Press "Enter" to skip to content

ಗ್ಯಾಜೆಟ್ ಲೋಕ – ೦೧೧ (ಮಾರ್ಚ್ ೧೫, ೨೦೧೨)

ಮೊಬೈಲ್ ಯಂತ್ರಾಂಶ

 

ಮೊಬೈಲ್ ಫೋನ್ ಎಲ್ಲರಿಗೂ ಬೇಕಾದ ಸಾಧನವಾಗಿದೆ. ಮಾರುಕಟ್ಟೆಯಲ್ಲಿ ಸಾವಿರಾರು ಮಾದರಿಯ ಮೊಬೈಲ್ ಫೋನ್‌ಗಳಿವೆ. ಯಾವುದನ್ನು ಕೊಳ್ಳುವುದು? ಈ ಬಗ್ಗೆ ಕಂತುಗಳಲ್ಲಿ ವಿವರಿಸಲಾಗುವುದು. ಇದು ಮೊದಲನೆಯದು.

 

ಮೊಬೈಲ್ ಫೋನ್‌ಗಳನ್ನು ಕೊಳ್ಳಲು ಹೊರಟಾಗ ಎದುರಾಗುವ ಪ್ರಶ್ನೆ ಯಾವುದನ್ನು ಕೊಳ್ಳುವುದು, ಹೇಗೆ ತೀರ್ಮಾನ ಮಾಡುವುದು, ಎಂದು. ಮೊದಲನೆಯದಾಗಿ ಎಲ್ಲ ವಸ್ತುಗಳನ್ನು ಕೊಳ್ಳುವಾಗ ಮಾಡುವಂತೆ ಇಲ್ಲಿಯೂ ನನಗೆ ಏನೇನು ಸವಲತ್ತುಗಳು ಬೇಕು, ಏನೇನು ಮಾಡಬೇಕು, ಎಂಬುದು ಮುಖ್ಯವಾಗಿರುತ್ತದೆ. ಮೊಬೈಲ್ ಫೋನ್ ಒಂದು ಪುಟಾಣಿ ಗಣಕದಂತೆಯೇ. ಅದರಲ್ಲೂ ಯಂತ್ರಾಂಶ (ಹಾರ್ಡ್‌ವೇರ್) ಮತ್ತು ತಂತ್ರಾಂಶ (ಸಾಫ್ಟ್‌ವೇರ್) ಇವೆ. ಇಂದಿನ ಸಂಚಿಕೆಯಲ್ಲಿ ನಾವು ಮೊಬೈಲ್ ಯಂತ್ರಾಂಶವನ್ನು ಮತ್ತು ಅದರ ಅಂಗಾಂಗಳನ್ನು ನೋಡೋಣ.

 

ಮೊದಲನೆಯದಾಗಿ ಫೋನ್ ಯಾವ ಪ್ರೋಸೆಸರ್ ಒಳಗೊಂಡಿದೆ ಎಂಬುದು ಮುಖ್ಯವಾಗುತ್ತದೆ. ಪ್ರೋಸೆಸರ್ ಎಂಬುದು ಫೋನಿನ ಹೃದಯವಿದ್ದಂತೆ. ಈ ಮಾತು ಗಣಕಗಳಿಗೂ ಅನ್ವಯಿಸುತ್ತದೆ. ಪ್ರೋಸೆಸರ್‌ನ ವೇಗ ಹೆಚ್ಚಿದ್ದಷ್ಟು ಒಳ್ಳೆಯದು. ಈ ವಿಷಯ ಆಂಡ್ರೋಯಿಡ್ ಫೋನ್‌ಗಳಲ್ಲಿ ಇನ್ನೂ ಹೆಚ್ಚು ಮಹತ್ವದ್ದಾಗುತ್ತದೆ. ಈ ವೇಗವನ್ನು ಹರ್ಟ್ಝ್ ಮೂಲಕ ಅಳೆಯುತ್ತಾರೆ. 1 ಗಿಗಾಹರ್ಟ್ಝ್ ಅಥವಾ ಅದಕ್ಕಿಂತ ಹೆಚ್ಚು ವೇಗದ ಪ್ರೋಸೆಸರ್ ಇದ್ದರೆ ಮಾತ್ರ ಆಂಡ್ರೋಯಿಡ್ ಫೋನ್ ಚೆನ್ನಾಗಿ ಕೆಲಸ ಮಾಡುತ್ತದೆ. ಅದಕ್ಕಿಂತ ಕಡಿಮೆ ವೇಗದ ಪ್ರೋಸೆಸರ್ ಉಳ್ಳ ಫೋನ್ ನಿಧಾನವಾಗಿ ಕೆಲಸ ಮಾಡುತ್ತದೆ. ಇತ್ತೀಚೆಗೆ ಕೆಲವು ಎರಡು ಹೃದಯ ಒಳಗೊಂಡ ಪ್ರೋಸೆಸರ್ ಇರುವ ಫೋನ್‌ಗಳೂ ಬಂದಿವೆ.

