ಅಭಿವೃದ್ಧಿಯ ರಥದ ಚಕ್ರದಡಿ ಸಿಕ್ಕಿಬಿದ್ದವರು – ೨

ಕೃಷಿನೀತಿ ತಜ್ಞ ದೇವಿಂದರ್ ಶರ್ಮಾ ಅವರು ಈಚೆಗೆ ಬೆಂಗಳೂರಿನಲ್ಲಿ ನೀಡಿದ ಉಪನ್ಯಾಸದ ಆಯ್ದ ಭಾಗಗಳು.

ನಿರೂಪಣೆ: ನಾಗೇಶ ಹೆಗಡೆ

ಏನಾಗಿದೆ ಕೃಷಿಕರಿಗೆ ಮಾರ್ಗದರ್ಶನ ನೀಡುವ ನಮ್ಮ ಸರಕಾರೀ ಧುರೀಣರಿಗೆ? ಅಥವಾ ಅವರಿಗೆ ಉಪದೇಶ ಮಾಡುವ ಆರ್ಥಿಕ ತಜ್ಞರಿಗೆ? ಅಥವಾ ಕೃಷಿಕರಿಗೆ ಮಾರ್ಗದರ್ಶನ ಮಾಡುವ ಕೃಷಿ ತಜ್ಞರಿಗೆ? ಏಕೆ ಅವರು ಅಮೆರಿಕ ಮತ್ತು ಯುರೋಪಿನ ಮಾದರಿಗಳನ್ನು ಒಪ್ಪಿಕೊಂಡು ಅವರದ್ದೇ ಆರ್ಥಿಕ ಸಲಹೆಗಳನ್ನು ಪಾಲಿಸುತ್ತ, ಅಲ್ಲಿನ ರೈತರ ಹೊಟ್ಟೆಯನ್ನು ತಂಪಾಗಿಸುವಂಥ ನೀತಿಯನ್ನೇ ನಮ್ಮ ರೈತರ ಮೇಲೆ ಹೇರುತ್ತ ಬರುತ್ತಿದ್ದಾರೆ?

ನಮ್ಮ ದೇಶದ ಕೃಷಿರಂಗದ ದುಃಸ್ಥಿತಿಗೆ ಮುಖ್ಯ ಕಾರಣ ಏನು ಗೊತ್ತೆ? ಇಂದಿಗೂ ಅಮೆರಿಕ ಅಥವಾ ಬ್ರಿಟಿಷ್ ತಜ್ಞರು ಬರೆದ ಪಠ್ಯಪುಸ್ತಕಗಳನ್ನು ಓದಿಯೇ ನಮ್ಮ ಕೃಷಿ ವಿಜ್ಞಾನದ ವಿದ್ಯಾರ್ಥಿಗಳು ಪದವಿ ಪಡೆಯಬೇಕಾದ ಸ್ಥಿತಿ ಇದೆ. ಪಾಶ್ಚಾತ್ಯ ಕೃಷಿ ಪಂಡಿತರ ಸಲಹೆಗಳಿಂದಾಗಿಯೇ ನಮ್ಮಲ್ಲಿ ಏನೇನು ದುರವಸ್ಥೆಗಳಾಗಿವೆ ಎಂಬುದಕ್ಕೆ ಕೆಲವು ಕಾರಣಗಳನ್ನು ಕೊಡುತ್ತೇನೆ:

೧೯೬೬ರಲ್ಲಿ ನಮ್ಮಲ್ಲಿ ಹಸಿರು ಕ್ರಾಂತಿಯ ಬೀಜಗಳನ್ನು ಹೊರ ದೇಶಗಳಿಂದ ತರಿಸಿದೆವು. ‘ಅದರಿಂದ ಮತ್ತೇನೂ ದುಷ್ಪರಿಣಾಮ ಆಗಲಿಕ್ಕಿಲ್ಲ, ಎರೆಹುಳಗಳು ಸಾಯಬಹುದು ಅಷ್ಟೆ’ ಎಂಬ ಉಪದೇಶ ಈ ತಜ್ಞರಿಂದ ನಮಗೆ ಸಿಕ್ಕಿತು. ಸರಿ, ಗಿಡ್ಡ ತಳಿಯ ಭತ್ತದ ತಳಿಗಳು ಬಂದವು. ಹಿಂದೆಲ್ಲ ನಮ್ಮ ರೈತರು ಬೀಜಗಳನ್ನು ಹೊಲದಲ್ಲಿ ಎರಚುತ್ತಿದ್ದರು. ಹಾಗೆ ಮಾಡುವುದು ಸರಿಯಲ್ಲ, ಸಾಲಾಗಿ ನಾಟಿ ಮಾಡಿ ಎಂದು ಈ ತಜ್ಞರು ಹೇಳಿದರು. ಜತೆಗೆ ಹೇರಳ ರಸಗೊಬ್ಬರ, ನೀರು, ಕೀಟನಾಶಕ ಸುರಿಯಲು ಸಲಹೆ ಮಾಡಿದರು. ಅವೆಲ್ಲ ಸುರಿದರೆ ಫಸಲು ಚೆನ್ನಾಗಿ ಬರುತ್ತದೆ ನಿಜ. ಆದರೆ ಸಾಲಾಗಿ ಏಕೆ ನಾಟಿ ಮಾಡಬೇಕು? ಅದಕ್ಕೆಂದು ಹೆಚ್ಚಿನ ಕೃಷಿ ಕೂಲಿಕಾರರು ಬೇಕು. ದಾರ ಕಟ್ಟಿ ಕೆಸರಿನಲ್ಲಿ ನಾಟಿ ಮಾಡಲು ಅಪಾರ ಕೂಲಿ ವೆಚ್ಚವಾಗುತ್ತದೆ. ಸಾಲಾಗಿ ನೆಟ್ಟ ಮಾತ್ರಕ್ಕೇ ಇಳುವರಿ ಜಾಸ್ತಿ ಬರುವುದಿಲ್ಲ. ಆದರೂ ಯಾಕೆ ಈ ನಿಯಮ ಜಾರಿಯಲ್ಲಿದೆ?

ಫಿಲಿಪ್ಪೀನ್ಸ್‌ನ ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆಯ ನಿರ್ದೇಶಕಾಗಿದ್ದ ಗುರುದೇಬ್ ಘೋಷ್ ಅವರಿಗೆ ನಾನು ಹಿಂದೊಮ್ಮೆ ಈ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಿದ್ದೆ. ಕೊನೆಗೆ ಅವರು ಚುಟುಕಾಗಿ ಉತ್ತರಿಸಿದರು: ‘ಟ್ರಾಕ್ಟರ್ ತಯಾರಿಕಾ ಉದ್ಯಮಕ್ಕೆ ನೆರವಾಗಲಿ ಎಂದೇ ಈ ನಿಯಮ!’ ಎಂದರು. ನಿಜವೇ ಇರಬೇಕು. ಶಿಸ್ತಿನ ಸಾಲಿನಲ್ಲಿ ನಾಟಿ ಮಾಡಿದರೆ ಮಾತ್ರ ಸಾಲಿನ ಮಧ್ಯೆ ಟ್ರ್ಯಾಕ್ಟರ್ ಸಲೀಸಾಗಿ ಓಡಾಡುತ್ತದೆ. ನಿರೀಕ್ಷೆಯಂತೆ ಅನುಕೂಲಸ್ಥ ರೈತರು ಟ್ರಾಕ್ಟರ್ ಮೋಡಿಗೆ ಬಿದ್ದರು. ಅಷ್ಟೇನೂ ಅನುಕೂಲವಿಲ್ಲದ ರೈತರಿಗೂ ಅದು ಆಕರ್ಷಕ ಎನಿಸಿತು. ಬ್ಯಾಂಕ್‌ಗಳೂ ತಾವಾಗಿ ಟ್ರ್ಯಾಕ್ಟರ್ ಕೊಳ್ಳಲು ಸಾಲ ಕೊಡಲು ಮುಂದಾದರು. ತಾವು ಸಾಲ ಕೊಟ್ಟ ಟ್ರ್ಯಾಕ್ಟರಿಗೆ ಮಾಲೆ ಹಾಕಿ ಫೋಟೊ ತೆಗೆಸಿ ಪ್ರಚಾರ ಕೊಟ್ಟು ಬ್ಯಾಂಕ್‌ಗಳು ಉದ್ಧಾರವಾದರೇ ವಿನಾ ರೈತರ ಏಳಿಗೆಯಾಗಲಿಲ್ಲ. ಇಂದು ನಮ್ಮ ದೇಶದಲ್ಲಿ ಅಗತ್ಯಕ್ಕಿಂತ ಶೇಕಡಾ ೭೦ರಷ್ಟು ಟ್ರ್ಯಾಕ್ಟರ್‌ಗಳಿವೆ. ಆತ್ಮಹತ್ಯೆ ಮಾಡಿಕೊಳ್ಳುವವರಲ್ಲೂ ಟ್ರ್ಯಾಕ್ಟರ್ ಇಟ್ಟುಕೊಂಡವರ ಸಂಖ್ಯೆಯೇ ಜಾಸ್ತಿ ಇದೆ. ‘ಇನ್ನು ಮೇಲೆ ಟ್ರ್ಯಾಕ್ಟರ್‌ಗೆ ಸಾಲ ಕೊಡುವುದನ್ನು ನಿಲ್ಲಿಸಿ ಬಿಡಿ’ ಎಂದು ನಮ್ಮಂಥ ಕೆಲವರು ಬ್ಯಾಂಕ್‌ಗಳಿಗೆ ವಿನಂತಿ ಮಾಡಿಕೊಂಡೆವು. ಏನೂ ಪ್ರಯೋಜನವಾಗಲಿಲ್ಲ. ಸಾಲ ನಿಲ್ಲಿಸಲು ಬ್ಯಾಂಕ್‌ಗಳು ಖಡಾಖಂಡಿತ ನಿರಾಕರಿಸಿದವು.

