ಇಲಿಗಳನ್ನು ಕೊಲ್ಲುವುದು ಹೇಗೆ?
– ವಸುಧೇಂದ್ರ
ಪ್ರತಿಬಾರಿ ನಾನು ಇಂಗ್ಲೆಂಡಿನಿಂದ ವಾಪಸ್ಸಾಗುವಾಗ ಯಾರಾದರು ಕಳ್ಳರು ನನ್ನ ಮನೆ ದೋಚಿಕೊಂಡು ಹೋಗಿರುತ್ತಾರೇನೋ? ಎಂಬ ಅನುಮಾನದಲ್ಲಿಯೇ ನನ್ನ ಮನೆಯ ಕದವನ್ನು ತೆರೆಯುತ್ತೇನೆ. ಪುಣ್ಯಕ್ಕೆ ಇಲ್ಲಿಯವರೆಗೆ ಹಾಗಾಗಿಲ್ಲವಾದರೂ, ಈ ಬಾರಿ ಅನಿರೀಕ್ಷಿತವೊಂದು ಕಾದಿತ್ತು. ಕದ ತೆರೆದು ಒಳಗೆ ಹೆಜ್ಜೆ ಇಟ್ಟ ತಕ್ಷಣ ಮೂಗು ಮುಚ್ಚಿಕೊಳ್ಳುವಷ್ಟು ಕೆಟ್ಟ ವಾಸನೆ ಬಂತು. ಅಡಿಗೆ ಮನೆಗೆ ಕಾಲಿಟ್ಟೆನೋ ಇಲ್ಲವೋ, ದಬದಬನೆ ಹತ್ತಾರು ಸ್ಟೀಲ್ ಪಾತ್ರೆಗಳು ನೆಲಕ್ಕೆ ಬಿದ್ದು ನನ್ನ ಎದೆ ಬಡಿತವನ್ನು ನಿಲ್ಲಿಸಿಬಿಟ್ಟವು. ಬೆಳಕಿನಲ್ಲಿ ನಾನು ನಂಬದ ದೆವ್ವ-ಭೂತದ ವಿಚಾರಗಳೆಲ್ಲಾ ಮನಸ್ಸಿನಲ್ಲಿ ಮಿಂಚಿ ಮಾಯವಾಗುವದರೊಳಗೆ ದಪ್ಪನೆಯ ಇಲಿಯೊಂದು ಕಣ್ಣಿಗೆ ಬಿತ್ತು. ಇದೆಲ್ಲಿಂದ ಬಂತು? ಅಂತ ಸುತ್ತಲೂ ಕಣ್ಣಾಡಿಸಿದಾಗ ಇನ್ನೊಂದೆರಡು ಇಲಿಗಳು ಕಣ್ಣಿಗೆ ಬಿದ್ದವು. "ಒಟ್ಟಾರೆ ಮೂರು ಇಲಿ!" ಅಂತ ನಾನು ಉದ್ಗಾರ ಎತ್ತುವದರೊಳಗೆ ಕೋಣೆಯಲ್ಲಿ ಬಾಟಲಿಯೊಂದು ಬಿದ್ದ ಸದ್ದಾಯ್ತು. ಎರಡು ನುಣುಪಾದ ಬಾಲಗಳು ಅಟ್ಟದಿಂದ ನೇತು ಬಿದ್ದಿದ್ದು ಕಂಡು ಬಂದವು. ಮೈಯೆಲ್ಲೆಲ್ಲಾ ಮುಳ್ಳು ಎದ್ದಂತಾಗಿ ಅಲ್ಲಿ ನಿಲ್ಲಲಾಗದೆ ಪಡಸಾಲೆಗೆ ಬಂದು ಕುರ್ಚಿಯ ಮೇಲೆ ಕುಳಿತೆ. ಕಾಲುಗಳನ್ನು ನೆಲಕ್ಕೆ ತಾಕಿಸದೆ ಮೇಲಕ್ಕೆತ್ತಿಟ್ಟುಕೊಂಡೆ.
