ಹಾಸ್ಯ – ಹವ್ಯಕ ಪಾಕೋತ್ಸವ

ಆಹಾರ, ನೀರು, ವಸತಿ, ಬಟ್ಟೆಗಳು ಮನುಷ್ಯನ ಅತ್ಯಾವಶ್ಯಕಗಳು. ಇವೆಲ್ಲವುಗಳನ್ನು ಸರಿಯಾದ ಕ್ರಮದಲ್ಲಿ ಪಡೆದು ವಿನಿಯೋಗಿಸುವುದು ಮನುಜನ ಲಕ್ಷಣ. ಈ ವಿಚಾರದಲ್ಲಿ ಹವ್ಯಕರು ಮೊದಲಿನಿಂದಲೂ ತಮ್ಮದೇ ಆದ ಸಂಸ್ಕೃತಿಯಿಂದ ವಿಶಿಷ್ಟವಾಗಿ ಗೋಚರಿಸುತ್ತಾರೆ. ಆಹಾರಾರ್ಥಂ ಕರ್ಮ ಕುರ್ಯಾತ್ ಎಂಬ ಶ್ರುತಿವಾಕ್ಯದಂತೆ ಆಹಾರಕ್ಕಾಗಿ ಜೀವನದಲ್ಲಿ ನಿಂದ್ಯವಲ್ಲದ ಕೆಲಸವನ್ನು ಮಾಡಬೇಕು, ಪ್ರಾಣರಕ್ಷಣೆಗಾಗಿ ಆಹಾರವನ್ನು ಸೇವಿಸಬೇಕು, ತತ್ವಗಳ ತಿಳುವಳಿಕೆಗಾಗಿ ಪ್ರಾಣವನ್ನು ರಕ್ಷಿಸಬೇಕು, ಪುನಃ ದುಃಖಿಯಾಗದಿರಲು ತತ್ತ್ವಜಿಜ್ಞಾಸೆ ಬೇಕು. ಎಂಬ ತಾತ್ವಿಕ ಹಿನ್ನೆಲೆಯಲ್ಲಿ ಅಗಣಿತ ತಲೆಮಾರುಗಳಿಂದ “ಊಟಬಲ್ಲವನಿಗೆ ರೋಗವಿಲ್ಲ” ಎಂಬುದನ್ನರಿತು, ಶಾಸ್ತ್ರೀಯವಾದ ಸಾತ್ವಿಕ ಬೋಜನವನ್ನು ಹೊಂದಿ ಶ್ರೇಯಸ್ಕರ ಜೀವನವನ್ನು ನಡೆಸುತ್ತಿದ್ದಾರೆ. ಹವ್ಯಕರ ಆಹಾರದಲ್ಲಿ ಮತ್ತು ಕ್ರಮದಲ್ಲಿ ಆಯುರ್ವೇದೀಯ ಪದ್ಧತಿಯಿದೆ. ಇದು ಯಾವ ಶಾಸ್ತ್ರಾಧ್ಯಯನವಿಲ್ಲದೆ ಮನೆಯ ಪಾಕಾಧ್ಯಕ್ಷರಾದ ಹಿರಿಯರಿಂದ ಕಿರಿಯರಿಗೆ ತಲೆತಲಾಂತರಗಳಿಂದ ಹರಿದುಬರುತ್ತಿದೆ. ಜೀವನೋಪಾಯಕ್ಕಾಗಿ ನಗರವನ್ನು ಸೇರಿದರೂ ಇಲ್ಲಿಯೂ ತಮ್ಮ ಆಹಾರ ಸೇವನೆಯ ಕ್ರಮ ಸಮಯ ಪರಿಮಾಣಗಳನ್ನು ಉಳಿಸಿಕೊಂಡು ಬಂದಿರುತ್ತಾರೆ. ಇಂತಹ ಒಂದು ವಿಶಿಷ್ಟವಾದ ಭಕ್ಷ್ಯ ಭೋಜ್ಯಗಳನ್ನು ಬೆಂಗಳೂರಿನ ಸಸ್ಯಾಹಾರೀ ಜನತೆಗೆ ನೀಡುವ ಉದ್ದೇಶದಿಂದ ದಿನಾಂಕ ಡಿಸೆಂಬರ್ ೨೯, ೩೦ ಮತ್ತು ೩೧, ೨೦೦೬, ಗಿರಿನಗರದಲ್ಲಿ ಹಾಸ್ಯ – ಹವ್ಯಕ ಪಾಕೋತ್ಸವವು ಆಯೋಜಿತವಾಗಿದೆ. ಇದೊಂದು ಸಂಪೂರ್ಣ ಸಸ್ಯಾಹಾರದ, ಮಲೆನಾಡು, ಕರಾವಳಿಯ ಹವ್ಯಕರ ಆಹಾರ ಮತ್ತು ಸದಭಿರುಚಿಯ ಹಾಸ್ಯಗಳ ಹಬ್ಬವಾಗಿದೆ. ಆಹಾರ ಪ್ರದರ್ಶನ, ಸ್ಪರ್ಧೆ, ಊಟ, ಅಂಗಡಿಮುಂಗಟ್ಟು, ಮನರಂಜನೆಗಳನ್ನು ಒಳಗೊಂಡಿರುತ್ತದೆ.

