ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ-೪

ಒಂದು ಸೊನ್ನೆ – ೮ (೨೬-೦೯-೨೦೦೩)

ಮಾಹಿತಿ ಹೆದ್ದಾರಿಯಲ್ಲಿ ಕನ್ನಡದ ಗಾಡಿ

ಅಂತರಜಾಲಕ್ಕೆ ಮಾಹಿತಿ ಹೆದ್ದಾರಿ (information super highway) ಎಂಬ ಹೆಸರೂ ಇದೆ. ಈ ಹೆದ್ದಾರಿಯಲ್ಲಿ ಕನ್ನಡ ಭಾಷೆಯ ಗಾಡಿಗಳ ಚಲನೆಯ ಆರಂಭದ ಸಿಂಹಾವಲೋಕನ ಮತ್ತು ಸದ್ಯದ ಸ್ಥಿತಿಗತಿಗಳ ಸ್ಥೂಲ ಚಿತ್ರಣ.

ಆರಂಭದಲ್ಲಿ ಇಂಗ್ಲೀಷ್ ಮೂಲಕ ಕನ್ನಡ

೧೯೯೫ರಲ್ಲಿ ನಾನು ತೈವಾನಿಗೆ ಉನ್ನತ ಸಂಶೋಧನೆ ಮಾಡಲು ಹೋದೆ. ಭಾರತದಲ್ಲಿ ಆಗಿನ್ನೂ ಅಂತರಜಾಲ ಎಲ್ಲರಿಗೂ ಲಭ್ಯವಿರಲಿಲ್ಲ. ತೈವಾನಿನಲ್ಲಿ ನನಗೆ ಪ್ರಥಮ ಬಾರಿಗೆ ಅಂತರಜಾಲವನ್ನು ಬಳಸುವ ಸೌಲಭ್ಯ ದೊರೆಯಿತು. ಅಂತರಜಾಲದಲ್ಲಿ ನಾನು ಮೊದಲು ಹುಡುಕಾಡಿದ್ದು ಕನ್ನಡದ ಬಗೆಗೆ ಏನಾದರೂ ಇದೆಯೇ ಎಂದು. ಆಗ ಕಣ್ಣಿಗೆ ಬಿದ್ದದ್ದು ಕೆನಡಾದಲ್ಲಿ ವಿದ್ಯಾರ್ಥಿಯಾಗಿದ್ದ ದತ್ತಾತ್ರೇಯ ಕುಲಕರ್ಣಿಯವರು ನಿರ್ಮಿಸಿದ “ಕನ್ನಡ ಸಾಹಿತ್ಯ ಪುಟ”. ಆಗಿನ್ನೂ ಅಂತರಜಾಲದಲ್ಲಿ ಕನ್ನಡ ಅಕ್ಷರಶೈಲಿಗಳ (ಫಾಂಟ್) ಬಳಕೆ ಪ್ರಾರಂಭವಾಗಿರಲಿಲ್ಲ. ಕನ್ನಡ ಸಾಹಿತ್ಯ ಪುಟದಲ್ಲಿ ಕನ್ನಡ ಭಾಷೆಗೆ ಇಂಗ್ಲೀಷ್ ಲಿಪಿಯನ್ನು ಅಳವಡಿಸಲಾಗಿತ್ತು. ಉದಾಹರಣೆಗೆ “ಧರಣಿ ಮಂಡಲ ಮಧ್ಯದೊಳಗೆ” ಎಂಬುದು “dharaNi maMDala madhyadhoLage” ಎಂದಾಗಿತ್ತು.

