ಗ್ಯಾಜೆಟ್ ಲೋಕ – ೦೧೩ (ಮಾರ್ಚ್ ೨೯, ೨೦೧೨)

ನಿಸ್ತಂತು ಕಿವಿಗಿಂಪು

 

ಸಂಗೀತ ಹೊರಡಿಸುವ ಯಾವುದೇ ವಿದ್ಯುನ್ಮಾನ ಉಪಕರಣದ ಕೊನೆಯ ಕೊಂಡಿ ಅಥವಾ ಸಾಧನ ಸ್ಪೀಕರ್ ಅಥವಾ ಇಯರ್‌ಫೋನ್ (ಹೆಡ್‌ಸೆಟ್). ಅದು ಉತ್ತಮವಾಗಿದ್ದಷ್ಟೂ ಧ್ವನಿ ಉತ್ತಮವಾಗಿರುತ್ತದೆ. ಈ ಸಾಧನವನ್ನು ತಂತಿ ಅಥವಾ ನಿಸ್ತಂತು (ವಯರ್‌ಲೆಸ್) ವಿಧಾನದಲ್ಲಿ ಜೋಡಿಸಬಹುದು. ಈ ಸಲ ಅಂತಹ ಎರಡು ನಿಸ್ತಂತು ಸಾಧನಗಳ ಪರಿಚಯ ಮಾಡಿಕೊಳ್ಳೋಣ.

 

ಆಡಿಯೋ ಕ್ಷೇತ್ರದಲ್ಲಿ ಕ್ರಿಯೇಟಿವ್ ಕಂಪೆನಿ ದೊಡ್ಡ ಹೆಸರು. ಅವರ ಉತ್ಪನ್ನಗಳು ಸಾಮಾನ್ಯವಾಗಿ ಚೆನ್ನಾಗಿರುತ್ತವೆ. ಗಣಕಗಳ ಜೊತೆ ಬಳಸುವ ಕ್ರಿಯೇಟಿವ್ ಸ್ಪೀಕರ್‌ಗಳನ್ನು ನಿಮ್ಮಲ್ಲಿ ಬಹುಮಂದಿ ನೋಡಿಯೇ ಇರುತ್ತೀರಾ. ಕೆಲವರಂತೂ ಬಳಸಿಯೂ ಇರುತ್ತೀರಿ. ನನ್ನಲ್ಲಿ ಕ್ರಿಯೇಟಿವ್ ಕಂಪೆನಿಯ ಎರಡು ಜೊತೆ ಸ್ಪೀಕರ್‌ಗಳಿವೆ. ಅವುಗಳನ್ನು ಗಣಕ ಅಥವಾ ಎಂಪಿ3 ಪ್ಲೇಯರ್ (ಐಪೋಡ್) ಜೊತೆ ಬಳಸುತ್ತೇನೆ. ಇವುಗಳಲ್ಲಿ ಹಲವು ನಮೂನೆ. 2.1 ಎಂಬ ಹೆರಿನ ಸ್ಪೀಕರ್‌ಗಳು ಸಾಮಾನ್ಯವಾಗಿ ಉತ್ತಮ ಧ್ವನಿಯನ್ನು ಪುನರುತ್ಪತ್ತಿ ಮಾಡುತ್ತವೆ. ಇದಕ್ಕೆ ಪ್ರಮುಖ ಕಾರಣ ಇವು 3 ಸ್ಪೀಕರುಗಳನ್ನು ಹೊಂದಿರುತ್ತವೆ. ಅತಿ ಕಡಿಮೆ ಕಂಪನಾಂಕದ (frequency) ಧ್ವನಿತರಂಗಗಳನ್ನು ಹೊರಡಿಸಲು ಸಬ್‌ವೂಫರ್ ಹೆಸರಿನ ದೊಡ್ಡ ಪೆಟ್ಟಿಗೆ ಮತ್ತು ಉಳಿದ ಕಂಪನಾಂಕಗಳ ಧ್ವನಿಯನ್ನು ಉತ್ಪತ್ತಿ ಮಾಡಲು ಎರಡು ಚಿಕ್ಕ ಸ್ಪೀಕರುಗಳಿರುತ್ತವೆ. ನನ್ನಲ್ಲಿರುವ ಮಾದರಿಗಳು ಕ್ರಿಯೇಟಿವ್ SBS A300 ಮತ್ತು SBS A370 ಆಗಿವೆ. ಎರಡೂ ಚೆನ್ನಾಗಿವೆ. ಇವನ್ನು ವಯರ್ ಮೂಲಕ ಗಣಕ, ಫೋನ್ ಅಥವಾ ಎಂಪಿ3 ಪ್ಲೇಯರ್‌ಗೆ ಜೋಡಿಸಬೇಕು.