ಎಲ್ಲಿ ನೋಡಿದರಲ್ಲಿ ಎಳ್ಳು ತೂರಾಡಿದಂತೆ ಇಲಿಯ ಹಿಕ್ಕೆಗಳು, ಚೆಲ್ಲಾಪಿಲ್ಲಿಯಾಗಿ ಹೋದ ಮನೆಯ ಸಾಮಾನುಗಳು, ಚೂರು ಚೂರಾಗಿ ಬಿದ್ದಿದ್ದ ಬಟ್ಟೆಯ ಚಿಂದಿಗಳು ಕಣ್ಣಿಗೆ ಒಂದೊಂದಾಗಿ ಗೋಚರಿಸ ತೊಡಗಿದಾಗ, ಇದಕ್ಕೆ ಬದಲಾಗಿ ಕಳ್ಳರು ಬಂದು ಮನೆ ದೋಚಿ ಕೊಂಡು ಹೋಗಿದ್ದರೆ ಪರವಾಗಿರಲಿಲ್ಲ ಅಂತ ಅನ್ನಿಸಿಬಿಟ್ಟಿತು. ಹಳ್ಳಿಯ ಪರಿಸರದಲ್ಲಿ ಹುಟ್ಟಿ ಬೆಳೆದ ನನಗೆ ಇಲಿಗಳು ಅಪರಿಚಿತವೇನೂ ಅಲ್ಲ. ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ರಾಶಿ ರಾಶಿ ಇಲಿಗಳಿದ್ದವು. ರಾತ್ರಿ ನಾವು ಮಲಗಿದಾಗ ಸದ್ದು ಮಾಡುತ್ತಿದ್ದವಾದರೂ ಅದರ ಖಬರಿಲ್ಲದಂತೆ ಮಲಗಿ ಗೊರಕಿ ಹೊಡೆಯುತ್ತಿದ್ದೆವು. ಮನೆಯಲ್ಲಿ ಒಂದೆರಡು ಬೆಕ್ಕು ಸಾಕಿದ್ದೆವಾದರೂ ಅವುಗಳ ಹೊಟ್ಟೆ ತುಂಬಿ ಜಾಸ್ತಿಯಾಗುವಂತೆ ಇಲಿಗಳ ಸಂಖ್ಯೆಯಿತ್ತು. ದೇವರ ದೀಪದ ಬತ್ತಿ ಮಾಯವಾದಾಗ, ಎಣ್ಣೆ ಮಿಳ್ಳಿ ಬಚ್ಚಲ ಮೋರೆಯಲ್ಲಿ ಸಿಕ್ಕಾಗ ಮಾತ್ರ ಅಮ್ಮ "ಈ ಇಲಿಗಳ ಮನೆ ಹಾಳಾಗ" ಅಂತ ಜೋರಾಗಿ ಬಯ್ದು, ಅದರ ಹಿಂದೆಯೇ ಅವುಗಳಿರುವುದು ನಮ್ಮ ಮನೆಯಲ್ಲಿಯೇ ಎಂದು ಅರಿವಾಗಿ "ತಪ್ಪಾಯ್ತು ತಪ್ಪಾಯ್ತು" ಅಂತ ಗಲ್ಲ ಬಡಿದುಕೊಳ್ಳುತ್ತಿದ್ದಳು.
ಇಲಿಗಳ ಹಾವಳಿ ತುಂಬಾ ಜಾಸ್ತಿಯಾಯ್ತು ಅನ್ನಿಸಿದಾಗ ಅಥವಾ ಅಮ್ಮನ ಗೊಣಗಾಟ ಅದಕ್ಕೂ ಹೆಚ್ಚಾಯ್ತು ಅನ್ನಿಸಿದಾಗ ಅಪ್ಪ ಇಲಿ ಬೇಟೆಗೆ ಸಿದ್ಧವಾಗುತ್ತಿದ್ದ. ಇಲಿಬೋನನ್ನು ಬಿಸಿನೀರಿನಲ್ಲಿ ಚೆನ್ನಾಗಿ ತೊಳೆದು, ಕೆಂಪಮ್ಮನ ಅಂಗಡಿಯಲ್ಲಿ ಪಕೋಡ ಅಥವಾ ಹಿಟ್ಟು ಹಚ್ಚಿದ ಮೆಣಸಿನಕಾಯಿ (ಬೋಂಡಾ) ತರಲು ಹೋಗುತ್ತಿದ್ದ. "ಒಂದು ನಾಲ್ಕು ಜಾಸ್ತಿನೇ ಕಟ್ಟಿಸಿಕೊಂಡು ಬರ್ರಿ" ಅಂತ ಅಮ್ಮ ಅಪ್ಪಣೆ ಕೊಡುತ್ತಿದ್ದಳು. ಎಲ್ಲರ ಊಟವಾದ ಮೇಲೆ ಅಪ್ಪ ಘಮಘಮಿಸುವ ಕರೆದ ತಿಂಡಿಯನ್ನು ಬೋನಿಗೆ ಸಿಕ್ಕಿಸಿ ಅಟ್ಟದ ಮೇಲೆ ಇಲಿಗಳು ಹೆಚ್ಚಾಗಿ ಓಡಾಡುವ ಜಾಗದಲ್ಲಿ ಇಡುತ್ತಿದ್ದ. ಮಲಗಿ ನಿದ್ದೆಹೊಡೆಯುವಾಗ "ಪಟ್!" ಎನ್ನುವ ಸದ್ದು ಬಂದು ನಮ್ಮೆಲ್ಲರಿಗೂ ಎಚ್ಚರವಾಗಿ "ಇಲಿ ಬಿತ್ತು, ಇಲಿ ಬಿತ್ತು" ಅಂತ ಸಂಭ್ರಮದಿಂದ ಹೇಳಿಕೊಳ್ಳುತ್ತಿದ್ದೆವು. ಬೆಳಿಗ್ಗೆ ನಾವು ಏಳುವದರೊಳಗೆ ಬೆಕ್ಕುಗಳು ಇಲಿ ಬೇಟೆಯನ್ನು ಪತ್ತೆ ಹಚ್ಚಿ "ಮಿಯಾಂವ್, ಮಿಯಾಂವ್" ಸುಪ್ರಭಾತವನ್ನು ಶುರು ಮಾಡಿ ಬಿಟ್ಟಿರುತ್ತಿದ್ದವು. ರಾತ್ರಿಯೆಲ್ಲಾ ಬೋನಿನಿಂದ ಹೊರಬರುವ ಸರ್ವ ಪ್ರಯತ್ನವನ್ನೂ ಮಾಡಿ, ಈಗ ಬೆಕ್ಕಿನ ಸದ್ದಿಗೆ ಜೀವ ಭಯದಿಂದ ಇಲಿಗಳು ಗಡಗಡನೆ ನಡುಗುತ್ತಾ ಸದ್ದಡಗಿಸಿಕೊಂಡಿರುತ್ತಿದ್ದವು.
ನಾವು ಹುಡುಗರು ಬೋನಿನ ಬಳಿ ಹೋಗಿ ಪರೀಕ್ಷಿಸಿ "ದೆವ್ವನಂಥಾ ಇಲಿ", "ಎರಡೆರಡು ಇಲಿ" ಅಂತೆಲ್ಲಾ ಕಿರುಚಿಕೊಳ್ಳುತ್ತಿದ್ದೆವು. ಕಾಫಿ ಕುಡಿಯುವ ಕಾರ್ಯಕ್ರಮ ಮುಗಿದಿದ್ದೇ ಅಪ್ಪ ಬೋನನ್ನು ಕೈಯಲ್ಲಿ ಹಿಡಿದುಕೊಂಡು ಊರ ಹೊರಗೆ ಹೋಗುತ್ತಿದ್ದ. ಅವನ ಹಿಂದೆ-ಮುಂದೆ ನಂದಿ ಕೋಲು ಕುಣಿಸುವವರ ಸಂಭ್ರಮದಲ್ಲಿ ಬೆಕ್ಕುಗಳು ಹಿಂಬಾಲಿಸುತ್ತಿದ್ದವು. ನನ್ನಕ್ಕ "ನನ್ನ ಕೈಯಾಗ ನೋಡಲಿಕ್ಕೆ ಆಗಲ್ಲಪ್ಪ" ಅಂತಂದಾಗ "ಅಯ್, ಅಂಜುಪುಕ್ಕಿ…" ಅಂತ ಅವಳನ್ನು ಹೀಯಾಳಿಸುತ್ತಿದ್ದೆ. ಅವಳೂ ಜೊತೆಯಲ್ಲಿ ಬರುತ್ತಿದ್ದಳು. ಅಪ್ಪ ಬೋನಿನ ಬಾಯನ್ನು ತೆರೆಯುವಾಗ ಅಕ್ಕ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಿದ್ದಳು. ನನಗೂ ವಿಚಿತ್ರ ಸಂಕಟವಾಗಿ ಅಪ್ಪನ ಅಂಗಿಯನ್ನು ಹಿಡಿದುಕೊಳ್ಳುತ್ತಿದ್ದೆ. ಬೋನಿನ ಬಾಯಿ ತೆಗೆದರೂ ಹೊರಬರದೆ ಇಲಿ ಅದರಲ್ಲೇ ಅಂಜಿ ಕುಳಿತಿರುತ್ತಿತ್ತು. ಬೆಕ್ಕು