ಗ್ಯಾಜೆಟ್ ಲೋಕ – ೦೦೮ (ಪೆಬ್ರವರಿ ೨೩, ೨೦೧೨)

ಕೇಳಿದ್ದೀರಾ ಕೋವೋನ್ ಸಿ2 ಪ್ಲೇಯರ್?

 

ವೈಯಕ್ತಿಕ ಮನರಂಜನೆಯ ಉಪಕರಣಗಳಲ್ಲಿ ಕೋವೋನ್ ಅಷ್ಟು ಪ್ರಚಲಿತವಲ್ಲದ ಹೆಸರು. ಆದರೆ ಇದರ ಗುಣಮಟ್ಟವನ್ನು ಒಮ್ಮೆ ಅನುಭವಿಸಿದರೆ ಇದು ಇತರೆ ಯಾವುದೇ ಬ್ರಾಂಡ್‌ಗೆ ಕಡಿಮೆಯಿಲ್ಲ ಎನ್ನುವುದು ಮನದಟ್ಟಾಗುತ್ತದೆ. ಅಂತೆಯೇ ನೀಡುವ ಹಣಕ್ಕೆ ದೊರೆಯುವ ಸವಲತ್ತುಗಳೂ ಅಧಿಕವೇ.

 

ನಡೆದಾಡುವಾಗ, ಪ್ರಯಾಣಿಸುವಾಗ, ಸುಮ್ಮನೆ ಕುಳಿತಿದ್ದಾಗ, ಪುಸ್ತಕ ಓದುವಾಗ -ಹೀಗೆ ಹಲವು ಸಂದರ್ಭಗಳಲ್ಲಿ ಸಂಗೀತ ಅಥವಾ ಹಾಡು ಕೇಳುವುದು ಹಲವರ ಹವ್ಯಾಸ. ನನಗೂ ಸಹ. ಹೀಗೆ ಮಾಡಲು ಅನುವು ಮಾಡಿಕೊಡುವ ಹಲವು ಉಪಕರಣಗಳಿವೆ. ಇವುಗಳಲ್ಲಿ ಪ್ರಮುಖವಾಗಿ ಎರಡು ವಿಧ. ಸರಳವಾದ ಎಂಪಿ3 ಪ್ಲೇಯರ್ ಮತ್ತು ಪೂರ್ಣಪ್ರಮಾಣದ ವೈಯಕ್ತಿಕ ಮನರಂಜನೆಯ ಉಪಕರಣ.

ಎರಡನೆಯ ವಿಧಕ್ಕೆ ಸೇರಿದ ಒಂದು ಕೈಗೆಟುಕುವ ಬೆಲೆಯ ಪ್ಲೇಯರ್ ಕೋವೋನ್‌ನವರ ಸಿ2 ಪ್ಲೇಯರ್. ಇದೊಂದು ವೈಯಕ್ತಿಕ ಮನರಂಜನೆಯ ಉಪಕರಣ. ಇದರ ಗುಣಮಟ್ಟ ಉತ್ಕೃಷ್ಟವಾಗಿದೆ. ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಆಪಲ್ ಐಪೋಡ್‌ಗಿಂತ ಏನೇನೂ ಕಡಿಮೆಯಿಲ್ಲ. ಇದರಲ್ಲಿ ಹಾಡು, ಸಂಗೀತ ಆಲಿಸಬಹುದು. ಫೊಟೋ, ಸಿನಿಮಾ ವೀಕ್ಷಿಸಬಹುದು. ಇದರ ಜೊತೆ ನೀಡಿರುವ ಇಯರ್‌ಫೋನ್ ಕೂಡ ಉತ್ತಮ ಗುಣಮಟ್ಟದ್ದಾಗಿದೆ. ರೆಸಿಸ್ಟಿವ್ ಸ್ಪರ್ಶಸಂವೇದಿ ಪರದೆಯನ್ನು ಒಳಗೊಂಡಿದೆ. ಬದಿಯಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಸ್ವಿಚ್‌ಗಳಿವೆ. 79 x 13 x 53 ಮಿಮಿ ಗಾತ್ರ. 84 ಗ್ರಾಂ ತೂಕ. ಬಿಳಿ, ಕಪ್ಪು ಮತ್ತು ಕಂದು ಬಣ್ಣಗಳಲ್ಲಿ ಲಭ್ಯ. 4, 8 ಅಥವಾ 16 ಗಿಗಾಬೈಟ್ ಮೆಮೊರಿಯ ಮಾದರಿಗಳಿವೆ. 2.6 ಇಂಚುಗಾತ್ರದ 320 x 240 ಪಿಕ್ಸೆಲ್ ರೆಸೊಲೂಶನ್‌ನ ಪರದೆ. ಎಲ್ಲ ಕೆಲಸಗಳನ್ನು ಈ ಪರದೆಯಲ್ಲಿ ಮೂಡಿಬರುವ ಐಕಾನ್‌ಗಳನ್ನು ಒತ್ತುವ ಮೂಲಕವೇ ನಡೆಸಬಹುದು.

