ಗ್ಯಾಜೆಟ್ ಲೋಕ – ೦೧೯ (ಮೇ ೧೦, ೨೦೧೨)

ಎಚ್‌ಸಿಎಲ್ ಮಿ ಟ್ಯಾಬ್ಲೆಟ್

 

ತುಂಬ ದುಬಾರಿಯೂ ಅಲ್ಲದ, ಅತಿ ಅಗ್ಗದ್ದೂ ಅಲ್ಲದ ಒಂದು ಮಧ್ಯಮ ಬೆಲೆಯ ಟ್ಯಾಬ್ಲೆಟ್ HCL ME X1. ಅದರ ಗುಣಾವಗುಣಗಳನ್ನು ಸ್ವಲ್ಪ ನೋಡೋಣ.

 

ಅತ್ತ ಲ್ಯಾಪ್‌ಟಾಪೂ ಅಲ್ಲದ, ಇತ್ತ ದೊಡ್ಡ ಫೋನ್ ಎಂದೂ ಅನಿಸಿಕೊಳ್ಳಲಾರದ ಮಧ್ಯಮ ದರ್ಜೆಯ ಗ್ಯಾಜೆಟ್‌ಗಳೆ ಈ ಟ್ಯಾಬ್ಲೆಟ್‌ಗಳು. ಇವುಗಳನ್ನು ಬಳಸಿ ಅಂತರಜಾಲ ವೀಕ್ಷಣೆ, ಇಮೈಲ್, ಸಂಗೀತ ಆಲಿಸುವುದು, ವೀಡಿಯೋ ವೀಕ್ಷಣೆ, ಕಡತಗಳ ವೀಕ್ಷಣೆ ಹಾಗೂ ಚಿಕ್ಕಪುಟ್ಟ ಸಂಪಾದನೆ -ಎಲ್ಲ ಮಾಡಬಹುದು. ಆದರೆ ಇವು ಪೂರ್ಣಪ್ರಮಾಣದ ಗಣಕ ಅಥವಾ ಲ್ಯಾಪ್‌ಟಾಪ್‌ಗಳ ಕೆಲಸವನ್ನು ಮಾಡಲಾರವು. ಬಹುಪಾಲು ಮಂದಿ ಈಗಾಗಲೇ ಒಂದು ಗಣಕ ಇರುವವರೇ ಈ ಟ್ಯಾಬ್ಲೆಟ್ ಕೊಳ್ಳುತ್ತಾರೆ. ಬಿಸಿನೆಸ್ ಮೀಟಿಂಗ್‌ಗಳಲ್ಲಿ ಎರಡು ಮೂರು ವ್ಯಕ್ತಿಗಳಿಗೆ ಪ್ರಸೆಂಟೇಶನ್ ಕೊಡಬೇಕಿದ್ದಲ್ಲಿ ಇವು ಸೂಕ್ತ. ತೆಳ್ಳಗಾಗಿದ್ದು, ತೆಗೆದುಕೊಂಡು ಹೋಗಲು ಸುಲಭವಾಗಿದ್ದು ಇಂತಹ ಕೆಲಸಕ್ಕೆಂದೇ ಹೇಳಿ ಮಾಡಿಸಿದಂತಿವೆ. ಮನೆಮನೆಗಳಿಗೆ, ಅಂಗಡಿಗಳಿಗೆ, ಮಾಹಿತಿ ಸಂಗ್ರಹಕ್ಕೆ ಹೋದುವವರಿಗೂ ಇದು ತುಂಬ ಉಪಯುಕ್ತ. ಪಿಗ್ಮಿ ಸಂಗ್ರಹ ಮಾಡುವ ಏಜೆಂಟರಿಗಂತೂ ಇದು ಹೇಳಿ ಮಾಡಿಸಿದಂತಿದೆ. ದುರದೃಷ್ಟಕ್ಕೆ ಅವರಿಗಾಗಿ ಇನ್ನೂ ಯಾರೂ ಅಗತ್ಯ ತಂತ್ರಾಂಶ ತಯಾರಿಸಿಲ್ಲ.

