ಸೇವಾ ಜನೋ ಸುಖಿನೋ ಭವಂತು
[ವಿಜಯ ಕರ್ನಾಟಕದ “ಒಂದು ಸೊನ್ನೆ” ಅಂಕಣದಲ್ಲಿ ಪ್ರಕಟವಾದ ಲೇಖನ]
[ಒಂದು ಸೊನ್ನೆ – ೨ (೨೦-೦೬-೨೦೦೩)]
ಭಾರತೀಯರು ಅತಿಥಿ ಸೇವೆಗೆ ಪ್ರಖ್ಯಾತರು. ಈಗಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಕೇವಲ ಸೇವೆಗೆ ಖ್ಯಾತರು. ತಂತ್ರಾಂಶಗಳಲ್ಲಿ ಎರಡು ವಿಧ -ಉತ್ಪನ್ನ ಮತ್ತು ಸೇವೆ. ಭಾರತೀಯ ತಂತ್ರಾಂಶ ಕಂಪೆನಿಗಳು ಸೇವೆಗೆ ಮಾತ್ರ ಹೆಸರು ಮಾಡಿದ್ದಾರೆ. ಅಮೇರಿಕದ ಬಹುಪಾಲು ಕಂಪೆನಿಗಳು ತಮ್ಮ ಕೆಲಸಗಳನ್ನು ಭಾರತಕ್ಕೆ ದಾಟಿಸುತ್ತಿದ್ದಾರೆ. ಆದರೆ ಅವು ಯಾವುವೂ ತಾಂತ್ರಿಕವಾಗಿ ಉನ್ನತ ಮಟ್ಟದ ಕೆಲಸಗಳಲ್ಲ. ಬಹು ಸರಳವಾದ, ಹತ್ತನೇ ತರಗತಿ ಪಾಸಾದ ಯಾರು ಬೇಕಾದರೂ ಮಾಡಬಲ್ಲ ತಂತ್ರಾಂಶ ಸೇವೆಗಳು ಮತ್ತು ತಂತ್ರಾಂಶಾಧಾರಿತ ಸೇವೆಗಳು.
ಭಾರತದ ತಂತ್ರಾಂಶ ರಫ್ತಿನ ಶೇಕಡ ೯೫ರಷ್ಟು ಸೇವೆಯಿಂದಲೇ ಬರುತ್ತಿದೆ. ಕರ್ನಾಟಕದ ಸಾಫ್ಟ್‌ವೇರ್ ಟೆಕ್ನೋಲೋಜಿ ಪಾರ್ಕ್‌ಗಳ ಒಟ್ಟು ತಂತ್ರಾಂಶ ರಫ್ತು ಸುಮಾರು ೧೨೫೦೦ ಕೋಟಿ ರೂಪಾಯಿಗಳಷ್ಟು ಇದೆ. ಇಲ್ಲೂ ೯೫% ಸೇವೆಯಿಂದಲೇ ಬರುತ್ತಿದೆ. ನಮ್ಮ ಹೆಮ್ಮೆಯ ಇನ್ಫೋಸಿಸ್ ಕೂಡ ಸೇವೆಯಿಂದಲೇ ಹಣ ಗಳಿಸುತ್ತಿದೆ. ಅಮೇರಿಕಾದ ಕಂಪೆನಿಗಳಿಗೆ ಅಲ್ಲೇ ಕೆಲಸಕ್ಕೆ ಜನ ನೇಮಿಸಿದರೆ ಎಷ್ಟು ಖರ್ಚು ಬರುತ್ತದೋ ಅದರ ಹತ್ತನೇ ಒಂದರಷ್ಟು ಖರ್ಚಿನಲ್ಲಿ ಭಾರತೀಯರಿಂದ ಭಾರತದಲ್ಲೇ ಕೆಲಸ ಮಾಡಿಸಿಕೊಳ್ಳಬಹುದು. ಅಂತರಜಾಲ ಸಂಪರ್ಕ ಇದ್ದರೆ ಆಯಿತು. ಕೆಲಸಗಾರರು ಅಮೇರಿಕಾದಲ್ಲೇ ಇರಬೇಕೆಂಬ ನಿಯಮವೇನಿಲ್ಲ.
