"ತೆ"ಗಳಿಕೆ

ಈ ವಾಕ್ಯವನ್ನು ಗಮನಿಸಿ – “ಶ್ರೀ …. ಅವರು …. ಕ್ಷೇತ್ರದಲ್ಲಿ ಪ್ರಾವೀಣ್ಯತೆಯನ್ನು ಮೆರೆದು ತಮ್ಮ ವೈಶಿಷ್ಟ್ಯತೆಯನ್ನು ತೋರಿ ಈ ಕ್ಷೇತ್ರದಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದ್ದಾರೆ”. ಏನಿದೆ ಈ ವಾಕ್ಯದಲ್ಲಿ? ಅದೇನಪ್ಪಾ ಎಂದರೆ ಈ ವಾಕ್ಯವನ್ನು ಬಳಸಿದ ಮಹನೀಯರು ಗಳಿಸಿದ ಹೆಚ್ಚಿನ “ತೆ”.

“ಪ್ರವೀಣ”ದ ವಿಶೇಷಣ “ಪ್ರಾವೀಣ್ಯ”. ಅದಕ್ಕೊಂದು ಹೆಚ್ಚಿನ “ತೆ” ಸೇರಿಸುವ ಅಗತ್ಯವಿಲ್ಲ. ಇದೇ ರೀತಿ ಹೆಚ್ಚಿನ “ತೆ” ಗಳಿಸಿದ ಕೆಲವು ಪದಗಳ ಪಟ್ಟಿ –

ಮೂಲ ರೂಪ ವಿಶೇಷಣ ತಪ್ಪು ರೂಪ
ಪ್ರವೀಣ ಪ್ರಾವೀಣ್ಯ ಪ್ರಾವೀಣ್ಯತೆ
ವಿಶಿಷ್ಟ ವೈಶಿಷ್ಟ್ಯ ವೈಶಿಷ್ಟ್ಯತೆ
ಪ್ರಮುಖ ಪ್ರಾಮುಖ್ಯ ಪ್ರಾಮುಖ್ಯತೆ
ನಾಟಕ ನಾಟಕೀಯ ನಾಟಕೀಯತೆ
ವಿವಿಧ ವೈವಿಧ್ಯ ವೈವಿಧ್ಯತೆ

ಈ ಪಟ್ಟಿ ಇಷ್ಷಕ್ಕೇ ನಿಲ್ಲುವುದಿಲ್ಲ. ಅದಕ್ಕೆ ಇನ್ನೂ ಹಲವು ಪದಗಳನ್ನು ಸೇರಿಸಬಹುದು. ಯಾವುದೇ ಸಭೆ ಸಮಾರಂಭಕ್ಕೆ ಹೋದಾಗ ಗಮನಿಸಿ. ಅಲ್ಲಿ ಮಾತನಾಡುವ ಪ್ರತಿಯೊಬ್ಬರೂ ಒಂದಲ್ಲ ಒಂದು ಇಂತಹ ಪದವನ್ನು ಬಳಸಿಯೇ ಬಳಸುತ್ತಾರೆ. ಇದಕ್ಕೆ ಕಾರಣ ಕನ್ನಡಿಗರು ಮೂಲತಃ ವಿಶೇಷಣ ಪ್ರಿಯರು ಎಂಬುದು. ಕನ್ನಡಿಗರ ಅತಿಯಾದ ವಿಶೇಷಣ ಬಳಕೆ ಬಗ್ಗೆಯೇ ಪ್ರತ್ಯೇಕವಾಗಿ ಬರೆಯಬಹುದು. ಅದು ಇನ್ನೊಮ್ಮೆ.

Leave a Reply