ಜಾಲಸೇವೆಯೋ ಸೇವೆಯ ಬಲೆಯೋ?

[ವಿಜಯ ಕರ್ನಾಟಕ ಪತ್ರಿಕೆಯ “ಒಂದು ಸೊನ್ನ” ಅಂಕಣದಲ್ಲಿ ಪ್ರಕಟವಾದ ಲೇಖನ]

ಒಂದು ಸೊನ್ನೆ – ೪ (೧೮-೦೭-೨೦೦೩)

ಅಂತರಜಾಲವೊಂದು ಅಗಾಧ ಮಾಹಿತಿಯ ಭಂಡಾರ. ಅಂತರಜಾಲದ ಸಂಪರ್ಕ ಪ್ರತಿಯೊಬ್ಬನಿಗೂ ಅಗತ್ಯವಾಗುತ್ತಿದೆ. ಭಾರತಕ್ಕೆ ಅಂತರಜಾಲ ಸಂಪರ್ಕ ೧೯೯೦ರಲ್ಲಿ ಕಾಲಿಟ್ಟಿತು. ಪ್ರಾರಂಭದಲ್ಲಿ ವೈeನಿಕ ಪ್ರಯೋಗಶಾಲೆಗಳಿಗೆ ಮಾತ್ರ ಈ ಸೌಲಭ್ಯ ದೊರೆಯಿತು. ೧೯೯೫ರಲ್ಲಿ ವಿದೇಶ ಸಂಚಾರ ನಿಗಮ ನಿಯಮಿತದ (ವಿಎಸ್‌ಎನ್‌ಎಲ್, ವಿಸನಿನಿ) ಮೂಲಕ ಜನಸಾಮಾನ್ಯರಿಗೂ ಅಂತರಜಾಲ ಸಂಪರ್ಕ ದೊರೆಯುವಂತಾಯಿತು. ವಿಸನಿನಿ ಭಾರತ ಸರಕಾರದ ನಿಯಂತ್ರಣಕ್ಕೊಳಪಟ್ಟ ಕಂಪೆನಿ. ಸರಿಯಾಗಿ ನೋಡಿದರೆ ಸರಕಾರದ್ದೇ ಒಂದು ವಿಭಾಗ. ಆರಂಭದಲ್ಲಿ ಅದಕ್ಕೆ ೪ ಪ್ರಮುಖ ನಗರಗಳಲ್ಲಿ ಮಾತ್ರ ಅಂತರಜಾಲ ಸಂಪರ್ಕ ನೀಡಲು ಅನುಮತಿ ನೀಡಲಾಗಿತ್ತು. ಇದಕ್ಕೆ ಅನುಮತಿ ನೀಡಿದ್ದು ೧೮೮೫ರ ಭಾರತ ದೂರಸಂಪರ್ಕ ಕಾನೂನಿನಡಿ. ಅಂದರೆ ಬ್ರಿಟಿಷರ ಕಾಲದ ಕಾನೂನಿನ ಪ್ರಕಾರ. ಈ ಕಾನೂನನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಅರ್ಥೈಸಿದ ವಿಸನಿನಿ ಬೇರೆ ಯಾರೂ ಅಂತರಜಾಲ ಸಂಪರ್ಕ ಸೇವೆ ನೀಡದಂತೆ ವರ್ಷಗಳ ಕಾಲ ನೋಡಿಕೊಂಡಿತು. ಈ ಏಕಸ್ವಾಮ್ಯದಿಂದಾಗಿ ಭಾರತದಲ್ಲಿ ಅತಿ ಕೆಟ್ಟ ಅಂತರಜಾಲ ಸಂಪರ್ಕ ವ್ಯವಸ್ಥೆ ಇತ್ತು.