ಅಂತರಜಾಲದಲ್ಲಿ ವಿಚಾರಜಾಲದ ಸೌಲಭ್ಯವಿದೆ. ಇದಕ್ಕೆ ಇಂಗ್ಲೀಷಿನಲ್ಲಿ newsgroup ಎನ್ನುತ್ತಾರೆ. ಇದೊಂದು ಮುಕ್ತ ಗೋಡೆಬರಹದ ರೀತಿ ಕೆಲಸ ಮಾಡುತ್ತದೆ. ಯಾರು ಬೇಕಾದರು ತಮಗೆ ಇಷ್ಟ ಬಂದ ವಿಷಯದ ಬಗ್ಗೆ ಇಲ್ಲಿ ಮುಕ್ತ ಬರೆಹ, ಸೂಚನೆ, ಕೋರಿಕೆ ದಾಖಲಿಸಬಹುದು. ವಿಷಯಗಳಿಗನುಸಾರವಾಗಿ ಬೇರೆ ಬೇರೆ ವಿಚಾರಜಾಲಗಳಿವೆ. ಕರ್ನಾಟಕದ ಬಗೆಗೆ ಚಿಂತನೆ ನಡೆಸುವ ವಿಚಾರಜಾಲದ ಹೆಸರು soc.culture.indian.karnataka ಎಂದು. ಈ ಜಾಲವೂ ಇಂಗ್ಲೀಷಿನಲ್ಲೇ ಕೆಲಸ ಮಾಡುತ್ತದೆ. ೧೯೯೫-೯೬ ರ ಸಮಯದಲ್ಲಿ ಕುಲಕರ್ಣಿ, ಸಿ.ಪಿ. ರವಿಕುಮಾರ್, ಮಹೇಶ ರಾವ್, ಪದ್ಮನಾಭ ಹೊಳ್ಳ, ನಾನು, ದಿನೇಶ ನೆಟ್ಟಾರು, ಹೀಗೆ ಹಲವರು ಈ ಜಾಲದಲ್ಲಿ ಸಕ್ರಿಯವಾಗಿದ್ದೆವು. ನಾವೆಲ್ಲ ಒಟ್ಟು ಸೇರಿ ಒಂದು ಹರಟೆಕಟ್ಟೆಯನ್ನು ಅಂತರಜಾಲದಲ್ಲಿ ಪ್ರಾರಂಭಿಸಿದರೆ ಹೇಗೆ ಎಂಬ ಆಲೋಚನೆ ಬಂತು. ಇಂಟರ್‌ನೆಟ್ ರಿಲೇ ಚಾಟ್ ಸೌಲಭ್ಯವನ್ನು ಬಳಸಿ ಪ್ರತಿ ಶನಿವಾರ ನಾವೆಲ್ಲ ನೇರ ಹರಟೆಯನ್ನು ನಡೆಸುತ್ತಿದ್ದೆವು. ಹರಟೆ ನಡೆಸಲು ಬಳಸುತ್ತಿದ್ದ ಲಿಪಿ ಇಂಗ್ಲೀಷ್.

“ಯುರೇಕಾ!”

ಹೀಗೆ ಒಂದು ದಿನ ಹರಟೆ ನಡೆಸಲು ನಾನು ಮತ್ತು ಮಹೇಶ ರಾವ್ ಮಾತ್ರ ಇದ್ದೆವು. ನಾನು ಆವಾಗಲೇ ನನ್ನ ಅಂತರಜಾಲ ತಾಣವನ್ನು ನಮ್ಮ ಸಂಶೋಧನಾಲಯದಲ್ಲಿ ನಿರ್ಮಿಸಿದ್ದೆ. ಆ ತಾಣದಲ್ಲಿ “ನಮಸ್ಕಾರ” ಎಂಬ ಪದವನ್ನು ಕನ್ನಡ ಅಕ್ಷರಶೈಲಿಯಲ್ಲಿ ಸೇರಿಸಿದೆ. ಮಹೇಶರಾಯರಿಗೆ ಆ ಪದವನ್ನು ಓದಲು ಬೇಕಾದ ಕನ್ನಡದ ಅಕ್ಷರಶೈಲಿ (ಫಾಂಟ್) ಕಳುಹಿಸಿಕೊಟ್ಟೆ. ಅವರು ಕನ್ನಡದ ಅಕ್ಷರಶೈಲಿಯನ್ನು ತಮ್ಮ ಗಣಕದಲ್ಲಿ ಅನುಸ್ಥಾಪನೆ (ಇನ್‌ಸ್ಟಾಲ್) ಮಾಡಿದೊಡನೆ ಅವರ ಗಣಕ ಪರದೆಯಲ್ಲಿ “ನಮಸ್ಕಾರ” ಎಂದು ಕನ್ನಡ ಲಿಪಿಯಲ್ಲಿ ಮೂಡಿಬಂತು. ಇದನ್ನು ಅವರು ನನಗೆ ಚಾಟ್ ಮೂಲಕ ತಿಳಿಸಿದರು. ನಮಗೆ ಯುರೇಕಾ ಎಂದು ಕೂಗುವಂತಾಗಿತ್ತು.

