ಅಕ್ಷರದಿಂದ ಮಾಹಿತಿಯೆಡೆಗೆ ಲೇಖನಕ್ಕೆ ಪ್ರತಿಕ್ರಿಯೆ
ಮಾನ್ಯರೆ ನಮಸ್ಕಾರ ,
ನಿನ್ನೆ ಮತ್ತು ಇಂದಿನ ‘ ಉಷಾಕಿರಣ’ ದಿನಪತ್ರಿಕೆಯಲ್ಲಿ ಪ್ರಕಟವಾದ ಡಾ. ಯು.ಬಿ. ಪವನಜ ರವರ ಲೇಖನ ‘ಅಕ್ಷರದಿಂದ ಮಾಹಿತಿಯೆಡೆಗೆ’ ತುಂಬಾ ಚೆನ್ನಾಗಿದೆ. ಜನಸಾಮಾನ್ಯರಿಗೂ ಅರ್ಥವಾಗುವ ಶೈಲಿ ಮತ್ತು ಭಾಷೆಯಲ್ಲಿ ಕನ್ನಡದ ಕಂಪ್ಯೂಟರ್ ತಂತ್ರಜ್ಞಾನದ ಇತ್ತೀಚಿನ ಆವಿಷ್ಕಾರಗಳನ್ನು ಅವರು ವಿವರಿಸಿದ್ದಾರೆ. ಹಳೆಯ ತಂತ್ರಜ್ಞಾನ (ನುಡಿ ಮತ್ತು ಬರಹ) ಮತ್ತು ಹೊಸ ತಂತ್ರಜ್ಞಾನದ (ಕನ್ನಡದ ಯುನಿಕೋಡ್) ನಡುವಣ ಕಂದಕವನ್ನು ತಿಳಿದುಕೊಳ್ಳಲು ಈ ಲೇಖನವು ಅತ್ಯಂತ ಉಪಯುಕ್ತವಾಗಿದೆ. ಕಂಪ್ಯೂಟರ್‌ನಲ್ಲಿ ಕನ್ನಡವನ್ನು ಬಳಸಲು ಏನೆಲ್ಲಾ ಸೌಲಭ್ಯಗಳು ಇವೆ. ಅವುಗಳನ್ನು ಹೇಗೆಲ್ಲಾ ಬಳಸಬಹುದು ಮತ್ತು ಪ್ರಸ್ತುತ ಕನ್ನಡವನ್ನು ಕಂಪ್ಯೂಟರ್‌ನಲ್ಲಿ ಬಳಸಲು ಯಾವ ಯಾವ ಹೆಚ್ಚಿನ ಸೌಲಭ್ಯಗಳು ಅಗತ್ಯವಿದೆ ಎಂಬುದನ್ನು ವಿಷದವಾಗಿ ಅವರು ತಮ್ಮ ಮುಂದಿನ ಲೇಖನಗಳಲ್ಲಿ ವಿವರಿಸಬೇಕೆಂದು ಅವರಲ್ಲಿ ವಿನಂತಿಸುತ್ತೇನೆ.
ರಾಷ್ಟ್ರೀಯ ಮಾಹಿತಿ ವಿಜ್ಞಾನ ಕೇಂದ್ರದ ಕರ್ನಾಟಕ ಘಟಕವು ಕನ್ನಡ ಮತ್ತು ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಅಳವಡಿಕೆಯಾಗಬೇಕಾದ ಶಿಷ್ಟತೆಗಳ ಕುರಿತು ಹಲವಾರು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವುದು ಪ್ರಶಂಸನೀಯ. ಇಂತಹ ಲೇಖನಗಳು ಉಷಾಕಿರಣ ಪತ್ರಿಕೆಯಲ್ಲಿ ಹೆಚ್ಚು ಹೆಚ್ಚಾಗಿ ಪ್ರಕಟವಾಗಲಿ. ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡದ ಕುರಿತಾದ ಇಂತಹ ಲೇಖನ ಪ್ರಕಟಿಸಿದ ಉಷಾಕಿರಣ ಪತ್ರಿಕೆಗೆ ಈ ಮೂಲಕ ಧನ್ಯವಾದಗಳನ್ನು ತಿಳಿಸಬಯಸುತ್ತೇನೆ.
ತಮ್ಮ ವಿಶ್ವಾಸಿ
ಎ. ಸತ್ಯನಾರಾಯಣ