ಅಂತರಜಾಲ ಸಂಪರ್ಕ ಸೇವೆ (ISP = Internet Service Provider) ನೀಡಲು ವಿಸನಿನಿಗೆ ಇದ್ದ ಏಕಸ್ವಾಮ್ಯವನ್ನು ಭಾರತ ಸರಕಾರ ೧೯೯೮ ಅಕ್ಟೋಬರ್ ತಿಂಗಳಲ್ಲಿ ಕಿತ್ತುಹಾಕಿತು. ಹಲವು ಖಾಸಗಿ ಕಂಪೆನಿಗಳು ಈ ಹೊಸ ಉದ್ದಿಮೆಗೆ ಧುಮುಕಿದವು. ಹಲವು ಕಂಪೆನಿಗಳು ಅಷ್ಟೇ ರಭಸದಲ್ಲಿ ಮುಳುಗಿಯೂ ಹೋದವು. ಈ ಕಂಪೆನಿಗಳಿಗೆ ವಿಸನಿನಿಗೆ ಇದ್ದ ಸರಕಾರೀ ರಕ್ಷಣೆಯ ವಿರುದ್ಧ ಸ್ಪರ್ಧಿಸಿ ಗೆಲ್ಲಲು ಆಗಲಿಲ್ಲ. ಉತ್ತಮ ಶ್ರೀಮಂತ ಕಂಪೆನಿಗಳ ಸಹಾಯಹಸ್ತ ಇದ್ದ ದೊಡ್ಡ ದೊಡ್ಡ ಕಂಪೆನಿಗಳು ಬದುಕುಳಿದವು. ಖಾಸಗಿ ಕಂಪೆನಿಗಳ ಸ್ಪರ್ಧೆಯಿಂದಾಗಿ ಅಂತರಜಾಲ ಸಂಪರ್ಕ ಸೇವೆ ಭಾರತದಲ್ಲಿ ಹಿಂದಿದ್ದುದಕ್ಕಿಂತ ಸುಧಾರಣೆಗೊಂಡವು. ವಿಸನಿನಿ ಮಾತ್ರವೇ ಇದ್ದಾಗ ಎಷ್ಟು ಸಲ ಫೋನ್ ಡಯಲ್ ಮಾಡಿದರೂ ಸಂಪರ್ಕವೇ ಸಿಗುತ್ತಿರಲಿಲ್ಲ. ಈಗ ಸ್ಥಿತಿ ಹಾಗಿಲ್ಲ. ಹಿಂದಿನದಕ್ಕೆ ಹೋಲಿಸಿದರೆ ಪರಿಸ್ಥಿತಿ ಉತ್ತಮಗೊಂಡಿದೆಯೆಂದೇ ಹೇಳಬಹುದು. ಆಗಿನ ಕೆಟ್ಟ ಕಾಲವನ್ನು ನೆನಪಿಸಿಕೊಳ್ಳುವ ಮಂದಿ ಈಗಿನ ಕಾಲ ಚೆನ್ನಾಗಿದೆ ಎಂದೇ ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ.

ಸಮಯ ಕಳೆದಂತೆ ಅಂತರಜಾಲ ಸಂಪರ್ಕಕ್ಕೆ ಕೊಡಬೇಕಾದ ಬೆಲೆಯೂ ಕಡಿಮೆಯಾಗಿದೆ. ಡಯಲ್‌ಅಪ್ ಸಂಪರ್ಕಕ್ಕೆ ೧೯೯೬ರಲ್ಲಿ ಗಂಟೆಗೆ ರೂ.೨೦ ಕೊಡಬೇಕಿತ್ತು. ಈಗ ಅದು ಗಂಟೆಗೆ ೫ ರಿಂದ ೧೦ ರೂ.ಗೆ ಇಳಿದಿದೆ. ಆದರೆ ಆಗಿನ ಕಾಲದಲ್ಲಿ ಲೋಕಲ್ ಕಾಲ್‌ಗೆ ಯಾವುದೇ ಸಮಯದ ಮಿತಿಯಿರುತ್ತಿರಲಿಲ್ಲ. ಅಂದರೆ ಒಬ್ಬ ಒಮ್ಮೆ ಅಂತರಜಾಲಕ್ಕೆ ಸಂಪರ್ಕವನ್ನು ಟೆಲಿಫೋನ್ ಮೂಲಕ ಪಡೆದು ಒಂದು ಘಂಟೆ ಕಾಲ ಬಳಸಿದರೆ ೨೧ ರೂ (೨೦+೧) ಮಾತ್ರ ಖರ್ಚಾಗುತ್ತಿತ್ತು. ಈಗ ಹಾಗಲ್ಲ. ೩ ನಿಮಿಷಕ್ಕೆ ಒಂದು ಕರೆಯಂತೆ ಮೀಟರ್ ಓಡುತ್ತಿರುತ್ತದೆ. ಒಂದು ಘಂಟೆ ಅಂತರಜಾಲ ಬಳಸಿದರೆ ಟೆಲಿಫೋನ್ ಬಿಲ್ಲೇ ೨೪ ರೂ ಆಗಿರುತ್ತದೆ. ಅದರ ಮೇಲೆ ೧೦ ರೂ. ಒಟ್ಟು ೩೪ ರೂ. ಖರ್ಚಾಗಿರುತ್ತದೆ. ಭಾರತದಂತಹ ಬಡ ದೇಶಕ್ಕೆ ಘಂಟೆಗೆ ೩೪ ರೂ. ಕೂಡ ದುಬಾರಿಯೇ.

