ಇಲ್ಲದ ಭಾಷೆಗೆ ಎಲ್ಲವೂ ಇವೆ

ಕ್ಲಿಂಗನ್ ಎಂಬ ಭಾಷೆ ಕೇಳಿದ್ದೀರಾ? ಅದು ಯಾವ ದೇಶದ್ದಿರಬಹುದು? ಈ ಭೂಮಿಯ ಮೇಲಿರುವ ಯಾವ ದೇಶದ್ದೂ ಅಲ್ಲ, ಬ್ರಹ್ಮಾಂಡದಲ್ಲಿ ಬಹುದೂರದಲ್ಲಿರುವ ಯಾವುದೋ ಕಾಲ್ಪನಿಕ ನಕ್ಷತ್ರದ ಗ್ರಹದ ಜೀವಿಗಳದ್ದು ಎಂದರೆ ನಂಬುತ್ತೀರಾ? ಯಾವುದೋ ಕಾಲ್ಪನಿಕ ಜೀವಿಗಳ ಭಾಷೆ ಹೀಗೆಯೇ ಇರುತ್ತದೆ ಎಂದು ಯಾರಿಗಾದರೂ ಹೇಗೆ ಗೊತ್ತಿರಲು ಸಾಧ್ಯ ಅನ್ನುತ್ತೀರಾ? ಎಲ್ಲವೂ ಸಾಧ್ಯ ಸ್ವಾಮಿ. ಸ್ಟಾರ್ ಟ್ರೆಕ್ ಎಂಬ ಟಿ.ವಿ. ಧಾರಾವಾಹಿ ನೋಡಿದ ನೆನಪಿದೆಯೇ? ಅದರಲ್ಲಿ ಬರುವ ಪಾತ್ರಗಳು ಮಾತನಾಡುವ ಭಾಷೆ ಕ್ಲಿಂಗನ್. ಇದು ಶುದ್ಧ ಕಾಲ್ಪನಿಕ ಭಾಷೆ. ಅದೃಷ್ಟವಶಾತ್ ಟಿ.ವಿ. ಧಾರಾವಾಹಿಯಲ್ಲಿ ಪಾತ್ರಗಳು ಮಾತನಾಡುತ್ತಿದ್ದದ್ದು ಇಂಗ್ಲಿಷ್ ಭಾಷೆ. ಆದರೆ ಈ ಕ್ಲಿಂಗನ್ ಎಂಬ ಕಾಲ್ಪನಿಕ ಭಾಷೆಗೂ ಒಂದು ವರ್ಣಮಾಲೆ, ವ್ಯಾಕರಣ, ಲಿಪಿ ಎಲ್ಲ ಇವೆ ಎಂದರೆ ನಂಬುತ್ತೀರಾ? ಹೆಚ್ಚಿನ ಮಾಹಿತಿಗೆ ವಿಕಿಪೀಡಿಯಾ ಓದಬಹುದು.

“ಸರಿಯಪ್ಪಾ, ಇಲ್ಲದ ಭಾಷೆಗೆ ವರ್ಣಮಾಲೆ, ವ್ಯಾಕರಣ ಎಲ್ಲ ಇವೆ. ಬೇಕಿದ್ದವರು ಅದನ್ನು ಕಲಿತುಕೊಳ್ಳಲಿ, ನಮಗೇನು ಎನ್ನುತ್ತೀರಾ?” ಮುಂದೆ ಕೇಳಿ. ಈ ಇಲ್ಲದ ಭಾಷೆಯನ್ನು ಯುನಿಕೋಡ್‌ನಲ್ಲಿ ಸೇರಿಸಿಕೊಳ್ಳಬೇಕು ಎಂದು ಕೆಲವರು ಅರ್ಜಿ ಗುಜರಾಯಿಸಿದ್ದರು. ಪುಣ್ಯವಶಾತ್ ಯುನಿಕೋಡ್ ಕನ್‌ಸೋರ್ಶಿಯಂನವರು ಅದನ್ನು ಮಾನ್ಯ ಮಾಡಲಿಲ್ಲ.

