ಗ್ಯಾಜೆಟ್ ಲೋಕ – ೦೦೩ (ಜನವರಿ ೧೯, ೨೦೧೨)

ಕ್ಯಾಮರಾಗಳು ಸಾರ್ ಕ್ಯಾಮರಾಗಳು

 

ಕ್ಯಾಮರಾ ಇಲ್ಲದ ಮನೆಯೇ ಇಲ್ಲವೇನೋ. ಅಷ್ಟರ ಮಟ್ಟಿಗೆ ಕ್ಯಾಮರಾಗಳು ಮನೆಮಾತಾಗಲು ಮುಖ್ಯ ಕಾರಣ ಡಿಜಿಟಲ್ ಕ್ಯಾಮರಾಗಳು. ಅವುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಹಲವು ಲೇಖನಗಳು ಬೇಕು. ಅವುಗಳನ್ನು ಈ ಅಂಕಣದಲ್ಲಿ ಒಂದೊಂದಾಗಿ ನೀಡಲಾಗುವುದು. ಇದು ಈ ಮಾಲಿಕೆಯಲ್ಲಿ ಮೊದಲ ಕಂತು.

 

ಒಂದಾನೊಂದು ಕಾಲದಲ್ಲಿ ಕ್ಯಾಮರಾಗಳು ಈಗಿನಷ್ಟು ಪ್ರಚಲಿತವಾಗಿರಲಿಲ್ಲ. ಕ್ಯಾಮರಾಕ್ಕೆ ಫಿಲ್ಮ್ ರೀಲು ತುಂಬಿಸಿ ಅದರಲ್ಲಿ ತೆಗೆಯಬಹುದಾದಷ್ಟು ಎಲ್ಲ ಫೋಟೋಗಳನ್ನು ಕ್ಲಿಕ್ ಮಾಡಿ, ಫಿಲ್ಮನ್ನು ತೆಗೆದು ಸ್ಟುಡಿಯೋಗೆ ಸಂಸ್ಕರಿಸಲು ಕೊಟ್ಟು ನಂತರ ಪ್ರಿಂಟ್‌ಗಳನ್ನು ಪಡೆದು ನೋಡಬೇಕಾಗಿತ್ತು. ಯಾವುದಾದರೊಂದು ಸಂದರ್ಭದಲ್ಲಿ ಬಳಸಿದ ಶಟ್ಟರ್ ವೇಗ, ಅಪೆರ್ಚರ್ ಎಲ್ಲ ಸರಿಯಾದ ಫೋಟೋ ನೀಡಿದೆಯಾ ಎಂದು ತಿಳಿಯಬೇಕಾದರೆ ಈ ಎಲ್ಲ ಕೆಲಸಗಳು ಆಗುವ ತನಕ ಕಾಯಬೇಕಿತ್ತು. ಈಗಿನ ಸಂದರ್ಭ ಹಾಗಿಲ್ಲ. ಎಲ್ಲ ಡಿಜಿಟಲ್‌ಮಯ. ಕ್ಲಿಕ್ ಮಾಡಿದೊಡನೆ ಫೋಟೋ ಹೇಗೆ ಬಂದಿದೆ ಎಂದು ಅಲ್ಲೇ ಪರದೆ ಮೇಲೆ ನೋಡಬಹುದು. ಈ ಡಿಜಿಟಲ್ ಕ್ಯಾಮರಾಗಳಲ್ಲೂ ಹಲವು ನಮೂನೆಗಳಿವೆ. ಮುಖ್ಯವಾಗಿ ಎರಡು ನಮೂನೆ -ಸುಮ್ಮನೆ ನೋಡಿ ಕ್ಲಿಕ್ ಮಾಡುವಂತವ (aim and shoot) ಮತ್ತು ಏಕಮಸೂರ ಪ್ರತಿಫಲನ (single lens reflex -SLR). ಈ ಎರಡು ವಿಭಾಗಗಳು ಯಾಕೆ ಮತ್ತು ಹೇಗೆ ಎಂದು ಸ್ವಲ್ಪ ನೋಡೋಣ.

 