ಅಂತರಜಾಲ ಸಂಪರ್ಕ ಪಡೆಯಲು ಡಯಲ್‌ಅಪ್ ವಿಧಾನ ಹೆಚ್ಚಾಗಿ ಬಳಕೆಯಲ್ಲಿರುವ ವಿಧಾನ. ಇದು ಬಹು ಸರಳ. ಮನೆಯೆ ಗಣಕವನ್ನು ಮೋಡೆಮ್ ಮೂಲಕ ದೂರವಾಣಿಗೆ ಸಂಪರ್ಕ ಕಲ್ಪಿಸಿದರೆ ಆಯಿತು. ಜನಸಾಮಾನ್ಯರ ಕೈಗೆ ಎಟುಕುವಂತಹುದೂ ಹೌದು. ಅಂತರಜಾಲ ಸಂಪರ್ಕ ಪಡೆಯಲು ಇನ್ನೂ ಹಲವು ವಿಧಾನಗಳಿವೆ. ಲೀಸ್ ಲೈನ್, ಐ.ಎಸ್.ಡಿ.ಎನ್., ಡಿ.ಎಸ್.ಎಲ್. ಇತ್ಯಾದಿ. ಈ ಎಲ್ಲ ವಿಧಾನಗಳನ್ನು “ಇಳೆ” ಅಂಕಣದಲ್ಲಿ ಈಗಾಗಲೇ ವಿವರಿಸಲಾಗಿದೆ.

ಡಿ.ಎಸ್.ಎಲ್. ಒಂದು ಉತ್ತಮ ತಂತ್ರeನ. ಇದು ಇನ್ನೂ ಎಲ್ಲರಿಗೂ ದೊರೆಯುತ್ತಿಲ್ಲ. ಬೆಂಗಳೂರಿನಲ್ಲೂ ಕೆಲವು ಸೀಮಿತ ಜಾಗಗಳಲ್ಲಿ ಈ ಸೌಲಭ್ಯ ಇದೆ. ಇದರ ಮೂಲಕ ವೇಗದ ಸಂಪರ್ಕ (broadband connection) ಮತ್ತು ನಿರಂತರ ಸಂಪರ್ಕ ಸಾಧ್ಯ. ಇಲ್ಲೂ ಒಂದು ಮಿತಿಯನ್ನು ಈ ಸೇವೆ ನೀಡುವವರು ಹಾಕಿದ್ದಾರೆ. ಅದು ತಿಂಗಳಿಗೆ ಇಂತಿಷ್ಟು ಮಾಹಿತಿ ಪ್ರವಾಹ ಮಾತ್ರ ಸಾಧ್ಯ ಎಂದು. ೨೪ ಘಂಟೆ ಸಂಪರ್ಕದಲ್ಲಿದ್ದೂ ಮಾಹಿತಿ ಪ್ರವಾಹಕ್ಕೆ ಮಿತಿ ಹೇರುವುದು ವಿರೋಧಾಭಾಸವಲ್ಲವೇ? ಈ ಮಾಹಿತಿ ಪ್ರವಾಹದ ಲೆಕ್ಕದಲ್ಲಿ ನೀವು ಮಾಡುವ ತಾಣ ವೀಕ್ಷಣೆ, ಡೌನ್‌ಲೋಡ್ ಮಾಡುವ ಮಾಹಿತಿ ಜೊತೆ ಅಂತರಜಾಲದಲ್ಲಿರುವ ಯಾರಾದರೊಬ್ಬ ನಿಮ್ಮ ಗಣಕವನ್ನು ಪಿಂಗ್ ಮಾಡುವುದೂ ಸೇರಿರುತ್ತದೆ. ಪಿಂಗ್ ಮಾಡುವುದೆಂದರೆ ಅಂತರಜಾಲದಲ್ಲಿರುವ ಗಣಕವನ್ನು ಎಚ್ಚರವಾಗಿದ್ದೀಯಾ ಎಂದು ಇನ್ನೊಬ್ಬ ಕೇಳುವುದು. ಇನ್ನೊಬ್ಬ ನಿಮ್ಮ ಗಣಕವನ್ನು ಪಿಂಗ್ ಮಾಡುತ್ತಲೇ ಇದ್ದರೆ ನಿಮ್ಮ ಮೀಟರ್ ಓಡುತ್ತಲೇ ಇರುತ್ತದೆ. ನಿಮ್ಮದಲ್ಲದ ತಪ್ಪಿಗೆ ನೀವು ಬೆಲೆ ತೆರಬೇಕಾಗುತ್ತದೆ. ಇದರ ವಿರುದ್ಧ ಗ್ರಾಹಕರು ಪ್ರತಿಭಟಿಸಬೇಕಾಗಿದೆ.

