eಳೆ – ೨೦ (ಡಿಸೆಂಬರ್ ೧೫, ೨೦೦೨)

eಳೆ – ೨೦ (ಡಿಸೆಂಬರ್ ೧೫, ೨೦೦೨)

ಅಂತರಜಾಲಾಡಿ

ಇಂದು ಗೀತಾಜಯಂತಿ. ಭಗವದ್ಗೀತೆಯಿಂದ ಪ್ರಭಾವಿತರಾಗದವರು ವಿರಳ. ಅಂತರಜಾಲದಲ್ಲಿ ಭಗವದ್ಗೀತೆಯ ತಾಣಗಳು ಹಲವಾರಿವೆ. www.bhagavad-gita.org ತಾಣದಲ್ಲಿ ಹಿಂದಿ, ಇಂಗ್ಲಿಶ್, ಫ್ರೆಂಚ್, ಸ್ಪಾನಿಶ್, ಇತ್ಯಾದಿ ಹಲವು ಭಾಷೆಗಳಲ್ಲಿ ಗೀತೆಯ ಅನುವಾದವನ್ನು ಓದಬಹುದು. ಗೀತೆಯ ಬಹುಮಾಧ್ಯಮ ಆವೃತ್ತಿ www.malkan.com/webgita/index.shtml ತಾಣದಲ್ಲಿದೆ. ಅಡೋಬಿ ಪಿ.ಡಿ.ಎಫ್. ಮತ್ತು ಪೋಸ್ಟ್‌ಸ್ಕ್ರಿಪ್ಟ್ ವಿಧಾನದಲ್ಲಿ, ಮುದ್ರಿಸಬಲ್ಲ ಗೀತೆ www.iconsoftec.com/gita ತಾಣದಲ್ಲಿದೆ. ಇಷ್ಟೆಲ್ಲ ಇದೆ ಅನ್ನುತ್ತೀರಲ್ಲ, ಕನ್ನಡದಲ್ಲಿ ಎಲ್ಲಿದೆ ಎಂದು ಕೇಳುತ್ತಿದ್ದೀರಾ? ಇದೋ ನಿಮಗಾಗಿ www.ourkarnataka.com/religion/gita/gita.htm ತಾಣದಲ್ಲಿ ಕನ್ನಡ ಆವೃತ್ತಿ ಇದೆ. ಇದು ಇನ್ನೂ ಸಂಪೂರ್ಣವಾಗಿಲ್ಲ. ಅದನ್ನು ಪೂರ್ಣಗೊಳಿಸಲು ನೀವೂ ಸಹಾಯ ಮಾಡಬಹುದು.

ಡೌನ್‌ಲೋಡ್

ಅಂತರಜಾಲದಲ್ಲಿ ಕೆಲವು ತಾಣಗಳನ್ನು ಮೈಕ್ರೋಸಾಫ್ಟ್ ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನ್ನು ಉಪಯೋಗಿಸಿ ವೀಕ್ಷಿಸುವಾಗ ಬ್ರೌಸರಿನ ಹಲವು ಜಾಹಿರಾತಿನ ಕಿಟಿಕಿಗಳು ತನ್ನಿಂದತಾನೆ ತೆರೆದುಕೊಂಡು ಕಿರಿಕಿರಿ ಉಂಟುಮಾಡುತ್ತಿವೆಯೇ? ಅವುಗಳನ್ನು ತೊಡೆದುಹಾಕಲು www.popup-purger.com ತಾಣದಲ್ಲಿ ದೊರೆಯುವ Popup Purger ಎಂಬ ತಂತ್ರಾಂಶವನ್ನು ಅನುಸ್ಥಾಪಿಸಿ ನಿಶ್ಚಿಂತವಾಗಿರಿ.