ಮಾಹಿತಿ ತಂತ್ರಜ್ಷಾನ ಕ್ಷೇತ್ರದ ಉತ್ಪನ್ನಗಳೇನಿದ್ದರೂ ಅಮೇರಿಕದ ಕಂಪೆನಿಗಳಿಂದ ಬರುತ್ತಿವೆ. ಅಲ್ಲಿ ಕೆಲಸಗಾರರಾಗಿ ಭಾರತೀಯರಿದ್ದಾರೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಭಾರತೀಯ ತಂತ್ರಾಂಶ ಉತ್ಪನ್ನ ಯಾವುದೂ ಇಲ್ಲ. ನಾವು ಮಾಹಿತಿ ತಂತ್ರಜ್ಷಾನ ಕ್ಷೇತ್ರದಲ್ಲಿ ತುಂಬ ಮುಂದೆ ಇದ್ದೇವೆ ಎಂದು ಹೆಮ್ಮೆ ಪಟ್ಟುಕೊಳ್ಳುವಾಗ ಈ ಒಂದು ಅಂಶವನ್ನೂ ಗಮನಿಸಬೇಕು.
ತಂತ್ರಾಂಶ ಸೇವೆಯಲ್ಲಿ ನಾವು ಹೆಸರು ಮಾಡುತ್ತಿದ್ದಂತೆಯೇ ಇನ್ನೊಂದು ರೀತಿಯ ಸೇವೆ ಪ್ರಾಮುಖ್ಯವಾಗುತ್ತಿದೆ. ಅದು ತಂತ್ರಾಂಶಾಧಾರಿತ ಸೇವೆ. ಇದನ್ನು ಇಂಗ್ಲೀಷಿನಲ್ಲಿ IT Enabled Services ಎಂದು ಕರೆಯುತ್ತಾರೆ. ಮೆಡಿಕಲ್ ಟ್ರಾನ್‌ಸ್ಕ್ರಿಪ್ಷನ್, ಕಾಲ್ ಸೆಂಟರ್, ತೆರಿಗೆ ಪಾವತಿಯ ಅರ್ಜಿಗಳನ್ನು ತುಂಬುವುದು, ಇನ್ಶೂರೆನ್ಸ್‌ನ ಹಣ ಮರುಪಾವತಿಯ ಅರ್ಜಿ ತುಂಬುವುದು, ತಂತ್ರಾಂಶಗಳನ್ನು ಅಂತರಜಾಲದ ಮೂಲಕ ಪರೀಕ್ಷಿಸುವುದು, ಇತ್ಯಾದಿ ಇದಕ್ಕೆ ಉದಾಹರಣೆಗಳು. ಈಗ ಇಂತಹ ಸೇವೆಗಳಿಗೆ ಇನ್ನೂ ಒಂದು ಹೊಸ ಹೆಸರನ್ನು ನೀಡಿದ್ದಾರೆ. ಅದು Business Process Outsourcing (BPO) ಎಂದು. ತಂತ್ರಾಂಶಾಧಾರಿತ ಸೇವೆಯನ್ನು ಮಾತ್ರ ಇದು ಸೂಚಿಸುತ್ತಿಲ್ಲ. ಇತರೆ ಸೇವೆಗಳಿಗೂ ಇದು ಅನ್ವಯಿಸುತ್ತದೆ.
