ಗ್ಯಾಜೆಟ್ ಲೋಕ – ೦೨೫ (ಜೂನ್ ೨೧, ೨೦೧೨)

ಕಿಸೆಯಲ್ಲಿ ವೈಫೈ ಹಾಗೂ ಹೆಚ್ಚಿಗೆ ಪವರ್

 

ನಿಮ್ಮ ಐಪ್ಯಾಡ್‌ಗೆ ಸಿಮ್ ಕಾರ್ಡ್ ಸೌಲಭ್ಯ ಇಲ್ಲ. ಮೊಬೈಲಲ್ಲೂ ಇಲ್ಲ. ಆದರೆ ನಿಮ್ಮಲ್ಲಿ ೩ಜಿ ಸಿಮ್ ಕಾರ್ಡ್ ಇದೆ. ಇಂತಹ ಸಂದರ್ಭದಲ್ಲಿ ಬಳಕೆಯಾಗುವುದು ಹುವೇಯವರ ವೈಫೈ ಡಾಟಾ ಕಾರ್ಡ್

 

ಬಸ್ಸಿನಲ್ಲಿ ಕುಳಿತಾಗಿದೆ. ಅಷ್ಟರಲ್ಲಿ ನಿಮ್ಮ ಸಹೋದ್ಯೋಗಿಯ ಫೋನ್ ಬರುತ್ತದೆ. ತಾನು ಒಂದು ಇಮೈಲ್ ಮಾಡಿದ್ದೇನೆ. ತುಂಬ ಅರ್ಜೆಂಟ್. ಯಾವುದೋ ಒಂದು ಕೆಲಸಕ್ಕೆ ನಿಮ್ಮ ಒಪ್ಪಿಗೆ ಆತನಿಗೆ ಇಮೈಲ್ ಮೂಲಕ ಬೇಕಾಗಿದೆ. ನಿಮ್ಮ ಮೊಬೈಲ್‌ನಲ್ಲಿರುವ ಸಿಮ್‌ಗೆ ಅಂತರಜಾಲ ಸಂಪರ್ಕ ಇಲ್ಲ. ಚಿಂತೆ ಇಲ್ಲ. ನಿಮ್ಮಲ್ಲಿ ಹುವೇಯವರ ವೈಫೈ ಡಾಟಾ ಕಾರ್ಡ್ ಇದ್ದಲ್ಲಿ ಅದು ಈಗ ಬಳಕೆಗೆ ಬರುತ್ತದೆ.

 

ಹುವೇಯವರು E560 ಎಂಬ ವೈಫೈ ಡಾಟಾ ಕಾರ್ಡ್ ತಯಾರಿಸಿದ್ದಾರೆ. ಇದರಲ್ಲಿ ಮಾಮೂಲಿ 3ಜಿ ಸಿಮ್ ಕಾರ್ಡ್ ಹಾಕಬಹುದು. ಬಿಎಸ್‌ಎನ್‌ಎಲ್‌ನವರು ಡಾಟಾ ಕಾರ್ಡ್ ಒಳಗೆ ಹಾಕಲು 3ಜಿ ಸಿಮ್ ಕಾರ್ಡ್ ನೀಡುತ್ತಾರೆ. ಅದನ್ನು ಈ ವೈಫೈ ಡಾಟಾ ಕಾರ್ಡ್ ಜೊತೆ ಬಳಸಬಹುದು. ಇದರಲ್ಲಿ ಸಿಮ್ ಕಾರ್ಡ್ ಮಾತ್ರವಲ್ಲ, ಮೈಕ್ರೋಎಸ್‌ಡಿ ಕಾರ್ಡ್ ಹಾಕಿ ಇದನ್ನು ಯುಎಸ್‌ಬಿ ಡ್ರೈವ್ ಆಗಿಯೂ ಬಳಸಿಕೊಳ್ಳಬಹುದು. ಇದು ಗಾತ್ರದಲ್ಲಿ ಚಿಕ್ಕದಾಗಿದೆ – 95 x 50 x 12 ಮಿಮಿ. ಅಂದರೆ ಅಂಗಿ ಕಿಸೆಯಲ್ಲಿ ಆರಾಮವಾಗಿ ಇಟ್ಟುಕೊಳ್ಳಬಹುದು. ಲಲನಾಮಣಿಯರು ತಮ್ಮ ಜಂಬದಚೀಲದಲ್ಲಿ ಇಟ್ಟುಕೊಳ್ಳಬಹುದು.

