ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ – ೨

ಒಂದು ಸೊನ್ನೆ – ೬ (೨೯-೦೮-೨೦೦೩)

ಶಿಷ್ಟತೆಯ ಚೌಕಟ್ಟಿನಲ್ಲಿ ನುಡಿ

ಒಂದು ಗಣಕದಿಂದ ಇನ್ನೊಂದು ಗಣಕಕ್ಕೆ ಮಾಹಿತಿಯ ಸರಿಯಾದ ಸಂವಹನೆ ಆಗಬೇಕಾದರೆ ಈ ಗಣಕಗಳು ಮಾಹಿತಿ ಸಂವಹನೆಯಲ್ಲಿ ಶಿಷ್ಟತೆಯನ್ನು ಅಳವಡಿಸಿಕೊಳ್ಳಬೇಕು. ಇದು ಕನ್ನಡ ಭಾಷೆಯ ಮಾಹಿತಿ ಸಂವಹನೆಗೂ ಅನ್ವಯಿಸುತ್ತದೆ. ಗಣಕಗಳಲ್ಲಿ ಕನ್ನಡದ ಅಳವಡಿಕೆ ಮತ್ತು ಬಳಕೆ ಬಗ್ಗೆ ವಿವರವಾದ ಲೇಖನಮಾಲೆಯ ಎರಡನೆಯ ಕಂತು.

ಅಂಗಡಿಗೆ ಹೋಗಿ ಒಂದು ಬಲ್ಬ್ ಬೇಕೆಂದು ಕೇಳಿ ನೋಡಿ. ಅಂಗಡಿಯಾತ ನಿಮ್ಮ ಮನೆಯಲ್ಲಿ ಯಾವ ಕಂಪೆನಿಯ ಹೋಲ್ಡರ್ ಇದೆ ಎಂದು ಕೇಳುವುದಿಲ್ಲ. ಯಾಕೆಂದರೆ ಯಾವ ಕಂಪೆನಿಯ ಹೋಲ್ಡರ್ ಆದರೇನು, ಎಲ್ಲ ಬಲ್ಬ್‌ಗಳು ಎಲ್ಲ ಹೋಲ್ಡರ್‌ಗಳಲ್ಲಿ ಕೆಲಸ ಮಾಡುತ್ತವೆ. ಈಗ ಕನ್ನಡ ಮತ್ತು ಗಣಕ ಕ್ಷೇತ್ರಕ್ಕೆ ಬನ್ನಿ. ನಿಮ್ಮ ಮನೆಯ ಗಣಕದಲ್ಲಿ ಕಡತವೊಂದನ್ನು ತಯಾರಿಸಿ ಫ್ಲಾಪಿಯಲ್ಲಿ ತುಂಬಿಸಿ ಅದರ ಲೇಸರ್ ಮುದ್ರಣಕ್ಕೆ ಯಾವುದಾದರು ಡಿ.ಟಿ.ಪಿ. ಕೇಂದ್ರಕ್ಕೆ ತೆಗೆದುಕೊಂದು ಹೋಗಿ. ಆತ ನಿಮ್ಮನ್ನು ಖಂಡಿತವಾಗಿ ಕೇಳುವ ಪ್ರಶ್ನೆಯೆಂದರೆ “ನೀವು ಯಾವ ತಂತ್ರಾಂಶ ತಯಾರಿಸಿ ಕಡತವನ್ನು ತಯಾರು ಮಾಡಿದ್ದೀರಾ?”. ನೀವು ಬಳಸಿದ ತಂತ್ರಾಂಶ ಆತನ ಗಣಕದಲ್ಲಿ ಇಲ್ಲದಿರುವ ಸಂಭವವೇ ಹೆಚ್ಚು. ಕನ್ನಡದ ಯಾವುದೇ ತಂತ್ರಾಂಶವನ್ನು ಬಳಸಿ ತಯಾರಿಸಿದ ಕಡತವನ್ನು ಕನ್ನಡದ ಯಾವುದೇ ತಂತ್ರಾಂಶದಲ್ಲಿ ಓದಲು ಸಾಧ್ಯವಿರಬೇಕಲ್ಲವೇ, ಇಂಗ್ಲೀಷ್ ಭಾಷೆಯಲ್ಲಿದ್ದಂತೆ, ಎಂದು ನಿಮಗೆ ಅನ್ನಿಸಿರಬೇಕಲ್ಲವೇ? ಆದರೆ ನಿಜ ಪರಿಸ್ಥಿತಿ ಹಾಗೇನೂ ಇಲ್ಲ.

