ರಸಾಂಬಾರಾಯಣಂ

– ದಿನೇಶ ನೆಟ್ಟಾರ್

ನಾನು ಮಂಗಳೂರಿನಿಂದ ಮದರಾಸಿಗೆ ವಿದ್ಯಾಭ್ಯಾಸಕ್ಕಾಗಿ ಹೋಗಿದಾಗಿನಿಂಲೂ ನನ್ನನ್ನು ಒಂದು ಪ್ರಶ್ನೆ ಭಾದಿಸುತ್ತಿದೆ:

ನಾವು ಊಟ ಮಾಡುವಾಗ, ಮೊದಲು ಯಾವುದನ್ನು ಉಣ್ಣಬೇಕು, ಸಾರು ಇಲ್ಲ ಸಾಂಬಾರು, ಅಂದರೆ, ಸಾಂಬಾರು ಇಲ್ಲ ಸಾರು?

ನಮ್ಮ ಮನೆಯಲ್ಲಿ ಯಾವಾಗಲೂ ಸಾರನ್ನೆ ಮೊದಲು ಬಡಿಸುತ್ತಿದ್ದರು. ಆದರೆ, ಮದರಾಸಿನಲ್ಲಿ ಸಾಂಬಾರು ಮೊದಲು ಬಡಿಸುತ್ತಾರೆ. ಹೀಗಾಗಿ ನನ್ನ ಧರ್ಮಸಂಕಟ. ಇಷ್ಟರ ವರೆಗೂ ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಮೊದಲು ನಮ್ಮ ಹಾಸ್ಟೆಲ್ ಮೆಸ್ಸಿನ ಮಾಣಿ ವೇಲು ನಾಯರನ್ನು ಕೇಳಿದೆ. “ಸಾರುಕ್ಕು ದು ಇಷ್ಟಮಿಂಡೊ ಅದು ಸಾಪ್ಪಿಡುಂಗೊ, ವೆರಿದೇ ಇಲ್ಲಾನ್ ತಲೈವಲಿ ವೇಂಡಂ” (ಸಾರ್, ನಿಮಗೆ ಯಾವುದು ಇಷ್ಟವೋ ಅದನ್ನು ಉಣ್ಣಿ, ಸುಮ್ಮನೆ ಯಾಕೆ ತಲೆ ನೋವು ಬೇಡ) ಅಂದ ಆತ, ತನ್ನ ಮುರುಕು ಮಲಯಾಳಂ-ತಮಿಳಿನಲ್ಲಿ. ಇದು ನನ್ನ ಪ್ರಶ್ನೆಯ ಉತ್ತರವಲ್ಲ.

ಸ್ವಲ್ಪ ಸಮಯದ ಮೇಲೆ, ನನ್ನ ಸ್ನೇಹಿತ ಶ್ರೀನಿವಾಸನ್ ತಿರುವರಳ್ಳಿಕೇಣಿಯಲ್ಲಿದ್ದ ತನ್ನ ಚಿಕ್ಕಪ್ಪನ ಮನೆಗೆ ನನ್ನನ್ನು ಊಟಕ್ಕೆ ಆಹ್ವಾನಿಸಿದ. ಇದೇ ನನ್ನ ಅವಕಾಶ ಅಂದುಕೊಂಡೆ. ಧೈರ್ಯಮಾಡಿ ಅವನ ಚಿಕ್ಕಮ್ಮನನ್ನು ನನ್ನ ಹರಕು ತಮಿಳಿನಲ್ಲಿ ಕೇಳಿದೆ: “ಇಪ್ಪೊ ಸಾಪ್ಪಿಡುಂಬೊಲ್‌ದು ರಸತಿಕ್ ಮುನ್ನೆ ಸಾಂಬಾರ್ ಸಾಪ್ಪಿಡುವೋಮೆ, ಇದು ಕರೆಕ್ಟ್-ಆ, ಇಲ್ಲೈ, ಮುನ್ನೆ ರಸಂ ಸಾಪ್ಪಿಡುವದು ಕರೆಕ್ಟ್-ಆ?” (ಈಗ ಊಟ ಮಾಡುವಾಗ ಸಾರಿಗಿಂತ ಮೊದಲು ಸಾಂಬಾರು ಉಣ್ಣತ್ತೇವಲ್ಲ, ಇದು ಕರೆಕ್ಟಾ, ಇಲ್ಲಾ ಮೊದಲು ಸಾರು ಉಣ್ಣುವುದು ಕರೆಕ್ಟಾ?).