 

ಇದಕ್ಕೆ ಸಮೀಪವಾದುದು ಐಪೋಡ್ ನ್ಯಾನೋ. ಆದರೆ ಐಪೋಡ್‌ನಲ್ಲಿ ರೆಕಾರ್ಡಿಂಗ್ ಸೌಲಭ್ಯ ಇಲ್ಲ. ಕೋವೋನ್ ಸಿ2ನಲ್ಲಿ ಆಡಿಯೋ ರೆಕಾರ್ಡಿಂಗ್ ಸೌಲಭ್ಯ ಇದೆ. ಇದನ್ನು ಅದರಲ್ಲೇ ಇರುವ ಮೈಕ್ರೋಫೋನ್ ಬಳಸಿ ಅಥವಾ ಹೊರಗಡೆಯಿಂದ ಸಿಗ್ನಲ್ ಅನ್ನು ಲೈನ್-ಇನ್ ಕೇಬಲ್ ಮೂಲಕ ತಂದು ಮಾಡಬಹುದು. ರೆಕಾರ್ಡಿಂಗ್ ಮಾಡುವಾಗ ಧ್ವನಿಯ ಮಟ್ಟವನ್ನು ಹೆಚ್ಚು ಅಥವಾ ಕಡಿಮೆ ಮಾಡಿಕೊಳ್ಳಬಹುದು. ಧ್ವನಿಯ ಆಕರ ದೂರ ಅಥವಾ ಹತ್ತಿರವಿದ್ದಾಗ ಈ ಆಯ್ಕೆ ತುಂಬ ಉಪಯುಕ್ತ. ವೈಯಕ್ತಿಕ ಮನರಂಜನೆಯ ಉಪಕರಣಗಳಲ್ಲಿ ಇಂತಹ ಸೌಲಭ್ಯ ನೀಡುತ್ತಿರುವ ಕೆಲವೇ ಕೆಲವು ಮಾದರಿಗಳಲ್ಲಿ ಕೋವೋನ್ ಒಂದು. ಕ್ರಿಯೇಟಿವ್‌ನವರ ಒಂದೆರಡು ಮಾದರಿಗಳಲ್ಲಿ ಈ ಸೌಲಭ್ಯ ಇದೆ. ಲೈನ್-ಇನ್ ರೆಕಾರ್ಡಿಂಗ್ ಎಂದರೆ ಧ್ವನಿಯ ಆಕರ ಯಾವುದಾದರೂ ಆಂಪ್ಲಿಫೈಯರ್ ಇದ್ದಾಗ ಅದರಿಂದ ಒಂದು ಕೇಬಲ್ ಮೂಲಕ ಸಿಗ್ನಲ್ ಅನ್ನು ತಂದು ಇದಕ್ಕೆ ಸಂಪರ್ಕಿಸಿ ರೆಕಾರ್ಡಿಂಗ್ ಮಾಡುವುದು. ಈ ರೀತಿ ರೆಕಾರ್ಡಿಂಗ್ ಮಾಡುವಾಗ ಸಭಾಭವನದ ಗದ್ದಲಗಳು ರೆಕಾರ್ಡ್ ಆಗುವುದಿಲ್ಲ. ಸಂಗೀತ ಕಾರ್ಯಕ್ರಮಗಳನ್ನು ರೆಕಾರ್ಡಿಂಗ್ ಮಾಡಿಕೊಳ್ಳಲು ಈ ಸೌಲಭ್ಯ ಬಲು ಉಪಯುಕ್ತ. ಆದರೆ ಈ ರೀತಿ ಮಾಡಲು ಕೋವೋನ್‌ನವರದೇ ಆದ ಒಂದು ವಿಶೇಷ ಕೇಬಲ್ ಬೇಕು. ಅದನ್ನು ಪ್ರತ್ಯೇಕವಾಗಿ ಹಣ ನೀಡಿ ಕೊಂಡುಕೊಳ್ಳಬೇಕು.