ಗಣಕದ ಮೂಲ ಭಾಷೆ ಕನ್ನಡವೂ ಅಲ್ಲ, ಇಂಗ್ಲೀಷ್ ಅಂತು ಅಲ್ಲವೇ ಅಲ್ಲ. ಗಣಕವು ಆಂತರಿಕವಾಗಿ ಬಳಸುವ ಭಾಷೆ ಒಂದು ಮತ್ತು ಸೊನ್ನೆ. ಆದುದರಿಂದಲೇ ಗಣಕಕ್ಕೆ ಡಿಜಿಟಲ್ ಕಂಪ್ಯೂಟರ್ ಎಂಬ ಹೆಸರಿರುವುದು. ಇಂಗ್ಲೀಷ್ ಭಾಷೆಯ “k” ಆಗಲಿ, ಕನ್ನಡದ “ಕ” ಆಗಲಿ, ಕೊನೆಗೆ ಅಂಕೆಗಳಾಗಿ ಮಾರ್ಪಟ್ಟು ಗಣಕದಲ್ಲಿ ಶೇಖರಣೆಗೊಳ್ಳುತ್ತವೆ. ಇಂಗ್ಲೀಷ್ ಭಾಷೆ ಮತ್ತು ಭಾರತೀಯ ಭಾಷೆಗಳನ್ನು ಗಣಕದಲ್ಲಿ ಬಳಸುವಲ್ಲಿ ಒಂದು ಮುಖ್ಯ ವ್ಯತ್ಯಾಸವಿದೆ. ಇಂಗ್ಲೀಷಿನ ಯಾವುದೇ ಅಕ್ಷರವನ್ನು ತೆಗೆದುಕೊಳ್ಳಿ. ಅದನ್ನು ಗಣಕದಲ್ಲಿ ಸಂಗ್ರಹಿಸಿಡಲು ಮತ್ತು ತೋರಿಸಲು ಒಂದೇ ಸಂಕೇತ ಸಾಕಾಗುತ್ತದೆ. ಭಾರತೀಯ ಭಾಷೆಗಳ ಪರಿಸ್ಥಿತಿ ಬೇರೆ. “ಕ” ಎನ್ನುವ ಅಕ್ಷರವನ್ನು ಸಂಗ್ರಹಿಸಿಡಲು ಒಂದು ಸಂಕೇತ ಸಾಕು. ಆದರೆ “ಕ” ಎಂಬ (ಅಕ್ಷರದ) ಚಿತ್ರ ಮೂಡಿಬರಲು ಮತ್ತು ಎಂಬ ಎರಡು ಅಕ್ಷರಭಾಗಗಳ (glyph) ಜೋಡಣೆಯಾಗಬೇಕು. ಈ ಅಕ್ಷರಭಾಗಗಳು ಒಟ್ಟು ಸೇರಿ ಅಕ್ಷರಶೈಲಿ (font) ಆಗುತ್ತದೆ. ಇಂಗ್ಲೀಷ್ ಭಾಷೆಗೆ ಈ ಸಮಸ್ಯೆ ಇಲ್ಲ. “k” ಎನ್ನುವ ಅಕ್ಷರವನ್ನು ಸಂಗ್ರಹಿಸಿಡಲು ಒಂದು ಸಂಕೇತಾಕ್ಷರ ಸಾಕು. ಇದನ್ನು ತೋರಿಸಲು ಒಂದು ಅಕ್ಷರಭಾಗ ಸಾಕು. ಆದುದರಿಂದ ಇಂಗ್ಲೀಷ್ ಭಾಷೆಯಲ್ಲಿ ಸಂಗ್ರಹಣೆಯ ಸಂಕೇತ ಮತ್ತು ಅಕ್ಷರಶೈಲಿಯ ಅಕ್ಷರಭಾಗಗಳ ಸಂಕೇತ ಒಂದೇ ಆಗಿರುತ್ತದೆ.

