ಗ್ಯಾಜೆಟ್ ಲೋಕ – ೦೦೯ (ಮಾರ್ಚ್ ೦೧, ೨೦೧೨)
ನೋಕಿಯ ಲುಮಿಯ -ಅನುಭವಿಸಿಯೇ ತಿಳಿಯಬೇಕು
ಕನ್ಯಾಕುಮಾರಿ ಎಷ್ಟು ಅದ್ಭುತವಾಗಿದೆ ಎಂಬುದನ್ನು ಲೇಖನಗಳನ್ನು ಓದಿ, ಚಲನಚಿತ್ರ ನೋಡಿ ಪೂರ್ತಿ ತಿಳಿಯಲು ಅಸಾಧ್ಯ. ಹಾಗೆಯೇ ನೋಕಿಯ ಲುಮಿಯ ಫೋನನ್ನು ಬಳಸಿ ಅನುಭವಿಸಿಯೇ ತಿಳಿಯಬೇಕು. ಪರದೆಯ ಮೇಲೆ ಐಕಾನ್‌ಗಳನ್ನು ಜಾರಿಸುವುದು ಒಂದು ಪ್ರತ್ಯೇಕ ಅನುಭವವೇ ಸರಿ.
ಜಗತ್ತಿನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮೊಬೈಲ್ ಫೋನ್ ತಯಾರಿಸುವ ಕಂಪೆನಿ ನೋಕಿಯ. ಸಾಮಾನ್ಯವಾಗಿ ರಸಪ್ರಶ್ನೆಗಳಲ್ಲಿ ಕೇಳುವ ಒಂದು ಪ್ರಶ್ನೆ ಹೀಗಿದೆ “ಜಗತ್ತಿನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಡಿಜಿಟಲ್ ಕ್ಯಾಮರ ತಯಾರಿಸುವ ಕಂಪೆನಿ ಯಾವುದು?”. ಉತ್ತರ ಕಾನನ್ ಅಥವಾ ನಿಕೋನ್ ಇರಬಹುದು ಎಂಬುದು ಬಹುಜನರ ಆಲೋಚನೆ ಇರುತ್ತದೆ. ಆದರೆ ಸರಿಯುತ್ತರ ನೋಕಿಯ. ನೋಕಿಯದವರ ಬಹುಮಟ್ಟಿಗೆ ಎಲ್ಲ ಮೊಬೈಲ್ ಫೋನ್‌ಗಳಲ್ಲಿ ಕ್ಯಾಮರ ಇರುವುದು ಇದಕ್ಕೆ ಕಾರಣ. ಹೀಗಿದ್ದೂ ನೋಕಿಯ ಕಂಪೆನಿ ಸ್ಮಾರ್ಟ್‌ಫೋನ್‌ಗಳ ವಿಷಯಕ್ಕೆ ಬಂದಾಗ ಅದರ ಹೆಸರು ಇಲ್ಲವೇ ಇಲ್ಲ ಎಂಬಂತಾಗಿತ್ತು. ಅವರು ಕೆಲವು ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಿದ್ದರೂ ಅವು ಅಷ್ಟು ಜನಪ್ರಿಯವಾಗಲಿಲ್ಲ.
ಮೊಬೈಲ್ ಫೋನ್‌ಗಳನ್ನು ನಡೆಸಲು ಬೇಕಾಗುವ ಕಾರ್ಯಾಚರಣೆಯ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್ -ಓಎಸ್) ತಯಾರಿಸುವ ಕಂಪೆನಿಗಳಲ್ಲಿ ಮೈಕ್ರೋಸಾಫ್ಟ್ ಕೂಡ ಒಂದು. ಒಂದು ಕಾಲದಲ್ಲಿ ಅದು ಈ ಕ್ಷೇತ್ರದಲ್ಲಿ ಪ್ರಥಮ ಸ್ಥಾನದಲ್ಲಿತ್ತು. ನಂತರ ಐಫೋನ್ ಮತ್ತು ಆಂಡ್ರೋಯಿಡ್ ದಾಳಿಗಳಿಗೆ ತತ್ತರಿಸಿ ತನ್ನ ಸ್ಥಾನ ಕಳೆದುಕೊಂಡಿತು. ಕಳಕೊಂಡ ಸ್ಥಾನವನ್ನು ಹೇಗಾದರು ಮಾಡಿ ಪುನಃ ಪಡೆದುಕೊಳ್ಳಬೇಕು ಎಂದು ಮೈಕ್ರೋಸಾಫ್ಟ್ ಶತಾಯಗತಾಯ ಪ್ರಯತ್ನಿಸುತ್ತಿದೆ. ಈ ಪ್ರಯತ್ನದ ಅಂಗವಾಗಿ ಹೊರತಂದಿರುವ ಫೋನ್ ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ಫೋನ್ 7. ಇದಕ್ಕೆ ಮ್ಯಾಂಗೋ ಎಂಬ ಸಂಕೇತನಾಮವಿದೆ.
