Press "Enter" to skip to content

ಮುಂಬಯಿ ಪೋಲೀಸರ ಕಾರ್ಯವೈಖರಿ

ಒಮ್ಮೆ ಮುಂಬಯಿಗೆ ಭೇಟಿ ನೀಡಿದ್ದೆ. ವಿಮಾನ ನಿಲ್ದಾಣದ ಸಮೀಪ ಇರುವ ಪಂಚತಾರಾ ಹೋಟೆಲಿನ ಎದುರುಗಡೆಯ ರಸ್ತೆಯಲ್ಲಿ ಒಂದು ಟ್ಯಾಕ್ಸಿ ಹಿಡಿದೆ. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ಗೆ ಹೋಗಬೇಕಿತ್ತು. ಚಾಲಕ, ಬಹುಶಃ ಪಂಚತಾರಾ ಹೋಟೆಲಿನ ಎದುರುಗಡೆಯಿಂದ ಟ್ಯಾಕ್ಸಿ ಹಿಡಿದುದಕ್ಕೆ ಇರಬೇಕು, “ನೂರು ರೂಪಾಯಿ ಆಗುತ್ತದೆ” ಎಂದ. ನಾನು “ಮೀಟರು ಪ್ರಕಾರ ಬರುವುದಿದ್ದರೆ ಮಾತ್ರ ಬಾ. ಇಲ್ಲದಿದ್ದರೆ ಬೇರೆ ಟ್ಯಾಕ್ಸಿ ಹಿಡಿಯುತ್ತೇನೆ” ಎಂದು ಹೇಳಿ ಟ್ಯಾಕ್ಸಿಯಿಂದ ಇಳಿಯಲು ಅನುವಾದೆ. ಆತ ಕೂಡಲೆ ವರಸೆ ಬದಲಿಸಿ “ಕುಳಿತುಕೊಳ್ಳಿ, ಕರೆದುಕೊಂಡು ಹೋಗುತ್ತೇನೆ” ಎಂದು ಹೇಳಿ ನನಗೆ ಬೇಕಾದಲ್ಲಿಗೆ ಕರೆದುಕೊಂಡು ಹೋದ. ಅಲ್ಲಿ ಇಳಿದಾಗ ಪುನ ನೂರು ರೂಪಾಯಿ ಕೊಡಲು ಒತ್ತಾಯಿಸಿದ. ಮೀಟರಿನಲ್ಲಿ ಎಪ್ಪತ್ತು ರೂ ಆಗಿತ್ತು. ನಾನು ನೂರು ರೂ ಕೊಡಲು ಒಪ್ಪಲಿಲ್ಲ. ಎಪ್ಪತ್ತು ರೂ ಮಾತ್ರ ಕೊಡುತ್ತೇನೆ ಎಂದು ಹೇಳಿ, ನನ್ನಲ್ಲಿ ಚಿಲ್ಲರೆ ಇಲ್ಲದಿದ್ದ ಪ್ರಯುಕ್ತ ನೂರು ರೂಪಾಯಿನ ನೋಟು ನೀಡಿದೆ. ಆತ ಟ್ಯಾಕ್ಸಿ ಹೊರಡಿಸಲು ಅನುವಾದ. ಬಾಕಿ ಮೂವತ್ತು ರೂ ಕೇಳಿದರೆ “ಬೇಕಿದ್ದರೆ ಪೋಲೀಸ್ ಸ್ಟೇಶನ್ನಿಗೆ ಹೋಗಿ ಕೇಳು” ಎಂದು ದಬಾಯಿಸಿ ಟ್ಯಾಕ್ಸಿಯನ್ನು ಓಡಿಸಿಕೊಂಡು ಹೋದ. ಅಲ್ಲಿ ನಾನು ಹೋಗಬೇಕಾಗಿದ್ದ ಕಂಪೆನಿಯಲ್ಲಿ ನನ್ನ ಕೆಲಸ ಆದ ಬಳಿಕ ಸಮೀಪದಲ್ಲೇ ಇದ್ದ ಪೋಲೀಸ್ ಠಾಣೆಗೆ ಹೋಗಿ ಕಥೆ ಪೂರ್ತಿ ಹೇಳಿ ಟ್ಯಾಕ್ಸಿಯ ನಂಬರ್ ಬರೆದುಕೊಂಡಿದ್ದ ಕಾಗದದ ಚೂರನ್ನು ನೀಡಿದೆ. ಆತ ಆ ಕಾಗದವನ್ನು ಕಿಸೆಗೆ ಹಾಕಿಕೊಂಡು “ಈಗ ನಿಮಗೆ ಮೂವತ್ತು ರೂ ಬರಬೇಕು, ಅಷ್ಟೆ ತಾನೆ” ಎಂದು ಹೇಳಿ ಕಿಸೆಯಿಂದ ಮೂವತ್ತು ರೂ ತೆಗೆದು ನೀಡಿದ. ನನಗೆ ಆಶ್ಚರ್ಯವಾಯಿತು. “ನೀವು ಯಾಕೆ ಕೊಡುತ್ತಿದ್ದೀರಾ?” ಎಂದು ಪ್ರಶ್ನಿಸಿದೆ. ಆತ “ಈ ಟ್ಯಾಕ್ಸಿ ಡ್ರೈವರ್ ಇಲ್ಲೇ ಸುತ್ತಾಡುತ್ತಿರುತ್ತಾನೆ. ನಮಗೆ ಸಿಕ್ಕೇ ಸಿಗುತ್ತಾನೆ. ಆತನ ಕೈಯಿಂದ ನಾವು ವಸೂಲು ಮಾಡಿಕೊಳ್ಳುತ್ತೇವೆ. ಈಗ ನೀವು ಇಲ್ಲಿಂದ ಹೋಗಬಹುದು” ಎಂದ! ಬೆಂಗಳೂರಿನಲ್ಲಿ ರಿಕ್ಷಾ ಡ್ರೈವರುಗಳ ವಿರುದ್ಧ ಪೋಲೀಸರಿಗೆ ದೂರು ನೀಡಲು ಪ್ರಯತ್ನಿಸಿದ್ದೀರಾ?

(ಪ್ರಜಾವಾಣಿ ಮೆಟ್ರೋ ವಿಭಾಗದಲ್ಲಿ ಪ್ರಕಟವಾಗಿತ್ತು)

Be First to Comment

Leave a Reply

Your email address will not be published. Required fields are marked *