ಮೊದಲನೆಯದಾಗಿ ಸರಳ ಕ್ಯಾಮರಾ ಅಂದರೆ ಏಮ್ ಆಂಡ್ ಶೂಟ್ ಕ್ಯಾಮರಾಗಳ ಕಡೆಗೆ ಗಮನ ಹರಿಸೋಣ. ಇದರೆ ಹೆಸರೇ ಸೂಚಿಸುವಂತೆ ಇವುಗಳಲ್ಲಿ ಹೆಚ್ಚು ಆಯ್ಕೆಗಳಿಲ್ಲ. ಸುಮ್ಮನೆ ಕ್ಯಾಮರಾ ಮೂಲಕ ನೋಡುವುದು ಮತ್ತು ಕ್ಲಿಕ್ ಮಾಡುವುದು, ಅಷ್ಟೆ. ಅತಿಯಾದ ಹಾಗೂ ಕ್ಲಿಷ್ಟವಾದ ಆಯ್ಕೆಗಳಿಲ್ಲ. ಹಾಗಿದ್ದೂ ಈ ರೀತಿಯ ಕ್ಯಾಮರಾಗಳಲ್ಲಿ ಕೆಲವು ಆಯ್ಕೆಗಳನ್ನು ಕಂಪೆನಿಯವರೇ ನೀಡಿರುತ್ತಾರೆ. ಉದಾಹರಣೆಗೆ ವ್ಯಕ್ತಿ, ಪರಿಸರ (ಸೀನರಿ), ರಾತ್ರಿ, ಆಟ -ಇತ್ಯಾದಿ. ಇಲ್ಲಿ ಆಟ ಎಂದು ಆಯ್ಕೆ ಮಾಡಿದರೆ ವೇಗವಾಗಿ ನಡೆಯುತ್ತಿರುವ ಕೆಲಸವನ್ನು ಚಿತ್ರಿಸಬೇಕಾದರೆ ಬಳಸಬೇಕಾದ ವೇಗದ ಶಟ್ಟರ್ ಅನ್ನು ಅದು ಆಯ್ಕೆ ಮಾಡಿಕೊಳ್ಳುತ್ತದೆ. ರಾತ್ರಿ ಎಂದು ಆಯ್ಕೆ ಮಾಡಿಕೊಂಡರೆ ದೊಡ್ಡದಾದ ಲೆನ್ಸ್ ತೆರೆಯುವಿಕೆ (ಅಪೆರ್ಚರ್) ಆಯ್ಕೆ ಮಾಡಿಕೊಳ್ಳುತ್ತದೆ. ಈ ನಮೂನೆಯ ಕ್ಯಾಮರಾಗಳಲ್ಲಿ ವ್ಯೂಫೈಂಡರ್‌ಗೆ ಪ್ರತ್ಯೇಕ ಮಸೂರ (ಲೆನ್ಸ್) ಇರುತ್ತದೆ. ಅಂದರೆ ಕ್ಯಾಮರಾ ಚಿತ್ರಣಕ್ಕೆ ಬಳಸುವ ಮಸೂರ ಮತ್ತು ನಾವು ನೋಡುವ ಮಸೂರ ಎರಡು ಬೇರೆ ಬೇರೆ ಆಗಿರುತ್ತವೆ. ಇದರಿಂದಾಗಿ ಸಮೀಪದ ಮತ್ತು ದೂರದ ವಸ್ತುಗಳನ್ನು ಚಿತ್ರಿಸುವಾಗ ಕೊನೆಗೆ ದೊರೆಯುವ ಚಿತ್ರಕ್ಕೂ ನಾವು ವ್ಯೂಫೈಂಡರ್ ಮೂಲಕ ನೊಡಿದ ಚಿತ್ರಕ್ಕೂ ಸ್ವಲ್ಪ ವ್ಯತ್ಯಾಸವಿರುತ್ತದೆ. ಈಗಿನ ಡಿಜಿಟಲ್ ಕ್ಯಾಮರಾಗಳಲ್ಲಿ ಈ ದೋಷವನ್ನು ಇನ್ನೊಂದು ರೀತಿಯಲ್ಲಿ ಸರಿಪಡಿಸಬಹುದು. ಅದು ಚಿತ್ರಿಸಬೇಕಾದುದನ್ನು ಕ್ಯಾಮರಾದ ಎಲ್‌ಸಿಡಿ ಪರದೆ ಮೂಲಕ ನೋಡುವುದು. ಈ ನಮೂನೆಯ ಕ್ಯಾಮರಾಗಳಲ್ಲಿ ಲೆನ್ಸ್ ಬದಲಿಸಲು ಆಗುವುದಿಲ್ಲ.

 

aim and shoot camera

ಏಮ್ ಆಂಡ್ ಶೂಟ್ ಕ್ಯಾಮರಾಗಳಲ್ಲಿ ಈಗ ತುಂಬ ಸುಧಾರಿತ ಮಾದರಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಅವುಗಳಲ್ಲಿ ಪ್ರಮುಖವಾದವು ಮೆಗಾಝೂಮ್ ಕ್ಯಾಮರಾಗಳು. ಇವುಗಳಿಗೆ ಝೂಮ್ ಲೆನ್ಸ್ ಅಳವಡಿಸಲಾಗಿರುತ್ತದೆ. ದೂರದಲ್ಲಿರುವ ವಸ್ತುವನ್ನು ಚಿತ್ರೀಕರಿಸಲು ಇವು ಸಹಾಯ ಮಾಡುತ್ತವೆ. ಮುವ್ವತ್ತು ಪಟ್ಟು ದೊಡ್ಡದು ಮಾಡಿ ತೋರಿಸುವ ಕ್ಯಾಮರಾಗಳೂ ಬಂದಿವೆ (30x).