ಇನ್ಶೂರೆನ್ಸ್‌ನ ಹಣ ಮರುಪಾವತಿಯ ಅರ್ಜಿ ತುಂಬುವ ಉದಾಹರಣೆಯನ್ನು ಗಮನಿಸೋಣ. ಅಮೇರಿಕಾದಲ್ಲಿ ಪ್ರತಿಯೊಬ್ಬನೂ ವಿಮೆ ಮಾಡಿರಲೇಬೆಕು. ಎಷ್ಟರ ಮಟ್ಟಿಗೆ ಎಂದರೆ ದೇಹಕ್ಕೆ, ಕಣ್ಣಿಗೆ, ಹಲ್ಲಿಗೆ, ಹೀಗೆ ಬೇರೆ ಬೇರೆ ವಿಮೆ ಮಾಡಿರತಕ್ಕದ್ದು. ತಿಂಗಳ ಖರ್ಚಿನಲ್ಲಿ ಊಟಕ್ಕಿಂತ ಹೆಚ್ಚು ವಿಮೆಗೆ ಹೋಗುತ್ತದೆ. ಖಾಯಿಲೆ ಬಂದಾಗ ವೈದ್ಯರ ಹತ್ತಿರ ಹೋಗುತ್ತಾರೆ. ವೈದ್ಯರಿಗೆ ಬಿಲ್ಲಿನ ಸುಮಾರು ೧೦-೨೦% ರಷ್ಟು ಮಾತ್ರ ರೋಗಿ ಪಾವತಿ ಮಾಡುತ್ತಾರೆ. ಉಳಿದ ಹಣವನ್ನು ವಿಮಾ ಕಂಪೆನಿ ಕೊಡುತ್ತದೆ. ಅದಕ್ಕಾಗಿ ವೈದ್ಯರು ಅರ್ಜಿ ಸಲ್ಲಿಸಬೇಕು. ವೈದ್ಯರು ರೋಗಿಯನ್ನು ಪರಿಶೀಲಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತಾರೋ ಅದಕ್ಕಿಂತ ಹೆಚ್ಚು ಸಮಯ ಈ ಅರ್ಜಿಗಳನ್ನು ತುಂಬಲು ತೆಗೆದುಕೊಳ್ಳುತ್ತಾರೆ. ಅರ್ಜಿಗಳ ಕಾಗದದ ಫಾರಂಗಳನ್ನು ಭರ್ತಿ ಮಾಡಿ ವಿಮಾ ಕಂಪೆನಿಗೆ ಕಳುಹಿಸಬಹುದು. ಇತ್ತೀಚಿಗೆ ಅರ್ಜಿಗಳನ್ನು ವಿದ್ಯುನ್ಮಾನ ರೀತಿಯಲ್ಲಿ ಕಳುಹಿಸಲು ಪ್ರೋತ್ಸಾಹಿಸುತ್ತಿದ್ದಾರೆ. ಅಂದರೆ ವೈದ್ಯರು ರೋಗಿಗಳನ್ನು ಪರಿಶೀಲಿಸುವುದು ಮಾತ್ರವಲ್ಲ, ಅಲ್ಪ ಸ್ವಲ್ಪ ಗಣಕ ಬಳಕೆಯನ್ನೂ ಕಲಿತಿರಬೇಕೆಂದಾಯಿತು. ಈ ತಲೆನೋವು ಯಾಕೆ? ಗಣಕದಲ್ಲಿ ಅರ್ಜಿ ಫಾರಂ ತುಂಬುವ ಕೆಲಸವನ್ನು ಇತರರಿಗೆ ವಹಿಸಿದರೆ ಹೇಗೆ? ಈ ಗಣಕೀಕೃತ ಅರ್ಜಿ ತುಂಬುವ ಕೆಲಸವನ್ನು ಅತಿ ಕಡಿಮೆ ಖರ್ಚಿನಲ್ಲಿ ಭಾರತದಲ್ಲಿ ಮಾಡಿಸಿದರೆ ವೈದ್ಯರು ಹೆಚ್ಚು ರೋಗಿಗಳನ್ನು ಪರಿಶೀಲಿಸಿ ಹೆಚ್ಚು ಸಂಪಾದನೆ ಮಾಡಬಹುದು.
