ಗ್ಯಾಜೆಟ್ ಲೋಕ – ೦೧೫ (ಎಪ್ರಿಲ್ ೧೨, ೨೦೧೨)

ಚಿತ್ರವಿಚಿತ್ರ ಗ್ಯಾಜೆಟ್‌ಗಳು

 

ಕೆಲವು ವಾರಗಳಿಂದ ಅವ್ಯಾಹತವಾಗಿ ಬೇರೆ ಬೇರೆ ಗ್ಯಾಜೆಟ್‌ಗಳ ವಿಮರ್ಶೆ ಓದಿ ಸ್ವಲ್ಪ ಮಂಡೆಬಿಸಿಯಗಿದೆಯೇ? ಯಾಕೆ ಈ ವಾರ ಹೀಗೆ ಸುಮ್ನೆ ಒಂದಿಷ್ಟು ಮಸಾಲಾ ಗ್ಯಾಜೆಟ್‌ಗಳ ಕಡೆ ಗಮನಹರಿಸಬಾರದು? ಇಷ್ಟೆಲ್ಲ ಗ್ಯಾಜೆಟ್ ಕೊಳ್ಳಲು ನಮ್ಮಲ್ಲಿ ಹಣವಿಲ್ಲ ಎನ್ನುತ್ತೀರಾ? ಚಿಂತಿಸಬೇಡಿ. ಇವು ಯಾವುವೂ ಭಾರತದಲ್ಲಿ ಲಭ್ಯವಿಲ್ಲ!

 

ಗೋಡೆಯಲ್ಲಿ ಯುಎಸ್‌ಬಿ ಚಾರ್ಜರ್

 

ಮೊಬೈಲ್ ಫೋನ್, ಟ್ಯಾಬ್ಲೆಟ್, ಎಂಪಿ೩ ಪ್ಲೇಯರ್, ಬ್ಲೂಟೂತ್ ಹೆಡ್‌ಸೆಟ್ -ಹೀಗೆ ಹಲವಾರು ಗ್ಯಾಜೆಟ್‌ಗಳಿಗೆ ಚಾರ್ಜ್ ಮಾಡಲು ಬಳಕೆಯಾಗುವುದು ಯುಎಸ್‌ಬಿ ಚಾರ್ಜರ್. ಈ ಚಾರ್ಜರ್‌ಗಳನ್ನು ಮನೆ ತುಂಬ ಹರಡಿಕೊಂಡು ಖಾಲಿ ಸಿಕ್ಕ ಪ್ಲಗ್ ಪಾಯಿಂಟ್‌ಗೆ ತುರುಕಿಸಿ ಗ್ಯಾಜೆಟ್‌ಗೆ ಚಾರ್ಜ್ ಮಾಡುವುದು ಎಲ್ಲರೂ ಅನುಸರಿಸುವ ವಿಧಾನ. ಮನೆಯ ಸ್ವಿಚ್‌ಬೋರ್ಡ್‌ನಲ್ಲೇ ವಿದ್ಯುತ್ ಪ್ಲಗ್ ಪಾಯಿಂಟ್ ಪಕ್ಕ ಇನ್ನೊಂದು ಯುಎಸ್‌ಬಿ ಚಾರ್ಜ್ ಪಾಯಿಂಟ್ ಇದ್ದರೆ ಒಳ್ಳೆಯದಲ್ಲವೇ? ಹೌದು. ಅದೂ ಈಗ ಲಭ್ಯವಿದೆ. ಆದರೆ ಸದ್ಯ ಇದು ಅಮೆರಿಕದಲ್ಲಿ ದೊರೆಯುತ್ತಿದೆ. Ctrl-C ಮತ್ತು Ctrl-V ಯಲ್ಲಿ ಪರಿಣತರಾದ ನಮ್ಮವರು ಯಾರಾದರೂ ಇದನ್ನು ನಕಲು ಮಾಡುವ ತನಕ ಕಾಯಬೇಕು!