 

ಕ್ರಿಯೇಟಿವ್‌ನವರದೇ ಆದ ಕಿವಿಯೊಳಗೆ ಅವಿತು ಕುಳಿತುಕೊಳ್ಳುವ ಇಪಿ630 ಇಯರ್‌ಬಡ್ ಬಗ್ಗೆ ಇದೇ ಅಂಕಣದಲ್ಲಿ ಈ ಹಿಂದೆ ಬರೆಯಲಾಗಿತ್ತು (ನೋಡಿ: bit.ly/gadgetloka4). ಅದೂ ಚೆನ್ನಾಗಿದೆ. ಈ ಇಯರ್‌ಫೋನ್ ಆಗಲೀ ಸ್ಪೀಕರ್‌ಗಳಾಗಲಿ ಸಂಗೀತ ಉಪಕರಣದ ಜೊತೆ ಸಂಪರ್ಕಗೊಳ್ಳುವುದು ವಯರ್ (ತಂತಿ) ಮೂಲಕ. ಕೆಲವೊಮ್ಮೆ ಈ ತಂತಿ ಕಿರಿಕಿರಿ ಮಾಡುತ್ತದೆ. ಕಿವಿಗೆ ಇಯರ್‌ಫೋನ್ ಇಟ್ಟಿರುವಾಗ ಇದ್ದಕ್ಕಿದ್ದಂತೆ ಎದ್ದು ಹೋಗಬೇಕಾದರೆ ಸ್ವಲ್ಪ ಎಚ್ಚರ ಬೇಕು. ಇಲ್ಲವಾದಲ್ಲಿ ಇಯರ್‌ಫೋನ್‌ನ ತಂತಿ ತುಂಡಾಗುವ ಸಾದ್ಯತೆ ಇರುತ್ತದೆ. ಈ ವಯರ್ ಇಲ್ಲದಿದ್ದರೆ?

 

ನಿಸ್ತಂತು ಸ್ಪೀಕರ್ ಮತ್ತು ಇಯರ್‌ಫೋನ್‌ಗಳು

 

ಸ್ಪೀಕರ್ ಮತ್ತು ಇಯರ್‌ಫೋನ್‌ಗಳನ್ನು ಗಣಕ, ಮೊಬೈಲ್ ಫೋನ್ ಅಥವಾ ಸಂಗೀತ ಉಪಕರಣಗಳ ಜೊತೆ ತಂತಿ ಇಲ್ಲದೆ ನಿಸ್ತಂತು ವಿಧಾನದಲ್ಲಿ (ವಯರ್‌ಲೆಸ್) ಸಂಪರ್ಕಗೊಳಿಸುವ ವಿಧಾನ ಈಗೀಗ ಜನಪ್ರಿಯವಾಗುತ್ತಿದೆ. ಇದಕ್ಕಾಗಿ ಸಾಮಾನ್ಯವಾಗಿ ಬಳಸುವುದು ಬ್ಲೂಟೂತ್ ವಿಧಾನವನ್ನು. ವೈಫೈ ವಿಧಾನವನ್ನು ಬಳಸಬಹುದಾದರೂ ಅದಿನ್ನು ಪೂರ್ತಿ ಸುಧಾರಣೆಯಾಗಿಲ್ಲ. ಬ್ಲೂಟೂತ್‌ನಲ್ಲಾದರೋ ಸಂಗೀತ ಕೇಳಲಿಕ್ಕೆಂದೇ A2DP (Advanced Audio Distribution Profile) ಮತ್ತು AVRCP (Audio/Video Remote Control Profile) ಪ್ರೊಟೋಕಾಲ್‌ಗಳಿವೆ. ಈ ಬಗ್ಗೆ ಗ್ಯಾಜೆಟ್‌ಲೋಕದ ಹಿಂದಿನ ಸಂಚಿಕೆಗಳಲ್ಲಿ ವಿವರಿಸಲಾಗಿದೆ (ನೋಡಿ: bit.ly/gadgetloka10). ಬ್ಲೂಟೂತ್ ಸ್ಪೀಕರ್ ಹಾಗೂ ಇಯರ್‌ಫೋನ್‌ಗಳು ಇವುಗಳನ್ನು ಬಳಸುತ್ತವೆ. ಕ್ರಿಯೇಟಿವ್ ಕಂಪನಿಯ ಇಂತಹ ಎರಡು ಉತ್ಪನ್ನಗಳನ್ನು ಈ ಸಲ ಗಮನಿಸೋಣ.