ಇತ್ತೀಚಿಗೆ ತುಂಬ ಸುದ್ದಿಯಲ್ಲಿರುವುದು ಕಾಲ್ ಸೆಂಟರ್‌ಗಳು. ಉತ್ಪನ್ನಗಳನ್ನು ಮಾರುವ ಎಲ್ಲ ಕಂಪೆನಿಗಳು ಗ್ರಾಹಕರ ಸಹಾಯವಾಣಿ ಇಟ್ಟಿರುತ್ತಾರೆ. ಈ ಸಹಾಯವಾಣಿ ಭಾರತದಲ್ಲಿದೆ! ಅಮೇರಿಕಾದಲ್ಲಿ ಒಂದು ಕಾರು ಕೊಂಡಾತ ಆ ಕಂಪೆನಿಗೆ ಯಾವುದೋ ಒಂದು ವಿಷಯದ ಬಗ್ಗೆ ಮಾತನಾಡಲು ಫೋನು ಮಾಡಿದರೆ ಭಾರತದಿಂದ ಉತ್ತರಿಸುತ್ತಾರೆ. ಕರೆ ಮಾಡಿದಾತನಿಗೆ ತನ್ನ ಕರೆಯನ್ನು ಬಹುದೂರದ ಭಾತರ ದೇಶದಿಂದ ಉತ್ತರಿಸುತ್ತಿದ್ದಾರೆ ಎಂದು ತಿಳಿಯುವುದೇ ಇಲ್ಲ. ಈ ಕಾಲ್ ಸೆಂಟರ್‌ಗಳಲ್ಲಿ ಕೆಲಸ ಮಾಡುವವರಿಗೆ ಅಮೇರಿಕಾದ ರೀತಿ ನೀತಿ ಮತ್ತು ಇಂಗ್ಲೀಷ್ ಉಚ್ಛಾರಣೆಗಳನ್ನು ಕಲಿಸಿರುತ್ತಾರೆ. ಕಾಲ್ ಸೆಂಟರ್‌ನಲ್ಲಿ ಕೆಲಸಕ್ಕೆ ಸೇರಿದಾಗ ಮೊದಲ ತಿಂಗಳಿನ ತರಬೇತಿಯಲ್ಲಿ ಅಮೇರಿಕಾದ ಇಂಗ್ಲೀಷ್ ಸಿನಿಮಾಗಳನ್ನು ವೀಕ್ಷಿಸುವುದೂ ಸೇರಿದೆ! ಸಿನಿಮಾ ನೋಡುವುದಕ್ಕೆ ಸಂಬಳ ಪಡೆಯುವ ಭಾಗ್ಯ ಎಷ್ಟು ಜನರಿಗಿದೆ?!
ಈ ಬಿಪಿಓ ವಿಭಾಗ ಅತಿ ವೇಗದಲ್ಲಿ ಬೆಳೆಯುತ್ತಿದೆ. ಒಂದು ವರ್ಷದಲ್ಲೇ ೨೫೦% ಬೆಳವಣಿಗೆ ದಾಖಲಾಗಿದೆ. ಕರ್ನಾಟಕ ರಾಜ್ಯಕ್ಕೆ ಕಳೆದ ಹಣಕಾಸಿನ ವರ್ಷದಲ್ಲಿ ಒಟ್ಟು ೯೦೦ ಕೋಟಿ ರೂ ಬಿಪಿಓ ಮೂಲಕ ಬಂದಿದೆ. ಈ ಹಣ ಕಂಪೆನಿಗಳಿಗೆ ಬರುತ್ತಿದೆಯೇ ಹೊರತು ಸರಕಾರಕ್ಕಲ್ಲ.