ಕೀಟನಾಶಕಗಳದ್ದೂ ಇದೇ ಕತೆ. ಭತ್ತಕ್ಕೆ ಕೀಟನಾಶಕದ ಸಿಂಪಡನೆಯ ಅಗತ್ಯವೇ ಇಲ್ಲ. ಆದರೂ ರೈತರಿಗೆ ಅದೇನೋ ಮೋಡಿ ಮಾಡಲಾಗಿದೆ. ಬೆನ್ನಿಗೆ ಕಟ್ಟಿಕೊಳ್ಳುವ ಸಿಂಪಡನಾ ಯಂತ್ರಗಳು ಬಂದವು. ಉದ್ದ ಪಿಚಕಾರಿಯ ಮೂತಿ ಇರುವ ಸ್ಪ್ರೇಯರ್‌ಗಳು, ಅಗಲ ಸಿಂಪಡನೆಯ ಮೂತಿಯ ಸ್ಪ್ರೇಯರ್‌ಗಳು. ಹೇಗೇ ಸ್ಪ್ರೇ ಮಾಡಿದರೂ ಶೇಕಡಾ ೯೯.೯೯ರಷ್ಟು ಕೀಟನಾಶಕ ಎಲ್ಲ ಗಾಳಿಯಲ್ಲೇ ಸೇರಿ ಹೋಗುತ್ತದೆ. ಇಲ್ಲವೆ ನೀರಿಗೊ ಮಣ್ಣಿಗೊ ಸೇರ್ಪಡೆ ಆಗಿ ವಿಷವನ್ನು ಬೇಕಿಲ್ಲದ ಜಾಗಕ್ಕೆಲ್ಲ ಪಸರಿಸುತ್ತವೆ. ಹೇಗಿದ್ದರೂ ಸ್ಪ್ರೇ ಪಂಪ್ ಇದೆ ಎಂಬ ಒಂದೇ ಕಾರಣಕ್ಕೆ ಕೀಟನಾಶಕಗಳನ್ನು ಖರೀದಿಸಿ ತಂದು, ಅನಗತ್ಯವಾಗಿ ಭತ್ತಕ್ಕೆ ಸಿಂಪಡನೆ ಮಾಡಲಾಗುತ್ತದೆ. ಈ ಉದಾಹರಣೆಯಲ್ಲೂ ಸ್ಪ್ರೇ ಪಂಪ್‌ಗಳ ಮಾರಾಟದ ಜಾಲದಿಂದಾಗಿಯೇ ಕೀಟನಾಶಕದ ಬಳಕೆ ಅತಿಯಾಯಿತೇ ವಿನಾ ರೈತರ ಅಗತ್ಯದಿಂದಾಗಿ ಅಲ್ಲ. ಇಂಥ ಕೃಷಿ ಸಲಕರಣೆಗಳ ಮೇಲಿನ ಸಾಲದ ಹೊರೆಯಿಂದಾಗಿಯೇ ರೈತನ ಉತ್ಪಾದನೆಯ ವೆಚ್ಚ ಏರುತ್ತಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಭತ್ತದ/ಅಕ್ಕಿಯ ಬೆಲೆಯಲ್ಲಿ ಮಾತ್ರ ಏನೇನೂ ಏರಿಕೆಯಾಗಿಲ್ಲ.

