ಕನ್ನಡಕ್ಕೆ ತೆರಿಗೆ ರದ್ದು ಮಾಡುವಿರಾ?

ಹೊಸ ಮುಖ್ಯ ಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಹಣಕಾಸು ಮಂತ್ರಿಯವರಲ್ಲಿ ನನ್ನದೊಂದು ವಿನಂತಿ. ದಯವಿಟ್ಟು ಸ್ಥಳೀಯ ತಂತ್ರಾಂಶ (ಸಾಫ್ಟ್‌ವೇರ್) ಉತ್ಪನ್ನ ಮತ್ತು ಸೇವೆಗಳಿಗೆ ವಿಧಿಸಿರುವ ೧೨.೫% ಮಾರಾಟ ತೆರಿಗೆಯನ್ನು (VAT) ರದ್ದು ಮಾಡಿ. ಈ ತೆರಿಗೆಯಿಂದ ಸರಕಾರಕ್ಕೆ ಯಾವ ಲಾಭವೂ ಇಲ್ಲ. ಇದು ಕನ್ನಡಕ್ಕೆ ಮಾತ್ರ ದೊಡ್ಡ ಕಂಟಕಪ್ರಾಯವಾಗಿದೆ.

ಕರ್ನಾಟಕದಲ್ಲಿ ಮಾರಾಟವಾಗುವ ಎಲ್ಲ ಬಗೆಯ ತಂತ್ರಾಂಶಗಳಿಗೂ ಅನ್ವಯವಾಗುವಂತೆ ಈ ತೆರಿಗೆ ಹಾಕಲಾಗಿದೆ. ನಿಜ. ಆದರೂ ಇದು ಕನ್ನಡಕ್ಕೇ ಮಾರಕವಾಗಿರುವುದು ವಾಸ್ತವಾಂಶ. ನಮ್ಮ ರಾಜ್ಯದವರ ಬಳಕೆಗೆ ಮಾರಾಟವಾಗುವ ತಂತ್ರಾಂಶ ಸೇವೆ ಮತ್ತು ಉತ್ಪನ್ನಗಳ ಸಿಂಹಪಾಲು ಕನ್ನಡ ತಂತ್ರಾಂಶಗಳಿಗೇ ಸಂಬಂಧಿಸಿದೆ. ಆ ತಂತ್ರಾಂಶ ಹೆಚ್ಚಿನದಾಗಿ ವಿದ್ಯಾಭ್ಯಾಸ, ಬ್ಯಾಂಕಿಂಗ್, ಬಸ್ ಮುಂಗಡ ಸ್ಥಳ ಕಾಯ್ದಿರಿಸುವುದು, ನಿಘಂಟು ವಿಶ್ವಕೋಶಗಳ ಸಿ.ಡಿ., ವಿದ್ಯುತ್, ನೀರು ಸರಬರಾಜು ಬಿಲ್, ಇತ್ಯಾದಿಗಳಿಗೆ ಸಂಬಂಧಿಸಿದ್ದು. ಅದನ್ನು ತಯಾರಿಸುವ ಕನ್ನಡ ಗಣಕ ಪರಿಣತರ ಸಂಖ್ಯೆಯೂ ಬೆರಳೆಣಿಕೆಯ ಪ್ರಮಾಣದ್ದು. ಅವರ ಮೇಲೆ ಈ ತೆರಿಗೆ ಬೀಳುತ್ತಿದೆ.

ಈ ತೆರಿಗೆಯಿಂದ ಬರುವ ಆದಾಯ ಸುಮಾರು ೫೦ ಲಕ್ಷ ರೂಪಾಯಿಗಳಿಗಿಂತ ಹೆಚ್ಚಿರಲಾರದು. ಸರಕಾರದ ಒಟ್ಟು ಆದಾಯಕ್ಕೆ ಹೋಲಿಸಿದರೆ ತಂತ್ರಾಂಶದಿಂದ ಸಿಗುವ ಮೊತ್ತ ತೀರಾ ನಗಣ್ಯ.

ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ ಕನ್ನಡದ ತಂತ್ರಾಂಶಗಳಿಗೆ ಪ್ರಮುಖ ಗಿರಾಕಿ ಸರಕಾರವೇ ಮತ್ತು ಸರಕಾರಿ ಅನುದಾನ ಪಡೆಯುವ ಅರೆ ಸರಕಾರಿ ಸಂಸ್ಥೆಗಳೇ. ಇವುಗಳ ಪಾಲು ಸುಮಾರು ೭೦%. ಅಂದರೆ ಸರಕಾರಕ್ಕೆ ತಂತ್ರಾಂಶಗಳ ಮೇಲೆ ವಿಧಿಸಿದ ಮಾರಾಟ ತೆರಿಗೆಯ ಮೂಲಕ ಬರುವ ಆದಾಯದಲ್ಲಿ ೭೦% ಸರಕಾರದಿಂದಲೇ ಬರುತ್ತದೆ. ಎಡಗೈಯಿಂದ ತೆಗೆದು ಬಲಗೈಯಿಂದ ಪಡೆಯುವ ಲೆಕ್ಕಾಚಾರ ಇದು.

೨೦೦೪-೨೦೦೫ರಲ್ಲಿ ಕರ್ನಾಟಕದ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್‌ಗಳ ಒಟ್ಟು ತಂತ್ರಾಂಶ ರಫ್ತು ೨೭೦೦೦ ಕೋಟಿ ರೂಪಾಯಿ. ಇದಕ್ಕೆ ಒಂದು ನಯಾ ಪೈಸೆಯ ತೆರಿಗೆ ಇಲ್ಲ. ಅಂದರೆ ವಿದೇಶಕ್ಕೆ ತಂತ್ರಾಂಶ ಕೂಲಿ ಕೆಲಸ ಮಾಡಿದರೆ ತೆರಿಗೆ ಇಲ್ಲ. ನಮ್ಮ ರಾಜ್ಯಕ್ಕೆ, ನಮ್ಮ ಭಾಷೆಗೆ ತಂತ್ರಾಂಶ ತಯಾರಿ ಮಾಡಿದರೆ ತೆರಿಗೆ! ಕನ್ನಡದಲ್ಲಿ ಗಣಕ ಸೇವೆ, ಉತ್ಪನ್ನ ಆದಷ್ಟೂ ಹೆಚ್ಚಬೇಕೆಂದು ಎಲ್ಲರೂ ಬಯಸುವಾಗ ಈ ಹೊರೆಯನ್ನು ಹಾಕಿರುವುದು ಯಾವ ನ್ಯಾಯ?

ನಾವು ಮಾಹಿತಿ ತಂತ್ರಜ್ಞಾನ ಉದ್ದಿಮೆಯ ಪರ ಇಲ್ಲ ಎಂದು ತೋರಿಸಲು ಹಿಂದಿನ ಸರಕಾರಗಳವರು ಹೇರಿದ ಈ ತೆರಿಗೆಯಿಂದ ಕರ್ನಾಟಕದಲ್ಲಿ ಬೀಡು ಬಿಟ್ಟಿರುವ ಬಹುರಾಷ್ಟ್ರೀಯ ಉದ್ದಿಮೆಗಳವರಿಗೆ ಯಾವ ತೊಂದರೆಯೂ ಆಗಿಲ್ಲ. ಯಾಕೆಂದರೆ ಅವರೆಲ್ಲ ವಿದೇಶಗಳಿಗೆ ತಂತ್ರಾಂಶ ರಫ್ತು ಮಾಡುತ್ತಿರುವವರು. ತಂತ್ರಾಂಶ ರಫ್ತಿಗೆ ೧% ತೆರಿಗೆ ವಿಧಿಸಿದರೂ ಅದರಿಂದ ದೊರಕಬಹುದಾದ ಆದಾಯವು ಸ್ಥಳೀಯ ತಂತ್ರಾಂಶ ಮಾರಾಟಕ್ಕೆ ವಿಧಿಸಿರುವ ೧೨.೫% ಸುಂಕದಿಂದ ದೊರಕುವ ಆದಾಯಕ್ಕಿಂತ ತುಂಬ ಹೆಚ್ಚು. ಆದುದರಿಂದ ಧೈರ್ಯವಿದ್ದರೆ ತಂತ್ರಾಂಶ ರಫ್ತಿಗೆ ಸುಂಕ ಹೇರಿ. ಕನ್ನಡಕ್ಕೆ ಮಾತ್ರ ತೆರಿಗೆ ದಯವಿಟ್ಟು ಬೇಡ.

ಕನ್ನಡವೆನೆ ಸುಂಕವ ಹೇರುವುದೀ ನಾಡು ಎಂದು ಕನ್ನಡಿಗರ ಮನ ಮಿಡಿಯುವಂತೆ ಮಾಡುವ ಈ ತೆರಿಗೆಯನ್ನು ದಯವಿಟ್ಟು ರದ್ದು ಮಾಡುವಿರಾ?

ಇತಿ ನಿಮ್ಮವ,
ಪವನಜ

Leave a Reply