 

ಕ್ರಿಯೇಟಿವ್ WP-350 ಬ್ಲೂಟೂತ್ ವಯರ್‌ಲೆಸ್ ಹೆಡ್‌ಸೆಟ್

 

ಇದು ಬ್ಲೂಟೂತ್ ವಿಧಾನದಲ್ಲಿ ಸಂಪರ್ಕಗೊಳ್ಳುತ್ತದೆ. ಬ್ಲೂಟೂತ್ ಇರುವ ಗಣಕ ಅಥವಾ ಮೊಬೈಲ್ ಫೋನ್ ಜೊತೆ ಬಳಸಬಹುದು. ಇದು ಇಯರ್‌ಫೊನ್ ಅಲ್ಲ. ಪೂರ್ತಿಪ್ರಮಾಣದ ಹೆಡ್‌ಸೆಟ್. ಇದು ಕಿವಿಯ ಒಳಗೆ ಕುಳಿತುಕೊಳ್ಳುವಂತಹದ್ದಲ್ಲ. ಕಿವಿಯ ಮೇಲೆ ಕುಳಿತುಕೊಳ್ಳುತ್ತದೆ. ಇಯರ್‌ಬಡ್‌ಗಳಲ್ಲಿ ಕಿವಿಗೆ ಗಾಳಿ ಓಡಾಟ ಇಲ್ಲದೆ ಒಂದು ರೀತಿಯ ಹಿಂಸೆ ಆಗುತ್ತದೆ. ಇದರಲ್ಲಿ ಹಾಗೆ ಆಗುವುದಿಲ್ಲ. ಇದರಲ್ಲಿ ಚಿಕ್ಕದಾದ ಆದರೆ ಅದಕ್ಕೆಂದೆ ಪ್ರತ್ಯೇಕ ಬಾಲ ಇಲ್ಲದ ಮೈಕ್ರೋಫೋನ್ ಇದೆ. ಈ ಮೈಕ್ರೋಫೋನ್ ಇರುವುದು ಗೊತ್ತೇ ಆಗುವುದಿಲ್ಲ. ಮೈಕ್ರೋಫೋನ್ ಹೆಡ್‌ಸೆಟ್‌ನಲ್ಲೇ ಅಡಕವಾಗಿರುವುದರಿಂದ ಅದು ಬಾಯಿಯಿಂದ ದೂರ ಇರುತ್ತದೆ. ಆದರೆ ಇದರಿಂದ ಧ್ವನಿಯನ್ನು ಗ್ರಹಿಸಲು ಅದಕ್ಕೆ ಏನೇನೂ ತೊಂದರೆ ಆಗದೆ ಧ್ವನಿ ಸ್ಪಷ್ಟವಾಗಿ ಕೇಳುಗರಿಗೆ ಕೇಳಿಸುತ್ತದೆ. ಇದನ್ನು ಮೊಬೈಲ್ ಫೋನ್‌ಗಳ ಜೊತೆ ಹ್ಯಾಂಡ್ಸ್‌ಫ್ರೀ ಆಗಿ ಬಳಸಬಹುದು. ಜೊತೆಗೆ ಸಂಗೀತವನ್ನೂ ಆಲಿಸಬಹುದು. ಇದರಲ್ಲಿ ರಿಚಾರ್ಜೇಬಲ್ ಬ್ಯಾಟರಿ  ಇದೆ. ಅದನ್ನು ಚಾರ್ಜ್ ಮಾಡಲು ಯುಎಸ್‌ಬಿ ಕೇಬಲ್ ಕೊಟ್ಟಿದ್ದಾರೆ. ಪ್ರತ್ಯೇಕ ಚಾರ್ಜರ್ ನೀಡಿಲ್ಲ. ಮನೆಯಲ್ಲಿರುವ ಯಾವುದೇ ಯುಎಸ್‌ಬಿ ಚಾರ್ಜರ್ ಅಥವಾ ಗಣಕದ ಯುಎಸ್‌ಬಿ ಕಿಂಡಿ ಬಳಸಿ ಚಾರ್ಜ್ ಮಾಡಬಹುದು. ಪೂರ್ತಿ ಚಾರ್ಜ್ ಮಾಡಲು ಒಂದು ಗಂಟೆ ಕಾಲ ಬೇಕು. ಒಮ್ಮೆ ಚಾರ್ಜ್ ಮಾಡಿದರೆ 9 ಗಂಟೆ ಬಳಸಬಹುದು.