ಈಗೊಂದು ಹೊಸ ಬೆಳವಣಿಗೆಯನ್ನು ಗಮನಿಸೋಣ. ಅದು ಅಮೇರಿಕಾದ ನ್ಯೂಜರ್ಸಿ ರಾಜ್ಯದಿಂದ ಆರಂಭವಾಗಿದೆ. ಯಾವ ತಾಂತ್ರಿಕ ಪರಿಣತೆಯ ಅಗತ್ಯವೂ ಇಲ್ಲದ ಕಾಲ್ ಸೆಂಟರ್‌ನಂತಹ ಕೆಲಸಗಳನ್ನು ಭಾರತಕ್ಕೆ ರವಾನಿಸಿದರೆ ನಮ್ಮ ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತದೆ ಎಂದು ಕೆಲವು ಸಂಸದರು ಗದ್ದಲವೆಬ್ಬಿಸಿದರು. ಅಲ್ಲಿಗೇ ನಿಲ್ಲಿಸಲಿಲ್ಲ. ಕಾಲ್ ಸೆಂಟರ್‌ಗಳನ್ನು ಅಮೇರಿಕಾ ದೇಶದಿಂದ ಹೊರಗಡೆ ಸ್ಥಾಪಿಸಬಾರದು ಎಂದು ಕಾನೂನನ್ನೇ ಮಾಡಿದರು. ಆದರೆ ಇದು ಸರಕಾರದಿಂದ ನಡೆಸಲ್ಪಡುವ ಕಾಲ್ ಸೆಂಟರ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಕಾನೂನು ಮಾಡಲು ಅವರಿಗೆ ಒಟ್ಟು ೯೬೦,೦೦೦ ಡಾಲರ್ ಖರ್ಚಾಗಿದೆ (ಸಂಸತ್ತನ್ನು ನಡೆಸುವ ಖರ್ಚು ಸೇರಿ). ಇದರಿಂದಾಗಿ ಅವರಿಗೆ ಉಳಿತಾಯವಾದ ನೌಕರಿ ಎಷ್ಟು ಗೊತ್ತೆ? ಕೇವಲ ೧೨! ನ್ಯೂಜರ್ಸಿಯಿಂದ ಪ್ರಾರಂಭವಾದ ಈ ಬೆಳವಣಿಗೆ ಇನ್ನೂ ಕೆಲವು ರಾಜ್ಯಗಳಿಗೆ ಹಬ್ಬತೊಡಗಿದೆ. ಇದು ಭಾರತದ ಮಾಹಿತಿ ತಂತ್ರeನ ಕ್ಷೇತ್ರದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
ಇತ್ತೀಚಿಗೆ ನಮ್ಮ ಉಪಪ್ರಧಾನಿ ಅಡ್ವಾಣಿಯವರು ಅಮೇರಿಕಾ ದೇಶಕ್ಕೆ ಭೇಟಿ ನೀಡಿದ್ದರು. ಆಗ ಅವರನ್ನು ಕೆಲವು ಪತ್ರಕರ್ತರು “ಕೆಲವು ರಾಜ್ಯಗಳ ಈ ಬಿಪಿಓ ವಿರೋಧಿ ನೀತಿಯ ಬಗ್ಗೆ ಬುಶ್ ಜೊತೆ ಮಾತನಾಡುತ್ತೀರಾ” ಎಂದು ಪ್ರಶ್ನಿಸಿದರು. “ಇಲ್ಲ” ಎಂಬುದು ಅವರ ಉತ್ತರ. ಅವರ ಪ್ರಕಾರ “ಕೆಲವು ಅಮೇರಿಕನ್ ಕಂಪೆನಿಗಳು ತಮ್ಮ ವೆಚ್ಚ ಕಡಿಮೆ ಮಾಡಲು ಭಾರತೀಯ ಕಂಪೆನಿಗಳ ಸೇವೆ ಬಯಸುತ್ತಿದ್ದಾರೆ. ಅವರ ಉದ್ದೇಶ ಹಣ ಉಳಿಸುವುದೇ ಹೊರತು ಭಾರತಕ್ಕೆ ಸಹಾಯ ಮಾಡುವುದಲ್ಲ. ಬಿಪಿಓ ಅಮೇರಿಕಾದ ಕಂಪೆನಿಗಳ ಸಮಸ್ಯೆಯೇ ಹೊರತು ಭಾರತದ್ದಲ್ಲ”. ಭೇಶ್ ಅಡ್ವಾಣಿ. ಕನಿಷ್ಠ ನೀವಾದರೂ ರಾಷ್ಟ್ರೀಯವಾಗಿ ಯೋಚಿಸಿದ್ದೀರಲ್ಲ.
