eಳೆ – ೧೬ (ನವಂಬರ ೧೭, ೨೦೦೨)
eಳೆ – ೧೬ (ನವಂಬರ ೧೭, ೨೦೦೨)
ಅಂತರಜಾಲಾಡಿ
ನಿಮ್ಮ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದಾರೆಯೇ? ಗ್ರಹ, ನಕ್ಷತ್ರ, ಬ್ರಹ್ಮಾಂಡಗಳ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆಯೇ? ಕುತೂಹಲಭರಿತ ಮಕ್ಕಳಿಗೆ ಸೌರವ್ಯೂಹ, ಗ್ರಹ, ನಕ್ಷತ್ರಗಳ ಬಗ್ಗೆ ತಿಳಿಹೇಳುವ ಕೆಲವು ಅಂತರಜಾಲ ತಾಣಗಳಿವೆ. ಅವು www.solarviews.com, kids.msfc.nasa.gov, www.dustbunny.com/afk. ಇಲ್ಲಿ ಖಗೋಳಶಾಸ್ತ್ರದ ತಿಳಿವಳಿಕೆ ಪಡೆಯವುದರ ಜೊತೆ ಕೆಲವು ಅಟಗಳನ್ನೂ ಅಡಬಹುದು.
ಡೌನ್‌ಲೋಡ್
ಏಕಾಂಗಿಯಾಗಿ ಕುಳಿತು ಗಣಕದಲ್ಲಿ ಇಸ್ಪೀಟು ಅಡುವುದು ನಿಮ್ಮ ಹವ್ಯಾಸವೇ? ವಿಂಡೋಸ್ ಜೊತೆ ಸಿಗುವ ಸೋಲಿಟೈರ್ ಅಡಿ ಅಡಿ ಬೋರ್ ಅಗಿದೆಯೆ? www.solsuite.com ತಾಣದಲ್ಲಿ ಸಿಗುವ SolSuite 2002 ಅಟವನ್ನು ಡೌನ್‌ಲೋಡ್ ಮಾಡಿ. ಇದರಲ್ಲಿ 342 ಸೋಲಿಟೈರ್ ಅಟಗಳಿವೆ.
ಶಾರ್ಟ್‌ಕಟ್
ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಅಂತರಜಾಲ ತಾಣಗಳ ವಿಳಾಸವನ್ನು ಪೂರ್ತಿಯಾಗಿ ಕುಟ್ಟಲು ಉದಾಸೀನವೇ? ಇಲ್ಲಿದೆ ಚಿಕ್ಕ ಪರಿಹಾರ. www.vishvakannada.com ಎಂದು ಬೆರಳಚ್ಚು ಮಾಡುವ ಬದಲು ಕೇವಲ vishvakannada ಎಂದು ಬೆರಳಚ್ಚು ಮಾಡಿ Ctrl ಮತ್ತು Enter ಕೀಲಿಗಳನ್ನು ಒಟ್ಟಿಗೆ ಒತ್ತಿ. ಉಳಿದವುಗಳನ್ನು ಅದು ತಾನೇ ಸೇರಿಸಿಕೊಳ್ಳುತ್ತದೆ.
e – ಸುದ್ದಿ
ಶಿವನ ಮಾರಾಟ!
ಗಾಬರಿಯಾಗಬೇಡಿ. ನಮ್ಮ ಶಿವ ದೇವರನ್ನು ಯಾರೂ ಮಾರಿಲ್ಲ. ಇಂಟೆಲ್ ಕಂಪೆನಿಯಲ್ಲಿ ಗಣಕಜಾಲಗಳಿಗೆ ಸಂಬಂಧಿಸಿ ಕೆಲಸ ಮಾಡುತ್ತಿದ್ದ ಶಿವ ಹೆಸರಿನ ವಿಭಾಗವನ್ನು ಸಿಂಪಲ್ ಅಕ್ಸೆಸ್ ಎಂಬ ಕಂಪೆನಿಗೆ ಮಾರಾಟ ಮಾಡಲಾಗಿದೆ.