ಸಂಗೀತ ಅಂಗಿ

 

ದಿನನಿತ್ಯದ ಕೆಲಸಗಳನ್ನು ಮಾಡಿ ಮಾಡಿ ಬೋರ್ ಆಗಿದೆಯೇ? ಸ್ವಲ್ಪ ಸಂಗೀತ ಆಲಿಸೋಣವೇ? ಅದರಲ್ಲೇನು ವಿಶೇಷ ಅಂತೀರಾ? ಸಂಗೀತ ಆಲಿಸಲು ಚಿತ್ರವಿಚಿತ್ರ ಎಂಪಿ೩ ಪ್ಲೇಯರ್‌ಗಳು ಇರುವುದು ಗೊತ್ತೇ ಇರಬಹುದು. ಉದಾಹರಣೆಗೆ ಎಂಪಿ೩ ಪ್ಲೇಯರ್ ಇರುವ ತಂಪುಕನ್ನಡಕ, ಸರ ಮತ್ತು ಪೆಂಡೆಂಟ್, ವಾಚ್, ಪೆನ್, ಇತ್ಯಾದಿ. ಆದರೆ ಇದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂಗೀತ ಹೊರಡಿಸುವ ಅಂಗಿ ಕೇಳಿದ್ದೀರಾ? ಈಗ ಅದೂ ಲಭ್ಯ. ಈ ಅಂಗಿಯ ಒಳಗೆ ಸ್ಪೀಕರ್, ಎಂಪಿ೩ ಪ್ಲೇಯರ್, ದೂರನಿಯಂತ್ರಕ ಎಲ್ಲ ಇವೆ. ಅದರ ಜೊತೆಗೆ ಸಿಗುವ ಸಂಗೀತಗಳನ್ನು ಆಯ್ಕೆ ಮಾಡಿಕೊಂಡು ಆಲಿಸಬಹುದು. ಅಥವಾ ನಿಮ್ಮದೇ ಮೈಕ್ರೋಎಸ್‌ಡಿ ಕಾರ್ಡ್‌ನಲ್ಲಿ ಎಂಪಿ೩ ಹಾಡುಗಳನ್ನು ಸೇರಿಸಿ ಅವನ್ನೂ ಆಲಿಸಬಹುದು. ಅಂಗಿ ತೊಳೆಯುವಾಗ ಮಾತ್ರ ಸ್ಪೀಕರ್, ಬ್ಯಾಟರಿ ಎಲ್ಲ ಎಚ್ಚರಿಕೆಯಿಂದ ತೆಗೆಯತಕ್ಕದ್ದು. ವಿಜಯನಗರದ ವಿಜಯವಿಠ್ಠಲ ದೇವಸ್ಥಾನದಲ್ಲಿ ಸಂಗೀತ ಹೊರಡಿಸುವ ಕಂಬಗಳಿದ್ದವು (ಈಗಲೂ ಇವೆ, ಆದರೆ ಹಾಳಾಗಿವೆ). ಈಗ ಸಂಗೀತ ಹೊರಡಿಸುವ ಅಂಗಿ ಬಂದಿದೆ.

 

ಗುಪ್ತಚರ ಕೈಗಡಿಯಾರ

 