 

ವೈಫೈ ಡಾಟಾ ಕಾರ್ಡ್ ಎಂದರೇನು? ಅಂತರಜಾಲ ಸಂಪರ್ಕಕ್ಕೆ ಬಳಸುವ 3ಜಿ ಡಾಟಾ ಕಾರ್ಡ್ ಗೊತ್ತಿರಬಹುದು. ಅದನ್ನು ಯುಎಸ್‌ಬಿ ಕಿಂಡಿ ಮೂಲಕ ಗಣಕಕ್ಕೆ ಜೋಡಿಸಲಾಗುತ್ತದೆ. ಅಂದರೆ ಒಂದು ಸಲಕ್ಕೆ ಒಂದು ಗಣಕಕ್ಕೆ ಅಂತರಜಾಲ ಸಂಪರ್ಕ ಸಾಧ್ಯ. ಹುವೇ E560 ಡಾಟಾ ಕಾರ್ಡ್‌ನಲ್ಲಿ ವೈಫೈ ಸೌಕರ್ಯ ಇದೆ. ಇದರಲ್ಲಿ 3ಜಿ ಸಿಮ್ ಕಾರ್ಡ್ ಹಾಕಬೇಕು. ಸ್ವಿಚ್ ಆನ್ ಮಾಡಿದರೆ ಸಾಕು. ಇದು ವೈಫೈ ಹಾಟ್‌ಸ್ಪಾಟ್ ಆಗಿ ಕೆಲಸ ಮಾಡುತ್ತದೆ. ಏಕಕಾಲದಲ್ಲಿ ಗರಿಷ್ಠ ಐದು ಸಾಧನಗಳಿಗೆ ಅಂತರಜಾಲ ಸಂಪರ್ಕ ನೀಡಬಲ್ಲುದು. ಮನೆಯಲ್ಲಿರುವ ಐಪ್ಯಾಡ್, ಟ್ಯಾಬ್ಲೆಟ್, ಮೊಬೈಲ್ ಫೋನ್, ಲ್ಯಾಪ್‌ಟಾಪ್ ಇವುಗಳಿಗೆ ಏಕಕಾಲಕ್ಕೆ ಅಂತರಜಾಲ ಸಂಪರ್ಕ ಸಿಕ್ಕಂತೆ. ಡೆಸ್ಕ್‌ಟಾಪ್ ಗಣಕಕ್ಕೆ ಮಾತ್ರ ನೇರವಾಗಿ ಯುಎಸ್‌ಬಿ ಕೇಬಲ್ ಮೂಲಕ ಜೋಡಿಸಬೇಕು. ಅದಕ್ಕೂ ಸವಲತ್ತು ಈ ಸಾಧನದಲ್ಲಿದೆ. ಒಂದು ಗಣಕಕ್ಕೆ ಯುಎಸ್‌ಬಿ ಮೂಲಕ ಜೋಡಿಸಬಹುದು.

 

ಹುವೇ E560 ಡಾಟಾ ಕಾರ್ಡ್‌ನ ಗುಣವೈಶಿಷ್ಟ್ಯಗಳು: ಜಿಎಸ್‌ಎಂ 3ಜಿ ಸಿಮ್ ಕಾರ್ಡ್, ಡೌನ್‌ಲೋಡ್ ವೇಗ – 7.2, ಹಾಗೂ ಅಪ್‌ಲೋಡ್ ವೇಗ 5.76 ಎಂಬಿಪಿಎಸ್. 1500mAh  ಬ್ಯಾಟರಿ. ಒಮ್ಮೆ ಪೂರ್ತಿ ಚಾರ್ಜ್ ಮಾಡಿದ ನಂತರ ಕೆಲಸ ಮಾಡುವ ಅವಧಿ 5 ಗಂಟೆ. ಚಾರ್ಜಿಂಗ್ ಅವಧಿ 2.5 ಗಂಟೆ. ವೈಫೈ ಆವೃತ್ತಿ – 802.11n. ಓಎಲ್‌ಇಡಿ ಪರದೆ.