 

ಕೋವೋನ್ ಸಿ2ನಲ್ಲಿ ಸಿನಿಮಾ ನೋಡಬಹುದು. ಅದರೆ 2.6 ಇಂಚು ಗಾತ್ರದ ಪರದೆಯಲ್ಲಿ ನೋಡುವುದು ಅಷ್ಟೇನೂ ಆಕರ್ಷಕ ವಿಷಯ ಅಲ್ಲ. ಅದಕ್ಕಾಗಿ ಚಿಂತಿಸಬೇಕಾಗಿಲ್ಲ. ಹೆಚ್ಚಿಗೆ ಹಣ ನೀಡಿದರೆ ಟಿವಿ ಔಟ್ ಕೇಬಲ್ ದೊರೆಯುತ್ತದೆ. ಅದರ ಮೂಲಕ ಸಿ2 ಅನ್ನು ನಿಮ್ಮ ಮನೆಯ ಟಿವಿಗೆ ಸಂಪರ್ಕಿಸಬಹುದು. ಆಗ ಸಿ2 ಪರದೆಯಲ್ಲಿ ಮೂಡಿಬಂದುದೆಲ್ಲ ಟಿವಿ ಪರದೆಯಲ್ಲಿ ಮೂಡಿಬರುತ್ತದೆ. ಇಲ್ಲಿ ಎನ್‌ಟಿಎಸ್‌ಸಿ ಮತ್ತು ಪಿಎಎಲ್ ಎಂಬ ಎರಡು ಆಯ್ಕೆಗಳಿವೆ. ಭಾರತದಲ್ಲಿ ಬಳಕೆಯಲ್ಲಿರುವುದು ಪಿಎಎಲ್. ಸಿ2 ಅನ್ನು ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಸುಮಾರು ಎರಡು ಸಿನಿಮಾ ನೋಡಬಹುದು.

 

ಕೋವಾನ್ ಸಿ೨ನಲ್ಲಿ ರಿಚಾರ್ಜ್ ಮಾಡಬಲ್ಲ ಬ್ಯಾಟರಿ ಇದೆ. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಸುಮಾರು 55 ಗಂಟೆಗಳ ಕಾಲ ಸಂಗೀತ ಆಲಿಸಬಹುದು. 4 ಗಿಗಾಬೈಟ್ ಮಾದರಿಗೆ ಸುಮಾರು 4500ರೂ. ಬೆಲೆ ಇದೆ. ಗಣಕಕ್ಕೆ ಸಂಪರ್ಕಿಸಿ ಅದರಿಂದ ಸಂಗೀತ, ಫೋಟೋ, ಸಿನಿಮಾ ಇತ್ಯಾದಿಗಳನ್ನು ಉಪಕರಣಕ್ಕೆ ಡೌನ್‌ಲೋಡ್ ಮಾಡಿಕೊಳ್ಳಲು ಯುಎಸ್‌ಬಿ ಕೇಬಲ್ ನೀಡಿದ್ದಾರೆ. ಈ ಕೆಲಸಗಳಿಗೆಂದೇ ಪ್ರತ್ಯೇಕ ತಂತ್ರಾಂಶದ ಅಗತ್ಯವಿಲ್ಲ. ವಿಂಡೋಸ್‌ನಲ್ಲೇ ಇರುವ ಸರಳ ಫೈಲ್ ವರ್ಗಾವಣೆಯ ಸವಲತ್ತನ್ನು ಬಳಸಿದರೆ ಮುಗಿಯಿತು. ಐಪೋಡ್‌ನಂತೆ ಐಟ್ಯೂನ್ ಜೊತೆ ಗುದ್ದಾಡಬೇಕಾಗಿಲ್ಲ.

ಇದರ ಸ್ಪರ್ಶಸಂವೇದಿ ಪರದೆಯ ಪ್ರತಿಸ್ಪಂದನವೇನೋ ಚೆನ್ನಾಗಿಯೇ ಇದೆ. ಆದರೆ ಅದರ ಇಂಟರ್‌ಫೇಸ್ ಚೆನ್ನಾಗಿಲ್ಲ. ಏನು ಮಾಡಲು ಏನು ಮಾಡಬೇಕು ಎಂದು ಪ್ರಥಮ ಬಾರಿಗೆ ಅರ್ಥವಾಗುವುದಿಲ್ಲ. ಆದರೂ ಕೋವೋನ್‌ನವರದೇ ಆದ ಹಳೆಯ ಐಆಡಿಯೋಗೆ ಹೋಲಿಸಿದರೆ ಈ ಇಂಟರ್‌ಫೇಸ್ ತುಂಬ ಸುಧಾರಿಸಿದೆ ಎನ್ನಬಹುದು. ಕೋವೋನ್ ಕಂಪೆನಿಯ ಜಾಲತಾಣ www.cowonglobal.com ದಲ್ಲಿ ಹೆಚ್ಚು ವಿವರಗಳನ್ನು ನೋಡಬಹುದು.