ನಿಮಗಿದು ಗೊತ್ತೆ? ಕೃಷಿ ವಿಷಯ ಕುರಿತ ಏನೆಲ್ಲ ಬಗೆಯ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುವ ‘ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ’ (ಐಎಆರ್‌ಐ) ಇದುವರೆಗೆ ರೈತರ ಆತ್ಮಹತ್ಯೆಯ ವಿಷಯದಲ್ಲಿ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ. ಅವರಿಗೆ ರೈತರ ಕಷ್ಟನಷ್ಟಗಳ ಗೊಡವೆಯೇ ಬೇಕಿಲ್ಲ. ಅವರು ಟ್ರ್ಯಾಕ್ಟರ್ ಮಾರಾಟದ ವ್ಯವಸ್ಥೆ ಮಾಡುತ್ತಾರೆ. ಕೀಟನಾಶಕದ ಮಾರಾಟದ ಏರ್ಪಾಡು ಮಾಡುತ್ತಾರೆ. ಈಗ ಕುಲಾಂತರಿ ಫಸಲಿನ ಜಾಹೀರಾತು ಮಾಡುತ್ತಿದ್ದಾರೆ.

ನಾವೀಗ ಈ ತಜ್ಞರಿಗೆ ಹೇಳಬೇಕಾಗಿದೆ: ‘ಮಾನ್ಯರೆ, ಇಷ್ಟು ವರ್ಷಗಳ ಕಾಲ ಉದ್ದಿಮೆಗಳು ಬದುಕುಳಿಯಲು ನೀವು ರೈತರ ಹಿತವನ್ನು ಬಲಿಗೊಟ್ಟಿರಿ. ಒಂದೊಂದು ಬ್ಲಾಕ್‌ನಿಂದಲೂ ಸರಾಸರಿ ೭೦ ಲಕ್ಷ ರೂಪಾಯಿಗಳು ರೈತರ ಕಿಸೆಯಿಂದ ಉದ್ದಿಮೆಗಳಿಗೆ ಹರಿದು ಹೋಗುವಂತೆ ಮಾಡಿದಿರಿ. ಇನ್ನಾದರೂ ಅವನ್ನೆಲ್ಲ ನಿಲ್ಲಿಸಿ, ರೈತರು ಬದುಕುಳಿಯುವಂಥ ಏನಾದರೂ ಉಪಾಯ ಮಾಡಿ’ ಎನ್ನಬೇಕಾಗಿದೆ. ಮತ್ತೇನಿಲ್ಲ ‘ಈ ೭೦ ಲಕ್ಷ ರೂಪಾಯಿ ಆಯಾ ಬ್ಲಾಕ್‌ಗಳಲ್ಲಿ ರೈತರ ಬಳಿಯೇ ಉಳಿದರೂ ಸಾಕು ದೊಡ್ಡ ಉಪಕಾರವಾಗುತ್ತದೆ. ದಯವಿಟ್ಟು ಈ ಉದ್ಯಮಗಳು ಹಳ್ಳಿಗೆ ಬರದಂತೆ ನೋಡಿಕೊಳ್ಳಿ’ ಎನ್ನಬೇಕಾಗಿದೆ.

೧೯೮೮ರಲ್ಲಿ ಇಂಡೋನೇಶ್ಯ ಸರಕಾರ ಇಂಥದೇ ನಿರ್ಣಯವನ್ನು ಕೈಗೊಂಡಿತು. ಅಲ್ಲೂ ಕೀಟನಾಶಕದ ಹಾವಳಿ ಅತಿಯಾಗಿತ್ತು. ಭತ್ತಕ್ಕೆ ಕಂದು ಜಿಗಿ ಹುಳು ಬರುತ್ತದೆಂಬ ಭೀತಿ ಹುಟ್ಟಿಸಿ, ೫೭ ಬಗೆಯ ಕೀಟನಾಶಕಗಳನ್ನು ರೈತರು ಭತ್ತದ ಗದ್ದೆಗೆ ಎರಚುವಂತೆ ಮಾಡಲಾಗಿತ್ತು. ರೈತರು ರೋಸಿ ಹೋಗಿದ್ದರು. ಒಂದು ಕಠಿಣ ನಿರ್ಧಾರವನ್ನು ಕೈಗೊಂಡು ಅಲ್ಲಿನ ಸರಕಾರ ಎಲ್ಲ ಕೀಟನಾಶಕಗಳನ್ನೂ ನಿಷೇಧಿಸಿತು. ಅಪ್ಪಟ ನಿಷೇಧ! ಅಚ್ಚರಿಯ ಸಂಗತಿ ಏನು ಗೊತ್ತೆ? ಭತ್ತದ ಉತ್ಪಾದಕತೆ ಶೇಕಡಾ ೨೦ ರಷ್ಟು ಹೆಚ್ಚಾಯಿತು.