ವಿಶ್ವ ಕನ್ನಡ

೧೯೯೬ ನವಂಬರ್ ತಿಂಗಳಲ್ಲಿ ನಾನು ಭಾರತಕ್ಕೆ ವಾಪಾಸು ಬಂದೆ. ನಾನು ಬಳಸುತ್ತಿದ್ದದ್ದು ಆಕೃತಿ ಹೆಸರಿನ ಕನ್ನಡ ತಂತ್ರಾಂಶ. ಈ ತಂತ್ರಾಂಶ ತಯಾರಿಕೆಯ ಕಂಪೆನಿಯವರು ಈವಾಗಲೇ ಮರಾಠಿ ಭಾಷೆಯಲ್ಲಿ ಅಂತರಜಾಲ ತಾಣವೊಂದನ್ನು ನಿರ್ಮಿಸಿದ್ದರು. ಅವರಿಗೆ ಕನ್ನಡದ ಒಂದು ಸ್ಯಾಂಪಲ್ ಪುಟ ಬೇಕಿತ್ತು. ನನಗೆ ಅಂತಹ ಒಂದು ತಾಣಪುಟವನ್ನು (web page) ತಯಾರಿಸಿ ಕೊಡಲು ಆಕೃತಿ ತಂತ್ರಾಂಶ ತಯಾರಿಕಾ ಕಂಪೆನಿಯ ಆನಂದ್ ಅವರು ನನ್ನನ್ನು ಕೇಳಿಕೊಂಡರು. ಕನ್ನಡದ ಅಂತರಜಾಲ ತಾಣವೊಂದನ್ನು ನಿರ್ಮಿಸುವ ಆಲೋಚನೆ ತೈವಾನಿನಲ್ಲಿದ್ದಾಗಲೇ ನನ್ನ ಮನದಲ್ಲಿ ಮೂಡಿತ್ತು. ಕನ್ನಡದ ಒಂದು ಅಂತರಜಾಲ ತಾಣ ನಿರ್ಮಾಣ ಮಾಡಲು ನನಗಿದ್ದ ಆಲೋಚನೆಯನ್ನು ಹಾಗೂ ತೈವಾನಿನಲ್ಲಿ ನಾನು ನಡೆಸಿದ ಪ್ರಯತ್ನವನ್ನೂ ಅವರಿಗೆ ತಿಳಿಸಿದೆ. ಅವರ ಅಗತ್ಯಕ್ಕೂ ನನ್ನ ಆಲೋಚನೆಗೂ ಸರಿಹೊಂದಿ ಆಕೃತಿ ತಂತ್ರಾಂಶ ತಯಾರಕರ ಔದಾರ್ಯದಿಂದ ಕನ್ನಡದ ಪ್ರಥಮ ಅಂತರಜಾಲ ತಾಣ ಹಾಗೂ ಪ್ರಥಮ ಅಂತರಜಾಲ ಪತ್ರಿಕೆ “ವಿಶ್ವ ಕನ್ನಡ” ಮೂಡಿಬಂತು. ಇದು ನಡೆದುದು ೧೯೯೬ರ ಡಿಸೆಂಬರ್ ತಿಂಗಳಲ್ಲಿ.

ಸುಮಾರು ಅದೇ ಸಮಯದಲ್ಲಿ ಬೆಂಗಳೂರಿನಿಂದ ಮುರಳೀಧರ ಪದಕಿಯವರು “ಮೈಬೆಂಗಳೂರು” ಎಂಬ ಹೆಸರಿನ ಕನ್ನಡದ ತಾಣವೊಂದನ್ನು ಪ್ರಾರಂಭಿಸಿ ಅದರಲ್ಲಿ ದೈನಂದಿನ ಸುದ್ದಿಗಳನ್ನು ಕೊಡುತ್ತಿದ್ದರು. ಸಂಜೆವಾಣಿ ದಿನಪತ್ರಿಕೆಯೂ ಅದೇ ಸುಮಾರಿಗೆ ಚಿತ್ರ ರೂಪದಲ್ಲಿ (ಗ್ರಾಫಿಕ್ಸ್ ವಿಧಾನದಲ್ಲಿ) ಅಂತರಜಾಲಕ್ಕೆ ಸೇರ್ಪಡೆಯಾಯಿತು. ಇದು ಈಗಲೂ ಅದೇ ರೂಪದಲ್ಲಿದೆ.