ಬೋನಿನೊಳಗೇ ಕೈಯಿಕ್ಕಿ ಇಲಿಯನ್ನು ಎಳೆದುಕೊಂಡು ಓಡುತ್ತಿತ್ತು. ಇಲ್ಲದಿದ್ದರೆ ಅಪ್ಪನೇ ಬೋನನ್ನು ನೆಲಕ್ಕೆ ಕುಟ್ಟಿ ಇಲಿಯನ್ನು ಬೀಳಿಸುತ್ತಿದ್ದ. ಬೆಕ್ಕು ಇಲಿಯನ್ನು ಓಡಿಸಿಕೊಂಡು ಹೋಗುವಾಗ ಇಲಿ ನಮ್ಮ ಕಾಲುಗಳ ಮಧ್ಯೆಯೆಲ್ಲಿ ನುಸುಳುತ್ತದೋ ಎಂಬ ಅಂಜಿಕೆ ನಮ್ಮ ಮೂವರಲ್ಲೂ ಇರುತ್ತಿತ್ತು. ಮತ್ತೆ ಮರಳಿ ಮನೆಗೆ ಬರುವಾಗ ನಾವು ಯಾರೂ ಮಾತನಾಡುತ್ತಿರಲಿಲ್ಲ. ಬೆಕ್ಕುಗಳು ಎತ್ತಲೋ ಓಡಿ ಹೋಗಿರುತ್ತಿದ್ದವು. ಮನೆಗೆ ಬಂದ ಅಪ್ಪ ಮತ್ತೆ ಬಿಸಿನೀರಿನಲ್ಲಿ ಬೋನನ್ನು ತೊಳೆದು, ಬಿಸಿಲಿಗೆ ಒಣಗಲು ಇಡುತ್ತಿದ್ದ. ಬಾಲ್ಯದಲ್ಲಿ ಅಷ್ಟೆಲ್ಲಾ ಇಲಿಗಳನ್ನು ಕಂಡಿದ್ದರೂ ಈಗ ಈ ಇಲಿಗಳು ನಿಜಕ್ಕೂ ಹೆದರಿಕೆಯನ್ನು ಹುಟ್ಟಿಸುತ್ತಿದ್ದವು. ನಗರಜೀವನ ಪಂಚತಾರಾ ಹೋಟಲಿಗೆ ನುಗ್ಗುವ ಧೈರ್ಯವನ್ನು ಕೊಟ್ಟು, ಇಲಿಗಳನ್ನು ಕಂಡರೆ ಹೆದರಿಕೊಳ್ಳುವ ಅಧೈರ್ಯವನ್ನು ನಮಗೆ ಕೊಡುತ್ತಿದೆಯೆ?
ಆ ದಿನ ರಾತ್ರಿಯೆಲ್ಲಾ ನನಗೆ ನಿದ್ದೆ ಬರಲಿಲ್ಲ. ಇಲಿಗಳು ಮೈಮೇಲೆ ಓಡಾಡಿದಂತೆ ಕನಸಾಗಿ ಬೆಚ್ಚಿ ಏಳುತ್ತಿದ್ದೆ. ದೀಪವಾರಿಸಿದರೆ ಸಾಕು, ಏನೋ ಸದ್ದು ಮಾಡುತ್ತಿದ್ದವು. ದೀಪ ಹಾಕಿದರೆ ಸದ್ದು ಕಡಿಮೆಯಾಗುತ್ತಿತ್ತಾದರೂ ನನಗೆ ನಿದ್ದೆ ಬರುತ್ತಿರಲಿಲ್ಲ. ಕತ್ತಲಿನಲ್ಲಿಯೇ ಬದುಕು ಮಾಡಬೇಕಾದ ಇಲಿಗಳ ಬಗ್ಗೆ ಅನುಕಂಪವೂ ಆಯ್ತು. ಬೆಳಿಗ್ಗೆ ಎದ್ದವನೇ ಅಂಗಡಿಗೆ ಹೋಗಿ ಇಲಿಬೋನೊಂದನ್ನು ತಂದೆ. ದರ್ಶಿನಿಯಲ್ಲಿ ಮೆಣಸಿನಕಾಯಿ ಬೋಂಡಾವನ್ನು ಕೊಂಡು ತಂದು ಅಟ್ಟದ ಮೇಲೆ ಇಟ್ಟ ಎರಡೇ ಕ್ಷಣದಲ್ಲಿ ಎರಡು ಇಲಿಗಳು ಅದರಲ್ಲಿ ಸಿಕ್ಕಿ ಬಿದ್ದವು. ಏನೋ ಗೆದ್ದಂತೆ ಖುಷಿಯಾಯ್ತು. ಆದರೆ ಬೋನಿನಲ್ಲಿ ಸಿಕ್ಕಿ ಬಿದ್ದ ಇಲಿಗಳನ್ನು ಕೊಲ್ಲುವುದು ಹೇಗೆ?
