eಳೆ – ೧೮ (ಡಿಸೆಂಬರ್ ೧, ೨೦೦೨)
eಳೆ – ೧೮ (ಡಿಸೆಂಬರ್ ೧, ೨೦೦೨)
ಅಂತರಜಾಲಾಡಿ
ಗಾಜೆಟ್ ಪ್ರಿಯರುಗಳಿಗೆಂದೇ ಕೆಲವು ಅಂತರಜಾಲ ತಾಣಗಳಿವೆ. ಉದಾಹರಣೆಗೆ www.technoscout.com. ಇತ್ತೀಚಿಗೆ ಮಾರುಕಟ್ಟೆಯನ್ನು ಪ್ರವೇಶಿಸಿರುವ, ಬ್ಯಾಟರಿಯೇ ಇಲ್ಲದೆ ಕೆಲಸ ಮಾಡುವ, ಟಾರ್ಚ್ ಇಲ್ಲಿ ಲಭ್ಯ. 300 ಅಡಿ ದೂರದಲ್ಲಿ ಪಿಸು ಮಾತನಾಡುತ್ತಿರುವುದನ್ನು ಸ್ಪಷ್ಟವಾಗಿ ಕೇಳಿಸುವಂತೆ ಮಾಡುವ ಸಾಧನವನ್ನು ಕೊಳ್ಳಬೇಕೆ? ಹಾಗಿದ್ದಲ್ಲಿ www.gadgets.com ತಾಣಕ್ಕೆ ಭೇಟಿ ನೀಡಿ.
ಡೌನ್‌ಲೋಡ್
ಅಂತರಜಾಲ ಅರ್ಥಾತ್ ಮಾಹಿತಿ ಹೆದ್ದಾರಿಯಲ್ಲಿ ಓಡಾಡುತ್ತಿರುವಾಗ ನಿಮ್ಮ ಗಣಕದ ಸುರಕ್ಷತೆಗಾಗಿ ಒಂದು ಫೈರ್‌ವಾಲ್ ಉಪಯೋಗಿಸುವುದು ಒಳಿತು. ಇಂತಹ ಒಂದು ತಂತ್ರಾಂಶ ಉಚಿತವಾಗಿ ದೊರೆಯುವ ತಾಣ: http://soho.sygate.com/products/shield_ov.htm
ಶಾರ್ಟ್‌ಕಟ್
ಗಣಕದಲ್ಲಿ ಹಲವು ತಂತ್ರಾಂಶಗಳನ್ನು ಅನುಸ್ಥಾಪಿಸಿ (installation) ಅವು ಬೇಡವೆನಿಸಿದಾಗ ಅವುಗಳನ್ನು ಅಳಿಸಿ ಹಾಕುತ್ತೀರಿ ತಾನೆ? ತಡೆಯಿರಿ. ಇಂತಹ ತಂತ್ರಾಂಶಗಳನ್ನು ಅವುಗಳು ಇರುವ ಫೋಲ್ಡರನ್ನು ಕಿತ್ತು ಹಾಕುವ ಮೂಲಕ ಅಳಿಸಬೇಡಿ. Control Panel ನಲ್ಲಿರುವ Add Remove Programs ಸೌಕರ್ಯದ ಮೂಲಕ ಮಾತ್ರವೇ ತಂತ್ರಾಂಶಗಳನ್ನು ಗಣಕದಿಂದ ಕಿತ್ತು ಹಾಕಿ. ಇಲ್ಲವಾದಲ್ಲಿ ಗಣಕದ ರಿಜಿಸ್ಟ್ರಿಯಲ್ಲಿ ನೀವು ಅಳಿಸಿ ಹಾಕಿದ್ದೇನೆ ಅಂದುಕೊಂಡಿರುವ ತಂತ್ರಾಂಶದ ಮಾಹಿತಿ ಇನ್ನೂ ಉಳಿದುಕೊಂಡು ತೊಂದರೆ ಕೊಡುತ್ತದೆ.
e – ಸುದ್ದಿ
ಡಾಸ್‌ನ ಮರಣ!
