ಘೋಷಿಸಿ ಧಾಳಿ ಮಾಡಿದರೇನು ಫಲ?

ಜೂನ್ ೨೨ರಂದು ಎಲ್ಲ ಪತ್ರಿಕೆಗಳಲ್ಲಿ ಚಿತ್ರ ಸಮೇತ ಒಂದು ಸುದ್ದಿ ಪ್ರಕಟವಾಗಿತ್ತು. ಡೆಕ್ಕನ್ ಹೆರಾಲ್ಡ್‌ನ ಅಂತರಜಾಲ ಆವೃತ್ತಿಯಲ್ಲಿ ಅದನ್ನು ಈಗಲೂ ಓದಬಹುದು. ಆ ಸುದ್ದಿ ಏನೆಂದರೆ ಕರ್ನಾಟಕ ಸರಕಾರದ ಅಬಕಾರಿ ಇಲಾಖೆಯವರು ಬೆಂಗಳೂರಿನ ಸುತ್ತಮುತ್ತ ಕಳ್ಳಭಟ್ಟಿ ತಯಾರಿಸುವ ಸ್ಥಳಗಳಿಗೆ ಧಾಳಿ ಇತ್ತು ಕಳ್ಳಭಟ್ಟಿ ದಾಸ್ತಾನುಗಳನ್ನು ನಾಶ ಮಾಡಿದರು ಎಂಬುದಾಗಿ. ಸುದ್ದಿಯಲ್ಲಿ ಬರುವ ಒಂದು ಪ್ಯಾರವನ್ನು ಗಮನಿಸಿ-

The kingpins of the racket – Gate Akbar, Sugana Babu and Sunai John – are absconding. “We’ll track them down and book them under the Goonda Act because there are lot of cases pending against them,” he added.

ಇದರಲ್ಲೇನು ವಿಶೇಷ ಅನ್ನುತ್ತೀರಾ? ಸಾಮಾನ್ಯವಾಗಿ ಎಲ್ಲ ಧಾಳಿಗಳಲ್ಲೂ ಧಂಧೆಯನ್ನು ನಡೆಸುವವರು ತಪ್ಪಿಸಿಕೊಳ್ಳುತ್ತಾರೆ. ಕೆಲವು ಚಿಲ್ಲರೆ ಕೂಲಿಗಳು ಮಾತ್ರ ಸಿಕ್ಕಿಹಾಕಿಕೊಳ್ಳುತ್ತಾರೆ ಎನ್ನುತ್ತೀರಾ? ಹೌದು. ಅದಕ್ಕೆ ಕಾರಣ ಗೊತ್ತೆ? ನನಗೆ ಜೂನ್ ೨೦ರಂದು ಕರ್ನಾಟಕ ಸರಕಾರದ ವಾರ್ತಾ ಇಲಾಖೆಯಿಂದ ಒಂದು ಇಮೈಲ್ ಬಂತು. ಅದನ್ನು ಕೆಳಗೆ ನಕಲು ಮಾಡಿದ್ದೇನೆ –

ಪತ್ರಿಕಾ ಆಮಂತ್ರಣ

ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀ ಎಂ.ಎ. ಸಾದಿಕ್ ಹಾಗೂ ಅಬಕಾರಿ ಆಯುಕ್ತರ ನೇತೃತ್ವದಲ್ಲಿ ಜೂನ್ ೨೧ ರಂದು ನಗರದ ಸುತ್ತಮುತ್ತಲಿನ ಕಳ್ಳಬಟ್ಟಿ ಪ್ರದೇಶಗಳಿಗೆ ಹಠಾತ್ ಅಬಕಾರಿ ದಾಳಿ ನಡೆಸಲಿದ್ದಾರೆ.
ಅಬಕಾರಿ ಇಲಾಖೆ ವಾಹನವು ಅಂದು ಬೆಳಿಗ್ಗೆ ೮.೦೦ ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಇಲ್ಲಿಂದ ಹೊರಡಲಿದೆ.
ಮಾನ್ಯತೆ ಪಡೆದ ಪತ್ರಕರ್ತರು, ಪತ್ರಿಕಾ ಛಾಯಾಗ್ರಾಹಕರು ಹಾಗೂ ವಿದ್ಯುನ್ಮಾನ ಮಾಧ್ಯಮದ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಿದೆ.

(ಸಿ.ಎಂ. ರಂಗಾರೆಡ್ಡಿ)
ಆಯುಕ್ತರ ಪರವಾಗಿ.

ಈಗ ಹೇಳಿ? ಈ ರೀತಿ ಮೊದಲೆ ಎಲ್ಲರಿಗೂ ಟಾಂಟಾಂ ಮಾಡಿ ಧಾಳಿ ಮಾಡಿದರೆ ಧಂಧೆ ನಡೆಸುವ ವ್ಯಕ್ತಿಗಳು ಸಿಗುತ್ತಾರೆಯೇ? ಧಾಳಿಯ ಉದ್ದೇಶ ಏನು ಎಂಬುದು ಖಾತ್ರಿಯಾಯಿತು ತಾನೆ?

Leave a Reply