 

ಇದರಲ್ಲಿ A2DP ಮತ್ತು AVRCP ಅಡಕವಾಗಿವೆ. ಗಣಕದ ಅಥವಾ ಮೊಬೈಲ್ ಫೋನಿನ ಸಂಗೀತ ಪ್ಲೇಯರ್ ಮೂಲಕ ಹಾಡು ಆಲಿಸುತ್ತಿರುವಾಗ ಮುಂದಿನ ಹಾಡು ಅಥವಾ ಹಿಂದಿನ ಹಾಡಿಗೆ ಹೋಗಲು ಇದರಲ್ಲೇ ಬಟನ್‌ಗಳಿವೆ. ಹಾಗೆಯೇ ಹಾಡನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಮತ್ತು ಪುನಃ ಪ್ರಾರಂಭಿಸಲೂ ಬಟನ್ ಇದೆ. ವಾಲ್ಯೂಮ್ ಹೆಚ್ಚು ಕಡಿಮೆ ಮಾಡಲೂ ಬಟನ್‌ಗಳಿವೆ.

 

ಫೋನ್ ಬಂದಾಗ ಕರೆಯನ್ನು ಸ್ವೀಕರಿಸಲು ಬಳಸುವ ಬಟನ್ ಇದರಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ. ಹಲವು ಕಾರ್ಯಗಳಿಗೆ ಇದೊಂದೆ ಬಟನ್ ನೀಡಲಾಗಿದೆ. ಆನ್ ಆಫ್ ಮಾಡುವುದು, ಗಣಕ ಅಥವಾ ಮೊಬೈಲ್ ಫೋನ್ ಜೊತೆ ಸಂಪರ್ಕ ಸಾಧಿಸುವುದು, ಇತ್ಯಾದಿ ಎಲ್ಲ ಇದೊಂದೆ ಮಾಡುತ್ತದೆ. ಇದರ ಪಕ್ಕದಲ್ಲಿರುವ ಎಲ್‌ಇಡಿ ಕೂಡ ಅದೇ ರೀತಿ. ನೀಲಿ ಬಣ್ಣದಲ್ಲಿ ಮಿನುಗುತ್ತಿದ್ದರೆ ಒಂದು ಕಾರ್ಯ, ಕೆಂಪು ಬಣ್ಣದಲ್ಲಿದ್ದರೆ ಇನ್ನೊಂದು, ಹಸಿರು ಬಣ್ಣದಲ್ಲಿದ್ದರೆ ಮತ್ತಿನ್ನೊಂದು, ವೇಗವಾಗಿ ಮಿನುಗಿದರೆ ಬೇರೆಯೇ ಅರ್ಥ -ಹೀಗೆ ಎಲ್ಲ ಕಾರ್ಯಗಳಿಗೆ ಒಂದೇ ಎಲ್‌ಇಡಿ. ಎಲ್ಲ ಸರಿಯಾಗಿ ಕೈಪಿಡಿ ನೋಡಿ ತಿಳಿದಿರತಕ್ಕದ್ದು. ಲ್ಯಾಪ್‌ಟಾಪ್‌ಗಳಲ್ಲಿ ಸಾಮಾನ್ಯವಾಗಿ ಬ್ಲೂಟೂತ್ ಇರುತ್ತದೆ. ಆದರೆ ಡೆಸ್ಕ್‌ಟಾಪ್‌ಗಳಲ್ಲಿ ಇರುವುದಿಲ್ಲ. ಅಂತಹ ಸಂದರ್ಭಕ್ಕೆಂದೆ ಪ್ರತ್ಯೇಕ ಬ್ಲೂಟೂತ್ ಡಾಂಗಲ್ ಕೊಂಡುಕೊಳ್ಳಲು ಲಭ್ಯವಿದೆ. ಯಾವುದೋ ಒಂದು ಬ್ಲೂಟೂತ್ ಹೆಡ್‌ಸೆಟ್‌ನಲ್ಲಿ, ಬಹುಶಃ ನೋಕಿಯಾ ಇರಬೇಕು, ಇಂತಹ ಸಂದರ್ಭಕ್ಕೆಂದು ವಯರ್ ಮೂಲಕವೂ ಸಂಪರ್ಕ ಮಾಡಬಹುದಾದ ಸೌಲಭ್ಯ ನೀಡಿದ್ದಾರೆ.

 

ಇದರ ಧ್ವನಿ ಗುಣಮಟ್ಟ ತುಂಬ ಚೆನ್ನಾಗಿದೆ. ಇದರ ಮುಖಬೆಲೆ ಸುಮಾರು ರೂ.6000 ಇದೆ. ಹೆಚ್ಚಿನ ವಿವರಗಳಿಗೆ ಕಂಪೆನಿಯವರ ಜಾಲತಾಣ (in.creative.com) ನೋಡಬಹುದು.

 

ಕ್ರಿಯೇಟಿವ್ D80 ಬ್ಲೂಟೂತ್ ವಯರ್‌ಲೆಸ್ ಸ್ಪೀಕರ್

 

