eಳೆ – ೧೯ (ಡಿಸೆಂಬರ್ ೮, ೨೦೦೨)
eಳೆ – ೧೯ (ಡಿಸೆಂಬರ್ ೮, ೨೦೦೨)
ಅಂತರಜಾಲಾಡಿ
ಅಂತರಜಾಲದ ಮೂಲಕ ದೂರಶಿಕ್ಷಣ ಈಗ ಜನಪ್ರಿಯವಾಗುತ್ತಿದೆ. ಮನೆಯಲ್ಲಿಯೇ ಕುಳಿತು ನಮ್ಮ ಬಿಡುವಿನ ಸಮಯದಲ್ಲಿ ಕಲಿಯಲು ಇದು ಸಹಾಯ ಮಾಡುತ್ತದೆ. ಅಂತರಜಾಲದ ಮೂಲಕ ಶಿಕ್ಷಣ ನೀಡುವ ಹಲವಾರು ತಾಣಗಳಿವೆ. ಅಂತಹ ತಾಣಗಳ ಸೂಚಿ ಮತ್ತು ಕಲಿಕೆಯ ವಿಷಯಗಳ ವಿವರ ನೀಡುವ ಒಂದು ತಾಣ: www.worldwidelearn.com. ಇದೇ ಪ್ರಕಾರದ ಮತ್ತೊಂದು ತಾಣ: www.elearners.com. ಇನ್ನು ತಡವೇಕೆ? ಮನೆಯಲ್ಲಿ ಕುಳಿತೇ ಅಮೇರಿಕಾದ ವಿಶ್ವವಿದ್ಯಾಲಯವೊಂದರ ಡಿಗ್ರಿ ಪಡೆಯರಿ. ಸಂತೋಷಕೂಟಕ್ಕೆ ನನ್ನನ್ನೂ ಆಹ್ವಾನಿಸಿ!
ಡೌನ್‌ಲೋಡ್
ಗಣಕದಲ್ಲಿ ಹಲವಾರು ತಂತ್ರಾಂಶಗಳನ್ನು ಅನುಸ್ಥಾಪಿಸಿ (install ಮಾಡಿ) ಅನಂತರ ಅವುಗಳನ್ನು ಸರಿಯಾಗಿ uninstall ಮಾಡದಿದ್ದರೆ ಆ ತಂತ್ರಾಂಶಗಳ ಪಳೆಯುಳಿಕೆಗಳು ಗಣಕದ ರಿಜಿಸ್ಟ್ರಿಯಲ್ಲಿ ಉಳಿದುಕೊಂಡು ತೊಂದರೆ ಕೊಡುತ್ತವೆ ಎಂದು ಕಳೆದ ವಾರ ಇದೇ ಅಂಕಣದಲ್ಲಿ ವಿವರಿಸಲಾಗಿತ್ತು. ಈ ರಿಜಿಸ್ಟ್ರಿಯಲ್ಲಿಯ ಕಸವನ್ನೆಲ್ಲ ಗುಡಿಸಿಹಾಕಿ ಸ್ವಚ್ಛ ಮಾಡಲು ಒಂದು ಉಚಿತ ತಂತ್ರಾಶ RegCleaner ಬೇಕಿದ್ದಲ್ಲಿ www.vtoy.fi/jv16/shtml/regcleaner.shtml ತಾಣಕ್ಕೆ ಭೇಟಿ ನೀಡಿ. ಇದನ್ನು ಬಳಸಲು ಸ್ವಲ್ಪ ಗಣಕ ಪರಿಣತಿ ಇದ್ದರೆ ಒಳ್ಳೆಯದು.
ಶಾರ್ಟ್‌ಕಟ್
ನಿಮ್ಮ ಗಣಕದ C ಡ್ರೈವ್‌ನಲ್ಲಿ ಜಾಗ ಕಡಿಮೆಯಾಗುತ್ತಿದೆಯೇ? ಅದನ್ನು ಆಗಾಗ ಸ್ವಚ್ಛ ಮಾಡುತ್ತಿರಬೇಕು. ಇದಕ್ಕೆ Programs | Accessories | System Tools | Disk Cleanup ಸೌಕರ್ಯವನ್ನು ಬಳಸಿ.
e – ಸುದ್ದಿ
ಅಂಗೈ ಗಣಕದಿಂದ ಮುಂಗೈ ಮೇಲೆ ಹಚ್ಚೆ!