SLR

ಎಸ್‌ಎಲ್‌ಆರ್ ಕ್ಯಾಮರಾಗಳಲ್ಲಿ ಹೆಸರೇ ಸೂಚಿಸುವಂತೆ ವಸ್ತುವನ್ನು ನೋಡಲು ಮತ್ತು ಚಿತ್ರೀಕರಿಸಲು ಒಂದೇ ಮಸೂರವನ್ನು ಬಳಸಲಾಗುತ್ತದೆ. ಮಸೂರ ಮತ್ತು ಚಿತ್ರೀಕರಣದ ಪರದೆ ಮಧ್ಯೆ ಒಂದು ಕನ್ನಡಿ ಬೆಳಕಿಗೆ 45 ಡಿಗ್ರಿ ಕೋನದಲ್ಲಿ ಇರುತ್ತದೆ. ಚಿತ್ರೀಕರಣದ ಸಮಯ ಬಿಟ್ಟು ಉಳಿದ ಸಮಯಗಳಲ್ಲಿ ಈ ಕನ್ನಡಿ ಮಸೂರದಿಂದ ಬರುವ ಬೆಳಕನ್ನು ಮೇಲ್ಮುಖವಾಗಿ ಪ್ರತಿಫಲಿಸುತ್ತದೆ. ಅಲ್ಲಿರುವ ಇನ್ನೊಂದು ಪೆಂಟಾಪ್ರಿಸಮ್ ಈ ಬೆಳಕನ್ನು ವ್ಯೂಫೈಂಡರ್‌ಗೆ ಕಳುಹಿಸುತ್ತದೆ. ಚಿತ್ರೀಕರಣದ ಸಮಯದಲ್ಲಿ ಈ ಕನ್ನಡಿ ಮೇಲಕ್ಕೆ ಹೋಗುತ್ತದೆ ಮತ್ತು ಅದರಿಂದಾಗಿ ಮಸೂರದಿಂದ ಬರುವ ಬೆಳಕು ನೇರವಾಗಿ ಚಿತ್ರೀಕರಣದ ಪರದೆ ಮೇಲೆ ಬೀಳುತ್ತದೆ. ಈ ನಮೂನೆಯ ಕ್ಯಾಮರಾಗಳಲ್ಲಿ ಚಿತ್ರೀಕರಣಕ್ಕೆ ಮತ್ತು ವಸ್ತುವನ್ನು ನೋಡಲು ಒಂದೇ ಮಸೂರ ಬಳಸುವುದರಿಂದಾಗಿ ನೋಡುವ ಮತ್ತು ಪಡೆಯುವ ಚಿತ್ರಗಳಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಈ ಕ್ಯಾಮರಾಗಳ ಇನ್ನೊಂದು ಸವಲತ್ತೆಂದರೆ ಹಲವು ನಮೂನೆಯ ಲೆನ್ಸ್ ಬದಲಿಸುವ ವ್ಯವಸ್ಥೆ. ವೃತ್ತಿನಿರತ ಛಾಯಾಗ್ರಾಹಕರು ಸಾಮಾನ್ಯವಾಗಿ ಇಂತಹ ಕ್ಯಾಮರಾಗಳನ್ನೇ ಬಳಸುತ್ತಾರೆ. ಈ ಕ್ಯಾಮರಾಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಅದರ ಜೊತೆ ಒಂದಕ್ಕಿಂತ ಹೆಚ್ಚು ಲೆನ್ಸ್‌ಗಳು ಜೊತೆಗಿರುವುದರಿಂದ ಇವುಗಳಿಗೆಂದೇ ದೊಡ್ಡ ಬ್ಯಾಗ್ ಬೇಕಾಗುತ್ತದೆ.