ಐಎಆರ್‌ಐಯ ಯಾವ ತಜ್ಞರೂ ನಮ್ಮ ರೈತರಿಗೆ ಇಂಥ ದೇಶಗಳ ಉದಾಹರಣೆಗಳನ್ನು ಕೊಡುವುದಿಲ್ಲ. ಬದಲಿಗೆ ಇಸ್ರೇಲ್ ದೇಶದ ಉದಾಹರಣೆ ಕೊಡುತ್ತಾರೆ. ಅಲ್ಲಿ ಮರುಭೂಮಿ ನಳನಳಿಸುತ್ತದಂತೆ. ಎಲ್ಲಾ ಕಡೆ ಹನಿ ನೀರಾವರಿಯ ವ್ಯವಸ್ಥೆ ಇದೆಯಂತೆ. ಇದು ಜಿನುಗು ನೀರಾವರಿಯ ಪೈಪು, ಕೊಳವೆ, ಪಂಪ್‌ಗಳನ್ನು ಮಾರಾಟ ಮಾಡುವವರ ಅನುಕೂಲಕ್ಕಾಗಿ ನೀಡುವ ಉದಾಹರಣೆಯೇ ಹೊರತೂ, ರೈತರ ಉದ್ಧಾರಕ್ಕಲ್ಲ. ಇಸ್ರೇಲಿನಲ್ಲಿ ರೈತ ಬದುಕಿದ್ದಾನೆ ಏಕೆಂದರೆ ಅಮೆರಿಕದವರು ಇಸ್ರೇಲಿ ರೈತರಿಗೆ ಹೇರಳ ಹಣ ನೀಡುತ್ತಾರೆ. ಅಷ್ಟೊಂದು ಹಣ ಸುರಿದರೆ ಮರುಭೂಮಿ ನಳನಳಿಸುತ್ತಿದೆ ನಂಬೋಣ. ಆದರೆ, ಅದೇ ಕ್ರಮಗಳನ್ನು ಇಲ್ಲೂ ಅನುಸರಿಸಲು ಹೋದರೆ, ಮೊದಲೇ ನಳನಳಿಸುತ್ತಿದ್ದ ಇಲ್ಲಿನ ನಂದನವನವನ್ನು ಮರುಭೂಮಿಯಾಗಿ ಮಾಡುತ್ತೇವಷ್ಟೆ.

ನಮ್ಮಲ್ಲಿಲ್ಲದ್ದನ್ನು ನಮ್ಮ ರೈತರ ಮೇಲೆ ಹೇರುವ, ನಮ್ಮದನ್ನು ಹೆರವರಿಗೆ ಹೇರುವ ಕೆಲಸವನ್ನು ನಮ್ಮ ತಜ್ಞರು ಸಲೀಸಾಗಿ ಮಾಡುತ್ತಾರೆ. ಆಫ್ರಿಕದ ಎರೆಹುಳುಗಳನ್ನು ಇಲ್ಲಿಗೆ ತರಿಸಿ, ನಮ್ಮ ರೈತರು ಲಾಭ ಮಾಡಿಕೊಂಡ ಬಗ್ಗೆ ಪ್ರಚಾರ ಅದೆಷ್ಟು ಜೋರಾಗಿ ನಡೆಯಿತೆಂದರೆ, ಅಮೆರಿಕದ ಕೆಲ ರೈತರೂ ಮರುಳಾಗಿ ಇಲ್ಲಿಂದ ಎರೆಹುಳಗಳನ್ನು ಎರವಲು ಪಡೆದು ತಮ್ಮ ಭೂಮಿಯಲ್ಲಿ ಬಿಟ್ಟರು. ಅಮೆರಿಕದ ನೆಲದಲ್ಲಿ ಎರೆಹುಳು ಇಲ್ಲವೇ ಇಲ್ಲ. ಇಡೀ ದೇಶದ ಎಲ್ಲೂ ಇಲ್ಲ. ಎರಡು ವರ್ಷಗಳ ಹಿಂದೆ ಅವರು ಎರೆಹುಳುಗಳನ್ನು ಸಾಕಲು ಯತ್ನಿಸಿ ವಿಫಲರಾಗಿ ಈಗ ಆ ಯತ್ನವನ್ನೇ ಕೈಬಿಟ್ಟಿದ್ದಾರೆ. ನಾವು ಯುರೋಪ್ ದೇಶಗಳಿಂದ ದನಗಳನ್ನು ತರಿಸಿಕೊಂಡು ಇಡೀ ದೇಶದ ತುಂಬೆಲ್ಲಾ ಪರಕೀಯ ತಳಿಗಳನ್ನೇ ತುಂಬಿದ್ದೇವೆ. ಇಂದು ನಮ್ಮಲ್ಲಿ ವಿದೇಶೀ ಮೂಲದ ೩೫ ಲಕ್ಷ ದನಗಳಿವೆ. ನಮ್ಮ ಮೂಲ ತಳಿಗಳು ಎಲ್ಲಿಗೆ ಹೋದವೊ ಯಾರೂ ಲೆಕ್ಕ ಇಟ್ಟಿಲ್ಲ.