 

ಈ ಟ್ಯಾಬ್ಲೆಟ್‌ಗಳಲ್ಲಿ ಪ್ರಮುಖವಾಗಿ ಮೂರು ಮಾದರಿ ಅಥವಾ ಕಾರ್ಯಾಚರಣ ವ್ಯವಸ್ಥೆಯನ್ನು (operating system) ಬಳಸುವವಿವೆ. ಅವು ಆಪಲ್ ಕಂಪೆನಿಯ ಐಪ್ಯಾಡ್ (ಐಓಎಸ್), ಆಂಡ್ರೋಯಿಡ್ ಮತ್ತು ಮೈಕ್ರೋಸಾಫ್ಟ್ ವಿಂಡೋಸ್ ಬಳಸುವವು. ಇವುಗಳಲ್ಲಿ ವಿಂಡೋಸ್ ಟ್ಯಾಬ್ಲೆಟ್‌ಗಳು ಇನ್ನೂ ಶೈಶವಾವಸ್ಥೆಯಲ್ಲಿವೆ. ಮಾರುಕಟ್ಟೆಯಲ್ಲಿ ಮೊದಲನೆಯ ಸ್ಥಾನದಲ್ಲಿ (ಜಾಗತಿಕವಾಗಿ) ಆಪಲ್ ಕಂಪೆನಿಯ ಐಪ್ಯಾಡ್ ಇದೆ. ಆಂಡ್ರೋಯಿಡ್ ಬಳಸುವ ಟ್ಯಾಬ್ಲೆಟ್ ತಯಾರಿಸುವ ಕಂಪೆನಿಗಳು ಹಲವಾರಿವೆ. ಆಂಡ್ರೋಯಿಡ್ ಟ್ಯಾಬ್ಲೆಟ್‌ಗಳು ದುಬಾರಿ ಎನಿಸುವ ಬೆಲೆಯಿಂದ ಹಿಡಿದು ಕೈಗೆಟುಕಬಹುದಾದ ಅಥವಾ ಅಗ್ಗ ಅನಿಸಿಕೊಳ್ಳಬಹುದಾದ ಬೆಲೆಯಲ್ಲೂ ಲಭ್ಯ. ಈ ಸಲ ಅಂತಹ ಒಂದು ಟ್ಯಾಬ್ಲೆಟ್ ಕಡೆ ಗಮನ ಹರಿಸೋಣ.

 

ಎಚ್‌ಸಿಎಲ್ ಕಂಪೆನಿಯು ತಯಾರಿಸಿದ ಈ HCL ME X1 ಟ್ಯಾಬ್ಲೆಟ್ ಆಂಡ್ರೋಯಿಡ್ ಕಾರ್ಯಾಚರಣ ವ್ಯವಸ್ಥೆ ಆವೃತ್ತಿ 2.3.3 ಅನ್ನು ಒಳಗೊಂಡಿದೆ. 1 ಗಿಗಾಹರ್ಟ್ಸ್ ಪ್ರೋಸೆಸರ್ ಇದೆ. 512 ಮೆಗಾಬೈಟ್ ಪ್ರಾಥಮಿಕ ಮತ್ತು 4 ಗಿಗಾಬೈಟ್ ಹೆಚ್ಚುವರಿ ಮೆಮೊರಿ ಇದೆ. ಇದರ ಜೊತೆ 32 ಗಿಗಾಬೈಟ್ ತನಕ ಎಸ್‌ಡಿ ಕಾರ್ಡ್ ಮೂಲಕ ಮೆಮೊರಿ ಸೇರಿಸಿಕೊಳ್ಳಬಹುದು. ಯುಎಸ್‌ಬಿ ಪೋರ್ಟ್ ಇದೆ. ಅದಕ್ಕೆ ಯುಎಸ್‌ಬಿ ಡ್ರೈವ್ ಸೇರಿಸಿ ಅದರಿಂದ ಫೈಲುಗಳನ್ನು ಬಳಸಿಕೊಳ್ಳಬಹುದು. ಅಂದರೆ 1 ಗಿಗಾಬೈಟ್ ಗಾತ್ರದ ಸಿನಿಮಾ ನೋಡಬೇಕಿದ್ದರೆ ಅದನ್ನು ಟ್ಯಾಬ್ಲೆಟ್‌ಗೆ ವರ್ಗಾಯಿಸಿಕೊಳ್ಳಬೇಕಾಗಿಲ್ಲ. ಯುಎಸ್‌ಬಿ ಡ್ರೈವಿನಲ್ಲಿ ಇಟ್ಟುಕೊಂಟು ಅದನ್ನು ಜೋಡಿಸಿ ಅಲ್ಲಿಂದಲೇ ನೋಡಬಹುದು. ಟ್ಯಾಬ್ಲೆಟ್‌ನಲ್ಲಿರುವ ಯಾವುದೋ ಒಂದು ಫೈಲನ್ನು ನಿಮ್ಮ ಗೆಳೆಯರಿಗೆ ಮಾರ್ಗದ ಬದಿಯಲ್ಲಿ ನಿಂತುಕೊಂಡು ಯುಎಸ್‌ಬಿ ಕಿಂಡಿ ಮೂಲಕ ಪ್ರತಿ ಮಾಡಿಕೊಡಬಹುದು.

