ಚಿನಕುರಳಿ-೦೨

ಮರ್ಕಟ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಮತ್ತು ಕೇಂದ್ರ ಮಂತ್ರಿ ಮುರಸೋಳಿ ಮಾರನ್ ಅವರನ್ನು ಬಂಧಿಸುವಾಗ ಪೋಲೀಸರು ಅಮಾನವೀಯವಾಗಿ ನಡೆದುಕೊಂಡರು.
ತಮಿಳುನಾಡನ್ನು ದಕ್ಷಿಣದ ಬಿಹಾರ್ ಎಂದು ಕರೆಯೋಣವೇ?

ತಮಿಳಿನಾಡಿನಲ್ಲಿ ಜಯಲಲಿತ ಸರಕಾರ ಅತಿರೇಕವಾಗಿ ನಡೆದುಕೊಂಡದ್ದಕ್ಕೆ ರಾಜ್ಯಪಾಲರಾಗಿದ್ದ ಫಾತಿಮಾ ಬೀವಿಯವರನ್ನು ಕೇಂದ್ರ ಸರಕಾರ ವಾಪಾಸು ಕರೆಸಿಕೊಂದೆ.
ಎತ್ತಿಗೆ ಜ್ವರ ಬಂದಾಗ ಎಮ್ಮೆಗೆ ಬರೆ ಹಾಕಿದಂತಾಯಿತು.

ದೆಹಲಿಯ ತಿಹಾರ್ ಜೈಲಿನ ಒಂದು ವಾರ್ಡ್‌ಗೆ ಮಾಜಿ ಕ್ರಿಕೆಟ್ ಆಟಗಾರ ಮನೋಜ್ ಪ್ರಭಾಕರ್ ಆವರ ಹೆಸರನ್ನು ಅವರ ಉಚ್ಛಾ ಯ ಕಾಲದಲ್ಲಿ ಇಡಲಾಗಿತ್ತು.
ಈಗ ಅವರು ಅದೇ ವಾರ್ಡ್‌ನಲ್ಲಿ ಬಂಧಿ!

`ಉಪೇಂದ್ರ’ ಸಿನಿಮಾದ ನಂತರ ಕನ್ನಡ ಚಲನಚಿತ್ರ ನಟ, ನಿರ್ದೇಶಕ ಉಪೇಂದ್ರರ ಹೊಸ ಚಿತ್ರದ ಹೆಸರು H2O. ನಂತರ ಅವರು NaCl (=ಉಪ್ಪು =ಉಪ್ಪಿ!) ಎಂಬ ಹೆಸರಿನ ಸಿನಿಮಾವನ್ನೂ ತಯಾರಿಸಬಹುದು.

ಬೆಂಗಳೂರಿನ ಬೀದಿ ನಾಯಿಗಳಿಗೆ ಆಶ್ರಯಧಾಮ ನಿರ್ಮಿಸಲಾಗುತ್ತಿದೆ.
ಇನ್ನು ಮಂದೆ `ನಾಯಿಪಾಡು’ ಎಂದು ಹಂಗಿಸುವಂತಿಲ್ಲ.

ಸರಕಾರಿ ಆಧಿಕಾರಿಗಳಲ್ಲಿ ಹಲವರು ತಮಗೆ ನೀಡಿದ ಗಣಕಗಳ ಪ್ಲಾಸ್ಟಿಕ್ ಹೊದಿಕೆಗಳನ್ನು ತೆಗೆಯುವುದೇ ಇಲ್ಲ ಎಂದು ದೂರು ಬಂದಿದೆ.
ಯಾರು ಹೇಳಿದ್ದು ಹಾಗಂತ? ತಲೆಬಾಚಲು ಕನ್ನಡಿ ಬೇಕಾಗಿ ಬಂದಾಗೆಲ್ಲ ಅವರು ಗಣಕ ಪರದೆಯ ಹೊದಿಕೆ ತೆಗೆಯುತ್ತಿದ್ದಾರಲ್ಲ.

ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಜಿಲ್ಲಾ ಘಟಕಗಳ ಹಾಗೂ ರಾಜ್ಯ ಮಟ್ಟದ ಅಧ್ಯಕ್ಷರುಗಳ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದೆ.
ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಅಭ್ಯರ್ಥಿಗಳೆಲ್ಲ ಈಗ ನಿರಾತಂಕವಾಗಿ ಸಾಹಿತ್ಯ ಸೇವೆ ನಡೆಸಬಹುದು.

`ಕಳೆದ ಏಳು ತಿಂಗಳಿಂದಲೂ ನಾನು ಎರಡು ತಿಂಗಳ ಗರ್ಭಿಣಿಯಾಗಿಯೇ ಉಳಿದಿದ್ದೇನೆ’ -ಮಾಧುರಿ ದೀಕ್ಷಿತ್. ಗಾಂಧಾರಿ ಗರ್ಭ?

`ಭಾರತೀಯ ಗ್ರಾಮಸ್ಥ ಹುಂಬ’ -ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್.
ಆತ ಹುಂಬನಾದುದರಿಂದಲೇ ಮೂರ್ಖ ರಾಜಕಾರಣಿಗಳು ಆರಿಸಿ ಬರುತ್ತಿರುವುದು.

`ಸಾಹಿತಿಗಳು ಪ್ರಶಸ್ತಿಗಾಗಿ ವಿಧಾನಸೌಧದ ಮೆಟ್ಟಲು ಹತ್ತಿ ರಾಜಕಾರಣಿಗಳ ದುಂಬಾಲು ಬೀಳುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ’ -ವಿಚಾರವಾದಿ ಪ್ರೊ.ಕೆ. ರಾಮ ರಾವ್.
ಪ್ರಶಸ್ತಿ ಸಮಿತಿ ಸದಸ್ಯರುಗಳಿಗೆ ಇದು ಎಷ್ಟು ಅಭ್ಯಾಸವಾಗಿದೆಯೆಂದರೆ ವಶೀಲಿ ಮಾಡದವರಿಗೆ ಯಾವ ಪ್ರಶಸ್ತಿಯೂ ಸಿಗದಂತಾಗಿದೆ.

`ಕಾಳಗದಲ್ಲಿ ಸೋಲಾಗಿದೆ. ಯುದ್ಧ ಆರಂಭವಾಗಿದೆ’ -ಪ್ರೊ. ಚಂದ್ರಶೇಖರ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತ ಅಭ್ಯರ್ಥಿ.
ಕ.ಸಾ.ಪ. ಪ್ರಕಟಿಸಿದ ಸಂಕ್ಷಿಪ್ತ ನಿಘಂಟಿನಲ್ಲಿ ಕಾಳಗ ಶಬ್ದಕ್ಕೆ ಯುದ್ಧ ಎಂದು ಅರ್ಥ ಕೊಟ್ಟಿದ್ದಾರೆ.

ಹಿರಿಯ ಐ.ಎ.ಎಸ್. ಅಧಿಕಾರಿಣಿ ನಾಗಲಾಂಬಿಕಾದೇವಿ ಕೋಟ್ಯಂತರ ರೂ.ಗಳ ಹಣ ದುರುಪಯೋಗ, ಭ್ರಷ್ಟಾಚಾರ ಇತ್ಯಾದಿ ಹಗರಣಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಮಹಿಳೆಯರು ಎಲ್ಲಾ ಕಾರ್ಯಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಾಟಿಯಾಗಿ ಮುಂದೆ ಬರುತ್ತಿದ್ದಾರೆ.

ಕರ್ನಾಟಕದ ಬಂಧೀಖಾನೆಗಳಲ್ಲಿ ಗ್ರಂಥಾಲಯ ಸ್ಥಾಪಿಸಲಾಗುವುದು -ಸುದ್ದಿ.
ಆದರೆ ಅಲ್ಲಿ The Great Escape ಮಾದರಿಯ ಪತ್ತೇದಾರಿ ಕಾದಂಬರಿಗಳನ್ನು ಇಡಲಾಗುವುದಿಲ್ಲವಂತೆ.

(೨೦೦೧)

Leave a Reply