ನಾನು ಹೇಳುತ್ತೇನೆ ಕೇಳಿ. ನಮ್ಮ ದೇಶದ ಕಿಲಾರಿ ಮತ್ತು ಒಂಗೋಲ್‌ನಂಥ ದನಗಳ ತಳಿಗಳು ದೂರದ ಬ್ರಝಿಲ್ ದೇಶದಲ್ಲಿ ಪ್ರಫುಲ್ಲವಾಗಿ ಬೆಳೆಯುತ್ತಿವೆ. ಅಲ್ಲಿನವರು ಈ ತಳಿಗಳನ್ನು ಬೇರೆ ದೇಶಗಳಿಗೂ ರಫ್ತು ಮಾಡುತ್ತಿದ್ದಾರೆ. ಇಂದಿನ ಲೆಕ್ಕಾಚಾರದ ಪ್ರಕಾರ ಭಾರತೀಯ ಮೂಲದ ದನಗಳ ಅತಿ ದೊಡ್ಡ ರಫ್ತುದಾರ ಯಾರೆಂದರೆ ಬ್ರಝಿಲ್ ದೇಶ. ಈಗ ನಾವು ನಮ್ಮದೇ ಮೂಲದ ಅಪರೂಪದ ತಳಿ ಬೇಕೆಂದಿದ್ದರೆ ಬ್ರಝಿಲ್‌ನಿಂದ ಆಮದು ಮಾಡಿಕೊಳ್ಳಬೇಕು.

ಹಿಂದಿನ ಇಂಥ ಎಲ್ಲ ತಪ್ಪುಗಳನ್ನು ಸರಿಪಡಿಸಿ, ಮಾದರಿ ಕೃಷಿ ಎಂದರೇನೆಂದು ನಮ್ಮ ರೈತರಿಗೆ ತೋರಿಸಲೆಂದು ಈಗ ಹೊಸ ‘ಎಸ್‌ಇಝಡ್’ ಯೋಜನೆಯನ್ನು ತಜ್ಞರು ರೂಪಿಸಿದ್ದಾರೆ.