ಮನೆಯ ಸುತ್ತಾ ಮುತ್ತಾ ಬೆಕ್ಕು ಓಡಾಡಿದ ನೆನಪಾಗಲಿಲ್ಲ. ಆದರೆ ಪಕ್ಕದ ಓಣಿಯಲ್ಲಿ ಒಬ್ಬರ ಮನೆಯಲ್ಲಿ ಬೆಕ್ಕು ಸಾಕಿಕೊಂಡಿದ್ದು ನೆನಪಾಯ್ತು. ಅವರ ಮನೆಗೆ ಓಡಿದೆ. ಅಮ್ಮಾ ಅವರು ಇದ್ದರು. ನನ್ನ ಬೋನಿನ ಇಲಿಗಳ ವಿಚಾರ ತಿಳಿಸಿ "ಒಂದು ಸ್ವಲ್ಪ ಹೊತ್ತು ಬೆಕ್ಕು ಕೊಡ್ತೀರ?" ಅಂತ ಕೇಳಿದ್ದಕ್ಕೆ ಆಕೆಗೆ ಸಿಟ್ಟು ಬಂತು. "ನಮ್ಮ ಬೆಕ್ಕು ಹಾಗೆಲ್ಲಾ ಸುಟ್ಟು ಸುಡುಗಾಡು ತಿನ್ನಂಗಿಲ್ಲ" ಅಂತ ಮುಖಕ್ಕೆ ಹೊಡೆದಂತೆ ಹೇಳಿ "ನೀವು ಇಂತಹ ಆಲೋಚನೆ ಮಾಡಬಹುದಾ?" ಎನ್ನುವ ರೀತಿಯಲ್ಲಿ ನನ್ನ ಮುಖ ನೋಡಿದಳು. "ಸಾರಿ ರ್ರೀ…" ಹೇಳಿದೆ. ಬೆಕ್ಕು ನನ್ನ ಕಡೆ ನೋಡಿ "ಮಿಯಾಂವ್…" ಅಂತು. ವಾಪಾಸಾದೆ. ಬೋನಿನಲ್ಲಿ ಇಲಿಗಳು ಎಗರಾಡುತ್ತಿದ್ದವು. ಇಲಿಗಳನ್ನು ಕೊಲ್ಲುವುದು ಹೇಗೆ?