ಡೈನಾಮಿಕ್ ಫಾಂಟ್

ಕನ್ನಡ ಭಾಷೆಯಲ್ಲಿ ಅಂತರಜಾಲ ತಾಣ ನಿರ್ಮಾಣಕ್ಕೆ ಆಗ ಇದ್ದ ಸಮಸ್ಯೆ ಅಕ್ಷರಶೈಲಿಗಳದ್ದು. ತಾಣವನ್ನು ನಿರ್ಮಿಸಿದ ಅಕ್ಷರಶೈಲಿ ತಾಣವನ್ನು ವೀಕ್ಷಿಸುವವನ ಗಣಕದಲ್ಲೂ ಇರಬೇಕು. ಇದಕ್ಕೆ ಪರಿಹಾರವಾಗಿ ಅಕ್ಷರಶೈಲಿಯನ್ನು ಬೇಕಿದ್ದವರು ತಮ್ಮ ಗಣಕಕ್ಕೆ ಇಳಿಸಿಕೊಳ್ಳುವ (ಡೌನ್‌ಲೋಡ್) ಸೌಕರ್ಯ ನೀಡಲಾಗಿತ್ತು. ಈಗಲೂ ಬಹುಪಾಲು ಕನ್ನಡ ತಾಣಗಳು ಈ ವಿಧಾನವನ್ನು ಬಳಸುತ್ತಿವೆ. ಈ ವಿಧಾನದ ಒಂದು ತೊಡಕೆಂದರೆ ಕನ್ನಡದ ಬಹುತೇಕ ಅಕ್ಷರಶೈಲಿಗಳು ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯಲ್ಲಿ (operating system) ಮಾತ್ರ ಕಾರ್ಯನಿರ್ವಹಿಸುತ್ತವೆ. ಈ ಸಮಸ್ಯೆಗೆ ಪರಿಹಾರ ಸ್ವಯಂನಿರ್ಮಿತ ಅಕ್ಷರಶೈಲಿಯ (dynamic font) ಬಳಕೆ. ಈ ತಂತ್ರಜ್ಞಾನದಲ್ಲಿ ಅಕ್ಷರಶೈಲಿಗಳು ಅಂತರಜಾಲ ತಾಣದಲ್ಲೇ ಇರುತ್ತವೆ. ಅಂತರಜಾಲ ತಾಣ ವೀಕ್ಷಕ ತಂತ್ರಾಂಶವು (browser software) ತಾಣದಿಂದ ಅಕ್ಷರಶೈಲಿಯ ಚೌಕಟ್ಟನ್ನು ಸೆಳೆದುಕೊಂಡು ಅಕ್ಷರಭಾಗಗಳನ್ನು ತಾನೆ ನಿರ್ಮಿಸಿಕೊಳ್ಳುತ್ತದೆ. ಈ ಡೈನಾಮಿಕ್ ಫಾಂಟ್ ತಂತ್ರಜ್ಞಾನವು ಪ್ರಪಂಚದ ಎಲ್ಲ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಕೆಲಸ ಮಾಡುತ್ತದೆ. “ವಿಶ್ವ ಕನ್ನಡ”ವು ಭಾರತೀಯ ಭಾಷೆಗಳಲ್ಲೇ ಪ್ರಪ್ರಥಮ ಬಾರಿಗೆ ಡೈನಾಮಿಕ್ ಫಾಂಟ್ ಬಳಸಿದ ಅಗ್ಗಳಿಕೆಗೆ ಪಾತ್ರವಾಗಿದೆ.

