ಮೊನ್ನೆಯಷ್ಟೆ ಮೈಕ್ರೋಸಾಫ್ಟ್‌ನವರ ಹೊಸ ಕಾರ್ಯಾಚರಣೆಯ ವ್ಯವಸ್ಥೆ ವಿಂಡೋಸ್ ವಿಸ್ಟದ ಅಂತಿಮ ಆವೃತ್ತಿಯನ್ನು ಅನುಸ್ಥಾಪಿಸಿದ್ದರು. ಅಂದರೆ ಅಂಗಡಿಗೆ ಹೋಗಿ ವಿಸ್ಟ ಕೊಂಡುಕೊಳ್ಳಬಹುದು ಎಂದುಕೊಳ್ಳಬೇಡಿ. ಅದು ಅಂತಿಮ ಬಳಕೆದಾರರಿಗೆ ಇನ್ನೂ ಬಿಡುಗಡೆಯಾಗಿಲ್ಲ. ಮೈಕ್ರೋಸಾಫ್ಟ್‌ನವರು ಸದ್ದುಗದ್ದಲವಿಲ್ಲದೆ ಏನನ್ನೂ ಬಿಡುಗಡೆ ಮಾಡುವಿದಿಲ್ಲ ತಾನೆ? ನೀವು ಏನೂ ಸದ್ದುಗದ್ದಲ್ಲ ಕೇಳಿಲ್ಲವಾದ ಕಾರಣ ಇನ್ನೂ ಅದು ಅಧಿಕೃತವಾಗಿ ಬಿಡುಗಡೆಯಾಗಿಲ್ಲ ಎಂದು ತೀರ್ಮಾನಕ್ಕೆ ಬರಬಹುದು. ವಿಸ್ಟದಲ್ಲಿ ಕನ್ನಡದ ಅಳವಡಿಕೆಯನ್ನು ನಾನು ಪರೀಕ್ಷಿಸಿದ್ದೇನೆ.
ಯುನಿಕೋಡ್‌ನವರ PR-37ನ್ನು ವಿಸ್ಟದಲ್ಲಿ ಅಳವಡಿಸಲಾಗಿದೆ. ಗಣಕದಲ್ಲಿ ಯುನಿಕೋಡ್ ಕನ್ನಡ ಬಳಸುವವರ ಒಂದು ಬಹುಮುಖ್ಯ ಸಮಸ್ಯೆಗೆ ಪರಿಹಾರ ಇದರಲ್ಲಿ ಇದೆ. ಈ ಬಗ್ಗೆ ನಾನು ಹಿಂದೆಯೇ [http://vishvakannada.com/node/274|ಬರೆದಿದ್ದೆ]. ಈ ಅಳವಡಿಕೆಯಿಂದಾಗಿ ಈಗ “ರ” ಅಕ್ಷರಕ್ಕೆ ಇನ್ನೊಂದು ವ್ಯಂಜನವನ್ನು “ಒತ್ತು” ಆಗಿ ತೋರಿಸಲು ಸಾಧ್ಯವಿದೆ. “ಕನ್ನಡ ಯುನಿಕೋಡ್ ಸರಿಯಿಲ್ಲ. ಅರ್ಕವೊತ್ತು ಮಾತ್ರ ಮೂಡಿಬರುತ್ತದೆ. ‘ರ’ಕ್ಕೆ ‘ಕ’ ಒತ್ತು ಬರುವುದಿಲ್ಲ” ಎಂದು ಕೆಲವರು ಅರ್ಕವೊತ್ತಿನ ಕುತರ್ಕವನ್ನು ಇನ್ನು ಮುಂದೆ ಹೂಡುವಂತಿಲ್ಲ.
Be First to Comment