ಗೆಳೆಯನೊಬ್ಬನಿಗೆ ಫೋನ್ ಮಾಡಿ ಪರಿಸ್ಥಿತಿ ವಿವರಿಸಿದೆ. "ಅದಕ್ಕಾಕೆ ಅಷ್ಟು ಚಿಂತಿ ಮಾಡ್ತೀಯ. ಮನೆ ಮುಂದೆ ಬನ್ನೇರುಘಟ್ಟ ರಸ್ತೆ ಅದೆ. ಸಿಗ್ನಲ್ ಹಾಕಿ ಗಾಡಿಗಳು ಬರೋ ಹೊತ್ತಿಗೆ ಬಿಟ್ಟರೆ ಆಯ್ತು. ಲಾರಿ ಕೆಳಗೋ, ಬಿ.ಟಿ.ಎಸ್. ಬಸ್ಸಿನ ಕೆಳಗೋ ಬಿದ್ದು ಅಪ್ಪಚ್ಚಿ ಆಗ್ತಾವೆ" ಅಂತಂದ. ನನಗೆ ಅನುಮಾನ. "ನಿಜವಾಗ್ಲೂ ಲಾರಿ ಬಸ್ಸಿನ ಕೆಳಗೆ ಬಿದ್ದು ಅಪ್ಪಚ್ಚಿ ಆಗ್ತಾವಾ?" ಎಂದೆ. "ಅಯ್ಯೋ ಮಾರಾಯ, ಮನುಷ್ಯರೇ ಅಡ್ಡ ಬಂದರೆ ಅಪ್ಪಚ್ಚಿ ಆಗೋ ಹಂಗೆ ಗಾಡಿ ಓಡಿಸ್ತಾರೆ. ಇಲಿಗಳನ್ನು ಬಿಡ್ತಾರಾ?" ಅಂತ ವಿವರಣೆ ಕೊಟ್ಟ. ಆದರೆ ಈ ವಿಧಾನವೂ ಯಶಸ್ವಿಯಾಗಲಿಲ್ಲ. ಸಿಗ್ನಲ್ ಬಿದ್ದ ತಕ್ಷಣ ನಾನು ಬೋನಿನ ಬಾಯನ್ನು ಅಂಜಿಕೆಯಂಜಿಕೆಯಿಂದ ತೆರೆದರೂ ಇಲಿಗಳು ಹೊರಬರಲೇ ಇಲ್ಲ. ಜನರೆಲ್ಲಾ ನನ್ನ ಕಡೆಯೇ ನೋಡಲಾರಂಭಿಸಿದರು. "ಹೋಗು, ಹೋಗು…" ಅಂತ ಕೂಗಿದೆ. ಕೇಳುತ್ತವೆಯೆ? ಕೊನೆಗೆ ಅಪ್ಪನಂತೆ ಎರಡು ಬಾರಿ ಬೋನನ್ನು ನೆಲಕ್ಕೆ ಕುಟ್ಟಿದೆ. ಇಲಿಗಳು ಕೆಳಗೆ ಬಿದ್ದವು. ಆದರೆ ಜಪ್ಪಯ್ಯ ಅಂದರೂ ಬಿದ್ದ ಜಾಗದಿಂದ ಕದಲದೆ ಲಾರಿ ಬಸ್ಸುಗಳ ಹಾವಳಿಯನ್ನು ಪಿಳಿ ಪಿಳಿ ಕಣ್ಣಿನಿಂದ ನೋಡುತ್ತಾ ನಿಂತವು. ಕೊನೆಗೆ ಕೆಂಪು ಸಿಗ್ನಲ್ ಬಂದು ವಾಹನ ಓಡಾಟ ಕಡಿಮೆಯಾದ ತಕ್ಷಣ ಪುಳುಪುಳು ಓಡಿ ಹೋಗಿ ಎದುರಿನ ಅಂಗಡಿಯನ್ನು ಸೇರಿಕೊಂಡವು. ಅಂಗಡಿಯಾತ ನೋಡಿಬಿಟ್ಟವನೇ ಕೆಂಡಾಮಂಡಲವಾಗಿ ನನ್ನ ಬಳಿ ಬಂದು ಕೂಗಾಡಿಬಿಟ್ಟ. "ಊರ ಹೊರಗೆ ಹೋಗಿ ಬಿಡಬೇಕ್ರಿ" ಅಂದ.