ಕನ್ನಡದ ಸುಗ್ಗಿ

೧೯೯೯-೨೦೦೧ ಡಾಟ್ ಕಾಮ್‌ಗಳ ಯುಗ. ಕನ್ನಡ ಭಾಷೆಗೂ ಇದರ ಪ್ರಭಾವ ತಟ್ಟದೆ ಇರಲಿಲ್ಲ. ಈ ಸಮಯದಲ್ಲಿ ಹಲವು ಕನ್ನಡ ತಾಣಗಳು ಹುಟ್ಟಿಕೊಂಡವು. ಕೆಲವು ಕನ್ನಡ ದಿನಪತ್ರಿಕೆಗಳೂ ಅಂತರಜಾಲಕ್ಕೆ ಸೇರ್ಪಡೆಯಾದವು. ಡಾಟ್ ಕಾಮ್‌ಗಳು ಕಾಮ್ (calm) ಆಗುತ್ತಿದ್ದಂತೆ ಕನ್ನಡದ ಕೆಲವು ತಾಣಗಳೂ ನಾಪತ್ತೆಯಾದವು. ಇನ್ನು ಕೆಲವು ಅಲ್ಲೇ ನಿದ್ದೆ ಹೊಡೆಯತೊಡಗಿದವು. ಈಗ ಹೆಚ್ಚು ಸಕ್ರಿಯವಾಗಿರುವ ಕೆಲವು ಕನ್ನಡ ತಾಣಗಳು -thatskannada.com, kannadaratna.com, ourkarnataka.com. ಈ ತಾಣಗಳು ಪ್ರತಿದಿನ ಹೊಸ ವಿಷಯಗಳನ್ನು ನೀಡುತ್ತಿವೆ. ತಿಂಗಳಿಗೊಮ್ಮೆ ಅಥವಾ ಅನುಕೂಲವಾದಾಗ ಹೊಸ ವಿಷಯಗಳನ್ನು ಸೇರಿಸುವ ತಾಣಗಳು ಹಲವಿವೆ. kannadasaahithya.com ಈ ಪಟ್ಟಿಯಲ್ಲಿ ಗಮನಾರ್ಹವಾಗಿದೆ. ಕನ್ನಡದ ಚಲಚಿತ್ರಗಳಿಗೆಂದೇ ಮೀಸಲಾದ ತಾಣ chitraloka.com. ಕನ್ನಡ ಅಕ್ಷರಶೈಲಿಯನ್ನೂ ಬಳಸುತ್ತಿದ್ದ ಈ ತಾಣ ಇತ್ತೀಚೆಗೆ ಏಕೋ ಕನ್ನಡವನ್ನು ಮರೆತು ಕೇವಲ ಇಂಗ್ಲೀಷ್ ಭಾಷೆಯಲ್ಲಿದೆ. ಕನ್ನಡದ ಖ್ಯಾತ ಕಲೆ ಯಕ್ಷಗಾನಕ್ಕೆಂದೇ ಮೀಸಲಾದ yakshagana.com ತಾಣವಿದೆ. ಕನ್ನಡದ ಎಲ್ಲ ತಾಣಗಳ ಸೂಚಿಯನ್ನು ಇಲ್ಲಿ ನೀಡಲು ಸ್ಥಳಾವಾಕಾಶವಿಲ್ಲ. ಇಲ್ಲಿ ಹೆಸರಿಸದ ತಾಣಗಳು ಚೆನ್ನಾಗಿಲ್ಲವೆಂದು ಭಾವಿಸಬೇಕಾಗಿಲ್ಲ.

ವಿ-ಅಂಚೆ (email)

ಕನ್ನಡದ ಯಾವುದೇ ಲಿಪಿ-ತಂತ್ರಾಂಶವನ್ನು ಬಳಸಿ ಕನ್ನಡದಲ್ಲಿ ವಿ-ಅಂಚೆ ಕಳುಹಿಸಬಹುದು. ನೀವು ಬಳಸಿದ ಅಕ್ಷರಶೈಲಿ ವಿ-ಅಂಚೆಯನ್ನು ಓದುವವನ ಗಣಕದಲ್ಲೂ ಇರತಕ್ಕದ್ದು ಅವಶ್ಯ. ಅಂತರಜಾಲದಿಂದಲೇ ಕನ್ನಡದಲ್ಲಿ ವಿ-ಅಂಚೆ ಕಳುಹಿಸುವ ಸೌಲಭ್ಯ ನೀಡುವ ತಾಣಗಳೂ ಕೆಲವಿವೆ. ಉದಾಹರಣೆಗೆ -epatra.com, etapaal.com, kannadaemail.com.

ಮಾತುಕತೆ (chat)