ಕವಾಟವೇಗ (ಶಟ್ಟರ್ ಸ್ಪೀಡ್ – shutter speed) – ಫೋಟೋ ತೆಗೆಯಬೇಕಾದರೆ ಮಸೂರ ಮತ್ತು ಚಿತ್ರೀಕರಣದ ಪರದೆ ನಡುವೆ ಇರುವ ಕವಾಟವನ್ನು (ಶಟ್ಟರ್) ಸ್ವಲ್ಪ ಸಮಯದ ಕಾಲ ತೆರೆದು ಮತ್ತೆ ಮುಚ್ಚಬೇಕಾಗುತ್ತದೆ. ಈ ಕವಾಟ ತೆರೆದು ಮುಚ್ಚುವ ಸಮಯವನ್ನು ಶಟ್ಟರ್ ಸ್ಪೀಡ್ ಎನ್ನುತ್ತಾರೆ. ಸಾಮಾನ್ಯವಾಗಿ ಇವನ್ನು ಸೆಕೆಂಡಿನ ಎಷ್ಟನೇ ಪಾಲು ಎಂದು ನಮೂದಿಸುತ್ತಾರೆ. ಉದಾಹರಣೆಗೆ 1/125 ಎಂದರೆ ಒಂದು ಸೆಕೆಂಡಿನ 125ನೆ ಒಂದರಷ್ಟು ಕಾಲದಲ್ಲಿ ಶಟ್ಟರ್ ತೆರೆದು ಮುಚ್ಚಲಾಗುತ್ತದೆ ಎಂದು ಅರ್ಥ. ಹಾರುವ ಹಕ್ಕಿ ಅಥವಾ ಆಟದಂತಹ ವೇಗವಾಗಿ ನಡೆಯುತ್ತಿರುವ ಕ್ರಿಯೆಯನ್ನು ಚಿತ್ರೀಕರಿಸುವಾಗ 1/250, 1/400, 1/1000  ಇತ್ಯಾದಿ ವೇಗದ ಶಟ್ಟರ್ ಸ್ಪೀಡ್ ಬಳಸಬೇಕಾಗುತ್ತದೆ.

 

ಧ್ಯುತಿರಂಧ್ರ (ಅಪೆರ್ಚರ್ – aperture) – ಕ್ಯಾಮರಾದ ಲೆನ್ಸ್ ಅನ್ನು ಸಾಮಾನ್ಯವಾಗಿ ಸಂಪೂರ್ಣವಾಗಿ ತೆರೆಯಲಾಗುವುದಿಲ್ಲ. ಬೆಳಕಿನ ಪ್ರಖರತೆಯನ್ನು ಅವಲಂಬಿಸಿ ಹೆಚ್ಚು ಯಾ ಕಡಿಮೆ ಮಾಡಲಾಗುತ್ತದೆ. ಇದನ್ನೇ ಅಪೆರ್ಚರ್ ಎನ್ನುತ್ತಾರೆ. ಈ ತೆರೆಯುವಿಕೆ ಅರ್ಥಾತ್  ವ್ಯಾಸವನ್ನು ಮಸೂರದ ನಾಭಿದೂರಕ್ಕೆ (focal length) ಅನುಪಾತ ಮೂಲಕ ಬರೆಯಲಾಗುತ್ತದೆ. ಉದಾ – f/2.8, f/5.6, f/18, ಇತ್ಯಾದಿ. ಮಸೂರದ ನಾಭಿದೂರ 50ಮಿ.ಮೀ. ಇದೆ ಮತ್ತು ಅಪೆರ್ಚರ್ ಸಂಖ್ಯೆ f/5.6 ಎಂದಾದಲ್ಲಿ ಮಸೂರದ ತೆರೆಯುವಿಕೆಯ ವ್ಯಾಸ ಸುಮಾರು 9 ವ್ಯಾಸ ಸುಮಾರು ೯ಮಿಮೀ ಎಂದು ಲೆಕ್ಕ ಹಾಕಬಹುದು. ಜಾಸ್ತಿ ಬೆಳಕಿದ್ದಲ್ಲಿ ಕಡಿಮೆ ಅಪೆರ್ಚರ್ ಬಳಸಬೇಕಾಗುತ್ತದೆ.

 

 

 

 

4 Responses to ಗ್ಯಾಜೆಟ್ ಲೋಕ – ೦೦೩ (ಜನವರಿ ೧೯, ೨೦೧೨)

 1. shrinivas shastri

  article made my many dough ts clear and given a very clear and easy method to understand the basics of camera but keep writing on it..

 2. Ramesh

  super article…….

 3. Yallanagoud Biradar

  ಸಹೋದರ ನಿಮ್ಮ ಗ್ಯಾಜೆಟ್ ಹೊಸ ಅಪ್ಟೆಟ್ಸ್ ನೋಟಿಫಿಕೇಶನ್ ಗಳಿಗಾಗಿ ಏನು ಮಾಡಬೇಕು

 4. Yallanagoud Biradar

  ಸಹೋದರ ನಮ್ಮ ಮನೆ ಮೇಲೆ ಜಿಯೋದು ಅಂತರ್ಜಲ ಸಂಪೂರ್ಣವಾಗಿ ಬರತ್ತೆ ಮನೆಯಲ್ಲಿ ಬರಲ್ಲ ಬಹಳ ನಿದಾನ ಜಿಯೋದವರಿಗೆ ದೂರು ನೀಡಿ ಸಾಕಾಇತು ನೀವೇ ಒಂದು ಸಲಹೆ ಕೊಡಿ

Leave a Reply