ಭಾರತ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್., ಭಾಸನಿನಿ) ಒಂದು ಉತ್ತಮ ತಂತ್ರeನ ಹೊಂದಿದೆ. ಅದು ಡಯಾಸ್ (DIAS, Direct Internet Access Serice). ಇದು ಸಾಮಾನ್ಯ ದೂರವಾಣಿ ತಂತಿಯ ಮೂಲಕವೇ ವೇಗದ ಅಂತರಜಾಲ ಸಂಪರ್ಕ ಪಡೆಯುವ ವಿಧಾನ. ಇದರ ಮೂಲಕ ಅಂತರಜಾಲವನ್ನು ಸಂಪರ್ಕಿಸುವಾಗ ಟೆಲಿಫೋನ್ ಮೂಲಕ ಮಾತನಾಡಲೂ ಸಾಧ್ಯ. ಇದೂ ಒಂದು ನಿರಂತರ ಸಂಪರ್ಕ ಸೇವೆ. ೨೪ ಘಟೆಗಳ ಕಾಲ ಅಂತರಜಾಲ ಸಂಪರ್ಕದಲ್ಲಿರಬಹುದು. ಆದರೆ ಇದನ್ನು ಭಾಸನಿನಿ ಇನ್ನೂ ಎಲ್ಲರಿಗೆ ಕೊಡುತ್ತಿಲ್ಲ.