ಭಾರತೀಯ ಭಾಷೆಗಳಿಗೆ ಎರಡು ರೀತಿಯ ಸಂಕೇತಗಳು ಬೇಕು. ಸಂಗ್ರಹಣೆಗೆ ಒಂದು, ತೋರಿಕೆಗೆ ಇನ್ನೊಂದು. ಮಾಹಿತಿ ಸಂಗ್ರಹಣೆಗೆ ಭಾರತೀಯ ಭಾಷೆಗಳಿಗೆ ಒಂದು ಶಿಷ್ಟತೆ ಇದೆ. ಇದನ್ನು ಸಿದ್ಧಪಡಿಸಿ ಕಾನೂನುಬದ್ಧಗೊಳಿಸಿದವರು ಕೇಂದ್ರ ಸರಕಾರದವರು. ಇದನ್ನು ಇಸ್ಕಿ (ISCII = Indian Script Code for Information Interchange) ಎಂದು ಕರೆಯುತ್ತಾರೆ.

ಹಲವು ವರ್ಷಗಳಿಂದ ಕನ್ನಡ ಮತ್ತು ಇತರ ಭಾಷೆಯ ಡಿ.ಟಿ.ಪಿ. ತಂತ್ರಾಂಶಗಳನ್ನು ತಯಾರಿಸಿ ಮಾರುತ್ತಿದ್ದ ಎಲ್ಲ ಕಂಪೆನಿಗಳು ಅಕ್ಷರಶೈಲಿಗಳಿಗೆ (ಅವುಗಳಲ್ಲಿ ಬಳಸಿರುವ ಅಕ್ಷರಭಾಗಗಳಿಗೆ) ತಮ್ಮದೇ ಸಂಕೇತವನ್ನು ರೂಪಿಸಿಕೊಂಡಿದ್ದರು. ಇವುಗಳಲ್ಲಿ ಒಮ್ಮತವಿರಲಿಲ್ಲ. ಅದೂ ಅಲ್ಲದೆ ಯಾವ ತಂತ್ರಾಂಶವೂ ಬೆರಳಚ್ಚು ಮಾಡಿದ ಮಾಹಿತಿಯನ್ನು ಸಂಗ್ರಹಣೆಯ ಸಂಕೇತಗಳಿಗೆ (ಇಸ್ಕಿಗೆ) ಮಾರ್ಪಾಡು ಮಾಡಿ ಸಂಗ್ರಹಿಸಿಡುವ ಸವಲತ್ತನ್ನು ನೀಡುತ್ತಿರಲಿಲ್ಲ. ಎಲ್ಲ ತಂತ್ರಾಂಶಗಳು ಬೆರಳಚ್ಚು ಮಾಡಿದ ಮಾಹಿತಿಯನ್ನು ಅಕ್ಷರಶೈಲಿಯ ಸಂಕೇತಗಳಲ್ಲೇ ಸಂಗ್ರಹಿಸಿಡುತ್ತಿದ್ದವು. ಇದರಿಂದಾಗಿ ಒಂದು ತಂತ್ರಾಂಶವನ್ನು ಬಳಸಿ ತಯಾರಿಸಿದ ಮಾಹಿತಿಯನ್ನು ಇನ್ನೊಂದು ತಂತ್ರಾಂಶದಲ್ಲಿ ಓದಲು ಆಗುತ್ತಿರಲಿಲ್ಲ. ಪ್ರತಿಯೊಬ್ಬ ತಂತ್ರಾಂಶ ತಯಾರಕನೂ ಮಾಹಿತಿಯನ್ನು ಅಕ್ಷರಶೈಲಿ ಮತ್ತು ಇಸ್ಕಿಗಳಿಗೆ ಪರಸ್ಪರ ಬದಲಾವಣೆ ಮಾಡುವ ಸವಲತ್ತನ್ನು ನೀಡಿದ್ದರೆ ಯಾವ ಸಮಸ್ಯೆಯೂ ಇರುತ್ತಿರಲಿಲ್ಲ. ಒಂದು ತಂತ್ರಾಂಶದಲ್ಲಿ ಬೆರಳಚ್ಚು ಮಾಡಿ ಅದನ್ನು ಇಸ್ಕಿಗೆ ಪರಿವರ್ತಿಸಿ ನಂತರ ಅದನ್ನು ಇನ್ನೊಂದು ತಂತ್ರಾಂಶದಲ್ಲಿ ಓದಿ ಆ ತಂತ್ರಾಂಶದ ಅಕ್ಷರಶೈಲಿಗೆ ಪರಿವರ್ತಿಸಿ ನೋಡಬಹುದಿತ್ತು. ಆದರೆ ನಿಜ ಸ್ಥಿತಿ ಹಾಗಿರಲಿಲ್ಲ.