ತಮ್ಮ ತಮ್ಮ ಸ್ಥಾನ ಉಳಿಸಿಕೊಳ್ಳಲು ಒದ್ದಾಡುತ್ತಿರುವ ಎರಡು ಕಂಪೆನಿಗಳಾದ ಮೈಕ್ರೋಸಾಫ್ಟ್ ಮತ್ತು ನೋಕಿಯ ಒಂದಾಗಿ ತಯಾರಾಗಿರುವ ಫೋನ್ ಲುಮಿಯ. ಇದರಲ್ಲಿ 710 ಮತ್ತು 800 ಎಂಬ ಎರಡು ಮಾದರಿಗಳಿವೆ. ನೋಕಿಯ ಲುಮಿಯ 800 ಬಗ್ಗೆ ಸ್ವಲ್ಪ ಗಮನ ಕೊಡೋಣ.
ಮೊದಲನೆಯದಾಗಿ ಇದರ ಗುಣ ವೈಶಿಷ್ಟ್ಯಗಳು. ಕ್ವಾಲ್ಕಾಂ 1.4 ಗಿಗಾಹರ್ಟ್ಝ್ ಪ್ರೋಸೆಸರ್, 512 ಮೆಗಾಬೈಟ್ ಪ್ರಾಥಮಿಕ ಮೆಮೊರಿ, 16 ಗಿಗಾಬೈಟ್ ಸಂಗ್ರಹ ಮೆಮೊರಿ, 3.7 ಇಂಚು ಗಾತ್ರದ ಸ್ವಲ್ಪ ಬಾಗಿದ ಅಮೋಲೆಡ್ ಕೆಪಾಸಿಟಿವ್ ಸ್ಪರ್ಶಸಂವೇದಿ ಪರದೆ, ಗೊರಿಲ್ಲ ಗ್ಲಾಸ್, 11.6 x 6.1 x 1.2 ಸೆಮೀ ಗಾತ್ರ. 8 ಮೆಗಾಪಿಕ್ಸೆಲ್ ಕ್ಯಾಮರ, ಕ್ಯಾಮರ ಫ್ಲ್ಯಾಶ್, ಹೈಡೆಫಿನಿಶನ್ ವೀಡಿಯೊ, 3.5 ಮಿಮಿ ಇಯರ್‌ಫೋನ್ ಕಿಂಡಿ, ನಿಸ್ತಂತು ಸಂಹವನ (ವೈಫೈ ಮತ್ತು ಬ್ಲೂಟೂತ್), 3ಜಿ ಅಂತರಜಾಲ ಸಂಪರ್ಕ, ಅಕ್ಸೆಲೆರೊಮೀಟರ್, ಜಿಪಿಎಸ್, ಇತ್ಯಾದಿ. ಅಂದರೆ ಮೇಲ್ದರ್ಜೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡುಬರುವ ಎಲ್ಲ ಗುಣವೈಶಿಷ್ಟ್ಯಗಳು ಇದರಲ್ಲಿವೆ.