 

ಫೋನ್‌ನಲ್ಲಿ ಎಷ್ಟು ಮೆಮೊರಿ ಇದೆ ಎಂಬುದರ ಕಡೆಗೆ ಗಮನ ನೀಡಬೇಕು. ಹೆಚ್ಚು ಮೆಮೊರಿ ಇದ್ದಷ್ಟು ಒಳ್ಳೆಯದು. ಫೋನ್‌ನಲ್ಲಿ ಪ್ರಾಥಮಿಕ (RAM/ROM) ಮತ್ತು ಹೆಚ್ಚುವರಿ (additional memory – MicroSD card) ಎಂದು ಎರಡು ರೀತಿಯ ಮೆಮೊರಿಗಳಿವೆ. ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್) ಪ್ರಾಥಮಿಕ ಮೆಮೊರಿಯಲ್ಲಿ ಕುಳಿತುಕೊಳ್ಳುತ್ತದೆ. ಹೆಚ್ಚುವರಿ ಆನ್ವಯಿಕ ತಂತ್ರಾಂಶಗಳು ಪ್ರಾಥಮಿಕ ಮೆಮೊರಿ ಅಥವಾ ಹೆಚ್ಚುವರಿ ಮೆಮೊರಿಯಲ್ಲಿ ಕೆಲಸ ಮಾಡುತ್ತವೆ.  ಆಂಡ್ರೋಯಿಡ್ 2.1 ಮತ್ತು ಅದಕ್ಕೆ ಹಿಂದಿನ ಆವೃತ್ತಿಗಳಲ್ಲಿ ತಂತ್ರಾಂಶಗಳನ್ನು ಎಸ್‌ಡಿ ಕಾರ್ಡ್ ಮೆಮೊರಿಯಲ್ಲಿ ಇನ್‌ಸ್ಟಾಲ್ ಮಾಡಲು ಆಗುತ್ತಿರಲಿಲ್ಲ. ಆಗ ಪ್ರಾಥಮಿಕ ಮೆಮೊರಿ ಹೆಚ್ಚಿದ್ದಷ್ಟೂ ಒಳ್ಳೆಯದು. ಕೊಳ್ಳುವ ಫೋನಿನಲ್ಲಿರುವ ಕಾರ್ಯಾಚರಣ ವ್ಯವಸ್ಥೆಯು ತಂತ್ರಾಂಶಗಳನ್ನು ಮೆಮೊರಿ ಕಾರ್ಡ್‌ನಲ್ಲಿ ಇನ್‌ಸ್ಟಾಲ್ ಮಾಡಲು ಅನುವು ಮಾಡಿಕೊಡುತ್ತದೆಯೋ ಎಂಬುದನ್ನು ಗಮನಿಸಬೇಕು. ಫೋನ್‌ಗೆ ಎಷ್ಟರ ಮಟ್ಟಿಗಿನ ಮೆಮೊರಿಯನ್ನು ಹಾಕಿಕೊಳ್ಳಬಹುದು ಎಂಬುದೂ ಮುಖ್ಯವಾಗುತ್ತದೆ. ಫೋನಿಗೆ ಹಾಕಿಕೊಳ್ಳುವ ಹಾಡು, ಸಂಗೀತ, ಚಲನಚಿತ್ರ, ಫೋಟೋ ಎಲ್ಲ ಎಸ್‌ಡಿ ಕಾರ್ಡ್‌ನಲ್ಲಿ ಕುಳಿತುಕೊಳ್ಳುತ್ತವೆ. ಅಂದರೆ ಹೆಚ್ಚುವರಿ ಮೆಮೊರಿ ಹೆಚ್ಚಿದ್ದಷ್ಟು ಅಧಿಕ ಹಾಡು, ಚಲನಚಿತ್ರ, ಫೋಟೋ ಹಾಕಿಕೊಳ್ಳಬಹುದು. ಫೋನಿನ ಕ್ಯಾಮರಾ ಬಳಸಿ ಫೋಟೋ ತೆಗೆಯುತ್ತೀರಾದರೆ ಹೆಚ್ಚು ಮೆಮೊರಿ ಇದ್ದರೆ ಒಳ್ಳೆಯದು. ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಿ. ಎಸ್‌ಡಿ ಕಾರ್ಡ್‌ನ ಮೆಮೊರಿ ಜಾಸ್ತಿ ಇದ್ದಷ್ಟು ಫೋನ್ ಸ್ವಿಚ್ ಆನ್ ಮಾಡಿದಾಗ ಅದು ಬೂಟ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಕೆಲವು ಫೋನ್‌ಗಳಲ್ಲಿ ಎಸ್‌ಡಿ ಕಾರ್ಡ್ ಹಾಕಲು ಆಸ್ಪದವಿರುವುದಿಲ್ಲ. ಉದಾಹರಣೆಗೆ ನೋಕಿಯ ಲುಮಿಯ. ಇದರ ಕೊಳ್ಳುಗರು ಫೋನ್ ಕೊಂಡುಕೊಳ್ಳುವಾಗ ಎಷ್ಟು ಮೆಮೊರಿ ಇದೆಯೋ ಅಷ್ಟರಲ್ಲೇ ತೃಪ್ತಿ ಪಟ್ಟುಕೊಳ್ಳಬೇಕು.