ಪೆನ್ನಿನಲ್ಲಿ ಗುಪ್ತ ಕ್ಯಾಮರ ಇಟ್ಟುಕೊಂಡು ಕುಟುಕು ಕಾರ್ಯಾಚರಣೆ ನಡೆಸುವುದು ಓದಿರಬಹುದು. ಈ ರೀತಿ ಮಾಡಲು ಸಹಾಯ ಮಾಡುವ ಕೈಗಡಿಯಾರ ತಯರಾಗಿದೆ. ಇದು ನೋಡಲು ಮಾಮೂಲಿ ವಾಚಿನಂತಿರುತ್ತದೆ. ಆದರೆ ಇದು ಧ್ವನಿ, ವೀಡಿಯೋ, ಸ್ಥಿರಚಿತ್ರ ಎಲ್ಲ ರೆಕಾರ್ಡ್ ಮಾಡಿಕೊಳ್ಳಬಲ್ಲುದು. ಇದಕ್ಕೆ ಯುಎಸ್‌ಬಿ ಕೇಬಲ್ ಮತ್ತು ಬ್ಲೂಟೂತ್ ಸೌಲಭ್ಯವೂ ಇದೆ. ಇದಕ್ಕೆ ಆಟ ಮತ್ತು ಇತರೆ ಉಪಯುಕ್ತ ತಂತ್ರಾಂಶಗಳನ್ನು (ಆಪ್‌ಗಳನ್ನು) ಅಂತರಜಾಲದಿಂದ ಡೌನ್‌ಲೋಡ್ ಮಾಡಿಕೊಂಡು ಹಾಕಿಕೊಳ್ಳಲೂಬಹುದು. ಅಂದ ಹಾಗೆ ಈ ಕೈಗಡಿಯಾರ ಬಳಸಿ ಗಂಟೆ ನೋಡಲೂ ಸಾಧ್ಯ.

 

 

ಏಳಲೇ ಬೇಕೆನ್ನುವ ಅಲಾರ್ಮ್ ಗಡಿಯಾರ

 

ಬೇಗ ಏಳಬೇಕೆಂದು ಅಲಾರ್ಮ್ ಇಟ್ಟು ಅದು ಕಿರುಚಿದೊಡನೆ ಅದರ ತಲೆ ಮೇಲೆ ಕುಕ್ಕಿ ಮತ್ತೆ ನಿದ್ದೆಹೋಗುವವರೇ ಎಲ್ಲರೂ. ಇಂತಹವರಿಗೆಂದೇ ಹಲವು ನಮೂನೆಯೆ ಅಲಾರ್ಮ್ ಗಡಿಯಾರಗಳು ಮಾರುಕಟ್ಟೆಗೆ ಬಂದಿವೆ. ಅವೆಲ್ಲ ಬೇರೆ ಬೇರೆ ನಮೂನೆಯಲ್ಲಿ ಮತ್ತು ಅತ್ಯಂತ ಹೆಚ್ಚು ವಾಲ್ಯೂಮ್‌ನಲ್ಲಿ ಗದ್ದಲ ಮಾಡುತ್ತವೆ, ಮತ್ತೆ ಮತ್ತೆ ಕಿರುಚುತ್ತವೆ, ಇತ್ಯಾದಿ. ಎಷ್ಟೇ ಕಿರುಚಿದರೂ ನಾವು ಅಜಗರದಂದದಿ ನಿದ್ದೆಯ ಭಜಕರು ಎನ್ನುವವರಿಗಾಗಿಯೇ ಹೊಸ ನಮೂನೆಯ ಅಲಾರ್ಮ್ ಗಡಿಯಾರ ಬಂದಿದೆ. ಇದು ಇತರೆ ಗಡಿಯಾರಗಳಂತೆ ಅತಿ ಹೆಚ್ಚು ಧ್ವನಿಯಲ್ಲಿ ಕಿರುಚುತ್ತದೆ. ಇದರ ಜೊತೆ ಒಂದು ಪ್ಯಾಡ್ ದೊರೆಯುತ್ತದೆ. ಅದು ಗಡಿಯಾರಕ್ಕೆ ಸಂಪರ್ಕದಲ್ಲಿರುತ್ತದೆ. ಈ ಪ್ಯಾಡನ್ನು ನಿಮ್ಮ ಹಾಸಿಗೆಯಲ್ಲಿ ಬೆಡ್‌ಶೀಟ್ ಕೆಳಗೆ ಇಟ್ಟುಕೊಳ್ಳತಕ್ಕದ್ದು. ಸರಿಯಾದ ಸಮಯಕ್ಕೆ ಅದು ಜೋರಾಗಿ ಅಲುಗಾಡಿ ನಿಮ್ಮನ್ನು ಎಬ್ಬಿಸಿಯೇ ಬಿಡುತ್ತದೆ.