ಶಾರ್ಟ್‌ಕಟ್

ನಿಮ್ಮ ಗಣಕ ನಿಧಾನವಾಗಿ ಕೆಲಸ ಮಾಡುತ್ತಿದೆಯೇ? ತುಂಬ ಫಾಂಟ್‌ಗಳನ್ನು ಇಟ್ಟುಕೊಂಡಿರುವುದೂ ಇದಕ್ಕೆ ಒಂದು ಕಾರಣವಾಗಿರಬಹುದು. Control Panel ನಲ್ಲಿ Font ಸವಲತ್ತನ್ನು ಬಳಸಿ ಅನಗತ್ಯವಾದ ಫಾಂಟ್‌ಗಳನ್ನು ಕಿತ್ತು ಹಾಕಿ.

e – ಸುದ್ದಿ

ಮೈಕ್ರೋಸಾಫ್ಟ್‌ನವರಿಂದ ಲಿನಕ್ಸ್‌ಗೆ ತಂತ್ರಾಂಶ ತಯಾರಿ?!

೨೦೦೪ನೇ ಇಸವಿಯ ಹೊತ್ತಿಗೆ ಮೈಕ್ರೋಸಾಫ್ಟ್ ಕಂಪೆನಿಯು ತನ್ನ ಕಟ್ಟಾ ವಿರೋಧಿ ಎಂದು ನಂಬಿರುವ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆಗೆ ತಂತ್ರಾಂಶಗಳನ್ನು ತಯಾರಿಸಿ ಮಾರುವ ಸಾಧ್ಯತೆಗಳಿವೆ ಎಂದು ಮೆಟಾ ಸಂಸ್ಥೆಯವರು ಭವಿಷ್ಯ ನುಡಿದಿದ್ದಾರೆ. ಸರ್ವರ್ ಮಾರುಕಟ್ಟೆಯಲ್ಲಿ ಲಿನಕ್ಸ್‌ನ ಪಾಲು ಈಗ ೧೫ ರಿಂದ ೨೦ ಪ್ರತಿಶತ ಇದೆ. ೨೦೦೬ನೆ ಇಸವಿಯ ಹೊತ್ತಿಗೆ ಇದು ೪೫% ಆಗುವ ನಿರೀಕ್ಷೆಯಿದೆ. ಆದುದರಿಂದ ಮೈಕ್ರೋಸಾಫ್ಟ್‌ನವರು ಸರ್ವರ್‌ನಲ್ಲಿ ಕೆಲಸ ಮಾಡುವ ತಮ್ಮ ಕೆಲವು ತಂತ್ರಾಂಶಗಳಾದ ಎಸ್‌ಕ್ಯೂಎಲ್ ಸರ್ವರ್, ಐಐಎಸ್, ಎಕ್ಸ್‌ಚೇಂಜ್ ಇತ್ಯಾದಿಗಳ ಲಿನಕ್ಸ್ ಆವೃತ್ತಿಯನ್ನು ಹೊರತರುವ ಸಂಭವವಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ ಮೆಟಾ ನುಡಿದಿರುವ ಈ ಭವಿಷ್ಯವನ್ನು ಮೈಕ್ರೋಸಾಫ್ಟ್‌ನವರು ಪೂರ್ತಿಯಾಗಿ ನಿರಾಕರಿಸಿಲ್ಲ.

e-ಪದ

ಯು.ಆರ್.ಎಲ್. (URL = Uniform Resource Locator): ಜಾಲತಾಣಸೂಚಿ. ಇದು ಅಂತರಜಾಲ ತಾಣವನ್ನು ಸೂಚಿಸುತ್ತದೆ. ಅಂತರಜಾಲ ತಾಣವನ್ನು ಗಣಕಗಳು ಮತ್ತು ತಾಣ ವೀಕ್ಷಕ ತಂತ್ರಾಂಶಗಳು (ಬ್ರೌಸರ್ ಸಾಫ್ಟ್‌ವೇರ್, ಉದಾ. ಇಂಟರ್‌ನೆಟ್ ಎಕ್ಸ್‌ಪ್ಲೋರರ್) ಈ ಜಾಲತಾಣಸೂಚಿಯ ಮೂಲಕ ಅಥವಾ ತಾಣದ ಅಂಕೀಯ ವಿಳಾಸದ (IP address. IP = Internet Protocol) ಮೂಲಕ ಪತ್ತೆ ಹಚ್ಚುತ್ತವೆ. ಜಾಲತಾಣಸೂಚಿಗೆ ಕೆಲವು ಉದಾಹರಣೆಗಳು – www.vishvakannada.com, www.yahoo.com, www.thatskannada.com…

ಕಂಪ್ಯೂತರ್ಲೆ

ಕೌರವರು ಎಷ್ಟು ಮಂದಿ?