ಈ ಗ್ಯಾಜೆಟ್‌ಗಳಿವೆಯಲ್ಲಾ, ಅವು ಸ್ವಲ್ಪ ದರ್ಶಿನಿ ಹೋಟೆಲಿನ ಮೆನುಗಳ ಹಾಗೆ. ಎಲ್ಲ ದರ್ಶಿನಿಗಳಲ್ಲೂ ಅವೇ ಸೆಟ್ ದೋಸೆ, ಮಸಾಲೆ ದೋಸೆ, ಇಡ್ಲಿ, ಒಡೆ, ಎಲ್ಲ ಇರುತ್ತವೆ. ಆದರೆ ತಿಂದು ನೊಡಿದರೆ ತಾನೆ ಅವುಗಳ ನಿಜವಾದ ರುಚಿ ಮತ್ತು ಗುಣಮಟ್ಟ ಗೊತ್ತಾಗುವುದು. ಅಂತೆಯೆ ನೀವು ಯಾವುದೇ ಗ್ಯಾಜೆಟ್ ಬಗ್ಗೆ ಅವುಗಳ ಗುಣವೈಶಿಷ್ಟ್ಯ (specifications) ಓದಿ ನೋಡಿ. ಎಲ್ಲವುಗಳವೂ ಬಹುತೇಕ ಒಂದೇ ರೀತಿ ಇರುತ್ತವೆ. ಕೆಲವನ್ನು ಬಳಸಿ ಅನುಭವಿಸಿಯೇ ನೋಡಬೇಕು. ನೋಕಿಯ ಲುಮಿಯ ಇದಕ್ಕೆ ಅತ್ಯುತ್ತಮ ಉದಾಹರಣೆ.
ಲುಮಿಯದಲ್ಲಿ ಬಳಸಿರುವುದು ಅತ್ಯಾಧುನಿಕ ವಿಂಡೋಸ್ ಫೋನ್ 7 ಕಾರ್ಯಾಚರಣ ವ್ಯಸವ್ಥೆ. ಇದರಲ್ಲಿ ಬಳಸಿರುವ ಯೂಸರ್ ಇಂಟರ್‌ಫೇಸ್‌ಗೆ ಮೆಟ್ರೊ ಯು.ಐ. ಎಂಬ ಹೆಸರಿದೆ. ಇದರಲ್ಲಿ ಐಕಾನ್‌ಗಳನ್ನು ಪಕ್ಕಕ್ಕೆ ಸರಿಸುವುದು ಒಂದು ಅನುಭವವೇ ಸರಿ. ಅದೇ ರೀತಿ ಲುಮಿಯದ ಪರದೆ ಸ್ವಲ್ಪ ವಿಶೇಷ. ಅದು ಸ್ವಲ್ಪ ಬಾಗಿದೆ. ಆದುದರಿಂದ ನೇರವಾಗಿ ಮಾತ್ರವಲ್ಲ, ಪಕ್ಕದಿಂದಲೂ ಪರದೆಯಲ್ಲಿರುವುದು ಸ್ಪಷ್ಟವಾಗಿ ಗೋಚರಿಸುವುದು. ಸಿನಿಮಾ ನೋಡಲು ಇದು ತುಂಬ ಚೆನ್ನಾಗಿದೆ. ಹೈಡೆಫಿನಿಶನ್ ಸಿನಿಮಾ ಕೂಡ ನೋಡಬಹುದು. ಸ್ಪರ್ಶಸಂವೇದನೆಯೂ ಅದ್ಭುತವಾಗಿದೆ. ಧ್ವನಿ ಮತ್ತು ಸಂಗೀತ ಗುಣಮಟ್ಟಗಳು ಉತ್ತಮವಾಗಿವೆ. ಎಂಪಿ3, ಎಂಪಿ4 ಎಲ್ಲ ಪ್ಲೇ ಮಾಡಬಹುದು. ಎಫ್‌ಎಂ ರೇಡಿಯೋ ಇದೆ. ಬ್ಲೂಟೂತ್ ಸ್ಟೀರಿಯೋ ಇದೆ.
ಇದು ಕಾರ್ಪೊರೇಟ್ ಉದ್ಯೋಗಿಗಳಿಗೆ ಹೇಳಿ ಮಾಡಿಸಿದಂತಿದೆ. ಕಂಪೆನಿಯ ಇಮೈಲ್, ಜಿಮೈಲ್, ಯಾಹೂ ಮೈಲ್, ಹಾಟ್‌ಮೈಲ್ ಎಲ್ಲ ಫೋನಿನಲ್ಲೆ ನೋಡಬಹುದು. ಸಾಮಾಜಿಕ ಜಾಲತಾಣಗಳನ್ನು ಚೆನ್ನಾಗಿ ಅಳವಡಿಸಲಾಗಿದೆ. ಫೇಸ್‌ಬುಕ್, ಟ್ವಿಟ್ಟರ್, ಲಿಂಕ್‌ಡ್‌ಇನ್, ವಿಂಡೋಸ್ ಲೈವ್ ಎಲ್ಲ ಒಂದೆ ಕಡೆ ಸುಲಲಿತವಾಗಿ ಮಿಳಿತವಾಗುತ್ತವೆ. ನಿಮಗೆ ಅಂತರಜಾಲದಲ್ಲಿ ಆಫೀಸ್ 365ರಲ್ಲಿ ಖಾತೆ ಇದ್ದರೆ ಅದರ ಮೂಲಕ ಸಹೋದ್ಯೋಗಿಗಳ ಜೊತೆ ಕಡತಗಳನ್ನು ಸಹಯೋಗಿ ವಿಧಾನದಲ್ಲಿ ಹಂಚಿ ಬಳಸಬಹುದು. ಮೈಕ್ರೋಸಾಫ್ಟ್ ಆಫೀಸ್ ಫೈಲುಗಳನ್ನು ತೆರೆಯಬಹುದು. ಚಿಕ್ಕ ಪುಟ್ಟ ಸಂಪಾದನೆಗಳನ್ನೂ (ಎಡಿಟಿಂಗ್) ಮಾಡಬಹುದು.