 

ನಾನು ಇದನ್ನು ಎರಡು ವಾರಗಳಿಂದ ಬಳಸುತ್ತಿದ್ದೇನೆ. ಗುಣಮಟ್ಟ ಚೆನ್ನಾಗಿದೆ. ಬೆಲೆ ರೂ.4500 (flipkart.com). ಮೈಕ್ರೋಮ್ಯಾಕ್ಸ್‌ನವರು ಇದೇ ಮಾದರಿಯ ಸಾಧನ ತಯಾರಿಸಿದ್ದಾರೆ. ಬೆಲೆ ಸುಮಾರು 3000ರೂ. ಅದೂ ಕೂಡ ಚೆನ್ನಾಗಿದೆ ಎಂದು ಅದನ್ನು ಕೊಂಡು ಬಳಸುತ್ತಿರುವ ನನ್ನ ಸ್ನೇಹಿತ ಹೇಳಿದ್ದಾನೆ. ಎರಡನ್ನು ಹೋಲಿಸಿ ನೋಡಬೇಕು ಎಂಬ ನನ್ನ ಆಸೆ ಪೂರೈಸಿಲ್ಲ.

 

ಹೆಚ್ಚಿಗೆ ಪವರ್

 

ನೀವು ಕೊಡಚಾದ್ರಿಗೆ ಚಾರಣಕ್ಕೆ ಹೋಗುತ್ತಿದ್ದೀರಿ. ಎರಡು ಮೂರು ದಿನಗಳ ಕಾಲ ವಿದ್ಯುತ್ ಸಂಪರ್ಕ ಇಲ್ಲದ ಕಾಡಿನಲ್ಲಿ ಗುಡಾರಗಳಲ್ಲಿ ವಾಸ. ಊಟ, ನೀರು ಎಲ್ಲ ಇದೆ. ಆದರೆ ಮೊಬೈಲಿಗೆ ಪವರ್? ಕೆಲವು ಫೋನ್‌ಗಳು ಮೂರು ದಿನಗಳ ಕಾಲ ಪವರ್ ಉಳಿಸಿಕೊಳ್ಳುತ್ತವೆ. ಆದರೆ ಈ ಸ್ಮಾರ್ಟ್‌ಫೋನ್‌ಗಳು ಇದ್ದಾವಲ್ಲ, ಅವು ಒಂದು ದಿನ ಪವರ್ ಇಟ್ಟುಕೊಂಡರೆ ಅದೇ ಹೆಚ್ಚು. ಸಾಯಂಕಾಲ ಇನ್ನೊಮ್ಮೆ ಚಾರ್ಜ್ ಮಾಡಬೇಕಾಗುತ್ತದೆ. ಅಂತಹದ್ದರಲ್ಲಿ ಮೂರುದಿನಕ್ಕೆ ಖಂಡಿತ ಅವುಗಳಲ್ಲಿ ಶಕ್ತಿ ಉಳಿದಿರುವುದಿಲ್ಲ. ನೀವು ಸ್ಮಾರ್ಟ್‌ಫೋನ್ ಬಳಸುವವರಾದಲ್ಲಿ ಕೆಲವೊಮ್ಮೆ ಸಾಯಂಕಾಲದ ಹೊತ್ತಿಗೆ ಚಾರ್ಜ್ ಮುಗಿದಿರುತ್ತದೆ ಹಾಗೂ ಚಾರ್ಜ್ ಮಾಡಲು ನಿಮ್ಮ ಕೈಯಲ್ಲಿ ಚಾರ್ಜರ್ ಇಲ್ಲ ಅಥವಾ ಚಾರ್ಜ್ ಪಾಯಿಂಟ್ ಸಿಕ್ಕಿಲ್ಲ. ಹೀಗೂ ಆಗುವುದಿದೆ. ಇಂತಹ ಸಂದರ್ಭಗಳಿಗೆ ಬೇಕು ಹೆಚ್ಚಿಗೆ ಪವರ್.