“ಅಯ್ಯೊಯ್ಯೋ, ನೀ ಎನ್ನ ಸೊಲ್ಲರೆ? ಎಪ್ಪೊ-ಆವದು, ಎಂಗೆ-ಆವದು, ಯಾರ್-ಆವದು ರಸತಿಕ್ ಅಪ್ಪ್‌ರೊಂ ಸಾಂಬಾರ್ ಸಾಪ್ಪಿಡುವುದು ಉಂಡಾ? ಅಪ್ಪಡಿಯೆಲ್ಲಾಂ ಕಿಡೆಯವೇ ಕಿಡೆಯಾದು.” (ಅಯ್ಯಯ್ಯೋ, ನೀನು ಏನು ಹೇಳುತ್ತೀಯಾ? ಯಾವಾಗಲಾದರೂ, ಎಲ್ಲಿಯಾದರೂ, ಯಾರಾದರೂ, ಸಾರಿನ ನಂತರ ಸಾಂಬಾರು ಉಣ್ಣುವುದುಂಟೇ? ಹಾಗೆಲ್ಲಾ ಇರಲು ಸಾಧ್ಯವೇ ಇಲ್ಲ.)

ಈಕೆ ವಿಶ್ವ ಸಾಂಬಾರ್-ಮೊದಲು ಪರಿಷತ್ತಿನ ಸ್ಥಾಪಕ ಸದಸ್ಯೆ ಇರಬೇಕು. ಆದ್ದರಿಂದ ಇನ್ನು ಮುಂದೆ ವಾದ ಸಲ್ಲದು ಎಂದು ಸುಮ್ಮನಾದೆ.

ಈ ಸಮಸ್ಯೆ ಮಾತ್ರ ನನ್ನ ತಲೆಯಿಂದ ಇಳಿಯಲಿಲ್ಲ. ರಜೆಯಲ್ಲಿ ಮನೆಗೆ ಹೋಗುವಾಗ ಇನ್ನೂ ಯೋಚಿಸಿದೆ.

“ಯಾರು ಈ ಪ್ರಶ್ನೆಗೆ ಉತ್ತರ ಹೇಳುವರು, ಯಾರು ಈ ವಿಷಯದಲ್ಲಿ ಪರಿಣತರು?” ಕೊನೆಗೆ, ನನ್ನ ಅಜ್ಜಿಯನ್ನು ಕೇಳಲು ನಿಶ್ಚಯಿಸಿದೆ. ಅವರಿಗೆ ನಮ್ಮೆಲ್ಲರ ಚರಿತ್ರೆ, ಊರಿನ ಸುದ್ದಿ, ನೂರಾರು ಅಡಿಗೆ ಎಲ್ಲ ತಿಳಿದಿರುವಾಗ, ಈ ಸಣ್ಣ ಪ್ರಶ್ನೆಯ ಉತ್ತರ ತಿಳಿಯದೆ ಇರುತ್ತದೆಯೇ? ಅಲ್ಲದೆ, ಯಾವಾಗಲೂ ಸಾರು ಮೊದಲು ಬಡಿಸುವ ಆಕೆಗೆ, ಈ ಪರಿವಿಡಿಯ ಕಾರಣ ಕೂಡ ಗೊತ್ತಿರಬಹುದು, ಎಂದುಕೊಂಡೆ.

“ಅಜ್ಜೀ, ಈಗ ಉಂಬಗ, ನಾವು ಸಾಂಬಾರಿಗೆ ಮೊದ್ಲು ಸಾರು ಉಂಬುದು ಯಾಕೆ?”

“ಥೂ, ನಿನ್ನ! ಅದು ಹೋಟ್ಲಿನವ್ವು ಮಾಡುದು ಸಾಂಬಾರ್, ನಾವು ಮಾಡುದು ಹುಳಿ, ನೀನು ಎಲ್ಲಿಯೋ ಮದರಾಸಿಂಗೆ ಹೋಗಿ ಬುದ್ಧಿ ಹಾಳುಮಾಡಿಕೊಂಡು ಬಯಿಂದೆ” ಅಂದರಾಕೆ.

ಶ್ರೀನಿವಾಸನ ಚಿಕ್ಕಮ್ಮ ಮತ್ತು ನನ್ನ ಅಜ್ಜಿ ಸೇರಿದರೆ ಸಾರು-ಸಾಂಬಾರಿನ ಜನ್ಮಭೂಮಿಯ ಬಗ್ಗೆ ಕುರುಕ್ಷೇತ್ರವೇ ನಡೆಯಲಿದೆ. ಈ ಮಸಾಲೆ ಯುದ್ಧವೂ ನೋಡುವಂತಹುದೇ!!