 

ಈಗೀಗ ಅಂತರಜಾಲ ಸಂಪರ್ಕ ಸವಲತ್ತು ಎಲ್ಲ ಫೋನ್‌ಗಳಲ್ಲಿ ದೊರೆಯುತ್ತಿವೆ. ಇವುಗಳಲ್ಲಿ ನಿಧಾನಗತಿಯ GPRS ಮತ್ತು ವೇಗದ 3G ಪ್ರಮುಖವಾದವು. ವೀಡಿಯೋ ಚಾಟ್ ಮಾಡಬೇಕಾದರೆ, ಟಿ.ವಿ. ನೋಡಬೇಕಾದರೆ, ಯುಟ್ಯೂಬ್ ವೀಡಿಯೋವನ್ನು ಸಲೀಸಾಗಿ ನೋಡಬೇಕಾದರೆ 3G ಸಂಪರ್ಕ ಬೇಕು. ಸದ್ಯಕ್ಕೆ ಭಾರತದಲ್ಲಿ 3G ಸೇವೆ ಸ್ವಲ್ಪ ದುಬಾರಿಯೇ ಎನ್ನಬಹುದು. ಫೋನಿನಲ್ಲಿರುವ ಅಂತರಜಾಲ ಸಂಪರ್ಕವನ್ನು ಲ್ಯಾಪ್‌ಟಾಪ್ ಅಥವಾ ಇತರೆ ಗಣಕದ ಜೊತೆ ಹಂಚಿಕೊಳ್ಳುವ ವ್ಯವಸ್ಥೆಗೆ ಟೆದರಿಂಗ್ (tethering) ಎನ್ನುತ್ತಾರೆ. ಈ ಸವಲತ್ತು ಬೇಕಾಗಿದ್ದವರು ಫೋನ್ ಕೊಳ್ಳುವ ಮೊದಲು ಈ ವ್ಯವಸ್ಥೆ ಇದೆಯೇ ಎಂದು ಪರೀಕ್ಷಿಸಿಕೊಳ್ಳುವುದು ಒಳಿತು.