ಆಸ್ಟ್ರಿಯಾ ದೇಶದ ನಿಕ್ಕಿ ಪಸ್ಸತ್ ಎಂಬಾತ ದೇಹದ ಮೇಲೆ ಹಚ್ಚೆ ಮೂಡಿಸಬಲ್ಲ ರೋಬೋಟನ್ನು ಆವಿಷ್ಕರಿಸಿದ್ದಾನೆ. ಈ ರೋಬೋಟ್ ಅಂಗೈ ಗಣಕದಿಂದ ನಿಯಂತ್ರಿತವಾಗಿದೆ. ಇಡೀ ಉಪಕರಣವನ್ನು ಕೈ ಮೇಲೆ ಕುಳ್ಳಿರಿಸಿ ಹಚ್ಚೆ ಚಿತ್ರಿಸಬಹುದಾಗಿದೆ. ಈ ಉಪಕರಣಕ್ಕೆ ಫ್ರೆಡ್ಡಿ ಎಂದು ಹೆಸರಿಸಲಾಗಿದೆ. ಇದನ್ನು ಆವಿಷ್ಕಾರ ಮಾಡುತ್ತಿದ್ದ ವೇಳೆಯಲ್ಲಿ ನಿಕ್ಕಿಗೆ ಹಚ್ಚೆ ಹಾಕಿಸಿಕೊಳ್ಳಲು ಸ್ವಯಂಸೇವಕರು ಯಾರು ಸಿಗದೆ ತನಗೆ ತಾನೆ ಹಚ್ಚೆ ಹಾಕಿಸಿಕೊಂಡ. ಆಗ ಅದು ಸರಿಯಾಗಿ ಕೆಲಸ ಮಾಡದೆ ಆತನ ಕೈ ಮೇಲೆ ಅಡ್ಡಾದಿಡ್ಡಿಯಾಗಿ ಮೂಡಿಸಿದ ಹಚ್ಚೆ ಗುರುತು ಶಾಶ್ವತವಾಗಿ ಉಳಿದಿದೆ. ಈಗ ಅಂತಹ ಯಾವುದೇ ಭಯವಿಲ್ಲದೆ ಯಾರು ಬೇಕಾದರು ಹಚ್ಚೆ ಹಾಕಿಸಿಕೊಳ್ಳಬಹುದು. ಅದಕ್ಕೆ ನೀವು ಆಸ್ಟ್ರಿಯಾಕ್ಕೆ ಹೋಗಬೇಕು, ಅಷ್ಟೆ.
e-ಪದ
ಲಾಗಿನ್ (Login) ಮತ್ತು ಪಾಸ್‌ವರ್ಡ್ (Password) : ಗಣಕವನ್ನು ಉಪಯೋಗಿಸಲು ಅಥವಾ ವಿ-ಅಂಚೆಯ ಪೆಟ್ಟಿಗೆಯನ್ನು ತೆರೆಯಲು ನೀವು ಬಳಸಬೇಕಾದ ಹೆಸರು ಮತ್ತು ಗುಪ್ತ ಸಂಕೇತಪದ.
ಕಂಪ್ಯೂತರ್ಲೆ
ಕೆಲವು (ಕು)ಖ್ಯಾತ ಗಣಕ ವೈರಸ್‌ಗಳ ಹೆಸರುಗಳನ್ನು ಕನ್ನಡಕ್ಕೆ ಅನುವಾದ ಮಾಡಿದಾಗ:
Brain – ಮಿದುಳು
Stone – ಕಲ್ಲು
MyBugbear – ನನ್ನ ಗೊಗ್ಗಯ್ಯ, ನನ್ನ ಗುಮ್ಮ
EmpireMonkey – ಚಕ್ರವರ್ತಿ ಕೋತಿ
LoveLetter – ಪ್ರೇಮಪತ್ರ
ColdApe – ತಂಪುಕೋತಿ
– ಡಾ. ಯು. ಬಿ. ಪವನಜ