 

ಭಾಷಣ ನಿಲ್ಲಿಸದವರ  ಬಾಯಿ ಮುಚ್ಚಿ

 

ನಮ್ಮಲ್ಲಿ ಕೆಲವರಿದ್ದಾರೆ. ಎಷ್ಟು ಸೂಚನೆ ನೀಡಿದರೂ ಭಾಷಣ ನಿಲ್ಲಿಸುವುದೇ ಇಲ್ಲ. ಇನ್ನು ಕೆಲವರಿದ್ದಾರೆ. ನಿಶ್ಶಬ್ದದ ಪ್ರದೇಶ, ಉದಾ -ಗ್ರಂಥಾಲಯ, ಎಂದು ಸೂಚನಾಫಲಕಗಳಿದ್ದರೂ ಮಾತನಾಡುತ್ತಲೇ ಇರುತ್ತಾರೆ. ಇಂತಹವರ ಮಾತು ನಿಲ್ಲಿಸಲೆಂದೇ ಒಂದು ಗ್ಯಾಜೆಟನ್ನು ಜಪಾನಿ ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಇದರಲ್ಲಿ ಒಂದು ದಿಕ್ಕಿನಿಂದ ಬಂದ ಧ್ವನಿಯನ್ನು ಮಾತ್ರವೇ ಗ್ರಹಿಸಬಲ್ಲ ಮೈಕ್ರೋಫೋನ್ ಇದೆ. ಅದು ಧ್ವನಿಯನ್ನು ರೆಕಾರ್ಡ್ ಮಾಡಿ ಅದನ್ನೇ 0.2 ಸೆಕೆಂಡುಗಳ ನಂತರ ಒಂದು ದಿಕ್ಕಿಗೆ ಮಾತ್ರವೇ ಧ್ವನಿಯನ್ನು ಬೀರಬಲ್ಲ ಸ್ಪೀಕರ್ ಮುಖಾಂತರ ಮಾತನಾಡುತ್ತಿರುವವರ ದಿಕ್ಕಿನಲ್ಲಿ ಪುನರುತ್ಪತ್ತಿ ಮಾಡುತ್ತಾರೆ. ಆಗ ಮಾತನಾಡುವವರಿಗೆ ತುಂಬ ಕಿರಿಕಿರಿಯಾಗಿ ಮಾತು ನಿಲ್ಲಿಸುತ್ತಾರೆ. ತಮ್ಮ ಅಳುವಿನ ರೆಕಾರ್ಡಿಂಗ್ ಅನ್ನೇ ಪ್ಲೇ ಮಾಡಿ ಕೇಳಿಸಿದರೆ ಮಕ್ಕಳು ಅಳು ನಿಲ್ಲಿಸುವ ತಂತ್ರ ಗೊತ್ತು ತಾನೆ? ಇದು ಸುಮಾರಾಗಿ ಅದೇ ರೀತಿಯಲ್ಲಿ ಕೆಲಸ ಮಾಡುತ್ತದೆ.

 

 

ಕಣ್ಣುಹೊಡೆಯಲು ಜ್ಞಾಪಿಸುವ ಕನ್ನಡಕ

 