8 ಮೆಗಾಪಿಕ್ಸೆಲ್‌ನ ಕ್ಯಾಮರ ಗುಣಮಟ್ಟ ಉತ್ತಮವಾಗಿದೆ. ಸಕಲೇಶಪುರದಿಂದ ಮಂಗಳೂರಿಗೆ ಹೋಗುವ ರೈಲು ಪ್ರಯಾಣದ ಅದ್ಭುತ ಸವಿನೆನಪಿಗೆ ಲುಮಿಯ ಬಳಸಿ ತೆಗೆದಿರುವ ಫೋಟೋವನ್ನು ಸ್ಕ್ರೀನ್ ಸೇವರ್ ಆಗಿ ಆಯ್ಕೆ ಮಾಡಿಕೊಂಡಿರುವ ಚಿತ್ರವನ್ನು ನೋಡಿದಾಗ ಈ ವಿಷಯ ಮನದಟ್ಟಾಗುತ್ತದೆ ಎರಡು ವಾರಗಳ ಹಿಂದಿನ ಗ್ಯಾಜೆಟ್ ಲೋಕ ಲೇಖನದಲ್ಲಿ ಬಳಸಲಾದ ಮೈಕ್ರೋಸಾಫ್ಟ್ ಆರ್ಕ್ ಟಚ್ ಮೌಸ್‌ನ ಫೊಟೋಗಳನ್ನು ತೆಗೆದಿದ್ದು ನೋಕಿಯ ಲುಮಿಯ ಬಳಸಿ.
ಇವೆಲ್ಲ ನೋಕಿಯ ಲುಮಿಯದ ಸಾಧಕಗಳಾದವು. ಇನ್ನು ಬಾಧಕಗಳ ಕಡೆ ಸ್ವಲ್ಪ ಗಮನ ಕೊಡೋಣ. ಅವುಗಳ ಪಟ್ಟಿಯೂ ದೀರ್ಘವಾಗಿಯೇ ಇವೆ. ನಿಮ್ಮ ಫೋನ್ ಮತ್ತು ಗಣಕಗಳ ನಡುವೆ ಇದ್ದ ಬಿದ್ದ ಫೈಲ್‌ಗಳನ್ನೆಲ್ಲ ವರ್ಗಾವಣೆ ಮಾಡಿಕೊಳ್ಳುವಂತಿಲ್ಲ. ಕೇವಲ ಫೋಟೋ, ವೀಡಿಯೋ, ಸಂಗೀತಗಳನ್ನು ಮಾತ್ರ ಮೈಕ್ರೋಸಾಫ್ಟ್‌ನವರ ಝೂನ್ ತಂತ್ರಾಂಶ ಬಳಸಿ ವರ್ಗಾವಣೆ ಮಾಡಿಕೊಳ್ಳಬಹುದು. ಯಾವುದೇ ಫೈಲ್ ವರ್ಗಾವಣೆ ಮಾಡಬೇಕಿದ್ದರೆ ನಿಮಗೆ ಅಂತರಜಾಲದಲ್ಲಿ ಸ್ಕೈಡ್ರೈವ್ (skydrive.live.com) ಖಾತೆ ಬೇಕು. ನಿಮ್ಮ ಫೋನಿನಿಂದ ನಿಮ್ಮ ಮೇಜಿನ ಮೇಲೆಯೇ ಇರುವ ಗಣಕಕ್ಕೆ (ಅಥವಾ ವಾಪಾಸು) ಫೈಲ್ ಕಳುಹಿಸಬೇಕಾದರೆ ಅದನ್ನು ಅಂತರಜಾಲದಲ್ಲಿರುವ ಸ್ಕೈಡ್ರೈವ್‌ಗೆ ಸೇರಿಸಿ ಅಲ್ಲಿಂದ ಗಣಕಕ್ಕೆ (ಅಥವಾ ಫೋನಿಗೆ) ಡೌನ್‌ಲೋಡ್ ಮಾಡಿಕೊಳ್ಳಬೇಕು. ಪುಣ್ಯಕ್ಕೆ ಸ್ಕೈಡ್ರೈವ್ ಖಾತೆ ಉಚಿತ.
