ವಿಷಯ ಅದಲ್ಲ. ಎಲ್ಲ ಎಫ್.ಎಂ ಕೇಂದ್ರದವರೂ ಒಂದು ಮಾತನ್ನು ಖಂಡಿತವಾಗಿ ಹೇಳುತ್ತಾರೆ. ಅದುವೇ “ನೀವು ….. ಕೇಳುತ್ತಿದ್ದೀರಾ. ಇದು ಬೆಂಗಳೂರಿನ ನಂ.1. ಎಫ್.ಎಂ ಚಾನೆಲ್ ಆಗಿದೆ”. ಆದುದರಿಂದ ನಾನು ಹೇಳುವುದು ಇಷ್ಟೆ. ನೀವು ನಂ.1 ಆಗಬೇಕಿದ್ದರೆ ಬೆಂಗಳೂರಿನ ಯಾವುದಾದರೂ ಎಫ್.ಎಂ. ಚಾನೆಲಿನ ರೇಡಿಯೋ ಜಾಕಿ ಆಗದರೆ ಸಾಕು. ಎಲ್ಲ ಚಾನೆಲುಗಳೂ ನಂ.1, ಎಲ್ಲ ರೇಡಿಯೋ ಜಾಕಿಗಳೂ ನಂ.1 🙂
ಒಬ್ಬ ಜಗದ್ವಿಖ್ಯಾತ ಗಣಿತಜ್ಞರನ್ನು ಪತ್ರಿಕಾಕರ್ತರು ಸಂದರ್ಶಿಸಿದಾಗ ಒಂದು ಪ್ರಶ್ನೆ ಕೇಳಿದ್ದರು -“ನಿಮಗೆ ಜೀವನದಲ್ಲಿ ಇದುವರೆಗೆ ಬಿಡಸಲಾಗದಂತಹ ಕ್ಲಿಷ್ಟ ಗಣಿತ ಸಮಸ್ಯೆ ಯಾವುದಾದರೂ ಎದುರಾಗಿದೆಯೇ?” ಎಂದು. ಅದಕ್ಕೆ ಅವರು ಉತ್ತರಿಸದರಂತೆ -“ಹೌದು. ಒಂದು ಪೇಸ್ಟಿನ ಜಾಹಿರಾತು ಹೇಳುತ್ತದೆ -75% ಜನರು ನಮ್ಮ ಪೇಸ್ಟ್ ಬಳಸುತ್ತಾರೆ. ಇನ್ನೊಂದು ಪೇಸ್ಟಿನ ಜಾಹಿರಾತು ಘೋಷಿಸುತ್ತದೆ – 80% ಜನರು ನಮ್ಮ ಪೇಸ್ಟ್ ಬಳುಸತ್ತಾರೆ. ಮೂರನೆಯ ಪೇಸ್ಟ್ ಕಂಪೆನಿಯ ಜಾಹಿರಾತು ಹೇಳುತ್ತದೆ -90% ಜನ ನಮ್ಮ ಪೇಸ್ಟ್ ಬಳಸುತ್ತಾರೆ. ಇದು ಹೇಗೆ ಸಾಧ್ಯ? ಒಟ್ಟುಗೂಡಿಸಿದರೆ 100% ಕ್ಕಿಂತ ಜಾಸ್ತಿ ಆಯಿತಲ್ಲ?”.
ನನಗೂ ಇದೇ ಸಮಸ್ಯೆ ಇದೆ. ಎಲ್ಲ ಎಫ್.ಎಂ. ಚಾನೆಲುಗಳೂ ನಂ.1 ಆಗುವುದು ಹೇಗೆ? ಯಾರಾದರೂ ಈ ಸಮಸ್ಯೆಯನ್ನು ಬಿಡಿಸುತ್ತೀರಾ?
ಎಫ್.ಎಂ ಚಾನೆಲುಗಳ ಕನ್ನಡ, ಅಲ್ಲ ಕಂಗ್ಲಿಷ್ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿದ್ದಲಿಂಗಯ್ಯನವರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಒಂದು ಜೋಕು ನೆನಪಿಗೆ ಬಂತು. ಟೆಲಿಫೋನು ಕಂಪೆನಿಯು ಧ್ವನಿಮುದ್ರಿತ ಸಂದೇಶ ಕೇಳಿಸುವುದು ಗೊತ್ತಿದೆ ತಾನೆ? ಅದು ಹೀಗಿದ್ದರೆ ಹೇಗೆ -“ನೀವು ಕಾಲ್ ಮಾಡಿದ ವ್ಯಕ್ತಿ ನಿಮ್ಮ ಕಾಲನ್ನು ಎತ್ತುತ್ತಿಲ್ಲ”?