Press "Enter" to skip to content

ಬೆಂಗಳೂರು ಟಾಪ್ ಟೆನ್

ಇಂಟರ್‌ನೆಟ್ ಮೂಲಕ ಹರಿದಾಡುವ ಇಮೈಲ್ ಜೋಕುಗಳಲ್ಲಿ ಟಾಪ್‌ಟೆನ್‌ಗಳು ಅತಿ ಜನಪ್ರಿಯ. ಉದಾಹರಣೆಗೆ ಹಿಂದಿ ಚಲನಚಿತ್ರಗಳ ಟಾಪ್‌ಟೆನ್ ಡೈಲಾಗುಗಳು. ಅವೇ ಮಾದರಿಯಲ್ಲಿ ಬೆಂಗಳೂರಿನ ಟಾಪ್‌ಟೆನ್ ಡೈಲಾಗುಗಳು ಇಲ್ಲಿವೆ.

1997ರ ಜುಲೈ ತಿಂಗಳು. ನಾನು ಮುಂಬಯಿಯಿಂದ ಬೆಂಗಳೂರಿಗೆ ಶಾಶ್ವತವಾಗಿ ಬಂದು ನೆಲೆಸಿ ಒಂದು ತಿಂಗಳಾಗಿತ್ತಷ್ಟೆ. ಒಂದು ದಿನ ನನಗೆ ಸತ್ಯನಾರಾಯಣ ಅವರಿಂದ ಫೋನ್ ಬಂತು. “ಸಾರ್, ನಿಮ್ಮ ಆಫೀಸ್ ಎಲ್ಲಿ ಬರುತ್ತೆ?”. ನಾನು ಮೊದಲೇ ಸ್ವಲ್ಪ ತರಲೆ. ಇಂತಹ ಅವಕಾಶ ಬಿಡುತ್ತೇನೆಯೇ? “ನಮ್ಮ ಆಫೀಸು ಎಲ್ಲೂ ಬರಲ್ಲ. ನೀವೇ ಇಲ್ಲಿಗೆ ಬರಬೇಕು” ಎಂದು ಉತ್ತರಿಸಿದೆ. ಸತ್ಯನಾರಾಯಣ ಅವರು ಜೋರಾಗಿ ನಕ್ಕು ಹೇಳಿದರು “ಚೆನ್ನಾಗಿ ಜೋಕು ಮಾಡಿದಿರಿ”. ಈ ಘಟನೆಯನ್ನು ಇಲ್ಲಿ ನೆನಪಿಸಲು ಕಾರಣವಿದೆ. ನಾನು ಮೂಲತಃ ದಕ್ಷಿಣ ಕನ್ನಡದವನು. ಮುಂಬಯಿಯಲ್ಲಿ ದೀರ್ಘ ಕಾಲ ವಾಸವಾಗಿದ್ದೆ. ಬೆಂಗಳೂರಿಗೆ ಬಂದ ಹೊಸದರಲ್ಲಿ ಮಾತ್ರವಲ್ಲ ಈಗಲೂ ಇಲ್ಲಿ ಬಳಸುವ ಕೆಲವು ಪದ/ವಾಕ್ಯಗಳು ವಿಚಿತ್ರ ಅನ್ನಿಸುತ್ತವೆ. ಕೆಲವಂತೂ ಅಸಂಬದ್ಧ ಅನ್ನಿಸುವುದಿದೆ. ಇಲ್ಲಿನ ಜನ ಅತಿಯಾಗಿ ಬಳಸುವ ಕೆಲವು ಪದ/ವಾಕ್ಯಗಳನ್ನು ಯಾಕೆ ಪಟ್ಟಿ ಮಾಡಬಾರದು ಅನ್ನಿಸಿತು. ಸುಮಾರು ಆರೇಳು ವಾಕ್ಯಗಳು ಸಿಕ್ಕವೂ ಕೂಡ. ಅವುಗಳನ್ನು ಅಂತರಜಾಲದಲ್ಲಿ ಹಾಕಿ ಇತರರಿಗೂ ಸೇರಿಸಲು ಕೇಳಿಕೊಂಡೆ. ಕೆಲವರು ಉತ್ಸಾಹದಿಂದ ಪಟ್ಟಿ ದೊಡ್ಡದು ಮಾಡಿದರು. ಹೀಗೆ ತಯಾರಾದ ಟಾಪ್‌ಟೆನ್ ಪಟ್ಟಿ ಇಲ್ಲಿದೆ.
10. “ಡೋಂಟ್‌ವರಿ ಮಾಡ್ಕೋಬೇಡಿ ಸಾರ್.”
ತುಂಬಾ ತಳಮಳಿಸಿಕೊಂಡಾಗ ನಿಮ್ಮ ಸ್ನೇಹಿತ/ಸಹೋದ್ಯೋಗಿ ಹೇಳುವ ಮಾತು.
9. “ಸ್ಟ್ರೈಟ್ ಹೋಗಿ ರೈಟಿಗೆ ತಿರುಕ್ಕೊಳ್ಳಿ.”
ರಸ್ತೆಯಲ್ಲಿ ದಾರಿ ಕೇಳಿದಾಗ.
8. “ಸೂರ್ಯಂಗೇ ಟಾರ್ಚಾ?”
ಬುದ್ಧಿವಂತನಿಗೇ ಹೇಳಿಕೊಡಲು ಹೋದಾಗ.
7. “ಏನಮ್ಮಾ, ತುಂಬಾ ಚಮಕ್ಕಾ?”
ನೀನು ತುಂಬಾ ಮೋಸಗಾರ ಎನ್ನುವ ಅರ್ಥದಲ್ಲಿ.
6. “ಯಾಮಾರ್‌ಬಿಟ್ಟೆ!”
ಮೋಸಹೋದೆ ಎಂಬ ಅರ್ಥದಲ್ಲಿ. ಇದರ ಇತರೆ ರೂಪಗಳು – “ಯಾಮಾರಿಸ್ಬೇಡ, ಯಾಮಾರಿಸ್ಬಿಟ್ಟೆ, ಯಾಮಾರಿಸ್ತಾನೆ”.
5. “ಈಗೇನೂ ಆಗಿಲ್ಲ ತಾನೆ. ಸುಮ್ಮನೆ ಹೋಗ್ಬಿಡಿ ಸಾರ್.”
ಅಪಘಾತವಾಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದೀರಿ. ಅದಕ್ಕೆ ಕಾರಣೀಭೂತನಾದ ಚಾಲಕನಿಗೆ ಗುರ್ ಮಾಡಿದಾಗ ಆತ ಹೇಳುವ ಮಾತು.
4. “ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಸಾರ್.”
ನಾನು ಮಾಡಿದ ಮೋಸವನ್ನು ಸಹಿಸಿಕೊಳ್ಳಿ ಎಂಬ ಅರ್ಥದಲ್ಲಿ, ಬಸ್ಸಿನಲ್ಲಿ ಸೀಟಿಗಾಗಿ ಅಲ್ಲ.
3. “ನಿಮ್ಮನೆ ಎಲ್ಲಿ ಬರುತ್ತೆ?”
ಮನೆ ಬರುವುದನ್ನು ನೀವು ಎಲ್ಲಿಯಾದರೂ ಕಂಡಿದ್ದೀರಾ? ಕೇಳಿದ್ದೀರಾ?
2. “ನಮಗ್ಯಾಕ್ರಿ ಬಿಡ್ರಿ.”
ಸಾರ್ವಜನಿಕವಾಗಿ ನಮಗೆ ಸಂಬಂಧಿಸಿದ್ದರೂ ವೈಯಕ್ತಿತವಾಗಿ ಸಂಬಂಧಪಡದ ವಿಷಯದ ಬಗ್ಗೆ.
1. “ಅಯ್ಯೋ ಅದೆಲ್ಲ ಆಗೊಲ್ಲಾರೀ.”
ಎಲ್ಲರೂ ಒಟ್ಟು ಸೇರಿ ಸಾರ್ವಜನಿಕ ಕಾಳಜಿಯಿಂದ ಮಾಡಬೇಕಾದ ಕೆಲಸದ ಬಗ್ಗೆ ಜ್ಞಾಪಿಸಿದಾಗ.
ಈ ಪಟ್ಟಿಯಲ್ಲಿ ಸೇರದ ಆದರೆ ಸೇರಲು ಅರ್ಹತೆಯಿರುವ ಇನ್ನೂ ಹಲವು ಡೈಲಾಗುಗಳು ನಿಮ್ಮಲ್ಲಿದ್ದರೆ ಕೂಡಲೇ ಕಳುಹಿಸಿ.