 

7 ಇಂಚು ಗಾತ್ರದ, 800×480 ಪಿಕ್ಸೆಲ್ ರೆಸೊಲೂಶನ್ ಇರುವ ಕೆಪಾಸಿಟಿವ್ ಸ್ಪರ್ಶಪರದೆ (touchscreen) ಇದೆ. ಪರದೆಯ ಗುಣಮಟ್ಟ ಅಷ್ಟಕ್ಕಷ್ಟೆ. ಸುಕೋಮಲವಾಗಿ ಅಂದರೆ ಮೆತ್ತಗೆ ಒತ್ತಿದರೆ ಇದು ಕೆಲಸ ಮಾಡುವುದಿಲ್ಲ. ಸ್ವಲ್ಪ ಶಕ್ತಿಹಾಕಿ ಒತ್ತಬೇಕು. ಸಿನಿಮಾ ನೊಡಲು ಅಡ್ಡಿಯಿಲ್ಲ. ಆದರೆ ಆಪಲ್ ಐಪ್ಯಾಡ್‌ನ ಗುಣಮಟ್ಟದ ಪರದೆ ಇದರಲ್ಲಿಲ್ಲ. 10 ಸಾವಿರ ರೂ.ಗೆ ಇನ್ನೆಷ್ಟು ಸಿಗಬಹುದು? ಐಪ್ಯಾಡ್‌ಗೆ ಕನಿಷ್ಠ 24,500 ರೂ. ಬೆಲೆ ಇದೆ.

 