ಈ ಸಮಸ್ಯೆಯನ್ನು ಮನಗಂಡ ಕರ್ನಾಟಕ ಸರಕಾರವು ಗಣಕಗಳಲ್ಲಿ ಕನ್ನಡ ಬಾಷೆಯ ಅಳವಡಿಕೆಗೆ ಒಂದು ಶಿಷ್ಟತೆಯನ್ನು ರೂಪಿಸಲು ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ಕನ್ನಡದ ಅಕ್ಷರಭಾಗಗಳಿಗೆ (font glyph set) ಒಂದು ಶಿಷ್ಟ ಸಂಕೇತ ಹಾಗು ಸಮಾನ ಕೀಲಿಮಣೆ ವಿನ್ಯಾಸವನ್ನು ಸಿದ್ಧಪಡಿಸಿತು. ಸರಕಾರದ ಈ ಶಿಷ್ಟತೆಗಳಿಗನುಗುಣವಾಗಿ ಸರಕಾರವೇ ಕನ್ನಡ ಆಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಬರಗೂರು ರಾಮಚಂದ್ರಪ್ಪನವರ ವಿಶೇಷ ಆಸಕ್ತಿಯಿಂದ ಕನ್ನಡ ಗಣಕ ಪರಿಷತ್ತಿನ ಸಹಯೋಗದಿಂದ “ನುಡಿ” ಹೆಸರಿನ ಸಮಾನ ತಂತ್ರಾಂಶವೊಂದನ್ನು ತಯಾರಿಸಿ ಬಿಡುಗಡೆ ಮಾಡಿತು. ಈ ತಂತ್ರಾಂಶ ಕನ್ನಡಿಗರಿಗೆ ಉಚಿತವಾಗಿ ದೊರೆಯತ್ತದೆ. ಕರ್ನಾಟಕ ಸರಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಂತರಜಾಲ ತಾಣದಲ್ಲಿ (www.bangaloreit.com) ಇದು ಲಭ್ಯ. ಯಾರು ಬೇಕಾದರು ಇದನ್ನು ಪ್ರತಿ ಮಾಡಿಕೊಂಡು ಉಪಯೋಗಿಸಬಹುದು.

“ನುಡಿ”ಯಲ್ಲಿ ಕನ್ನಡದ ಕೀಲಿಮಣೆ ತಂತ್ರಾಂಶ (keyboard driver), ಅಕ್ಷರಶೈಲಿ ಮತ್ತು ಗಣಕ ಕ್ರಮವಿಧಿ ತಯಾರಕರಿಗೆ ತಂತ್ರಾಂಶ ತಯಾರಿಯ ಸವಲತ್ತುಗಳನ್ನು (software development toolkit) ನೀಡಲಾಗಿದೆ. “ನುಡಿ” ಉಪಯೋಗಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಆಧಾರಿತ ಕ್ರಮದಲ್ಲಿ ಮಾಹಿತಿಯನ್ನು ಅಕಾರಾದಿಯಾಗಿ ವಿಂಗಡಣೆ ಮಾಡಬಹುದು. ಭಾರತೀಯ ಭಾಷೆಗಳಲ್ಲೇ ಪ್ರಪ್ರಥಮ ಬಾರಿಗೆ ಈ ರೀತಿಯ ಸೌಕರ್ಯವೊಂದನ್ನು ನೀಡಲಾಗುತ್ತಿದೆ. ಭಾರತದ ಯಾವುದೇ ರಾಜ್ಯ ಸರಕಾರವು ತನ್ನದೇ ಆದ ಮಾದರಿ ತಂತ್ರಾಂಶವನ್ನು ಹೊಂದಿರುವುದೂ ಇದೇ ಪ್ರಥಮ. “ನುಡಿ”ಯನ್ನು ಉಪಯೋಗಿಸಿ ಕನ್ನಡದಲ್ಲಿ ದತ್ತಸಂಚಯಗಳ (databases) ನಿರ್ಮಾಣ, ದತ್ತ ಸಂಸ್ಕರಣೆಯ ಕ್ರಮವಿಧಿಗಳ ರಚನೆ (database programming) ಸಾಧ್ಯ.

