Press "Enter" to skip to content

ನಾಯಿಗೂ ಮೊಬೈಲ್ ಫೋನ್

ಅಂತರಜಾಲದಲ್ಲಿ ವಿಹರಿಸುತ್ತಿದ್ದಾಗ ಈ ಸುದ್ದಿ ಕಣ್ಣಿಗೆ ಬಿತ್ತು. ಅದರ ಪ್ರಕಾರ ನಾಯಿಗಳಿಗೆಂದೇ ವಿಶೇಷ ಮೊಬೈಲ್ ಫೋನ್ ತಯಾರಿಸುತ್ತಿದ್ದಾರೆ. ಅದರ ಯಜಮಾನ ತನ್ನ ಫೋನಿನಿಂದ ಗುಪ್ತ ಸಂಕೇತ ಕಳುಹಿಸಿದಾಗ ಅದು ಚಾಲೂ ಆಗಿ ದ್ವಿಮುಖ ಸಂಭಾಷಣೆ ಪ್ರಾರಂಭಿಸುತ್ತದೆ. ಯಜಮಾನನ ಮಾತು ನಾಯಿಗೆ ಕೇಳುತ್ತದೆ. ನಾಯಿಯ ಮಾತು(?!) ಯಜಮಾನನಿಗೆ ತಲುಪುತ್ತದೆ. ನಾಯಿ ಕಳೆದುಹೋದಾಗ ಪತ್ತೆಹಚ್ಚಲು ಈ ಸಾಧನ ಸಹಾಯಕಾರಿ. ಫೋನು ತಯಾರಕರು ಇನ್ನೂ ಮುಂದುವರೆದು ಈ ಫೋನಿಗೆ ಕ್ಯಾಮರಾ ಮತ್ತು ಜಿಪಿಎಸ್ ಅಳವಡಿಸುತ್ತಿದ್ದಾರೆ. ಅಂದರೆ ಉಪಗ್ರಹ ಮತ್ತು ಅಂತರಜಾಲ ಮೂಲಕ ನಾಯಿ ಎಲ್ಲಿದೆ ಎಂದು ಪತ್ತೆ ಹಚ್ಚಬಹುದು. ಬಾಂಬು ಹಡುಕುವ ನಾಯಿಗಳ ಕುತ್ತಿಗೆಗೆ ಇದನ್ನು ಜೋತು ಹಾಕಿ ನಾಯಿಯನ್ನು ಕಳುಹಿಸಿ ದೂರದಿಂದಲೇ ನಿಯಂತ್ರಿಸಬಹುದು. ನಿಮ್ಮ ನಾಯಿಗೆ ಅದನ್ನು ಕೊಳ್ಳಲು ಆಲೋಚಿಸುತ್ತಿದ್ದೀರಾ? ಸ್ವಲ್ಪ ತಾಳಿ. ಈ ಫೋನು ೨೦೦೬ನೆಯ ಇಸವಿಯಲ್ಲಿ ಮಾರುಕಟ್ಟೆಗೆ ಬರಲಿದೆ. ಅಲ್ಲಿ ತನಕ ಕಾಯಬೇಕು.

ಇದನ್ನು ನಾಯಿಗಳಿಗೆ ಮಾತ್ರ ಬಳಸಬೇಕಾಗಿಲ್ಲ. ಪುಟ್ಟ ಮಕ್ಕಳ ಕುತ್ತಿಗೆಗೂ ಜೋತು ಹಾಕಿ ಅವರು ಕಳೆದುಹೋಗದಂತೆ ನೋಡಿಕೊಳ್ಳಬಹುದು.

ನಮ್ಮ ಹೆಂಗಸರು ಏನು ಆಲೋಚಿಸುತ್ತಿದ್ದಾರೆ ಎಂದು ನನಗೆ ಗೊತ್ತಾಗುತ್ತಿದೆ. ರಾತ್ರಿ ಕ್ಲಬ್ಬಿಗೆ ಹೋಗುವ ಗಂಡಂದಿರ ಕುತ್ತಿಗೆಗೆ ಕಟ್ಟಲು ಆಲೋಚಿಸುತ್ತಿದ್ದಾರೆ ತಾನೆ?

2 Comments

  1. ismail ismail December 17, 2005

    ಸಂಸಾರಿಗಳ ಅತಿ ದೊಡ್ಡ ಸಮಸ್ಯೆ ಎಂದರೆ ‘ಕುಂಬಳಕಾಯಿ ಕಳ್ಳ’ ಎಂದು ಹೇಳಿದ ತಕ್ಷಣ ಹೆಗಲು ಮುಟ್ಟಿ ನೋಡಿಕೊಳ್ಳುವುದು. ನಮ್ಮ ಹೆಣ್ಣು ಮಕ್ಕಳಿಗೆ ಈ ಐಡಿಯಾ ಹೊಳೆಯದೇ ಇರುವ ಸಾಧ್ಯತೆಯೂ ಇತ್ತು. ನೀವೀಗ ಅದನ್ನು ಬರೆದು ಬಿಟ್ಟಿರುವುದರಿಂದ ತಪ್ಪಿಸಿಕೊಳ್ಳುವ ಏಕೈಕ ಅವಕಾಶವೂ ಇಲ್ಲದಂತೆ ಆಯಿತು.
    ಇದರಿಂದ ಸಂಸಾರಿಗಳಿಗಿಂತ ದೊಡ್ಡ ತೊಂದರೆ ಇರುವುದು ಇನ್ನೂ ಸಂಸಾರಿಯಾಗುವ ಹಾದಿಯಲ್ಲಿ ಇರುವವರಿಗೆ. ನಿನ್ನನ್ನು ಪ್ರೀತಿಸಬೇಕಾದರೆ ಈ ‘ರೇಡಿಯೋ ಕಾಲರ್’ಕಡ್ಡಾಯ ಎಂದರೆ ಬೆಂಗಳೂರಿನಲ್ಲಿರುವ ಪಬ್ ಗಳ ಗತಿ ಏನು?

    ಇಸ್ಮಾಯಿಲ್

  2. Pavanaja Pavanaja December 18, 2005

    ನಿಮ್ಮ ಸಮಸ್ಯೆಗೆ ಪರಿಹಾರ ಬಲು ಸುಲಭ. ಪಬ್‌ನಲ್ಲೇ ಬೇಕಿದ್ದವರನ್ನು ಹುಡುಕಿ ಆಯ್ದುಕೊಳ್ಳುವುದು. ಈಗಿನ ಹೊಸ ಜನಾಂಗದಲ್ಲಿ ಇದೆಲ್ಲ ಸಾಧ್ಯ.

    ಸಿಗೋಣ,
    ಪವನಜ

Leave a Reply

Your email address will not be published. Required fields are marked *