ಮದರಾಸಿಗೆ ಹಿಂತಿರುಗಿದ ಮೇಲೆ ನಿಷ್ಪಕ್ಷಪಾತಿಯೊಬ್ಬರನ್ನು ಕೇಳೋಣ ಎಂದು, ನನ್ನ ತೆನಾಲಿ ಗೆಳೆಯನ ಬಳಿ ಹೋದೆ. “ರಾವ್-ಗಾರು, ಇಪ್ಪುದು ಮೀರು ಭೋಜನಂ ಚೇಸ್ತೆ, ಮೊದತಿಗ ರಸಂ ತಿಂತಾರಾ, ಸಾಂಬಾರ್ ತಿಂತಾರಾ?” (ರಾವ್ ಸಾರ್, ಈಗ ನೀವು ಊಟ ಮಾಡುವಾಗ, ಮೊದಲು ರಸಂ ತಿನ್ನುತ್ತೀರಾ, ಇಲ್ಲ, ಸಾಂಬಾರ್ ತಿನ್ನುತ್ತೀರಾ?).

“ನೇನಾ? ನಾಕು ಮೊದತಿಗ ಗೊಂಗುರಂ ಕಾವಾಲಿ. ರಸಂ ಉಂಡ, ಏದಾ, ಸಾಂಬಾರ್ ಉಂಡಾ, ಲೇದಾ, ನಾಕು ತೆಲಿಯಾದು… ಅವಶ್ಯಂ ಲೇದು.” (ನಾನೇ? ನನಗೆ ಮೊದಲು ಗೊಂಗುರ ಬೇಕೇ ಬೇಕು. ಸಾರು ಇದೆಯೇ, ಇಲ್ಲವೇ, ಸಾಂಬಾರು ಇದೆಯೇ, ಇಲ್ಲವೇ, ನನಗೆ ತಿಳಿಯದು… ಅವಶ್ಯ ಇಲ್ಲ)

ಸಿಂಹಳದ ಎಡ್ವರ್ಡ್ ವೀರರತ್ನಸಿಂಘೆಯನ್ನು ಕೇಳಿದೆ: “you have even named your capital as kolambu (ಸಾಂಬಾರ್) you should know the answer.”

“you Indians want to poke your nose into everyone else’s affairs. We knew it would come to this. That is why we only eat ಕೂಟ್ಟು.”

ನನ್ನ ತಲೆ ಜೋರಾಗಿ ನೋಯಲು ಹತ್ತಿತು. ಇದರ ಬಗ್ಗೆ ಏನಾದರೂ ಮಾಡಲೇ ಬೇಕು. ಯಾರನ್ನು ಕೇಳಿ ಫಲವಿಲ್ಲ, ಪುರಾತನ ಗ್ರಂಥಗಳಲ್ಲಿ ಹುಡುಕಿ ಸಂಶೋಧನೆ ಮಾಡಬೇಕಷ್ಟೆ. ತಮಿಳು ಸಾಹಿತ್ಯ ಬಹಳ ಹಳೆಯದು. ಅದಕ್ಕೆ, ಮೊದಲು ಅಲ್ಲಿ ಹುಡುಕಿದೆ, ಅಲ್ಲದೆ ನಾನು ಮದರಾಸಿನಲ್ಲಿದ್ದದ್ದಾದ್ದರಿಂದ ಅದೇ ಅನುಕೂಲ. ಖ್ಯಾತ ಕವಿ ತಿರುವಲ್ಲುವರ್ ತಮ್ಮ ಕುರಲ್ ಕವಿತೆಗಳಲ್ಲಿ ಸಾರು ಅಥವಾ ಸಾಂಬಾರಿನ ಬಗ್ಗೆ ಏನು ಹೇಳಿಲ್ಲ. ಶಿಲಪ್ಪದಿಕ್ಕಾರಂ, ಮಣಿಮೇಖಲೈಯಲ್ಲೂ ಇವುಗಳ ಸೊಲ್ಲೇ ಇಲ್ಲ. ದ್ರಾವಿಡ ಕಳಗಂ, ದ್ರಾವಿಡ ಮುನ್ನೇತ್ರ ಕಳಗಂ ಪಾರ್ಟಿ ಇದರ ಉಸಿರು ಕೂಡಾ ಎತ್ತಿಲ್ಲ. ಹೀಗೆ ಹುಡುಕುತ್ತಿರುವಾಗ ಹದಿಮೂರನೆ ಶತಮಾನದ ಒಂದು ಕವಿತೆ ಸಿಕ್ಕಿತು:

ಪೆಣ್ಣುಕ್ಕು ಮಲ್ಲಿಪ್ಪೂ ಅಳಗು, (ಹೆಣ್ಣಿಗೆ ಮಲ್ಲಿಗೆ ಸೊಗಸು)
ಚೋರುಕ್ಕು ಸಾಂಬಾರು ಮಿಳಗು (ಅನ್ನಕ್ಕೆ ಸಾಂಬಾರು ಮೆಣಸು)

ಆದರೆ ಇಲ್ಲಿ ಸಾರಿನ ಬಗ್ಗೆ ಏನೂ ಹೇಳಿಲ್ಲ. ಸಾರು, ಸಾಂಬಾರಿನ ಪೈಪೋಟಿಯಲ್ಲಿ ಯಾರು ಮುಂದೆ, ಈ ತೀರ್ಮಾನವೂ ಇಲ್ಲ. ಇನ್ನು ಸಂಶೋಧನೆ ಮಾಡುತ್ತಾ ರಾಹುಳ ಸಾಂಕೃತ್ಯಾಯನ `ವೋಲ್ಗಾ ಸೆ ಗಂಗಾ’ ಓದಿದೆ. ಅಲ್ಲಿ ಆರ್ಯರ ಗುಂಪೊಂದು `soup’ ತಯಾರು ಮಾಡುವ ಬಗ್ಗೆ ಹೇಳಿದೆ. ಕರುವಿನ ಕಾಲಿನಿಂದ ಮಾಡಿದ soup. ಇಲ್ಲಿಯಂತೂ ಸಾಂಬಾರಿನ ಮಾತೇ ಇಲ್ಲ.

ರಂತಿದೇವನನ್ನು ಋಷಿ ಕೇಳಿದ್ದಾನೆ, “ಭೋಜನಂ ದೇಹಿ ರಾಜೇಂದ್ರ, ಘೃತ ಸೂಪ ಸಮನ್ವಿತಾ” (ತುಪ್ಪ ಸಾರು ಹಾಕಿ ಊಟ ಹಾಕು ರಾಜ). ಈ ಋಷಿ ಸಾಂಬಾರು ಯಾಕೆ `ದೇಹಿ’ ಎನ್ನಲಿಲ್ಲ?

ಅಮೇರಿಕದಲ್ಲಿ ಸಾರು, ಸಾಂಬಾರು ಎರಡನ್ನೂ `soup’ ಎನ್ನುತ್ತಾರೆ. ಅವರ `soup’ ದಪ್ಪಗೆ ಸಾಂಬಾರಿನಂತೆಯೇ ಇರುತ್ತದೆ. ತೆಳ್ಳಗೆ ಸಾರಿನಂತಲ್ಲ. ಆದರೆ ಅವರಿಗೆ Mulligtwany soup ಕೂಡಾ ಗೊತ್ತು. (ಮಿಳಗು-ತಣ್ಣಿ = ಮೆಣಸಿನ ನೀರು) ಇದು ಶುದ್ಧ ಸಾರು. ಇನ್ನಷ್ಟು ತಲೆಹರಟೆ ವಿಷಯ.

ಸಾರಿಗೂ ಸಾಂಬಾರಿಗೂ ವ್ಯತ್ಯಾಸವೇನು? ಎರಡಕ್ಕೂ ಒಳ್ಳೆ `ಗಂ’ ಅನ್ನುವಂತೆ ಮಸಾಲೆ ಬೇಕು, ಸ್ವಲ್ಪ ಬೇಳೆ ಹಾಕಬೇಕು. ಆದರೆ ಸಾರು ತೆಳ್ಳಗೆ ಅರ್ಥಾತ್: viscosity(ಸಾರು) viscosity(ಸಾಂಬಾರು). ಸಾರಿನಲ್ಲಿ ತರಕಾರಿ ಇಲ್ಲ, ಟೊಮೆಟೋ ಇದ್ದರೂ ಇರಬಹುದು (ಆದರೆ ಟೊಮೆಟೋ ಒಂದು ಹಣ್ಣು, ತರಕಾರಿ ಅಲ್ಲ), ಸಾಂಬಾರಿನಲ್ಲಿ ತರಕಾರಿ ಇರಬೇಕು. ಇರಬೇಕು ಎಂದೇಕೆ ಹೇಳಿದೆ ಎಂದರೆ, ಅದರಲ್ಲಿ ಯಾವ ತರಕಾರಿ ಇರಬೇಕೋ, ಅದು ಅಡಿಗೆ ಭಟ್ಟರಿಗೆ ಮಾತ್ರ ಗೊತ್ತು. ನಮ್ಮ ಹಾಸ್ಟೆಲಿನಲ್ಲಿ ಸಾಂಬಾರು ಬಡಿಸುವ ಹೊತ್ತಿಗೆ ಅದು ಸಾದಾ ಸಾಂಬಾರು ಆಗಿ ಬಿಟ್ಟಿರುತ್ತಿತ್ತು. ಆದ್ದರಿಂದ ಮೊದಲು ಸಾಂಬಾರು ಉಂಡು, ಮತ್ತೆ ಸಾರು ಕುಡಿದು ಅದನ್ನು `wash’ ಮಾಡಬಹುದು. ಆದರೆ, ಸಾರು `appetizer’ ಅಲ್ಲವೇ? ಹಾಗಿದ್ದರೆ, ಅದೇ ಮೊದಲು ಬರಬೇಕು.