ಗಂಟೆಗಟ್ಟಲೆ ಗಣಕ ಪರದೆಯನ್ನು ಕಣ್ಣು ಮಿಟುಕಿಸದೆ ದಿಟ್ಟಿಸಿ ನೋಡುವವರಿಗೆ ಒಂದು ರೀತಿಯ ಖಾಯಿಲೆ ಬರುತ್ತದೆ. ಇದಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ computer vision syndrome ಎನ್ನುತ್ತಾರೆ. ಕಣ್ಣಿನ ಮುಂದಿನ ಕಪ್ಪು ಭಾಗ ಯಾವಾಗಲೂ ತೇವ ಭರಿತವಾಗಿರತಕ್ಕದ್ದು. ಕಣ್ಣೀರು ಇದಕ್ಕೆ ಸಹಾಯಕಾರಿ. ಕಣ್ಣೀರನ್ನು ಕಣ್ಣಿನ ಎಲ್ಲ ಭಾಗಗಳಿಗೆ ತಲುಪಿಸಬೇಕಾದರೆ ಆಗಾಗ ಕಣ್ಣು ಮುಚ್ಚಿ ತೆರೆದು ಮಾಡುತ್ತಿರಬೇಕು. ಹೀಗೆ ಮಾಡದಿದ್ದಲ್ಲಿ ಕಣ್ಣು ಒಣಗಿ ಕೆಂಪಾಗಿ ಉರಿಯಲು ತೊಡಗುತ್ತದೆ. ಹೀಗೆ ಆಗಬಾರದಾದರೆ ಆಗಾಗ ಕಣ್ಣು ಮಿಟುಕಿಸುತ್ತಿರಬೇಕು. ಪ್ರಯತ್ನ ಪೂರ್ವಕವಾಗಿ ಕಣ್ಣುಮಿಟುಕಿಸಬೇಕು ಎಂದು ಹೇಳುವುದೇನೋ ಸುಲಭ. ಆದರೆ ಗ್ರಾಫಿಕ್ಸ್ ಕೆಲಸಗಾರರು ಅದನ್ನ ಬೇಗ ಮರೆಯುತ್ತಾರೆ. ಅಂತಹವರಿಗಾಗಿಯೇ ಒಂದು ವಿಶೇಷ ಕನ್ನಡಕ ತಯಾರಾಗಿದೆ. ಅದನ್ನು ಧರಿಸಿ ಕೆಲಸ ಮಾಡುತ್ತಿರಬೇಕು. ಅದು ನೀವು ಕಡಿಮೆ ಕಣ್ಣು ಮಿಟುಕಿಸಿದರೆ ಅದರ ಗಾಜನ್ನು ಮಂಜು ಮಂಜಾಗಿಸುತ್ತದೆ. ಕಣ್ಣು ಮಿಟುಕಿಸಿದರೆ ಅದು ಸರಿಯಾಗುತ್ತದೆ.

 

ಗ್ಯಾಜೆಟ್ ಸಲಹೆ

 

ಈ ಪ್ರಶ್ನೆ ಮತ್ತೆ ಮತ್ತೆ ಬರುತ್ತಿದೆ – “ನನಗೆ ಇಂತಿಷ್ಟು ಬಜೆಟ್‌ನಲ್ಲಿ ಇಂತಿಂತಹ ಗುಣವೈಶಿಷ್ಟ್ಯಗಳಿರುವ ಫೋನ್ ಬೇಕು. ಯಾವುದು ಕೊಂಡುಕೊಳ್ಳಲಿ”. ಇಂತಹ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟಸಾಧ್ಯ. ಈ ಹಿಂದೆಯೇ ನಾನು ಈ ಬಗ್ಗೆ ಬರೆದಿದ್ದೆ. ಇನ್ನೊಮ್ಮೆ ಹೇಳುತ್ತಿದ್ದೇನೆ. ಇಂತಹವರಿಗೆ ಸಹಾಯ ಮಾಡಲೆಂದೇ ಹಲವು ಜಾಲತಾಣಗಳಿವೆ. ಉದಾಹರಣೆ – www.fonearena.com, www.gsmarena.com. ದಯವಿಟ್ಟು ಈ ಜಾಲತಾಣಗಳಿಗೆ ಭೇಟಿ ನೀಡಿ ನಿಮಗೆ ಬೇಕಾದ ಫೋನನ್ನು ಆಯ್ಕೆ ಮಾಡಿಕೊಳ್ಳಿ. ಈ ಪ್ರಶ್ನೆ ಇನ್ನೊಮ್ಮೆ ಬಂದರೆ ಖಂಡಿತ ಉತ್ತರಿಸಲಾಗುವುದಿಲ್ಲ.

 

Leave a Reply