ಟಾಯ್ಲೆಟ್ ಪೇಪರ್‌ನಲ್ಲಿ ಸುದ್ದಿ ಮುದ್ರಣ!
ತೈವಾನ್‌ನ ಕಂಪೆನಿಯೊಂದು ಟಾಯ್ಲೆಟ್ ಪೇಪರ್‌ನಲ್ಲಿ ಇತ್ತೀಚೆಗಿನ ಸುದ್ದಿಗಳನ್ನು ಮುದ್ರಿಸುವ ಮುದ್ರಕವೊಂದನ್ನು ಆವಿಷ್ಕರಿಸಿರುವುದಾಗಿ ಸುದ್ದಿ ಬಂದಿದೆ. ಇದು ಎಷ್ಟು ಸತ್ಯವೋ ಸುಳ್ಳೋ ಗೊತ್ತಿಲ್ಲ. ಆದರೆ ಸುದ್ದಿ ಮಾತ್ರ ಸ್ವಾರಸ್ಯಕರವಾಗಿದೆ. ಅದರ ಪ್ರಕಾರ ಅಂತರಜಾಲದಲ್ಲಿ ಹೊಸ ಹೊಸ ವಿಷಯಗಳನ್ನು ನೀಡುವ RSS ವಿಧಾನದ ಮೂಲಕ, ಅಂದರೆ RSS feedಗಳ ಮೂಲಕ ಸುದ್ದಿಗಳನ್ನು ಟಾಯ್ಲೆಟ್ ಪೇಪರ್‌ನಲ್ಲಿ ಮುದ್ರಿಸಿ ಕೊಡುವ ಕೆಲಸವನ್ನು ಈ ಮುದ್ರಕ ಮಾಡುತ್ತದೆ. ಟಾಯ್ಲೆಟ್ ಪೇಪರ್‌ನ್ನು ಬಳಸುವ ಮೊದಲು ಇದು ಮುದ್ರಿಸುತ್ತದೆ, ನಂತರ ಅಲ್ಲ :). ಕಮೋಡ್‌ನಲ್ಲಿ ಕುಳಿತವರನ್ನು ಬಯೋಮೆಟ್ರಿಕ್ಸ್ ವಿಧಾನದ ಮೂಲಕ ಪತ್ತೆಹಚ್ಚಿ ಕುಳಿತವರ ಆಸಕ್ತಿ ಪ್ರಕಾರದ ಸುದ್ದಿಗಳನ್ನೇ ಇದು ಮುದ್ರಿಸಿ ಕೊಡುತ್ತದಂತೆ. ಈಗಿನ ದಿನಗಳಲ್ಲಿ ಮುಖ್ಯವಾಹಿನಿಯ ಸುದ್ದಿ ಪತ್ರಿಕೆಗಳಲ್ಲಿ ಬಹುಜನರಿಗೆ ನಂಬಿಕೆಯೇ ಹೊರಟು ಹೋಗಿದೆ. ಕೆಲವರಂತೂ ಈ ಪತ್ರಿಕೆಗಳನ್ನು ಚಿಂದಿ ಮಾಡಲೆಂದೇ ಜಾಲತಾಣ ನಿರ್ಮಾಣ ಮಾಡಿದ್ದಾರೆ. ಇದು ಒಂದು ತಾಣದ ಉದಾಹರಣೆಯಷ್ಟೆ. ಇಂತಹ ತಾಣಗಳು ಹಲವಾರಿವೆ. ಜನರು ಪತ್ರಿಕೆಗಳ ಬಗ್ಗೆ ಎಷ್ಟು ರೋಸಿಹೋಗಿದ್ದಾರೆ ಎಂಬುದಕ್ಕೆ ಈ ತಾಣಗಳು ಸಾಕ್ಷಿ.
ದಿನಪತ್ರಿಕೆಯಲ್ಲಿ ಪ್ರಕಟಿಸುವ ಸುದ್ದಿಗಳೋ ದೇವರಿಗೇ ಪ್ರೀತಿ. ಯಾವ ಪುಟ ತೆರೆದರೂ ಯಾರೋ ಒಬ್ಬ ಯಾವುದೋ ಒಂದು ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ದೀಪ ಬೆಳಗಿಸಿದ್ದು, ಟೇಪು ಕತ್ತರಿಸಿದ್ದು, ಕೊಲೆ, ದರೋಡೆ, ಸಾನಿಯಾಳ ಸ್ಕರ್ಟಿನ ಉದ್ದ (?) ಇವೇ ಸುದ್ದಿಗಳು. ಇನ್ವೆಸ್ಟಿಗೇಟಿವ್ ಜರ್ನಲಿಸಂ ಎಂಬುದಕ್ಕೆ ಬಹುಶಃ ಅರುಣ್ ಶೌರಿಯವರೇ ಕೊನೆಯ ಉದಾಹರಣೆಯಾಗಿರಬೇಕು. ಜನರಿಗೂ ದಿನಪತ್ರಿಕೆಗಳ ಮೇಲೆ ನಂಬಿಕೆ ಹೊರಟು ಹೋಗಿದೆ.
ಬಹುಶಃ ಟಾಯ್ಲೆಟ್ ಪೇಪರ್ ಮುದ್ರಕ ತಯಾರಿಸವರ ಅಭಿಪ್ರಾಯ ಬಹುಪಾಲು ಜನರ ಅಭಿಪ್ರಾಯದಂತೆಯೇ ಇರಬೇಕು. ಅಂದರೆ ಪತ್ರಿಕೆಗಳು ಮುದ್ರಿಸುವ ಸುದ್ದಿಗಳು ಟಾಯ್ಲೆಟ್ ಪೇಪರ್‌ನಲ್ಲಿ ಮುದ್ರಿಸಲು ಮಾತ್ರ ಯೋಗ್ಯ ಎಂದು.