 

ಫೋನಿಗೂ ಕ್ಯಾಮರಾಕ್ಕೂ ಏನೇನೂ ಸಂಬಂಧವಿಲ್ಲದಿದ್ದರೂ ಈಗ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಶೇಕಡ ೯೫ ಫೋನ್‌ಗಳಲ್ಲಿ ಕ್ಯಾಮರ ಇರುತ್ತದೆ. ಇವುಗಳಲ್ಲೂ ಹಲವು ರೀತಿಯವಿರುತ್ತವೆ. ಮೊದಲನೆಯದಾಗಿ ಎಲ್ಲರೂ ಗಮನ ನೀಡುವುದು ಮೆಗಾಪಿಕ್ಸೆಲ್ ಕಡೆಗೆ. ಇದು ಹೆಚ್ಚಿದ್ದಷ್ಟು ಒಳ್ಳೆಯದು ಎಂಬ ಭಾವನೆಯಿದೆ. ಇದು ಸ್ವಲ್ಪ ಮಟ್ಟಿಗೆ ಮಾತ್ರ ನಿಜ. ಈ ಮೆಗಾಪಿಕ್ಸೆಲ್ ಎಷ್ಟರ ಮಟ್ಟಿಗೆ ಪ್ರಮುಖ ಪಾತ್ರವಹಿಸುತ್ತದೆ, ಎಲ್ಲಿ ಅದು ಅಪ್ರಸ್ತುತವಾಗುತ್ತದೆ ಎಂಬುದರ ಬಗ್ಗೆ ಒಂದು ಪೂರ್ಣಪ್ರಮಾಣದ ಲೇಖನದ ಅಗತ್ಯ ಇದೆ. ಕ್ಯಾಮರಾದಲ್ಲಿರುವ ಸೆನ್ಸರ್ ಕೂಡ ಅತಿ ಮುಖ್ಯವಾಗುತ್ತದೆ. ಕಡಿಮೆ ಬೆಲೆಯ ಕ್ಯಾಮರಾಗಳಲ್ಲಿ ಹೆಸರಿಗೆ 5 ಮೆಗಾಪಿಕ್ಸೆಲ್ ಇದ್ದರೂ ಚಿತ್ರಗಳ ಗುಣಮಟ್ಟ ಚೆನ್ನಾಗಿಲ್ಲದಿರುವುದಕ್ಕೆ ಸೆನ್ಸರ್ ಕಡಿಮೆ ಗುಣಮಟ್ಟದ್ದಾಗಿರುವುದು ಮತ್ತು ಲೆನ್ಸ್ ಕಡಿಮೆ ಗುಣಮಟ್ಟದ್ದಾಗಿರುವುದು ಕಾರಣವಾಗಿರುತ್ತದೆ. ಆದುದರಿಂದ ಯಾವ ಸೆನ್ಸರ್ ಮತ್ತು ಯಾವ ಲೆನ್ಸ್ ಇದೆ ಎಂಬುದರ ಕಡೆಗೆ ಗಮನ ನೀಡಬೇಕು. ಕೆಲವು ಫೋನ್‌ಗಳಲ್ಲಿ ಮುಂದೆ ಮತ್ತು ಹಿಂದೆ ಒಂದೊಂದು ಕ್ಯಾಮರಾಗಳಿರುತ್ತವೆ. ಅಂದರೆ ಒಂದು ಕ್ಯಾಮರಾ ನಾವು ಫೋಟೊ ತೆಗೆಯುವ ವಸ್ತುವಿನ ಕಡೆ ಇರುತ್ತದೆ ಮತ್ತು ಇನ್ನೊಂದು ನಮ್ಮ ಮುಖವನ್ನೇ ನೋಡುತ್ತಿರುತ್ತದೆ. ಇಂತಹ ಕ್ಯಾಮರದ ಬಳಕೆ ವೀಡಿಯೋ ಚಾಟ್ ಮಾಡುವಾಗ ಆಗುತ್ತದೆ. 3G ಸಂಪರ್ಕ ಇರುವ ಫೋನ್‌ಗಳಲ್ಲಿ ವಿಡಿಯೋ ಚಾಟ್ ಮಾಡಬಹುದು.