ಇದಕ್ಕೂ ಗಣಕಕ್ಕೂ ಏನು ಸಂಬಂಧ, ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಇದ್ದಂತೆ, ಎಂದು ಕೇಳುತ್ತಿದ್ದೀರಾ? ಸ್ವಲ್ಪ ತಾಳಿ, ವಿವರಿಸುತ್ತೇನೆ. ಧೃತರಾಷ್ಟ್ರ ಚಕ್ರವರ್ತಿಗೆ ೧೦೧ ಮಕ್ಕಳು ಎಂಬ ವಿಷಯ ಎಲ್ಲರಿಗೂ ಗೊತ್ತು ಎಂದು ಹೇಳಬಹುದು. ಆ ನೂರ ಒಂದು ಹೆಸರುಗಳನ್ನು ಸ್ವಲ್ಪ ಹೇಳಿ ನೋಡೋಣ. ಧುರ್ಯೋಧನ, ದುಶ್ಶಾಸನ, ವಿಕರ್ಣ, ಯುಯುತ್ಸು (ದಾಸಿಪುತ್ರ), ದುಶ್ಶಳೆ (ಮಗಳು, ಜಯದ್ರಥನ ಹೆಂಡತಿ) ಇಷ್ಟು ಹೆಸರುಗಳು ಮಾತ್ರ ಕೂಡಲೆ ಎಲ್ಲರಿಗೂ ಬಾಯಿಗೆ ಬರುತ್ತವೆ. ಮುಂದಿನ ಹೆಸರುಗಳು ಮಹಾಭಾರತದ ಒಂದು ಲಕ್ಷ ಶ್ಲೋಕಗಳಲ್ಲಿ ಎಲ್ಲೋ ಹುದುಗಿವೆ. ಅದುದರಿಂದ ಧೃತರಾಷ್ಟ್ರನಿಗೂ ಕೇವಲ ಐದೇ ಮಕ್ಕಳು ಇದ್ದದ್ದು ಎಂದು ನಾವು ತೀರ್ಮಾನಿಸಬಹುದು. ಹಾಗಾದರೆ ಕೌರವರು ೧೦೧ ಆದದ್ದು ಹೇಗೆ? ಅದು ಹೀಗೆ: ಧೃತರಾಷ್ಟ್ರ ಹುಟ್ಟು ಕುರುಡ. ಅವನಿಗೆ ಹತ್ತು ಅಂಕೆಗಳನ್ನು ನೆನಪಿಟ್ಟುಕೊಳ್ಳಲು ಆಗುತ್ತಿರಲಿಲ್ಲ. ಅವನಿಗೆ ಗೊತ್ತಿದ್ದದ್ದು ಎರಡೇ ಅಂಕೆಗಳು -ಸೊನ್ನೆ ಮತ್ತು ಒಂದು. ಅವನು ಲೆಕ್ಕ ಮಾಡುತ್ತಿದ್ದದ್ದು (ಗಣಕಗಳಲ್ಲಿ ಚಾಲ್ತಿಯಲ್ಲಿರುವ) ದ್ವಿಮಾನ ಪದ್ಧತಿಯಲ್ಲಿ. ದಶಮಾನ ಪದ್ಧತಿಯ ೫ ದ್ವಿಮಾನ ಪದ್ಧತಿಯಲ್ಲಿ ೧೦೧ ಆಗುತ್ತದೆ!

ಡಾ. ಯು. ಬಿ. ಪವನಜ

Leave a Reply