e-ಪದ
ಕುಕೀ (Cookie) – ಅಂತರಜಾಲ ತಾಣವು ನಿಮ್ಮನ್ನು ಮತ್ತೊಮ್ಮೆ ಭೇಟಿ ನೀಡಿದಾಗ ಗುರುತು ಹಿಡಿಯಲು ನಿಮ್ಮ ಗಣಕದಲ್ಲಿ ಬರೆಯುವ ಮಾಹಿತಿ. ಕೆಲವು ತಾಣಗಳಿಗೆ ಪುನಃ ಭೇಟಿ ನೀಡಿದಾಗ ಅದು ನಿಮ್ಮ ಹೆಸರನ್ನು ಪ್ರದರ್ಶಿಸಿ ನಿಮಗೆ ಸುಸ್ವಾಗತ ಹೇಳುವುದು ಈ ಕುಕೀಯಲ್ಲಿನ ಮಾಹಿತಿಯನ್ನು ಉಪಯೋಗಿಸಿಯೇ. ನಿಮ್ಮ ವೈಯಕ್ತಿಕ ಅಯ್ಕೆಗಳನ್ನು ನೆನಪಿಟ್ಟುಕೊಂಡು ನಿಮಗೆ ಬೇಕಾದ ರೀತಿಯಲ್ಲಿ ಮಾಹಿತಿಯನ್ನು ನೀಡಲು ಕುಕೀ ಸಹಾಯ ಮಾಡುತ್ತದೆ. ಅದರೆ ಕೆಲವು ತಾಣಗಳು ಕುಕೀಯ ಮೂಲಕ ನಿಮ್ಮ ವೈಯಕ್ತಿಕ ಅಭ್ಯಾಸಗಳನ್ನು ದಾಖಲಿಸಿಕೊಂಡು ನಿಮ್ಮ ವಿ-ಅಂಚೆಯ ವಿಳಾಸವನ್ನು ಇತರರಿಗೆ ಮಾರುತ್ತವೆ. ಇದರಿಂದ ನಿಮಗೆ ಅನಗತ್ಯವಾದ ವಿ-ಜಾಹೀರಾತಿನ ಪತ್ರಗಳ ಸುರಿಮಳೆಯಾಗುತ್ತದೆ. ಬ್ರೌಸರ್ (ಇಂಟರ್‌ನೆಟ್ ಎಕ್ಸ್‌ಪ್ಲೋರರ್, ನೆಟ್‌ಸ್ಕೇಪ್, …) ತಂತ್ರಾಂಶಗಳಲ್ಲಿ ಕುಕೀಗಳನ್ನು ಸ್ವೀಕರಿಸಬೇಕೆ ಬೇಡವೇ ಎಂದು ನಿರ್ಧರಿಸುವ ಸ್ವಾತಂತ್ರ್ಯ ನಿಮಗಿದೆ.
ಕಂಪ್ಯೂತರ್ಲೆ
ಕೆಲವು ಗಾದೆಗಳು:
“ತಪ್ಪು ಮಾಡುವುದು ಮನುಷ್ಯ ಸ್ವಭಾವ. ಮಾಡಿದ ತಪ್ಪಿಗೆ ಗಣಕವನ್ನು ದೂರುವುದು ನೌಕರ ಸ್ವಭಾವ.”
“ಪ್ರಥಮ ಪ್ರಯತ್ನದಲ್ಲಿ ಯಶಸ್ವಿಯಾಗದಿದ್ದಲ್ಲಿ ಗಣಕವನ್ನು ದೂರು.”
“ಪ್ರೋಗ್ರಾಮ್‌ಗಿಂತ ಸ್ರ್ಕೀನ್‌ಸೇವರ್ ದೊಡ್ಡದು.”
“ಕೆಲಸ ಗೊತ್ತಿಲ್ಲದವನಿಗೆ ಗಣಕ ಸರಿಯಿಲ್ಲ.”
“ಮೆಮೊರಿಯಿದ್ದಷ್ಟೆ ಪ್ರೋಗ್ರಾಮ್ ಮಾಡು.”
– ಡಾ. ಯು. ಬಿ. ಪವನಜ