ಬೆಂಗಳೂರಲ್ಲಿ ಊರ ಹೊರಗೆ ಅಂದರೆ ಎಲ್ಲಿ? ನಂಗಂತೂ ಗೊತ್ತಿಲ್ಲ. ನನ್ನಕ್ಕನಿಗೆ ಫೋನ್ ಮಾಡಿದೆ. "ಒಂದು ಬಕೇಟ್ ತುಂಬಾ ಬಿಸಿ ನೀರು ಹಾಕು. ಛಲೋ ಮರಳೋ ಮರಳೋ ನೀರು, ಮತ್ತೆ ಉಗುರು ಬೆಚ್ಚಂದಲ್ಲ. ಅದರಾಗೆ ಒಂದು ಪಾಕೇಟು ಇಲಿ ಪಾಷಾಣ ಕಲಸು. ಬೋನಿನ ಸಮೇತ ಅದರಾಗೆ ಮುಳುಗಿಸು. ಎರಡು ನಿಮಿಷದಾಗೆ ಸಾಯ್ತಾವೆ. ನಾನು ಹಂಗೇ ಮಾಡೋದು" ಅಂತ ಪಟಪಟನೆ ಹೇಳಿದಳು. "ಸಣ್ಣಾಕಿ ಇದ್ದಾಗ ಅಪ್ಪ ಇಲೀನ್ನ ಬೆಕ್ಕಿಗೆ ಕೊಟ್ಟರೆ ಹೆದರಿಕೊಂಡು ನನ್ನ ಕೈ ಹಿಡ್ಕೊಂತಿದ್ದಿಯಲ್ಲೆ" ಅಂದಿದ್ದಕ್ಕೆ, "ನೀನು ಬರೀ ಇಂಥಾ ಕೆಲಸಕ್ಕೆ ಬಾರದ ಸಂಗತೀನೆಲ್ಲಾ ನೆನಪಿನಾಗೆ ಇಟ್ಟುಗೊಂತಿ ನೋಡು" ಎಂದು ನಕ್ಕಳು. ಬೋನು ಕಟ್ಟಿಗೆಯದಾದ್ದರಿಂದ ನೀರೊಳಗೆ ಮುಳುಗಲಿಲ್ಲ. ನಾನೇ ಒತ್ತಡ ಹೇರಿ ಅದನ್ನು ನೀರೊಳಗೆ ಮುಳುಗಿಸಬೇಕಾಯ್ತು. ಆದರೆ ಇಲಿಗಳು ವಿಲವಿಲನೆ ಒದ್ದಾಡುವದನ್ನು ನನ್ನ ಕೈಯಿಂದ ನೋಡಲಾಗಲಿಲ್ಲ. ಕಣ್ಣು ಗಟ್ಟಿಯಾಗಿ ಮುಚ್ಚಿಕೊಳ್ಳುತ್ತಿದ್ದೆ. ಆಗ ಬೋನು ನನ್ನ ಹತೋಟಿಯಿಂದ ತಪ್ಪಿ ಮೇಲಕ್ಕೆ ತೇಲಿ ಬಿಡುತ್ತಿತ್ತು. ಇಲಿಗಳು ಕಿರುಚುತ್ತಿದ್ದವು. ಕೊನೆಗೆ ಆ ಇಲಿಗಳು ಸಾಯುವುದರೊಳಗೆ ನಾನು ಸಾವನ್ನು ಮುಟ್ಟಿ ಬಂದಂತಾಯ್ತು. ಈ ವಿಧಾನ ಬೇಡವೇ ಬೇಡವೆಂದು ನಿರ್ಧರಿಸಿ ಬಿಟ್ಟೆ. ಹಾಗಾದರೆ ಇಲಿಗಳನ್ನು ಕೊಲ್ಲುವುದು ಹೇಗೆ?
ನನ್ನ ಸಾಹಿತಿ ಗೆಳೆಯನಿಗೆ ಫೋನ್ ಮಾಡಿದೆ. ಮಾನವೀಯತೆಯನ್ನು ಮುಖ್ಯವಾಗಿಟ್ಟುಕೊಂಡು ಬರೆದ ಅವರ ಕತೆಗಳು ನನಗೆ ತುಂಬಾ ಇಷ್ಟ. ನನ್ನ ಸಾಹಿತ್ಯದ ಸಮಸ್ಯೆಗಳನ್ನು ಅತ್ಯಂತ ಸರಳವಾಗಿ ಪರಿಹರಿಸುವ ಅವರು ಈ ಚಿಕ್ಕ ಸಮಸ್ಯೆಯನ್ನು ಬಗೆಹರಿಯಿಸಲಾರರೆ? "ತುಂಬಾ ಸುಲಭ. ಒಂದು ಗೋಣೀ ಚೀಲ ತೊಗೊಂಡು, ಅದರಾಗೆ ಇಲಿಗಳನ್ನು ಹಾಕಿ ಮೂತಿ ಕಟ್ಟು. ಆಮೇಲಕ್ಕೆ ಅಗಸರು ಬಟ್ಟೆ ಒಗೆದಂತೆ ಕಲ್ಲಿಗೆ ಗೋಣಿನ್ನ ಒಗಿ" ಎಂದು ಸಲಹೆಯಿತ್ತರು. ಎದೆ "ಝಲ್…" ಅಂತು. "ಇತ್ತೀಚೆಗೆ ಮತ್ತೇನು ಬರದಿ?" ಎಂದು ಮಾತಿನ ಮುಕ್ತಾಯವನ್ನು ಸೂಚಿಸಿದರು. "ತುಂಬಾ ಬಿಜಿಯಿದ್ದೀನಿ. ಏನೂ ಬರೀಲಿಕ್ಕೆ ಆಗವಲ್ದು" ಅಂತ ಯಥಾಪ್ರಕಾರ ಮಾತು ಮುಗಿಸಿದೆ. ಅವರ ವಿಧಾನವನ್ನು ಕಾರ್ಯಾಚರಣೆಗೆ ತರಲು ಹೋಗಲಿಲ್ಲ. ಹಾಗಾದರೆ ಇಲಿಗಳನ್ನು ಕೊಲ್ಲುವುದು ಹೇಗೆ?
