Press "Enter" to skip to content

೧೦ ವರ್ಷದ ನಂತರ ಹಳ್ಳಿಯಲ್ಲಿ ಕಂಡ ಹುಡುಗಿಯರು.

 

 ೧೦ ವರ್ಷದ ನಂತರ ಹಳ್ಳಿಯಲ್ಲಿ ಕಂಡ ಹುಡುಗಿಯರು.
ಶ್ರೀ. ಎಚ್.ಎಸ್. ವೆಂಕಟೇಶ ಮೂರ್ತಿ.

ನನ್ನ ಕಣ್ಮುಂದೆಯೇ ಆಟಾಡಿಕೊಂದಿದ್ದ
ಹುಡುಗಿಯರು ಈಗ ಹೆಂಗಸರು. ಕಣ್ಣಿನ ಸುತ್ತ
ಕಪ್ಪು ಬಳೆ. ಒಳಸರಿದ ಕೆನ್ನೆ. ಮೊಲೆಗಳ ಜೋಲು.
ತಕ್ಷಣವೇ ಸೆರಗೆಳೆದು ನಾಚಿ ತುಳುಕುವ ಬಿಂಕ
ಎಲ್ಲಿ ಹೋಯಿತೋ ? ನನ್ನ ಎದುರೆ ಸಾಂಗೋಪಾಂಗ
ಹರಿದ ಕುಪ್ಪಸದಿಂದ ಹೊರಗೆಳೆದು ಮೂಳೆಮೈ
ಮಗುವಿಗೂಡಿದರು. ಕಣ್ಣಲ್ಲಿ ತಾಯ್ತನದೊಂದು
ಸಂತ್ರುಪ್ತ ಭಾವವೋ…ಬಡತನವು ಕರುಣಿಸಿದ
ನಿರ್ಭಾವವೋ ..? ಇವರೆ ? ಇವರೆ  ಆ ಹುಡುಗಿಯರು ?
ಕಣ್ಣಲ್ಲಿ ಮಿಂಚಿ. ಕೆನ್ನೆಯಲ್ಲಷ್ಟು ಕೆಂಪಾಗಿ
ಸರಿದು ಕಂಬದ ಹಿಂದೆ ಕಿವಿಯಾಗಿ ನಿಂತವರು ?
ಕೊಟ್ಟ ಹಾಲನು ಕುಡಿದು ಹೋಗಿಬರಲೇ ಎಂದೆ.

ಕನ್ನಡಕ ವಿಟ್ಟು ..ಮೆಲ್ಲನೆ ಮೆಟ್ಟಿಲನ್ನಿಳಿದು..
ಏದುಸಿರು ಬಿಟ್ಟಾಗ …ಲೊಚಗುಟ್ಟಿದರೆ ಅವರು ?

-ವೆಂ. (‘ಎಶ್ಟೊಂದು ಮುಗಿಲು,’ ಕವನ ಸಂಕಲನದಿಂದ ಆಯ್ದ ಕವನ.)

Be First to Comment

Leave a Reply

Your email address will not be published. Required fields are marked *