ನನ್ನ ಮನೆಯಾಕೆಯನ್ನು ಕೇಳೋಣ ಅಂದರೆ ಆಕೆ ಪಂಜಾಬಿ. ರುಚಿಯಾಗಿ ಸಾರು, ಸಾಂಬಾರು ಎರಡೂ ಮಾಡುತ್ತಾಳೆ. ಒಂದು ತಟ್ಟೆಯಲ್ಲಿ ಸಾರು ಇಟ್ಟುಕೊಂಡು, ರೊಟ್ಟಿ, ಅನ್ನ, ಸಾಂಬಾರು ತಿನ್ನುತ್ತಾ ಸಾರು ಕುಡಿಯುತ್ತಾಳೆ. ನನ್ನ ಪ್ರಶ್ನೆ ಏನು ಅಂದರೆ: ಯಾವುದು ಮೊದಲು ಬರಬೇಕು, ಸಾರೋ, ಸಾಂಬಾರೋ?
ಇದರ ಉತ್ತರ ನಿಮಗೆ, ಅಂದರೆ ಬುದ್ಧಿಶಾಲಿ ಓದುಗರಿಗೆ ಬಿಟ್ಟಿದ್ದೇನೆ. ನೀವೇ ಹೇಳ್ಬಿಡಿ ಸಾರ್ (ಅಯ್ಯೋ ಸಾರ್ ಅಂದೆನೇ), ಸಾಂಬಾರ್!!

[೧೯೯೭]

2 Responses to ರಸಾಂಬಾರಾಯಣಂ

  1. Murali

    Namaskara,
    Naavu Sambar anta kariyodilla. Adare tharkaari haaki gattiyaagi madodhanna Saaru antha karithivi. Thellage neerina hage eddu adakke uppu, kaara, huli, belluli, menasu, Oggarane, etc… hakirodhanna rasam antha karithivi.

    Naavu modhalu saaru tindu nanthara rasam thinnutivi. yakendre rasam kadeyalli tinnodrinda jeernashakti hechutte anta.

    Regards
    Murali

  2. Ram - ಬೆಂಗಳೂರಿನವ

    ಅಯ್ಯೋ ಎಲ್ಲಿ ಆದ್ರೂ ಉಂಟೇ, ಮೊದಲು ಸಾಂಬಾರು-ಅನ್ನ ತಿನ್ನಬೇಕು ನಂತರ ಸಾರು ಅನ್ನ ಕಟ್ಟೆ ಕಟ್ಟಬೇಕು. ಬ್ರಾಹ್ಮಣಃ ಬಹು(ಭೋ)ಜನ ಪ್ರಿಯಃ

    ಬಹುಶಃ ಹೀಗೆ ಇರಬೇಕು. ಸಾಂಬಾರಿನಲ್ಲಿ ತರಾವರಿ ತರಕಾರಿ, ಸಾಂಬಾರು ಪದಾರ್ಥಗಳು (ಲವಂಗ, ಚೆಕ್ಕೆ, ಇತ್ಯಾದಿ) ಹೆಚ್ಚಿಗೆ ಇದ್ದು, ಅದನ್ನ ತಿಂದ ನಂತರ ಸಾರಿನ ಜೀರಿಗೆ, ಶುಂಟಿ, ಕರಿಬೇವು, ಕೊತ್ತಂಬರಿ ಸೊಪ್ಪು, ಇವೆಲ್ಲಾ ಜೀರ್ಣಕಾರಿ, ಮತ್ತೆ ಇವು ತಿಂದಮೇಲೆ ಬಹುಶಃ ಹೊಟ್ಟೆಗೂ ಹಗುರ. ಆದರೂ ತುಪ್ಪ ಬೆರೆಸಿ ಸಾರು ತಿನ್ನುವ ಮಜಾನೆ ಬೇರೆ ಬಿಡಿ.

Leave a Reply