ವಿಶ್ವಬ್ಯಾಂಕಿನ ಅಂದಾಜಿನ ಪ್ರಕಾರ, ಕ್ರಿ.ಶ. ೨೦೧೫ರ ವೇಳೆಗೆ ನಮ್ಮ ದೇಶದಲ್ಲಿ ಸುಮಾರು ೪೦ ಕೋಟಿ ಪ್ರಜೆಗಳು ಕೃಷಿಯನ್ನು ಬಿಟ್ಟು ಬೇರೆ ಉದ್ಯೋಗ ಹುಡುಕಿಕೊಂಡು ನಗರಗಳಿಗೆ ವಲಸೆ ಬರಲಿದ್ದಾರೆ. ಇದು, ಯುಕೆ, ಫ್ರಾನ್ಸ್ ಮತ್ತು ಜರ್ಮನಿಯ ಒಟ್ಟೂ ಜನಸಂಖ್ಯೆಯ ಎರಡು ಪಟ್ಟು! ಇದು ನಂಬಬಹುದಾದ ಸಂಖ್ಯೆಯೇ ಇರಬೇಕು. ಏಕೆಂದರೆ ನ್ಯಾಶನಲ್ ಸ್ಯಾಂಪಲ್ ಸರ್ವೆಯವರು ನಡೆಸಿದ ಸಮೀಕ್ಷೆಯ ಪ್ರಕಾರ, ಶೇಕಡಾ ೪೦ರಷ್ಟು ರೈತರು ಈಗಾಗಲೇ ರೋಸಿ ಹೋಗಿದ್ದಾರೆ. ಕೃಷಿಯನ್ನು ಬಿಟ್ಟು ಬೇರೇನಾದರೂ ಉದ್ಯೋಗ ಹುಡುಕಿಕೊಳ್ಳೋಣ ಎಂದಿದ್ದಾರೆ. ನಮ್ಮವರೇ ನಡೆಸಿದ ಅಧ್ಯಯನಗಳ ಪ್ರಕಾರ ತಮಿಳುನಾಡಿನ ಶೇ. ೭೦ರಷ್ಟು ರೈತರು, ಪಂಜಾಬಿನ ೬೫%, ಉತ್ತರ ಪ್ರದೇಶದ ಸುಮಾರು ೫೫% ರೈತರು ಬೇಸಾಯದ ವಣೆ ತಾಳಲಾರದೆ ನಗರಗಳಿಗೆ ಬರಲಿದ್ದಾರೆ. ಆಗ ‘ಕೃಷಿ ನಿರಾಶ್ರಿತರು’ ಎಂಬ ಹಣೆಪಟ್ಟಿಯೊಂದಿಗೆ ನಮ್ಮ ದೇಶದಲ್ಲಿ ಹೊಸದೊಂದು ಆತಂಕ ಸೃಷ್ಟಿಯಾಗಲಿದೆ. ಅಣೆಕಟ್ಟಿನ ನಿರಾಶ್ರಿತರು, ಪರಿಸರ ನಿರಾಶ್ರಿತರು ಎಲ್ಲರನ್ನು ಮೀರಿಸಿ ‘ಕೃಷಿ ನಿರಾಶ್ರಿತರು’ ನಗರಗಳಿಗೆ ಬರಲಿದ್ದಾರೆ.
ಅಗ್ರಿ ಬಿಸಿನೆಸ್ ಕಂಪನಿಗಳ ಕೃಪೆ ಇದು. ಜಗತ್ತಿನಲ್ಲಿ ಎಲ್ಲೂ ಈ ಕಂಪನಿಗಳು ರೈತರ ಜತೆ ಕೈಜೋಡಿಸಿ ಕೆಲಸ ಮಾಡಿದ್ದೇ ಇಲ್ಲ. ಇಂಥ ಕಂಪನಿಗಳು ಎಲ್ಲೆಲ್ಲಿ ಕಾಲಿಟ್ಟಿವೆಯೊ ಅಲ್ಲೆಲ್ಲ ರೈತರು ಗುಳೆ ಎದ್ದಿದ್ದಾರೆ. ಅದು ಅಮೆರಿಕ ಇರಲಿ, ಯುರೋಪ್ ಇರಲಿ, ಸರಕಾರಗಳು ಅಷ್ಟು ದೊಡ್ಡ ಮೊತ್ತವನ್ನು ಸಬ್ಸಿಡಿಯಾಗಿ ನೀಡಿದರೂ ರೈತರಿಗೆ ಬದುಕಲು ಸಾಧ್ಯವಾಗದಂಥ ಪರಿಸ್ಥಿತಿಯನ್ನು ಈ ಕಂಪನಿಗಳು ತಂದೊಡ್ಡುತ್ತವೆ. ನಮ್ಮಲ್ಲೂ ಅಂಥ ಕಂಪನಿಗಳಿಗೆ ದೊಡ್ಡ ಮಣೆ ಹಾಕುವ ಸಿದ್ಧತೆಗಳು ನಡೆದಿವೆ. ಎಸ್‌ಇಝಡ್ ಹೆಸರಿನಲ್ಲಿ ‘ಗುತ್ತಿಗೆ ಕೃಷಿ’ ದೊಡ್ಡ ಪ್ರಮಾಣದಲ್ಲಿ ಬರಲಿದೆ. ಅವರಿಗಾಗಿ ನಮ್ಮೆಲ್ಲ ಸಂಪನ್ಮೂಲಗಳನ್ನು -ಅಂದರೆ ನೀರು, ಜೀವಿ ವೈವಿಧ್ಯ, ಅರಣ್ಯ, ಬೀಜನಿಧಿ, ಕೃಷಿ ಮಾರುಕಟ್ಟೆ ಮತ್ತು ಖನಿಜ ಸಂಪತ್ತನ್ನು- ಧಾರೆ ಎರೆಯುವ ಯೋಜನೆಗಳು ರೂಪುಗೊಂಡಿವೆ. ಇಂಥ ಗುತ್ತಿಗೆದಾರರು ಅತಿ ನೀರು, ಅತಿ ಗೊಬ್ಬರ, ಅತಿ ಪ್ರಮಾಣದ ಪೀಡೆನಾಶಕಗಳನ್ನು ಬಳಸಿ, ಸಾಮಾನ್ಯ ರೈತರು ಬಳಸುವುದಕ್ಕಿಂತ ೧೫-೨೦ ಪಟ್ಟು ಒಳಸುರಿಗಳನ್ನು ಸುರಿದು ಸ್ವಲ್ಪವೇ ಅವಧಿಯಲ್ಲಿ ದೊಡ್ಡ ಲಾಭ ಮಾಡಿಕೊಂಡು, ನೆಲವನ್ನ ಬಂಜರು ಮಾಡಿ ಬೇರೆಡೆ ಹೊರಡುತ್ತಾರೆ. ಹಿಂದಿನ ಶತಮಾನದಲ್ಲಿ ವನವಾಸಿಗಳು ಅನುಸರಿಸುತ್ತಿದ್ದ ‘ವಲಸೆ ಕೃಷಿ’ (ಝೂಮ್ ಪದ್ಧತಿ)ಯ ವಿಕಾರ ರೂಪ ಇದು.