 

ಚಾಯಿಕ್ಸ್ ಕಂಪೆನಿಯವರು ಇಂತಹ ಬೇಕಾದಾಗ ಬೇಕಿದ್ದಲ್ಲಿ ಪವರ್ ನೀಡಬಲ್ಲ ಸಾಧನಗಳನ್ನು ತಯಾರಿಸಿದ್ದಾರೆ. ಅವರ Cooler Master Choiix Charger C-2021-K1S0 ಮಾದರಿ ನನ್ನಲ್ಲಿದೆ. ಕೆಲವು ಸಮಯಗಳಿಂದ ಬಳಸುತ್ತಿದ್ದೇನೆ. ಬೆಲೆ ರೂ.3220 (flipkart.com).  ಕೊಟ್ಟ ಹಣಕ್ಕೆ ಮೋಸವಿಲ್ಲ. ಇದರ ಶಕ್ತಿ 5600 mAh . ನನ್ನ ಮೊಬೈಲ್ ಫೋನ್‌ನ ಬ್ಯಾಟರಿ 2500 mAh. ಸಾಮಾನ್ಯ ಫೋನ್‌ಗಳ ಬ್ಯಾಟರಿಗಳು 1500 mAh ಇರುತ್ತವೆ. ಅಂದರೆ ಇದನ್ನು ಬಳಸಿ ಸಾಮಾನ್ಯ ಫೋನನನ್ನು 3-4 ಸಲ ಚಾರ್ಜ್ ಮಾಡಬಹುದು. ಇದರ ಗಾತ್ರ 80 x 60 x 25 ಮಿಮಿ. ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯ. ಜೊತೆ ಎರಡು ಯುಎಸ್‌ಬಿ ಕೇಬಲ್‌ಗಳಿವೆ. ಒಂದು ಇದನ್ನು ಚಾರ್ಜ್ ಮಾಡಲು ಮತ್ತು ಇನ್ನೊಂದು ಇದನ್ನು ಬಳಸಿ ಚಾರ್ಜ್ ಮಾಡಲು. ಫೋನ್ ಮಾತ್ರವಲ್ಲ, ಯುಎಸ್‌ಬಿ ಮೂಲಕ ಚಾರ್ಜ್ ಮಾಡಬಲ್ಲ ಟ್ಯಾಬ್ಲೆಟ್, ಬ್ಲೂಟೂತ್, ಇತ್ಯಾದಿ ಸಾಧನಗಳನ್ನು ಚಾರ್ಜ್ ಮಾಡಲು ಇದನ್ನು ಬಳಸಬಹುದು. ಇದನ್ನು ಪೂರ್ತಿ ಚಾರ್ಜ್ ಮಾಡಲು ಸುಮಾರು 6 ರಿಂದ 8  ಗಂಟೆ ಬೇಕು.

 

ಗ್ಯಾಜೆಟ್ ಸಲಹೆ

 

ಕಿರಣ್ ಅವರ ಪ್ರಶ್ನೆ: ನನಗೆ ಒಂದು ಲ್ಯಾಪ್‌ಟಾಪ್ ಕೊಳ್ಳಬೇಕಾಗಿದೆ. ಅದರಲ್ಲಿ i5, 500 ಗಿಗಾಬೈಟ್ ಹಾರ್ಡ್ ಡಿಸ್ಕ್, 1 ಗಿಗಾಬೈಟ್ ಗ್ರಾಫಿಕ್ಸ್, 4 ಗಿಗಾಬೈಟ್ RAM, 15.6 ಇಂಚು ಪರದೆ ಎಲ್ಲ ಇರಬೇಕು. ನನ್ನ ಬಜೆಟ್ 45 ಸಾವಿರ ರೂ. ಯಾವುದನ್ನು ಕೊಳ್ಳಬಹುದು?

ಉ: ನೀವು ಲಿನೊವೊ ಕಂಪೆನಿಯ ಐಡಿಯಾಪ್ಯಾಡ್ Z570 ಕೊಳ್ಳಬಹುದು.

 

-ಡಾ| ಯು. ಬಿ. ಪವನಜ

 

1 Response to ಗ್ಯಾಜೆಟ್ ಲೋಕ – ೦೨೫ (ಜೂನ್ ೨೧, ೨೦೧೨)

  1. thilakraj n

    Dear sir,

    I want to purchase one general data card with wifi it should be high speed which is better please give me suggestion.

    Thnaking you,

Leave a Reply