 

ಫೋನಿನ ಗಾತ್ರ ಮತ್ತು ಬಳಕೆಯ ವಿಧಾನಕ್ಕೆ form factor ಎನ್ನುತ್ತಾರೆ. ಇತ್ತೀಚೆಗೆ ಸ್ಪರ್ಶಪರದೆ (touchscreen) ಹೊಂದಿರುವ ಫೋನ್‌ಗಳು ಸಾಮಾನ್ಯವಾಗಿವೆ. ಬೇಕಾದಾಗ ಮೂಡಿಬರುವ ಕೀಲಿಮಣೆಯು ಇದರಲ್ಲೇ ಅಡಕವಾಗಿರುತ್ತದೆ. ಇದಕ್ಕೆ soft keyboard ಎನ್ನುತ್ತಾರೆ. ಅಂದರೆ ಭೌತಿಕವಾದ ಕೀಲಿಮಣೆ ಅಲ್ಲ. ಕೆಲವು ಮಾದರಿಗಳಲ್ಲಿ ಭೌತಿಕವಾದ ಕೀಲಿಮಣೆ ಇರುತ್ತದೆ. ಹಳೆಯ ಮಾದರಿಯ ಬ್ಲ್ಯಾಕ್‌ಬೆರ್ರಿ ಮತ್ತು ನೋಕಿಯದವರ E series ಫೋನ್‌ಗಳಲ್ಲಿ ಇವು ಸಾಮಾನ್ಯ. ಕೆಲವು ಫೋನ್‌ಗಳಲ್ಲಿ ಈ ಭೌತಿಕ ಕೀಲಿಮಣೆ ಜಾರಿಸುವಂತದ್ದಾಗಿರುತ್ತದೆ (sliding keyboard). ಭಾರತದ ಅತಿ ಧೂಳು ತುಂಬಿದ ಹಾಗೂ ಅತಿ ತೇವ ಮತ್ತು ಉಷ್ಣದ ಹವೆಯಲ್ಲಿ ಇಂತಹ ಫೋನ್‌ಗಳು ಬೇಗನೆ ಹಾಳಾಗುತ್ತವೆ. ಇದು ನನ್ನ ವೈಯಕ್ತಿಕ ಅನುಭವ.  ಫೋನಿನ ಗಾತ್ರ ದೊಡ್ಡದಿದ್ದಷ್ಟು ಪರದೆ ದೊಡ್ಡದಿರುತ್ತದೆ. ಇದರಿಂದಾಗಿ ಫೋಟೋ, ಚಲನಚಿತ್ರ, ವೀಡಿಯೋ ವೀಕ್ಷಿಸಲು ಅನುಕೂಲವಾಗುತ್ತದೆ. ಆದರೆ ಗಾತ್ರ ತುಂಬ ದೊಡ್ಡದಾದರೆ ಕಿಸೆಯಲ್ಲಿ ಇಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಫೋನಿನ ರೆಸೊಲೂಶನ್ ಹೆಚ್ಚಿದ್ದಷ್ಟು ಫೋಟೋ ಮತ್ತು ವೀಡಿಯೋಗಳು ಹೆಚ್ಚು ಸ್ಫುಟವಾಗಿ ಕಾಣುತ್ತವೆ. ಹೈಡೆಫಿನಿಶನ್ ವೀಡಿಯೋ ನೋಡುವ ಹಾಗೂ ಚಿತ್ರೀಕರಿಸುವ ಸವಲತ್ತು ಇದ್ದರೆ ಇನ್ನೂ ಚೆನ್ನ. ಆದರೆ ನೆನಪಿಡಿ -ಇಂತಹ ಸವಲತ್ತುಗಳು ಸೇರಿದಂತೆ ಫೋನಿನ ಬೆಲೆ ಜಾಸ್ತಿಯಾಗುತ್ತ ಹೋಗುತ್ತದೆ.

