ಕನ್ನಡ ಪತ್ರಿಕೆಯಿಂದ ಇಂಗ್ಲೀಷಿ‌ನಲ್ಲಿ ಪತ್ರ

ನಾನು ಉಷಾಕಿರಣ ಪತ್ರಿಕೆಗೆ ಒಂದು ಲೇಖನ ಕೊಟ್ಟಿದ್ದೆ. ಅದರ ಶೀರ್ಷಿಕೆ “ಮಾಹಿತಿ ತಂತ್ರಜ್ಞಾನ ಮತ್ತು ಇಂಗ್ಲೀಷಿ‌ನ ಪಿತ್ತ”. ಅದನ್ನು ವಿಶ್ವ ಕನ್ನಡದಲ್ಲೂ ಓದಬಹುದು. ಉಷಾಕಿರಣ ಪತ್ರಿಕೆಯವರು ಕನ್ನಡ ಮಾಧ್ಯಮ ಮತ್ತು ಇಂಗ್ಲೀಷ್ ಮಾದ್ಯಮ ಚರ್ಚೆ ಬಗ್ಗೆ ಹಲವರಿಂದ ಲೇಖನ ತರಿಸಿ ಪ್ರಕಟಿಸಿದ್ದರು. ಆ ಮಾಲೆಯಲ್ಲಿ ನನ್ನ ಲೇಖನವೂ ಪ್ರಕಟವಾಗಿತ್ತು. ಸರಿ. ಈಗೇನು ಅಂತೀರಾ? ಎಷ್ಟೋ ಸಮಯದ ನಂತರ ಪತ್ರಿಕೆಯಿಂದ ಸಂಭಾವನೆ ಬಂತು. ಅದರ ಜೊತೆ ಪತ್ರವೂ ಇತ್ತು. ಆದರೆ ಆ ಪತ್ರ ಇಂಗ್ಲೀಷ್ ಭಾಷೆಯಲ್ಲಿ ಇತ್ತು!

ಇಂಗ್ಲೀಷಿನ ಅಗತ್ಯ ಇಲ್ಲ. ಎಲ್ಲ ವ್ಯವಹಾರಗಳನ್ನೂ ಕನ್ನಡದಲ್ಲೇ ನಡೆಸಬಹುದು ಎಂದು ಬರೆದ ಲೇಖನಕ್ಕೆ ಸಂಭಾವನೆ ಕಳುಹಿಸುವಾಗ ಪತ್ರ ಇಂಗ್ಲೀಷಿನಲ್ಲಿ! ಈ ವಿಪರ್ಯಾಸಕ್ಕೆ ಏನಂತೀರಾ?

ಉಷಾಕಿರಣ ಮಾತ್ರವಲ್ಲ. ವಿಜಯಕರ್ನಾಟಕವೂ ಅದೇ ಜಾತಿಗೆ ಸೇರಿದೆ. ತುಂಬ ಹಿಂದೆ ನಾನು ವಿಜಯ ಕರ್ನಾಟಕ ಪತ್ರಿಕೆಗೆ eಳೆ ಎಂಬ ಹೆಸರಿನಲ್ಲಿ ಅಂಕಣ ಬರೆಯುತ್ತಿದ್ದೆ. ಅದಕ್ಕೆ ಸಂಭಾವನೆ ಕಳುಹಿಸುವಾಗಲೂ ಜೊತೆಯಲ್ಲಿರುತ್ತಿದ್ದ ಪತ್ರ ಇಂಗ್ಲೀಷ್ ಭಾಷೆಯಲ್ಲಿರುತ್ತಿತ್ತು.

ಪ್ರಜಾವಾಣಿ ಪತ್ರಿಕೆಯವರಂತೂ ಸಂಭಾವನೆಯ ಜೊತೆ ಯಾವ ಪತ್ರವನ್ನೂ ಲಗತ್ತಿಸುವುದಿಲ್ಲ. ಒಂದು ಸಣ್ಣ ಚೀಟಿ ಲಗತ್ತಿಸುತ್ತಾರೆ. ಅದೂ ಇಂಗ್ಲೀಷ್ ಭಾಷೆಯಲ್ಲಿ ಇರುತ್ತದೆ. ಉದಯವಾಣಿ ಮತ್ತು ಕನ್ನಡಪ್ರಭ ಪತ್ರಿಕೆಗಳಿಂದ ಇದುವರೆಗೆ ನನಗೆ ಯಾವ ಸಂಭಾವನೆಯೂ ಬಂದಿಲ್ಲ. ಅದುದರಿಂದ ಆ ಪತ್ರಿಕೆಗಳ ಪತ್ರವ್ಯವಹಾರದ ಬಗ್ಗೆ ನಾನು ಏನೂ ಹೇಳುವ ಸ್ಥಿತಿಯಲ್ಲಿಲ್ಲ.

Leave a Reply