ಡಾ. ಯು. ಬಿ. ಪವನಜ

3 Comments

  1. Sudeep N S Sudeep N S February 25, 2011

    ತುಂಬಾ ಚೆನ್ನಾಗಿದೆ. . ಆದರೆ ಹೊಸ ವಿಷಯಗಳು ಸಿಗುತ್ತಿಲ್ಲ…

  2. h. r. laxmivenkatesh h. r. laxmivenkatesh September 7, 2014

    ೧. ಬೊಂಬಾಟಾಗಿದೇರಿ,
    ೨. ಕೈನಲ್ಲಿ ಮಡಕ್ಕೊಳ್ರಿ.
    ೩. ತಿರ್ಗಾ ಬನ್ರಿ.
    ೪. ಹೇಳಿದ್ ತಿಳಿಯಲ್ವೇನ್ರಿ.
    ೫. ಆಯಪ್ಪ ಮಂದ್ನಪ್ಪ, ಇನ್ ತಲೆ ತಿಂತಾನೆ.
    ೬. ಯಾವೋನ್ರಿ ಅವ್ನು ಹೇಳ್ದೋನು.
    ೭. ಓಳು ಒಡೀಬ್ಯಾಡ್ರಿ.
    ೮. ಸುಮ್ನಿರು ಗುರು ನಿಂ ಗೊತ್ತಿಲ್ಲ.
    ೯. ಸರ್ಕೊಳ್ಳಮ್ಮ
    ೧೦. ಚಿಲ್ರೆ ಕಾಸು ಕೊಡ್ರಿ
    ೧೧. ಒಂದ್ಕೆಲ್ಸಾ ಮಾಡಿ, ಸೀದಾ ರಟ್ನಲ್ಲಿ ಓಗ್ರಿ. ಸರ್ಕಲ್ ಬರುತ್ತೆ. ನೆಟ್ಗೆ ಓಗಿ ಲೆಫ್ಟ್ ನಲ್ಲಿ ತಿರಿಗ್ಕೊಳ್ರಿ. ನಾಳೇಳ್ದಂಗ್ ಮಾಡ್ರಿ.

  3. h. r. laxmivenkatesh h. r. laxmivenkatesh September 7, 2014

    10 ೧೧. ಒಂದ್ಕೆಲ್ಸಾ ಮಾಡಿ, ಸೀದಾ ರೈಟ್ನಲ್ಲಿ ಓಗ್ರಿ. ಸರ್ಕಲ್ ಬರುತ್ತೆ. ನೆಟ್ಗೆ ಓಗಿ ಲೆಫ್ಟ್ ನಲ್ಲಿ ತಿರಿಗ್ಕೊಳ್ರಿ. ನಾಳೇಳ್ದಂಗ್ ಮಾಡ್ರಿ.

Leave a Reply

Your email address will not be published. Required fields are marked *