 

ಬ್ಲೂಟೂತ್ ಬಗ್ಗೆ ಕಳೆದವಾರ ತಿಳಿದಿದ್ದೇವೆ. ಬ್ಲೂಟತ್ ಸೌಲಭ್ಯ ಇದ್ದರೆ ಒಳ್ಳೆಯದು. ಈಗ ದೊರೆಯುವ ಬಹುತೇಕ ಫೋನ್‌ಗಳಲ್ಲಿ ಈ ಸೌಲಭ್ಯ ಇದ್ದೇ ಇದೆ. ಬ್ಲೂಟೂತ್ ಯಾವ ಆವೃತ್ತಿಯದು ಎಂಬುದರ ಕಡೆಗೆ ಗಮನ ನೀಡಬೇಕು. ಆವೃತ್ತಿ ಒಂದು ಆದರೆ ಸ್ಟೀರಿಯೋ ಸಾಧ್ಯವಿಲ್ಲ. ಅದೇ ರೀತಿ ವೈಫೈ ಇದೆಯೇ ಎಂದು ಗಮನಿಸಬೇಕು. ವೈಫೈ ಇದ್ದರೆ ಮನೆಯಲ್ಲಿ, ಕೆಲವು ಕಾಫೀಶಾಪ್‌ಗಳಲ್ಲಿ, ವಿಮಾನನಿಲ್ದಾಣಗಳಲ್ಲಿ ಅಂತರಜಾಲ ಸಂಪರ್ಕ ಮಾಡಲು ಸುಲಭವಾಗುತ್ತದೆ. ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಸಿಮ್ ಕಾರ್ಡ್ ಇಲ್ಲದಿದ್ದರೂ ವೈಫೈ ಮೂಲಕ ಅಂತರಜಾಲ ಸಂಪರ್ಕ ಸಾಧಿಸಿ ಜಾಲತಾಣಗಳ ವೀಕ್ಷಣೆ, ಫೇಸ್‌ಬುಕ್, ಟ್ವಿಟ್ಟರ್, ಇಮೈಲ್ ಎಲ್ಲ ಮಾಡಬಹುದು. ಆದುದರಿಂದ ಈ ವೈಫೈ ಒಂದು ಪ್ರಮುಖ ಸವಲತ್ತಾಗಿದೆ.

 

ಇನ್ನೂ ಹಲವು ಗುಣವೈಶಿಷ್ಟ್ಯಗಳನ್ನು ಮುಂದಿನ ಕಂತುಗಳಲ್ಲಿ ಗಮನಿಸೋಣ.

 

ಗ್ಯಾಜೆಟ್ ಸಲಹೆ

 