ರೈತರನ್ನು ನಗರಗಳಿಗೆ ಅಟ್ಟಿ, ಕೃಷಿ ಭೂಮಿಯನ್ನು ಬಂಜರು ಮಾಡಿ ಯಾರನ್ನು ಉದ್ಧಾರ ಮಾಡುವ ಯೋಜನೆಗಳು ಇವು?

ದೇಶದ ಸುಮಾರು ಆರು ಕೋಟಿ ಸರಕಾರಿ ನೌಕರರ ಏಳ್ಗೆಗೆಂದು ಆರನೇ ವೇತನ ಆಯೋಗ ಒಂದು ಲಕ್ಷ ಕೋಟಿ ರೂಪಾಯಿಗಳ ಹೊಸ ಪ್ಯಾಕೇಜನ್ನು ಘೋಷಿಸಿದೆ ಅದರ ಅರ್ಧದಷ್ಟು, ಅಂದರೆ ೫೦ ಸಾವಿರ ಕೋಟಿ ರೂಪಾಯಿಗಳು ಅರವತ್ತು ಕೋಟಿ ರೈತರ ಕಲ್ಯಾಣಕ್ಕೆ ಸಾಕೇ ಸಾಕು. ಅಷ್ಟನ್ನು ಸರಕಾರ ಕೃಷಿರಂಗದ ಮೇಲೆ ವೆಚ್ಚ ಮಾಡಲಾರದೆ?

ಈ ಲೇಖನದ ಮೊದಲ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ

2 Responses to ಅಭಿವೃದ್ಧಿಯ ರಥದ ಚಕ್ರದಡಿ ಸಿಕ್ಕಿಬಿದ್ದವರು – ೨

  1. ನಂದಿ.

    ದೇವಿಂದರ್ ಶರ್ಮ ಅವರ ಲೇಖನ ಪ್ರಾಮಾಣಿಕ ಅಧಿಕಾರಿಗಳಿಗೆ ಮನವರಿಕೆಯಾದರೆ ಸಾರ್ಥಕವಾದಂತೆ. ಕಾನುನು ನೀತಿ ನಿಯಮ
    ರೂಪಿಸುವ IAS ಅಧಿಕಾರಿಗಳು ಮನಸ್ಸು ಮಾಡಿದರೆ ರಾಜಕಾರಣಿಗಳು ಹೌದು ಹೌದು ಎನ್ನಬಹುದು.
    ಲಕ್ಷಾಂತರ ದೇವಿಂದರ್ ಶರ್ಮ ರಂಥವರು ಹುಟ್ಟಿಬರಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತಿನೆ.
    ನಂದಿ. ಮಲೆಬೆನ್ನೂರು.ದಾವಣಗೆರೆ.

  2. subrahmanya shastri

    che entha durantha!!!!!

Leave a Reply