ನುಡಿ ತಂತ್ರಾಂಶವನ್ನು ಬಳಸಿ ಮಾಹಿತಿಯನ್ನು ಅಕ್ಷರಶೈಲಿಯಿಂದ ಸಂಗ್ರಹಣೆಯ ಸಂಕೇತ ಅಂದರೆ ಇಸ್ಕಿಗೆ ಬದಲಿಸಬಹುದು. ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ಇಸ್ಕಿಯನ್ನು ಓದಬಲ್ಲ ಇತರ ತಂತ್ರಾಂಶವನ್ನು ಬಳಸಿ ಓದಬಹುದು. ಸಿಡಾಕ್‌ನವರ ಐ.ಎಸ್.ಎಂ. ತಂತ್ರಾಂಶ ಮತ್ತು ಮೈಕ್ರೋಸಾಫ್ಟ್‌ನವರ ಆಫೀಸ್ ಎಕ್ಸ್‌ಪಿಗಳಲ್ಲಿ ಇಸ್ಕಿ ಮಾಹಿತಿಯನ್ನು ಓದುವ ಸವಲತ್ತನ್ನು ನೀಡಿದ್ದಾರೆ.

ಜನಪ್ರಿಯತೆಯಲ್ಲಿ ಮೊದಲ ಸ್ಥಾನದಲ್ಲಿರುವ ಬರಹ ತಂತ್ರಾಂಶದ ೫.೦ನೇ ಆವೃತ್ತಿಯಲ್ಲಿ ಶಿಷ್ಟತೆಯನ್ನು ಅಳವಡಿಸಲಾಗಿದೆ. ಅಂದರೆ ಬರಹದಲ್ಲಿ ತಯಾರಿಸಿದ ಕಡತವನ್ನು ನುಡಿಯಲ್ಲೂ, ನುಡಿಯಲ್ಲಿ ತಯಾರಿಸಿದ ಕಡತವನ್ನು ಬರಹದಲ್ಲೂ ಓದಬಹುದು.

ಶಿಷ್ಟತೆಯಲ್ಲಿ ಮುಖ್ಯವಾಗಿ ಮೂರು ವಿಧ -ಕೀಲಿಮಣೆಯ ವಿನ್ಯಾಸ, ಮಾಹಿತಿ ಸಂಗ್ರಹಣೆಯ ಸಂಕೇತಗಳು ಮತ್ತು ಅಕ್ಷರಶೈಲಿಯ ಅಕ್ಷರಭಾಗಗಳ ಸಂಕೇತಗಳು. ಮಾಹಿತಿ ಸಂಗ್ರಹಣೆಗೆ ಇಸ್ಕಿ ಮತ್ತು ಯುನಿಕೋಡ್ ಇವೆ. ಯುನಿಕೋಡ್ ಬಗ್ಗೆ ಪ್ರತ್ಯೇಕ ಲೇಖನವನ್ನು ಮುಂದಿನ ಸಂಚಿಕೆಗಳಲ್ಲಿ ನೀಡಲಾಗುವುದು. ಸರಕಾರವು ಏಕರೂಪ ಕೀಲಿಮಣೆಯ ವಿನ್ಯಾಸವನ್ನು ನಿಗದಿಪಡಿಸಿ ನುಡಿ ತಂತ್ರಾಂಶದಲ್ಲಿ ಅಳವಡಿಸಿದೆ. ಕೀಲಿಮಣೆಯ ವಿನ್ಯಾಸವನ್ನು ಆಯಾ ಬಳಕೆದಾರರಿಗೆ ಬಿಟ್ಟರೆ ತಪ್ಪೇನಿಲ್ಲ. ನಮಗೆ ಮುಖ್ಯವಾಗಿ ಬೇಕಿರುವುದು ಮಾಹಿತಿಯ ಸಂಗ್ರಹಣೆ ಮತ್ತು ಸಂವಹನೆಗೆ ಶಿಷ್ಟತೆ.

ಡಾ. ಯು. ಬಿ. ಪವನಜ
(ಕೃಪೆ: ವಿಜಯ ಕರ್ನಾಟಕ)

ನೋಡಿ:
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೧
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೨
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೩
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೪
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೫

Leave a Reply