ಎಸ್ ಎಲ್ ಭೈರಪ್ಪನವರಿಗೆ ಅಭಿನಂದನೆಗಳು

ಖ್ಯಾತ ಸಾಹಿತಿ ಡಾ. ಎಸ್. ಎಲ್. ಭೈರಪ್ಪನವರಿಗೆ ಪಂಪ ಪ್ರಶಸ್ತಿ ಘೋಷಿಸಲಾಗಿದೆ. ಭೈರಪ್ಪನವರಿಗೆ ನನ್ನ ಅಭಿನಂದನೆಗಳು. ನಾನು ಭೈರಪ್ಪನವರ ಎಲ್ಲ ಕಾದಂಬರಿಗಳನ್ನು ಕನಿಷ್ಠ ಒಂದು ಬಾರಿ ಓದಿದ್ದೇನೆ. ಪರ್ವ, ಧರ್ಮಶ್ರೀ, ವಂಶವೃಕ್ಷ, ಮತ್ತು ಇನ್ನೂ ಕೆಲವನ್ನು ಒಂದಕ್ಕಿಂತ ಹೆಚ್ಚು ಬಾರಿ ಓದಿದ್ದೇನೆ. ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಎಂದೋ ಬರಬೇಕಿತ್ತು. ಅದು ಆದಷ್ಟು ಬೇಗನೇ ಅವರಿಗೆ ಬರಲಿ ಎಂದು ಆಶಿಸುತ್ತೇನೆ. ಭೈರಪ್ಪನವರ ಕಾದಂಬರಿಗಳಲ್ಲದೆ ಅವರ ಆತ್ಮ ಚರಿತ್ರೆ “ಭಿತ್ತಿ”ಯನ್ನೂ ನಾನು ಓದಿದ್ದೇನೆ. ಅದರಲ್ಲಿ ಮತ್ತೆ ಮತ್ತೆ ಬರುವ ಒಂದು ಸಾಲು ನನಗೆ ಚೆನ್ನಾಗಿ ನೆನಪಿದೆ -“ನಿನ್ನ ಸಮಸ್ಯೆಯನ್ನು ನೀನೇ ಪರಿಹರಿಸಿಕೊಳ್ಳಬೇಕು”. ನನಗೆ ಈ ಸಾಲು ಕೇವಲ ನೆನಪು ಮಾತ್ರವಲ್ಲ, ಒಂದು ರೀತಿಯ ಆದರ್ಶವೂ ಹೌದು. ಅವರ ಮೇರುಕೃತಿ “ಪರ್ವ”ವನ್ನು ಎಲ್ಲರೂ ಓದಬೇಕು.

ಕರ್ನಾಟಕದ ಹೊರಗೆ ಅತ್ಯಂತ ಹೆಚ್ಚು ಭಾರತೀಯರಿಗೆ ಗೊತ್ತಿರುವ ಕನ್ನಡ ಲೇಖಕರೆಂದರೆ ಭೈರಪ್ಪನವರು. ಅವರ ಹೆಚ್ಚಿನ ಕಾದಂಬರಿಗಳು ಇತರೆ ಭಾರತೀಯ ಭಾಷೆಗಳಿಗೆ, ಅತಿ ಹೆಚ್ಚು ಭಾಷೆಗಳಿಗೆ, ಅನುವಾದವಾಗಿವೆ. ಇಲ್ಲೊಂದು ನನ್ನ ವೈಯಕ್ತಿಕ ಅನುಭವವನ್ನು ದಾಖಲಿಸುತ್ತೇನೆ. ಮೈಕ್ರೋಸಾಫ್ಟ್ ಕಂಪೆನಿಗೆ ಹಿಂದಿ ಭಾಷೆಗೆ ಸಹಾಯ ಮಾಡಿರುವವರು ಮಲ್ಹೋತ್ರ ಎನ್ನುವವರು. ಒಮ್ಮೆ ನಾನು ದೆಹಲಿಯಲ್ಲಿದ್ದಾಗ ಅವರು ನನ್ನಿಂದ ಭಾರತೀಯ ಭಾಷೆ ಮತ್ತು ಯುನಿಕೋಡ್ ಬಗ್ಗೆ ತಿಳಿದುಕೊಳ್ಳಲು ನಾನು ಉಳಿದುಕೊಂಡಿದ್ದ ಹೋಟೆಲಿಗೆ ನನ್ನನ್ನು ಭೇಟಿಯಾಗಲು ಬಂದಿದ್ದರು. ಅವರು ಪರ್ವದ ಹಿಂದಿ ಅನುವಾದವನ್ನು ಓದಿದ್ದಾರಂತೆ. ಅಷ್ಟು ಮಾತ್ರವಲ್ಲ. ತನ್ನ ಕೈಯಿಂದ ಹಣಹಾಕಿ ಪರ್ವದ (ಹಿಂದಿ ಆವೃತ್ತಿಯ) ಇಪ್ಪತ್ತು ಪ್ರತಿ ಕೊಂಡುಕೊಂಡು ಅವುಗಳನ್ನು ತಮ್ಮ ಇತರೆ ಸ್ನೇಹಿತರುಗಳಿಗೆ ಹಂಚಿದ್ದಾರಂತೆ. ಭೈರಪ್ಪನವರೇ ತಮ್ಮ ಆತ್ಮ ಚರಿತ್ರೆಯಲ್ಲಿ ಅವರನ್ನು ಉತ್ತರ ಭಾರತದ ಯಾವುದೋ ಒಂದು ಹಳ್ಳಿಯಲ್ಲಿ ವಿಶೇಷವಾಗಿ ಗೌರವಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. ಭಾರತೀಯ ಪರಂಪರೆ, ಸಂಸ್ಕೃತಿ, ಸಾಹಿತ್ಯ, ಇತ್ಯಾದಿಗಳನ್ನು ಅವರು ಆಳವಾಗಿ ಅರಗಿಸಿಕೊಂಡಿದ್ದಾರೆ. ಅವರ ಕಾದಂಬರಿಗಳಲ್ಲಿ ಇವು ಮೂಡಿಬಂದಿವೆ. ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಬರಲಿ ಎಂದು ಆಶಿಸುತ್ತೇನೆ.

Leave a Reply