ಆದರೆ ಸ್ವಾರಸ್ಯದ ಸಂಗತಿ ಕೇಳಿ. ಆಪಲ್ ಕಂಪೆನಿಯ ಮ್ಯಾಕ್‌ ಕಂಪ್ಯೂಟರ್‌ನಲ್ಲಿ ಕ್ಲಿಂಗನ್ ಭಾಷೆಯನ್ನು ಅಳವಡಿಸಲಾಗಿದೆ. ಪುಣ್ಯಕ್ಕೆ ನಮ್ಮ ಭಾರತೀಯ ಭಾಷೆಗಳಲ್ಲಿ ಕನ್ನಡವೂ ಸೇರಿದಂತೆ ಹಲವು ಭಾಷೆಗಳೂ ಈ ಪಟ್ಟಿಯಲ್ಲಿವೆ. ಮೈಕ್ರೋಸಾಫ್ಟ್ ಕಂಪೆನಿ ಮಾತ್ರ ಈ ಇಲ್ಲದ ಭಾಷೆಯನ್ನು ಬೆಂಬಲಿಸಲು ಹೋಗಿಲ್ಲ.

ಈಗ ನಮ್ಮ ದೇಶದ ಭಾಷೆಗಳ ಬಗ್ಗೆ ಸ್ವಲ್ಪ ಗಮನ ಹರಿಸೋಣ. ನಮ್ಮ ದೇಶದಲ್ಲಿ ಸುಮಾರು ೧೬೫೦ ಭಾಷೆಗಳಿವೆ. ೭೦ ಭಾಷೆಗಳಲ್ಲಿ ದಿನ ಪತ್ರಿಕೆಗಳು ಪ್ರಕಟವಾಗುತ್ತಿವೆ. ಈ ಎಲ್ಲ ಭಾಷೆಗಳಲ್ಲಿ ಕೇವಲ ಹತ್ತು ಹದಿನಾಲ್ಕು ಭಾಷೆಗಳನ್ನು ಮಾತ್ರ ಮೈಕ್ರೋಸಾಫ್ಟ್ ಮತ್ತು ಆಪಲ್ ಪರಿಗಣಿಸಿವೆ.

ಈಗ ಸ್ವಲ್ಪ ನಮ್ಮ ಭಾಷೆಯಾದ ತುಳುವಿನ ಕಡೆ ಗಮನ ಹರಿಸೋಣ. ತುಳು ಭಾಷೆಯನ್ನು ಮಾತನಾಡುವವರ ಸಂಖ್ಯೆ ಸುಮಾರು ಐವತ್ತು ಲಕ್ಷ ಇರಬಹುದೇನೋ? ಈ ಸಂಖ್ಯೆಯನ್ನು ಅಂದಾಜಿಸುವಾಗ ನಾನು ವಿದೇಶದಲ್ಲಿರುವವರನ್ನೂ ಗಮನದಲ್ಲಿಟ್ಟುಕೊಂಡಿದ್ದೇನೆ. ಆದರೆ ತುಳು ಭಾಷೆಗೆ ಮೈಕ್ರೋಸಾಫ್ಟ್ ಬಿಡಿ, ಯುನಿಕೋಡ್‌ನಲ್ಲೇ ಇನ್ನೂ ಜಾಗ ಒದಗಿಸಿಲ್ಲ. ಈ ಬಗ್ಗೆ ನಾನು ಈಗಾಗಲೇ ಒಂದು ಲೇಖನ ಬರೆದಿದ್ದೆ. ಆ ಲೇಖನದ ಪ್ರತಿಯನ್ನು ತುಳು ಅಕಾಡೆಮಿಗೂ ಕಳುಹಿಸಿದ್ದೆ. ಆದರೆ ತುಳು ಅಕಾಡೆಮಿಯವರು ಇನ್ನೂ ಇದರ ಬಗ್ಗೆ ಕಾರ್ಯೋನ್ಮುಖರಾಗಿಲ್ಲ.

ಇದು ತುಳುವಿನ ಸಮಸ್ಯೆ ಮಾತ್ರವಲ್ಲ. ಕೊಡವ, ಬ್ಯಾರಿ, ಸಂಕೇತಿ, ಇತ್ಯಾದಿ ಇನ್ನೂ ಹಲವು ಭಾಷೆಗಳು ಇದೇ ಸ್ಥಿತಿಯಲ್ಲಿವೆ.

ಇಲ್ಲದ ಭಾಷೆಗೆ ಎಲ್ಲವೂ ಇವೆ. ಇರುವ ಭಾಷೆಗೆ?

Leave a Reply