ಅಂತರಜಾಲದಲ್ಲಿ ಕನ್ನಡ ಲಿಪಿಯಲ್ಲೇ ಮಾತುಕತೆ ಸಾಧ್ಯ. ಯಾಹೂ ಮೆಸೆಂಜರ್. ಎಂಎಸ್‌ಎನ್ ಮೆಸೆಂಜರ್, ಇತ್ಯಾದಿಗಳು ಅಕ್ಷರಶೈಲಿಯನ್ನು ಬದಲಿಸುವ ಸವಲತ್ತನ್ನು ನೀಡಿವೆ. ಕನ್ನಡದ ಅಕ್ಷರಶೈಲಿಯನ್ನು ಆರಿಸಿಕೊಂಡು ಅದಕ್ಕೆ ಸರಿಹೊಂದುವ ಕನ್ನಡದ ಕೀಲಿಮಣೆ ತಂತ್ರಾಂಶ (ನುಡಿ, ಬರಹ, ಇತ್ಯಾದಿ) ಬಳಸಿ ಕನ್ನಡದಲ್ಲೇ ಚಾಟ್ ಮಾಡಬಹುದು. epatra.com ಮತ್ತು ಇನ್ನಿತರ ಕೆಲವು ತಾಣಗಳು ತಮ್ಮ ತಾಣದಲ್ಲೇ ಕನ್ನಡದಲ್ಲಿ ಚಾಟ್ ಮಾಡುವ ಸವಲತ್ತನ್ನು ನೀಡಿವೆ.

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎಂಬ ಕವಿವಾಣಿಯನ್ನು ಅಂತರಜಾಲವು ನಿಜವಾಗಿಸುತ್ತಿದೆ.

ಡಾ. ಯು. ಬಿ. ಪವನಜ

(ಕೃಪೆ: ವಿಜಯ ಕರ್ನಾಟಕ)

ನೋಡಿ:
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೧
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೨
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೩
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೪
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೫

1 Response to ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ-೪

 1. vasigerappa.k

  ಬಿಟ್ಟು ಬಂದೆ ಬಿಟ್ಟು ಬಂದೆ ನಮ್ಮ ನೆಲವನು
  ಮಮತೆಯಿಂದ ಸಲಹಿದಂತ ತಾಯಿ ಮಡಿಲನು
  ತಿದ್ದಿ ತೀಡಿ ಬೆಳೆಸಿದಂತ ತಂದೆ ಮಾತನು
  ಅನ್ನ ಅಕ್ಕ ತೋರಿದಂತ ಪ್ರೀತಿ ನೆನಪನು ೧

  ನಮ್ಮ ನೆಲದ ಗಂಧ ಗಾಳಿ ಇಲ್ಲಿ ರುಚಿಸದು
  ಇವರು ತೋರ್ವ ಮಮತೆ ಪ್ರೀತಿ ಕ್ಷಣಿಕವಾದುದು
  ಅಲ್ಲಿ ಸಿಗುವ ಮಣ್ಣ ವಸುಧೆ ಇಲ್ಲಿ ಇಲ್ಲವೋ
  ಇಲ್ಲಿ ಇರುವ ಮಣ್ಣಿನಲ್ಲಿ ಪ್ರಣಯ ಇಲ್ಲವೋ ೨

  ನಮ್ಮ ಊರು ನಮ್ಮ ಜನ ಏನು ಚಂದವೋ
  ಬಡವನೂಟ ಬಾಳಿನಲ್ಲಿ ಸಿರಿಯ ಭಾಗ್ಯವೋ
  ಹರುಕ ಸೀರೆ ಮುರುಕ ಬಟ್ಟೆ ನಮ್ಮ ತಾಯಿಯೋ
  ಆದರವಳು ನಮ್ಮ ಮನಸ ಪ್ರೇಮದಾಯಿಯೋ ೩

  ಎಲ್ಲ ಇದೆ ಇಲ್ಲಿ ಎಂಬ ಪೊಳ್ಳು ಮನಸಿದೋ
  ಹಣದ ಮುಂದೆ ಮನವು ಮಾನ ಮಾರಿಕೊಂಬುದೋ
  ಅನುರಾಗದ ಸೆಲೆಗೆ ಇಲ್ಲಿ ಬೆಲೆಯೆ ಇಲ್ಲವೋ
  ಇದ್ದರೂನು ತಾಯ್ಗೆ ಬಟ್ಟೆ ಹರುಕೆ ಚಂದವೋ ೪

  ಏನೆ ಆದ್ರೂ ನಮ್ಮ ತಾಯ್ಗೆ ನಾವೆ ಮಕ್ಕಳು
  ನಿಂದಿಸಿದರೂ ಸಲಹುತಿಹುದು ಅವಳ ಹೊಕ್ಕಳು
  ನಮ್ಮ ನೀರು ನಮ್ಮ ಗಾಳಿ ಗಂಧದ ಗುಡಿಯೋ
  ಇರುವುದೆಲ್ಲ ಬಿಟ್ಟು ಇಲ್ಲಿ ಅಲ್ಲಿಗೆ ನಡಿಯೋ ೫

Leave a Reply