2 ಮೆಗಾಪಿಕ್ಸೆಲ್‌ನ ಫ್ರಂಟ್ ಕ್ಯಾಮರಾ ಇದೆ. ಆದರೆ ಮುಂದುಗಡೆ ಇನ್ನೊಂದು ಕ್ಯಾಮರ ಇಲ್ಲ. ಇದಕ್ಕೆ ಅಂತರಜಾಲ ಸಂಪರ್ಕಕ್ಕೆ ವೈಫೈ ಮಾತ್ರ ಇದೆ. 3ಜಿ ಇಲ್ಲ. ಆದುದರಿಂದ ಕ್ಯಾಮರಾವನ್ನು ವಸ್ತುಗಳ ಚಿತ್ರ ತೆಗೆಯುವಂತೆ ಅಳವಡಿಸುವ ಬದಲು ನಮ್ಮ ಮುಖ ಕಾಣುವಂತೆ ಅಳವಡಿಸಿದ್ದು ಯಾಕೋ ಸರಿಯಿಲ್ಲ. ಬಹುಶಃ ವೀಡಿಯೋ  ಚಾಟ್ ಮಾಡುವುದಕ್ಕೆ ಅನುವಾಗಲಿ ಎಂದು ಇರಬಹುದು. ಆದರೆ 3ಜಿ ಇಲ್ಲದಿರುವುದರಿಂದ ಕೇವಲ ಅಂತರಜಾಲ ಮೂಲಕ ಮಾತ್ರ ಚಾಟ್ ಮಾಡಬಹುದಷ್ಟೆ. ಯುಎಸ್‌ಬಿ ಕಿಂಡಿಗೆ ನಿಮ್ಮ ಮಾಮೂಲಿ ಯುಎಸ್‌ಬಿ ಡಾಂಗಲ್ (3ಜಿ ಮೋಡೆಮ್) ಜೋಡಿಸಿ ಅಂತರಜಾಲ ಸಂಪರ್ಕ ಸಾಧ್ಯ. ಇದು ಉತ್ತಮ ಸೌಕರ್ಯ. ಹೈಡೆಫಿನಿಶನ್ ವೀಡಿಯೋ ಸೌಲಭ್ಯ ಇದೆ. HDMI ಪೋರ್ಟ್ ಕೂಡ ಇದೆ. ಅಂದರೆ ಇದನ್ನು ಆದುನಿಕ ಟಿವಿಗೆ ಜೋಡಿಸಿ ಸಿನಿಮಾ ನೋಡಬಹುದು. ಗುರುತ್ವಾಕರ್ಷಣೆಯನ್ನು ಗುರುತಿಸಿ ಟ್ಯಾಬ್ಲೆಟ್ ಎತ್ತಕಡೆಗೆ ನೋಡುತ್ತಿದೆ ಎಂದು ಅರಿತು ಅದರಂತೆ ಪರದೆಯನ್ನು ತಿರುಗಿಸುತ್ತದೆ. 3500mAH ಬ್ಯಾಟರಿ ಇದೆ. ಪೂರ್ತಿ ಚಾರ್ಜ್ ಮಾಡಿದ ನಂತರ ಸುಮಾರು ಒಂದು ದಿನ ಕೆಲಸ ಮಾಡಬಹುದು.

 

ಎಚ್‌ಸಿಎಲ್ ಕಂಪೆನಿ ತನ್ನದೇ ಆದ ಆಪ್ (ಮೊಬೈಲ್ ತಂತ್ರಾಂಶ) ಸ್ಟೋರ್ ಇಟ್ಟುಕೊಂಡಿದೆ. ಅದೇನೋ ಒಳ್ಳೆಯದೇ ಇರಬಹುದು. ಆದರೆ ಗೂಗಲ್ ಪ್ಲೇ (ಮಾರುಕಟ್ಟೆ) ಸೌಲಭ್ಯವನ್ನು ತೆಗೆದುಹಾಕಿದ್ದು ಸರಿಯಿಲ್ಲ. ಎಚ್‌ಸಿಎಲ್‌ನವರ ಮಾರುಕಟ್ಟೆಯಲ್ಲಿ ಸೀಮಿತ ತಂತ್ರಾಂಶಗಳು ಲಭ್ಯ. ಅದಕ್ಕೆ ಇದುತನಕ ನನಗೆ ಲಾಗಿನ್ ಆಗಲು ಸಾಧ್ಯವಾಗಿಲ್ಲ. ಅವರ ಜಾಲತಾಣವು ಟ್ಯಾಬ್ಲೆಟ್‌ನ ಹಿಂಬದಿಯಲ್ಲಿ ನೀಡಿರುವ ಕ್ರಮಸಂಖ್ಯೆಯನ್ನು ಒಪ್ಪಿಕೊಳ್ಳುತ್ತಿಲ್ಲ. ನಾನಂತೂ ಗೂಗ್ಲ್ ಪ್ಲೇಯ ಆಪ್ (app -.apk file) ಅನ್ನು ಅಂತರಜಾಲದಲ್ಲಿ ಹುಡುಕಿ ಅದನ್ನು ಗಣಕದಲ್ಲಿ ಡೌನ್‌ಲೋಡ್ ಮಾಡಿಕೊಂಡು ನಂತರ ಅದನ್ನು ನನಗೇ ಇಮೈಲ್ ಮಾಡಿಕೊಂಡೆ. ನಂತರ ಟ್ಯಾಬ್ಲೆಟ್‌ನಲ್ಲಿ ಆ ಫೈಲನ್ನು ಇಮೈಲ್ ಮೂಲಕ ಡೌನ್‌ಲೋಡ್ ಮಾಡಿಕೊಂಡು ಅದನ್ನು ಇನ್‌ಸ್ಟಾಲ್ ಮಾಡಿಕೊಂಡೆ. ಈಗ ನನ್ನ ಟ್ಯಾಬ್ಲೆಟ್‌ನಲ್ಲಿ ಗೂಗ್ಲ್ ಮಾರುಕಟ್ಟೆ ಲಭ್ಯ!