ಇದು ಕೂಡ ಬ್ಲೂಟೂತ್ ವಿಧಾನದಲ್ಲಿ ಸಂಪರ್ಕಗೊಳ್ಳುತ್ತದೆ. ಇದು ಸ್ಟೀರಿಯೋ ಸ್ಪೀಕರ್ ಆಗಿದೆ. ಅಂದರೆ ಎರಡು ಸ್ಪೀಕರ್ ಇರಬೇಕು. ಇವೆ ಕೂಡ. ಆದರೆ ಎರಡು ಸ್ಪೀಕರ್‌ಗಳೂ ಒಂದೆ ಪೆಟ್ಟಿಗೆಯಲ್ಲಿವೆ. ಸ್ಪೀಕರ್‌ಗಳನ್ನು ಸ್ವಲ್ಪ ದೂರ ಇಟ್ಟರೆ ಸ್ಟೀರಿಯೋ ಅನುಭವ ಚೆನ್ನಾಗಿ ಆಗುತ್ತದೆ. ಆದರೆ ಅದು ಇದರಲ್ಲಿ ಸಾಧ್ಯವಿಲ್ಲ. ಬ್ಲೂಟೂತ್ ವಿಧಾನದಲ್ಲಿ ಸಂಪರ್ಕಗೊಳ್ಳುವ ನಿಸ್ತಂತು ವ್ಯವಸ್ಥೆ ಇದ್ದರೂ ವಯರ್ ಮೂಲಕವೂ ಜೋಡಿಸಬಹುದಾದ ಸೌಲಭ್ಯ ನೀಡಿದ್ದಾರೆ. ಇದು ನಿಸ್ತಂತು ಆಗಿರುವುದರಿಂದ ಇದರ ಒಳಗಡೆಯೇ ಬ್ಯಾಟರಿ ಇದ್ದರೆ ಒಳ್ಳೆಯದಲ್ಲವೇ? ಆದರೆ ಇದಕ್ಕೆ ಎ.ಸಿ. ವಿದ್ಯುತ್ ಕೇಬಲ್ ಮಾತ್ರ ನೀಡಿದ್ದಾರೆ. ಅಂದರೆ ವಯರ್‌ಲೆಸ್ ಎಂದರೂ ವಿದ್ಯುತ್ ಪ್ಲಗ್ ಹಾಕಲು ಜಾಗ ಹುಡುಕುತ್ತಿರಬೇಕು. ಪಿಕ್‌ನಿಕ್‌ಗೆ ಹೋದಾಗ ಬಳಸಲು ಅಸಾಧ್ಯ. ಇದರ ಗುಣಮಟ್ಟವೂ ಅಷ್ಟಕ್ಕಷ್ಟೆ. ಅತ್ಯುತ್ತಮ ಗುಣಮಟ್ಟಕ್ಕೆ ಹೆಸರಾದ ಕ್ರಿಯೇಟಿವ್ ಕಂಪೆನಿಯಿಂದ ಇಂತಹ ಸಾಧಾರಣ ಸ್ಪೀಕರ್ ಹೊರಬಂದಿದೆ ಎಂದರೆ ನಂಬಲಿಕ್ಕೆ ಆಗುವುದಿಲ್ಲ.

 