ಬೇರೆ ಎಲ್ಲ ಸ್ಮಾರ್ಟ್‌ಫೋನ್‌ಗಳಂತೆ (ಐಫೋನ್ ಹೊರತಾಗಿ) ಫೋನಿನಲ್ಲಿರುವ ಮೆಮೊರಿಯನ್ನು ಮಾಮೂಲಿ ಯುಎಸ್‌ಬಿ ಡ್ರೈವ್‌ನಂತೆ ಬಳಸಲು ಸಾಧ್ಯವಿಲ್ಲ. ಫೋನಿನಲ್ಲಿರುವ 16 ಗಿಗಾಬೈಟ್‌ಗಿಂತ ಜಾಸ್ತಿ ಮೆಮೊರಿ ಬೇಕು ಎಂದರೆ ಹೆಚ್ಚಿಗೆ ಮೆಮೊರಿಗೋಸ್ಕರ ಎಸ್‌ಡಿ ಕಾರ್ಡ್ ಸೇರಿಸಿಕೊಳ್ಳಲು ಕಿಂಡಿ ಇಲ್ಲ. ಬ್ಯಾಟರಿಯನ್ನು ತೆಗೆಯಲೂ ಸಾಧ್ಯವಿಲ್ಲ. ಒಂದು ಫೋನಿನಿಂದ ಇನ್ನೊಂದು ಫೋನಿಗೆ ಬ್ಲೂಟೂತ್ ಮೂಲಕ ಫೈಲ್ ವರ್ಗಾವಣೆ ಅಸಾಧ್ಯ. ಅಂದರೆ ನೀವು ನಿಮ್ಮ ಫೋನಿನಿಂದ ನಿಮ್ಮ ಗೆಳೆಯರಿಗೆ ಸಂಗೀತದ ಫೈಲನ್ನು ನೀಡಬೇಕಿದ್ದರೆ ಅದನ್ನು ಇಮೈಲ್ ಮೂಲಕವೇ ಕಳುಹಿಸಬೇಕಷ್ಟೆ. ಅಥವಾ ಸ್ಕೈಡ್ರೈವ್‌ಗೆ ಸೇರಿಸಿ ಅದರ ಕೊಂಡಿ ನೀಡಬೇಕು. ಫೋನಿನಲ್ಲಿ 3ಜಿ ಸೌಲಭ್ಯ ಇದೆ. ಆದರೆ ವೀಡಿಯೋ ಕರೆ ಮಾಡಲು ಮುಂದುಗಡೆ (ಫ್ರಂಟ್) ಕ್ಯಾಮರ ಇಲ್ಲ.
ಇದರಲ್ಲಿ ಬಳೆಕಯಾಗುವುದು ಮಾಮೂಲಿ ಸಿಮ್ ಕಾರ್ಡ್ ಅಲ್ಲ. ಅದು ಮೈಕ್ರೋ ಸಿಮ್ ಅಂದರೆ ಚಿಕ್ಕ ಗಾತ್ರದ ಸಿಮ್ ಕಾರ್ಡ್. ಮೈಕ್ರೋ ಸಿಮ್ ಸಿಗದುದರಿಂದ ನಾನು ಮಾಮೂಲಿ ಸಿಮ್ ಕಾರ್ಡ್‌ನ್ನು 50 ರೂ. ಕೊಟ್ಟು ಚಿಕ್ಕ ಗಾತ್ರಕ್ಕೆ ಕತ್ತರಿಸಿ ಬಳಸಬೇಕಾಯಿತು. ಹೀಗೆ ಕತ್ತರಿಸಿದ ಸಿಮ್ ಕಾರ್ಡನ್ನು ಇತರೆ ಫೋನುಗಳಲ್ಲಿ ಬಳಸಬೇಕಾದರೆ ಅದಕ್ಕೆಂದೇ ಒಂದು ಅಡಾಪ್ಟರ್ ದೊರೆಯುತ್ತದೆ. ಅದನ್ನು ಕೊಳ್ಳಬೇಕು.