 

ವೈಯಕ್ತಿಕ ಮನರಂಜನೆಯ ಉಪಕರಣ (personal media player or portable media player (PMP) or digital audio player (DAP)) – ಡಿಜಿಟಲ್ ವಿಧಾನದಲ್ಲಿ ಹಾಡು, ಸಂಗೀತ, ಚಲನಚಿತ್ರ, ಫೋಟೋ, ಇತ್ಯಾದಿಗಳನ್ನು ಸಂಗ್ರಹಿಸಿಟ್ಟುಕೊಂಡು ಅದನ್ನು ಚಲಾಯಿಸಿ ವೀಕ್ಷಿಸಲು ಮತ್ತು ಆಲಿಸಲು ಅನುವು ಮಾಡಿಕೊಡುವ ಉಪಕರಣ. ಉದಾ -ಆಪಲ್ ಐಪೋಡ್, ಕ್ರಿಯೇಟಿವ್ ಝೆನ್ ಎಂಪಿ೩ ಪ್ಲೇಯರ್, ಕೋವೋನ್ ಐಆಡಿಯೋ, ಇತ್ಯಾದಿ.

 

ಎಂ.ಪಿ.೩ (MP3 = MPEG-1 Audio Layer-3): ಗಣಕಗಳಲ್ಲಿ ಸಂಗೀತವನ್ನು ಶೇಖರಿಸಿಡುವಾಗ ಮೂಲ ಗುಣಮಟ್ಟಕ್ಕೆ ಅತೀವ ಭಂಗ ಬಾರದ ರೀತಿಯಲ್ಲಿ ಸಂಕುಚಿತಗೊಳಿಸಿ ಇಡುವ ಒಂದು ವಿಧಾನ. ಇದರಿಂದ ಸಂಗೀತದ ಫೈಲ್‌ಗಳ ಗಾತ್ರ ಸುಮಾರು ಹನ್ನೆರಡು ಪಟ್ಟು ಕಡಿಮೆಯಾಗುತ್ತದೆ. ಗುಣಮಟ್ಟದಲ್ಲಿ ವಿಶೇಷ ರಾಜಿ ಇಲ್ಲ. ಒPಇಉ ಅನ್ನುವುದು Motion Picture Experts Group ಎನ್ನುವುದರ ಸಂಕ್ಷಿಪ್ತ ರೂಪ. ಎಂ.ಪಿ.೩ ಫೈಲ್‌ಗಳನ್ನು ನುಡಿಸಲು ಹಲವು ತಂತ್ರಾಂಶಗಳು ಲಭ್ಯವಿವೆ. ಇವುಗಳಲ್ಲಿ ವಿನ್‌ಆಂಪ್ (www.winamp.com) ಬಹಳ ಜನಪ್ರಿಯ. ಎಂ.ಪಿ.೩ ಫೈಲ್‌ಗಳಿಂದಲೇ ತುಂಬಿದ ಸಿ.ಡಿ.ಗಳೂ ಈಗ ಮಾರುಕಟ್ಟೆಯಲ್ಲಿ ಲಭ್ಯ. ಇವುಗಳನ್ನು ನುಡಿಸಲೆಂದೇ ತಯಾರಾದ ಪ್ಲೇಯರ್‌ಗಳೂ ಲಭ್ಯ.

 

ಗ್ಯಾಜೆಟ್ ಸಲಹೆ

 

ಉಲ್ಲಾಸ ಶರ್ಮರ ಪ್ರಶ್ನೆ: 7500ರೂ. ಅಂದಾಜು ಬೆಲೆ ಉತ್ತಮ ಮೊಬೈಲ್ ಫೋನ್ ಯಾವುದು? ಅದರಲ್ಲಿ ಟಚ್‌ಸ್ಕ್ರೀನ್ ಇರತಕ್ಕದ್ದು.

ಉ: ನೋಕಿಯ 5230.

Leave a Reply