ಇನ್ನು ಕೆಲವು ಅಮೇರಿಕನ್ ಕಂಪೆನಿಗಳು ಬೇರೆಯೇ ರೀತಿಯಲ್ಲಿ ಯೋಚಿಸಲು ಪ್ರಾರಂಭಿಸಿದ್ದಾರೆ. ಭಾರತಕ್ಕೇ ಯಾಕೆ ಈ ಬಿಪಿಓಗಳನ್ನು ವಹಿಸಬೇಕು? ಇನ್ನೂ ಕಡಿಮೆ ವೆಚ್ಚದಲ್ಲಿ ಸೇವೆ ಒದಗಿಸುವವರು ಯಾರಿದ್ದಾರೆ ಎಂದು ಹುಡುಕಾಡತೊಡಗಿದರು. ಆಗ ಅವರ ದೃಷ್ಟಿ ಬಿದ್ದದ್ದು ಪಿಲಿಪ್ಪೈನ್ಸ್, ವಿಯೆಟ್ನಾಮ್, ರೊಮಾನಿಯಾ, ರಶ್ಯಾ, ಇತ್ಯಾದಿ ದೇಶಗಳ ಮೇಲೆ. ಭಾರತಕ್ಕೆ ಇಂಗ್ಲೀಷ್ ಭಾಷೆಯ ಪ್ರಾವೀಣ್ಯದ ಸಹಾಯ ಇದೆ. ಪಿಲಿಪ್ಪೈನ್ಸ್ ದೇಶದವರೂ ಇಂಗ್ಲೀಷ್ ಭಾಷೆಯಲ್ಲಿ ನುರಿತವರು. ಇಂಗ್ಲೀಷ್ ಭಾಷೆಯಲ್ಲಿ ಹಿಂದಿರುವ ರೊಮಾನಿಯಾ, ರಶ್ಯಾ ದೇಶಗಳಲ್ಲಿ ತಂತ್ರಾಂಶ ಪರೀಕ್ಷೆ ನಡೆಸುತ್ತಿದ್ದಾರೆ.
ಬಿಪಿಓ ಮೇಲೆ ಅತಿಯಾಗಿ ಅವಲಂಬಿಸಲು ಹೊರಟ ಭಾರತೀಯ ಕಂಪೆನಿಗಳು ಹೊಡೆತ ತಿನ್ನುವ ಕಾಲ ದೂರವಿಲ್ಲ. ಡಾಟ್‌ಕಾಮ್ ಗುಳ್ಳೆ ಒಡೆದ ಉದಾಹರಣೆಯಿಂದ ಇವರು ಪಾಠ ಕಲಿಯಬೇಕಾಗಿದೆ. ನಮ್ಮವರು ಆದಷ್ಟು ಬೇಗ ತಾಂತ್ರಿಕ ಪ್ರಾವೀಣ್ಯದ ಅಗತ್ಯವಿರುವಂತಹ ಸೇವಾ ಕ್ಷೇತ್ರಕ್ಕೆ ಕಾಲಿಡುವುದು ಒಳಿತು. ಉತ್ಪನ್ನಗಳ ಕಡೆ ಗಮನ ಹರಿಸಿದರೆ ಇನ್ನೂ ಒಳ್ಳೆಯದು.
– ಡಾ. ಯು. ಬಿ. ಪವನಜ