ಒಟ್ಟಿನಲ್ಲಿ ಹೇಳುವುದಾದರೆ ನೋಕಿಯ ಲುಮಿಯಕ್ಕೆ 30 ಸಾವಿರ ರೂ. ಬೆಲೆ ಸ್ವಲ್ಪ ಜಾಸ್ತಿಯೇ ಅನ್ನಬಹುದು. Value for money ಎಂದು ಹೇಳುವಂತಿಲ್ಲ. ಬಹುಶಃ ಸುಮಾರು 15 ಸಾವಿರ ರೂ. ಬೆಲೆಯ ಲುಮಿಯ 710 ಆದರೆ ಹಣ ಕೊಡಬಹುದಾದ ಫೋನ್ ಎನ್ನಬಹುದು.
ಇನ್ನೊಂದು ಬಹುಮುಖ್ಯವಾದ ವಿಷಯ -ನೋಕಿಯ ಲುಮಿಯದಲ್ಲಿ ಕನ್ನಡ ಹಾಗೂ ಇತರೆ ಭಾರತೀಯ ಬಾಷೆಗಳ ಸವಲತ್ತು ಇಲ್ಲ.
ಅಮೋಲೆಡ್ (AMOLED -active-matrix organic light-emitting diode) – ಎಲ್‌ಇಡಿ ಎಂದರೆ ಬೆಳಕು ನೀಡುವ ಡಯೋಡ್‌ಗಳು. ಇವುಗಳನ್ನು ಎಲ್ಲ ಕಡೆ ನೋಡಿಯೇ ಇರುತ್ತೀರಿ. ಅಮೋಲೆಡ್‌ನಲ್ಲಿ ಕ್ರಿಯಾಶೀಲ ಮ್ಯಾಟ್ರಿಕ್ಸ್ ಸಾವಯವ ಎಲ್‌ಇಡಿ ಪರದೆ ಇರುತ್ತದೆ. ಇವು ಲ್ಯಾಪ್‌ಟಾಪ್‌ಗಳಲ್ಲಿ ಬಳಸುವ ಎಲ್‌ಸಿಡಿ ಪರದೆಗಳಿಗಿಂತ ಕಡಿಮೆ ವಿದ್ಯುತ್ ಬಳಸುತ್ತವೆ ಮಾತ್ರವಲ್ಲ ಉತ್ತಮ ಗುಣಮಟ್ಟದ ಚಿತ್ರಗಳನ್ನೂ ನೀಡುತ್ತವೆ.
ಗ್ಯಾಜೆಟ್ ಸಲಹೆ
ಉಡುಪಿ ಪರ್ಕಳದ ಸಂಕೇತರ ಪ್ರಶ್ನೆ: 3ಜಿ, ಆಂಡ್ರಾಯಿಡ್, ಫುಲ್ ಟಚ್‌ಸ್ಕ್ರೀನ್, 5 +ಮೆಗಾ ಪಿಕ್ಸೆಲ್ ಕ್ಯಾಮೆರಾ, ಬ್ಲೂಟೂಥ್, ಎಫ್ ಎಂ ರೇಡಿಯೋ, ವಿಡಿಯೋ ಶೂಟಿಂಗ್ ಮತ್ತು ಎಚ್ ಡಿ ಸಿನಿಮಾ ವೀಕ್ಷಿಸಬಹುದಾದ ಯಾವುದಾದರೂ 10-12 ಸಾವಿರ ರೂಪಾಯಿಗಳ ಮೊಬೈಲ್ ಫೋನ್ ನನಗೆ ರೆಕಮೆಂಡ್ ಮಾಡಬಹುದೇ?
ಉ: ಮೋಟೊರೋಲ ಫೈರ್ ಎಕ್ಸ್‌ಟಿ ಅಥವಾ ಸ್ಯಾಮ್‌ಸಂಗ್ ಗ್ಯಾಲಕ್ಸಿ ಏಸ್
May 27th, 2012 at 9:11 am
Sir. Nokia lumia bagge thilkobeku antha thumba istha itthu..nimma article nodi thumba kushi aythu..Dhanyavada.