ನನಗೆ ಬರುವ ಒಂದು ಸಾಮಾನ್ಯ ಪ್ರಶ್ನೆಯೆಂದರೆ ನಾನು … ಇಂತಹ ಫೋನ್ ಕೊಂಡುಕೊಂಡಿದ್ದೇನೆ, ಅದರಲ್ಲಿ ಕನ್ನಡ ಬಳಸಲು ಏನು ಮಾಡಬೇಕು? ಬಹುತೇಕ ಮಧ್ಯಮ ದರ್ಜೆಯ ಫೋನ್‌ಗಳಲ್ಲಿ ಕನ್ನಡದ ಸೌಲಭ್ಯ ಇಲ್ಲ. ಕಡಿಮೆ ಬೆಲೆಯ ಮತ್ತು ಅತಿ ದುಬಾರಿಯ ಹಲವು ಫೋನ್‌ಗಳಲ್ಲಿ ಕನ್ನಡದ ಸೌಲಭ್ಯ ಇದೆ. ಕನ್ನಡವನ್ನು ನಾವೇ ಅಳವಡಿಸಿಕೊಳ್ಳುವುದು ಬಹಳ ಕಷ್ಟದ ಮತ್ತು ಪರಿಣತರಿಗೆ ಮಾತ್ರವೇ ಸಾಧ್ಯವಿರುವ ಕೆಲಸ. ಆದುದರಿಂದ ಫೋನ್ ಕೊಳ್ಳುವ ಮೊದಲು ಕನ್ನಡ ಭಾಷೆ ಬಳಸಬಹುದೇ ಎಂದು ವಿಚಾರಿಸಿ ತಿಳಿದುಕೊಳ್ಳುವುದು ಒಳ್ಳೆಯದು. ಫೋನ್ ಕೊಳ್ಳುವ ಎಲ್ಲ ಕನ್ನಡಿಗರು ಕನ್ನಡವನ್ನು ಕೇಳಿದರೆ ವ್ಯಾಪಾರಿಗಳು ಕೊಟ್ಟೇ ಕೊಡುತ್ತಾರೆ.

 

-ಡಾ| ಯು. ಬಿ. ಪವನಜ

16 Comments

  1. Shylendrkumar Shylendrkumar May 20, 2012

    sir last time prajavani gadget lokadalli android phone nalli Kannada typing heliddira thanks. wanna galaxy Y handsetge hegemony download madly please. shylendracpc22@gmail.com

  2. sreeji sreeji December 3, 2012

    Sir nan android thagondidene adaralli eega karbonnA1 dual besta or galaxy y best .

  3. praveen praveen August 17, 2013

    which tablet is best for playing games and best camera and many

  4. praveen praveen August 17, 2013

    lava e book chennagi ideya

  5. bhaskara k bhaskara k November 22, 2013

    sir nanu gelaxy core tegedukollalu bayasiddene. adaralli kannda bareyabahude

  6. sridhar sridhar July 19, 2014

    sir i wanted to buy a android mobile phone below 15000,which should have clearity camera,good battery life,it should support for browsing please suggest me a best phone

  7. prashanth prashanth February 17, 2015

    Sir Harry saviradalli mobile kollabekendiddene androids or windows momma salable Marty era Dara vyatyasa speed majority heltira

  8. vinod vinod March 21, 2015

    Sir, naanu Microsoft Lumia 535 balasuthiddu, idaralli Kannada keyboard alavadisa bekagide….dayavittu maahithi thilisi

    . thank you

  9. umeshbabu umeshbabu March 27, 2015

    hello sir, I have purchased xiomi red mi note 4g but I’m facing some jerky while operating it please help me to over come from it

  10. Naveenkumar S H Naveenkumar S H March 27, 2016

    Good article

  11. Kalpana Kalpana August 24, 2016

    Sir,
    It’s a very useful article. As mobiles are in the revolutionary phase, could you please, update (or add to) this page for every 6 months.
    Thank you.

  12. abdurrahman abdurrahman September 6, 2016

    nanage nimma ishtara tanaka banda ella gadjetgalu beku adakkenu maduabeku

  13. Nesara G Gowda Nesara G Gowda August 13, 2017

    I need a android phone for my studies as I am a student. Please suggest me a smart phone below 6500 rupees

  14. CHANDAN SANDEEP. S CHANDAN SANDEEP. S November 9, 2017

    MI note 4 is heating or not.

  15. santosh navi santosh navi January 17, 2018

    please write quality of asus zenfone 4 selfie and tell me sir vivo v7 or asus zenfone 4 selfie in whose better

  16. Vishwanatha R Vishwanatha R October 10, 2020

    Dolby Atmos ಇರುವ ಒಳ್ಳೆಯ ಹೋಂ ಥಿಯೇಟರ್ ಯಾವುದು ಸರ್

Leave a Reply

Your email address will not be published. Required fields are marked *