ಮೈಕ್ರೋಸಾಫ್ಟ್ ಕಂಪೆನಿಯವರು ತಮ್ಮ ಅಂತರಜಾಲ ತಾಣದಲ್ಲಿ (www.microsoft.com/windows/lifecycle.mspx) ಪ್ರಕಟಿಸಿದ ಮಾಹಿತಿಯ ಪ್ರಕಾರ DOS (Disk Operating System) ಕಾರ್ಯಾಚರಣ ವ್ಯವಸ್ಥೆ ಡಿಸೆಂಬರ್ 31, 2002 ರಂದು ಸಾಯಲಿದೆ! ಈ ತಾರೀಕಿನ ನಂತರ ಡಾಸ್‌ಗೆ ಯಾವುದೇ ರೀತಿಯ ಸೇವೆ ಸೌಕರ್ಯವನ್ನು ಮೈಕ್ರೋಸಾಫ್ಟ್ ಕಂಪೆನಿ ನೀಡುವುದಿಲ್ಲ. ಇದು ವಿಂಡೋಸ್ 95 ಮತ್ತು 3.1 ಗಳಿಗೂ ಅನ್ವಯಿಸುತ್ತದೆ.
e-ಪದ
ಫೈರ್‌ವಾಲ್ (firewall): ಅಂತರಜಾಲದ ಮೂಲಕ ಕಿಡಿಗೇಡಿಗಳು ಗಣಕಗಳನ್ನು ಮತ್ತು ಅಥವಾ ಆಂತರಿಕಜಾಲವನ್ನು ಪ್ರವೇಶಿಸಿ ಕಿತಾಪತಿ ನಡೆಸುವ ಸಾಧ್ಯತೆಗಳಿವೆ. ಇಂತಹ ಆಕ್ರಮಣವನ್ನು ತಡೆಗಟ್ಟಲು ಉಪಯೋಗಿಸುವ ಸುರಕ್ಷಾಕವಚ ಅಥವಾ ಅಡ್ಡಗೋಡೆಯನ್ನು ಫೈರ್‌ವಾಲ್ ಎಂದು ಕರೆಯುತ್ತಾರೆ. ಇದು ಆಂತರಿಕಜಾಲದಿಂದ ಅಂತರಜಾಲಕ್ಕೆ ಹೋಗುವ ಮತ್ತು ಬರುವ ಎಲ್ಲ ಮಾಹಿತಿ ಸಂಚಾರವನ್ನು ಶೋಧಿಸಿ ಆಕ್ರಮಣಕಾರಿ ತಂತ್ರಾಂಶಗಳನ್ನು ತಡೆಗಟ್ಟುತ್ತದೆ.
ಕಂಪ್ಯೂತರ್ಲೆ
ಪ್ರ: ಒಂದು ಲೈಟ್‌ಬಲ್ಬನ್ನು ಹೋಲ್ಡರಿಗೆ ಸೇರಿಸಲು ಕ.ರಾ.ರ.ಸಾ.ಸಂಸ್ಥೆಯಲ್ಲಿ ಕೆಲಸ ಮಾಡುವ ಎಷ್ಟು ಕನ್ನಡ ತಂತ್ರಾಂಶ ಪರಿಣತರು ಬೇಕು?
ಉ: ಸೊನ್ನೆ. ಯಾಕೆಂದರೆ ಕನ್ನಡದಲ್ಲಿ ತಂತ್ರಾಂಶ ತಯಾರಿಸಬಲ್ಲ ಪರಿಣತರು ಕ.ರಾ.ರ.ಸಾ.ಸಂಸ್ಥೆಯಲ್ಲಿಲ್ಲ.
– ಡಾ. ಯು. ಬಿ. ಪವನಜ