ಗ್ಯಾಜೆಟ್ ಸಲಹೆ

 

ಬಾಲಮುರಳಿ ಪಾರ್ಥಸಾರಥಿ ಅವರ ಪ್ರಶ್ನೆ: ನನಗೆ ವನ್ಯಜೀವಿ ಛಾಯಾಗ್ರಾಹಕ ಆಗಬೇಕೆಂಬ ಆಸೆ. ಸುಮಾರು 60-70 ಸಾವಿರ ರೂ.ಗಳಲ್ಲಿ ಇದಕ್ಕೆ ಅನುವು ಮಾಡಿಕೊಡುವ ಕ್ಯಾಮರ ಮತ್ತು ಲೆನ್ಸ್ ಕೊಳ್ಳಬೇಕಾಗಿದೆ. ಸಲಹೆ ನೀಡಿ.

ಉ: ಬಜೆಟ್ ಜಾಸ್ತಿ ಮಾಡಿಕೊಂಡರೆ ಒಳ್ಳೆಯದು. ಕ್ಯಾನನ್ 550D ಕ್ಯಾಮರ ಕೊಳ್ಳಬಹುದು (ರೂ.35 ಸಾವಿರ). ಉತ್ತಮ ಟೆಲಿಫೋಟೋ ಲೆನ್ಸ್ ಕೊಂಡುಕೊಳ್ಳಬೇಕು. ಕನಿಷ್ಠ 300ಮಿಮಿ ಫೋಕಲ್ ಲೆನ್ತ್ ಇದ್ದರೆ ಒಳ್ಳೆಯದು. 400ಮಿಮಿ, 500ಮಿಮಿ -ಹೀಗೆ ಫೋಕಲ್ ಲೆನ್ತ್ (ನಾಭಿಬಿಂದು) ಹೆಚ್ಚಾದಷ್ಟು ಒಳ್ಳೆಯದು. ಆದರೆ ಇಂತಹ ಲೆನ್ಸ್‌ಗಳು ತುಂಬ ದುಬಾರಿ. ಜೊತೆಗೆ ಒಳ್ಳೆಯ ಕ್ಯಾಮರ ಸ್ಟ್ಯಾಂಡ್ ಕೂಡ ಕೊಳ್ಳತಕ್ಕದ್ದು.

 

-ಡಾ| ಯು. ಬಿ. ಪವನಜ

Leave a Reply