ಮನೆಯ ಪಕ್ಕದಲ್ಲಿ ಪರಿಸರ ಪ್ರೇಮಿಗಳೊಬ್ಬರಿದ್ದಾರೆ. ಯಾವಾಗಲೂ ಡಿಸ್ಕವರಿ ಛಾನಲ್ ನೋಡುತ್ತಾರೆ. ಅವರಿಗೆ ಫೋನ್ ಮಾಡಿ ಸಲಹೆ ಕೇಳಿದೆ. "ಕಾರಿನೊಳಗಿಂದ ಒಂದು ಲೀಟರ್ ಪೆಟ್ರೋಲ್ ಹೊರಗೆ ತೆಗುದು ಒಂದು ಬಾಟಲಿನಾಗೆ ಹಾಕಿಕೊಳ್ರಿ. ಬೋನಿನ ಕಿಟಕಿ ಹತ್ತಿರ ಇಲಿ ಮೂತಿ ಇಟ್ಟಾಗ, ಅದನ್ನು ಅದರ ಮೈಮೇಲೆ ಸುರುವಿರಿ. ಮತ್ತೆ ಬೋನೇ ಸುಟ್ಟು ಹೋಗೋ ಹಂಗೆ ಪೆಟ್ರೋಲ್ ಸುರುವು ಬ್ಯಾಡ್ರಿ. ಲೈಟರ್ ತೊಗೊಂಡು ಒಳಗೆ ತೂರಿಸಿ ಬೆಂಕಿ ಹಚ್ಚಿ, ಬೋನಿನ ಬಾಗಿಲು ತೆಗೀರಿ. ಕಿರುಚಿಕೊಳ್ತಾ ಹೊರಗೆ ಓಡಿ ಬರ್ತದೆ. ಸ್ವಲ್ಪ ದೂರ ಓಡಿ ಹೋಗಿ ಸತ್ತು ಹೋಗ್ತದೆ. ಆಮೇಲಕ್ಕೆ ಕಾಗೆ ಅದನ್ನ ಕಚ್ಚಿ ಕೊಂಡು ಹೋಗ್ತದೆ. ಆಹಾರ ಸರಪಳಿ ಗೊತ್ತದಲ್ಲ ನಿಮಗೆ?" ಎಂದರು. ನನಗೆ ಮೈ ಬೆವರತೊಡಗಿತು. "ಥಾಂಕ್ಸ್" ಹೇಳಿ ಮಾತು ಮುಗಿಸಿದೆ. ಅವರ ವಿಧಾನವನ್ನು ನಾನು ಕನಸಿನಲ್ಲಿಯೂ ಮಾಡಲು ಸಾಧ್ಯವಿರಲಿಲ್ಲ.
ಕೊನೆಗೂ ಇಲಿಗಳನ್ನು ಸಂಹರಿಸಿದೆ. ಹೇಗೆ? ಎಂದು ಮಾತ್ರ ಹೇಳುವದಿಲ್ಲ. ನನ್ನ ಸ್ನೇಹಿತರ ಬಗ್ಗೆ, ಅಕ್ಕನ ಬಗ್ಗೆ ನನ್ನೊಳಗೆ ಮೂಡಿದಂತಹ ಭಾವ ನಿಮ್ಮಲ್ಲಿ ನನ್ನ ಮೇಲೆ ಮೂಡಬಾರದಲ್ಲವೆ?
(ಬೆಂಗಳೂರು, ೧೪ನೇ ಜೂನ್ ೨೦೦೩)