ಡಿ.ಎಸ್.ಎಲ್, ಡಯಾಸ್, ಇತ್ಯಾದಿ ಎಲ್ಲ ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಮಾತ್ರ ಲಭ್ಯವಿವೆ. ಅವುಗಳ ಬೆಲೆಪಟ್ಟಿಯೂ ಜನಸಾಮಾನ್ಯರಿಗೆ ಅನುಕೂಲಕರವಾಗಿಲ್ಲ. ಅಂದರೆ ಸಾಮಾನ್ಯ ಮಂದಿ ಡಯಲ್‌ಅಪ್ ಸಂಪರ್ಕಕ್ಕೇ ಶರಣು ಹೋಗಬೇಕು. ಈ ಡಯಲ್‌ಅಪ್ ಸಂಪರ್ಕ ಯಾವ ರೀತಿ ಇದೆ ಎಂಬುದನ್ನು ಗಮನಿಸೋಣ. ಹೆಸರಿಗೆ ಮೋಡೆಮ್ ಸೆಕೆಂಡಿಗೆ ೫೬೦೦೦ ಕಿಲೋಬಿಟ್ಸ್ ವೆರೆಗಿನ ವೇಗದಲ್ಲಿ ಸಂಪರ್ಕಗೊಳ್ಳುತ್ತದೆ. ಆದರೆ ನಿಜವಾದ ಮಾಹಿತಿ ಪ್ರವಾಹದ ವೇಗ ಇದಕ್ಕಿಂತ ಅತಿ ಕಡಿಮೆ ಇರುತ್ತದೆ. ಹಗಲು ಹೊತ್ತಿನಲ್ಲಂತೂ ಮಾಹಿತಿ ಹೆದ್ದಾರಿ ಹೋಗಿ ಕಾಲುದಾರಿಯಾಗಿರುತ್ತದೆ. ಹೆಚ್ಚಿನ ಐಎಸ್‌ಪಿಗಳು ರಾತ್ರಿ ಹೊತ್ತು ಅಂತರಜಾಲ ಸಂಪರ್ಕಕ್ಕೆ ಬಿಲ್ ಮಾಡುವುದಿಲ್ಲ. ಅಂತರಜಾಲ ಸಂಪರ್ಕಕ್ಕೆ ಟೆಲಿಫೋನ್ ಕರೆ ಕೂಡ ರಾತ್ರಿ ೧೦:೩೦ರ ನಂತರ ೬ ನಿಮಿಷಕ್ಕೆ ಒಂದು ಲೋಕಲ್ ಕಾಲ್ ಆಗಿರುತ್ತದೆ. ಇದರಿಂದಾಗಿ ರಾತ್ರಿ ೧೦:೩೦ರ ನಂತರ ಅದರಲ್ಲೂ ೧೧:೦೦ ಘಂಟೆಯಿಂದ ಸುಮಾರು ೧೨:೦೦ ಘಂಟೆಯ ವರೆಗೆ ಅಂತರಜಾಲ ಸಂಪರ್ಕ ಕೆಟ್ಟದಾಗಿರುತ್ತದೆ. ಭಾಸನಿನಿ, ವಿಸನಿನಿ, ಇತ್ಯಾದಿಗಳಲ್ಲಿ ಸಂಪರ್ಕ ಆಗಿರುತ್ತದೆ. ಆದರೆ ಯಾವ ಕೆಲಸ ಆಗುವುದಿಲ್ಲ. ಸುಮ್ಮನೆ ಮೀಟರ್ ಓಡುತ್ತಿರುತ್ತದೆ. ಇದೇ ಪರಿಸ್ಥಿತಿ ಹಗಲು ಹೊತ್ತು ಕೂಡ ಇರುತ್ತದೆ. ಕೆಲವೊಮ್ಮೆ ಮಾಹಿತಿಯ ಪ್ರವಾಹ ಸುಮಾರು ೨೦ ಸೆಕೆಂಡು ಇರುತ್ತದೆ. ನಂತರ ಸುಮಾರು ೯೦ ಸೆಕೆಂಡು ನಿದ್ದೆ ಹೊಡೆಯುತ್ತದೆ. ಹೀಗೆ ಆಗುತ್ತಲೇ ಇರುತ್ತದೆ. ಕೆಲವೊಮ್ಮೆ ಡಯಲ್ ಮಾಡಿದಾಗ ಮೋಡೆಮ್ ಸಂಪರ್ಕ ಆಗಿರುತ್ತದೆ ಆದರೆ ಅಂತರಜಾಲ ಸಂಪರ್ಕ ಆಗಿರುವುದಿಲ್ಲ. ಇದರಿಂದ ನಿಮ್ಮ ಟೆಲಿಫೋನ್ ಮೀಟರ್ ಓಡಿರುತ್ತದೆ.