 

ಒಟ್ಟಿನಲ್ಲಿ ಹೇಳುವುದಾದರೆ ಇದನ್ನು ಒಂದು ರಾಜಿಸೂತ್ರದ ಗ್ಯಾಜೆಟ್ ಎನ್ನಬಹುದು. ಈಗ ಬಂದ ಸುದ್ದಿಯಂತೆ ಎಚ್‌ಸಿಎಲ್‌ನವರು ಇನ್ನೂ ಎರಡು ಮಾದರಿಗಳನ್ನು ಇದಕ್ಕಿಂತ ಒಂದೆರಡು ಸಾವಿರ ರೂ. ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಿಡುವವರಿದ್ದಾರೆ. ಅವು ಇದಕ್ಕಿಂತ ಚೆನ್ನಾಗಿರಬಹುದೇನೋ? ಅಥವಾ ಮೈಕ್ರೋಮ್ಯಾಕ್ಸ್‌ನವರು ಘೋಷಿಸಿರುವ 6,500 ರೂ ಬೆಲೆಯ ಟ್ಯಾಬ್ಲೆಟ್ ಇದಕ್ಕಿಂತ ಉತ್ತಮ ಖರೀದಿ ಆಗಬಹುದೇನೋ? ಬಳಸಿಯೇ ನೋಡಬೇಕು.

 

ಎಚ್‌ಸಿಎಲ್ ಮಿ ಟ್ಯಾಬ್ಲೆಟ್‌ನ ಜಾಲತಾಣ www.hclmetablet.com.

 

ಗ್ಯಾಜೆಟ್ ಸಲಹೆ

 

ರಾಜಶೇಖರ ಗುರಡ್ಡಿಯವರ ಪ್ರಶ್ನೆ: ನಿಮ್ಮ ಗ್ಯಾಜೆಟ್‌ಲೋಕ ಅಂಕಣದ ಹಳೆಯ ಸಂಚಿಕೆಗಳು ಎಲ್ಲಿ ಸಿಗುತ್ತವೆ?

ಉ: vishvakannada.com/gadgetloka ಜಾಲತಾಣದಲ್ಲಿ.

2 Responses to ಗ್ಯಾಜೆಟ್ ಲೋಕ – ೦೧೯ (ಮೇ ೧೦, ೨೦೧೨)

  1. ಕುಮಾರಸ್ವಾಮಿ.ಹೆಚ್.ಎಂ

    ಸರ್.ನನಗೆ ಗ್ಯಾಜಟ್ ಲೋಕ ಜಾಲತಾಣದಲ್ಲಿ ಎಲ್ಲಾ ಅಂಕಣಗಳು ಅಂದರೆ ಆಯಾ ವಾರದ ಅಂಕಣಗಳು ಸಿಗುವುದಿಲ್ಲ ಮತ್ತು ನಿಮ್ಮದೆ ಬೇರೆ ಜಾಲತಾಣವಿದ್ದಲ್ಲಿ ದಯವಿಟ್ಟು ತಿಳಿಸಿ.

  2. Badarinath Palavalli

    ಟ್ಯಾಬ್ಲೆಟ್ HCL ME X1 ನಲ್ಲಿ ಕನ್ನಡ ಓದುವುದು ಮತ್ತು ಬೆರಳಚ್ಚು ಮಾಡಲು ಯಾವ ತಂತ್ರಾಂಶ ಬಳಸಬೇಕು? ಅದರ ಲಿಂಕ್ ಕೊಡುತ್ತೀರ?

Leave a Reply