ನೌವ್ (NOW) ಎಂಬ ಖಾಸಗಿ ಸಂಪರ್ಕ ಸೇವೆ ಚಿನ್ನಾಗಿದೆ ಎಂದು ಯಾರೋ ಹೇಳಿದರು. ಅವರ ಬಿಲ್ಲಿಂಗ್ ಟೆಲಿಫೋನ್ ಬಿಲ್ಲಿನಂತೆ, ಅಂದರೆ ತಿಂಗಳು ತಿಂಗಳು ಬಿಲ್ ಬರುತ್ತಿರುತ್ತದೆ. ಅಂತರಜಾಲದ ಅವರ ತಾಣದಲ್ಲಿ ಹೆಸರು ನೋದಾಯಿಸಿ ಸಂಪರ್ಕ ಪಡೆದೆ. ಎರಡು ದಿವಸದೊಳಗೆ ರೂ.೩೦೦ ಕೊಡಬೇಕಾಗಿತ್ತು. ಅದಕ್ಕೆ ಕ್ರೆಡಿಟ್ ಕಾರ್ಡ್ ಕೊಟ್ಟೆ. ಆದರೆ ಅವರು ಕ್ರೆಡಿಟ್ ಕಾರ್ಡ್ ಬ್ಯಾಂಕಿನಿಂದ ಹಣ ಪಡೆಯಲು ಇನ್ನೆರಡು ದಿನ ಮಾಡಿದರು. ಆ ಸಮಯದಲ್ಲಿ ನನ್ನ ಸಂಪರ್ಕವನ್ನು ಸ್ಥಗಿತಗೊಳಿಸಿದ್ದರು. ಹಾಗಿದ್ದರೆ ಕ್ರೆಡಿಟ್ ಕಾರ್ಡ್ ಮತ್ತು ಆನ್‌ಲೈನ್ ಹಣ ಪಾವತಿ ಎಂಬ ಮಾತಿನ ಅರ್ಥವೇನಾಯಿತು? ಚೆಕ್ ಮೂಲಕ ಹಣ ಕೊಟ್ಟಂತೆಯೇ ಆಯಿತು. ನೇರವಾಗಿ ಆನ್‌ಲೈನ್ ಮೂಲಕ ಬ್ಯಾಂಕಿನಿಂದ ಹಣ ಪಡೆಯುವ ವ್ಯವಸ್ಥೆ ಅವರಲ್ಲಿಲ್ಲ. ಎರಡು ದಿನಗಳ ಕಾಲ ನನಗೆ ಕಳುಹಿಸಿ ಇಮೈಲ್‌ಗಳೆಲ್ಲ ಕಳುಹಿಸಿದವರಿಗೆ ವಾಪಾಸಾಗಿತ್ತು. ಇದು ತಪ್ಪು.

ಅಂತರಜಾಲ ಸಂಪರ್ಕ ಸರಿಯಿಲ್ಲದಿರುವುದು ದಿನಿನಿತ್ಯದ ಸಂಗತಿಯಾಗಿದೆ. ಹೆಚ್ಚಿನ ಮಂದಿ ಅಂತರಜಾಲ ಬಳಕೆದಾರರರು ತಮ್ಮ ಮೋಡೆಮ್ ಅಥವಾ ಗಣಕದಲ್ಲೇ ಏನೋ ದೋಷವಿದೆ, ಅಂತರಜಾಲ ಸಂಪರ್ಕ ಸೇವೆಯಲ್ಲಿ ಅಲ್ಲ ಎಂದುಕೊಂಡು ಸುಮ್ಮನಿರುತ್ತಾರೆ. ಅಂತರಜಾಲ ಸಂಪರ್ಕ ಸೇವೆ ಬಳಕೆದಾರರು ಸಂಘಟಿತರಾಗಿಯೂ ಇಲ್ಲ. ಇದು ತಪ್ಪಬೇಕು. ಎಲ್ಲ ಬಳಕೆದಾರರು ಸಂಘಟಿತರಾಗಿ ಐಎಸ್‌ಪಿಗಳನ್ನು ತರಾಟೆಗೆ ತೆಗೆದುಕೊಳ್ಳಬೇಕು. ಇದಕ್ಕೆ ಇದೀಗ ಸಕಾಲ.

————–
೧೮-೧೧-೨೦೦೫

ಇತ್ತೀಚೆಗೆ ಹೆಚ್ಚಿನ ಐಎಸ್‌ಪಿಗಳು ತಮ್ಮ ದರಗಳನ್ನು ಕಡಿಮೆ ಮಾಡಿದ್ದಾರೆ. ಆದರೂ ಭಾರತೀಯ ಜೀವನಮಟ್ಟಕ್ಕೆ ಹೋಲಿಸಿದರೆ ಇಂದಿಗೂ ಅಂತರಜಾಲ ಸಂಪರ್ಕ ನಮ್ಮ ದೇಶದಲ್ಲಿ ದುಬಾರಿಯೇ. ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಈಗ ಬ್ರಾಡ್‌ಬ್ಯಾಂಡ್ ಸಂಪರ್ಕವೂ ದೊರೆಯುತ್ತಿದೆ. ಅವುಗಳ ಬಗ್ಗೆ ಒಂದು ಪ್ರತ್ಯೇಕ ಲೇಖನ ಬರೆಯಬೇಕಾಗುತ್ತದೆ. ಯಾರಾದರೂ ಅನುಭವಿಸಿದವರು ಬರೆಯುತ್ತೀರಾ?

ಡಾ. ಯು. ಬಿ. ಪವನಜ

Leave a Reply