ಹಲವರು ಹೆಸರನ್ನೇ ಕೇಳಿರದ… ಸುಕ್ಕಿನುಂಡೆ, ಗೆಣಸಲೆ, ವಡಪೆ, ಪತ್ರೊಡೆ, ಕೊಟ್ಟಿಕಡಬು, ಕೊಟ್ಟಿಗೆ, ಕರ್ಜಿಕಾಯಿ, ಅತ್ರಾಸ, ಮನೋಹರ, ಖಟ್ಣೆ, ತಡೆದೇವು, ನೀರ್ದೋಸೆ, ಯಲವರಿಗೆ, ಉರಗೆ ಸಂಬಾರಸೊಪ್ಪುಗಳ ತಂಬಳಿಗಳು, ಮುಂತಾದ ನೂರಾರು ಬಗೆಯ ಔಷಧೀಯ ಗುಣಗಳ ವನಸ್ಪತೀಯ ತಿಂಡಿ ತಿನಿಸು ಪಾನೀಯಗಳು ಬಾಯಲ್ಲಿ ನೀರೂರಿಸಲಿವೆ. ಜೊತೆಗೆ ಅವುಗಳ ಸೇವನೆಯ ಕಾಲ, ಹಾಗೂ ಆರೋಗ್ಯಕರ ಗುಣಗಳು ಇತ್ಯಾದಿ ವಿವರಣೆಗಳೂ ಲಭ್ಯವಾಗಲಿವೆ. ಈ ಭೂರಿ ಭೋಜನಕ್ಕೆ ಮನರಂಜನೀಯ ಹಾಸ್ಯಲಹರಿಗಳು, ಯಕ್ಷಗಾನಗಳು, ಹಾಡುನೃತ್ಯಗಳು ಪಕ್ಕವಾದ್ಯಗಳಾಗಲಿವೆ. ಇದರೊಂದಿಗೆ ಕರಕುಶಲಕಲಾಕೃತಿಗಳ, ಕರುಕುರುತಿನಿಸುಗಳ, ಸಿದ್ಧಾಹಾರಗಳ, ಅಡಿಗೆಯ ಪರಿಕರಗಳ, ಗೃಹೋಪರಣಗಳ, ಆಯುರ್ವೇದೀಯ ಔಷಧಿಗಳ ನೂರಾರು ಮಳಿಗೆಗಳು ಕೈಬೀಸಿ ಕರೆಯಲಿವೆ.

ದಿನಾಂಕ ೨೯ ಶುಕ್ರವಾರದಂದು ಸಂಜೆ ೫ ಗಂಟೆಗೆ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಉತ್ಸವವು ಉದ್ಘಾಟಿತವಾಗಲಿದೆ. ಮೂರುರಾತ್ರಿ ಮತ್ತು ಎರಡು ಹಗಲು ನಡೆಯಲಿರುವ ಈ ಮಹಾ ಪರ್ವದಲ್ಲಿ ಹವ್ಯಕ ಬ್ಯಾಹ್ಮಣರ ವಿವಿಧ ಭಕ್ಷ್ಯ ಭೋಜ್ಯ ಲೇಹ್ಯ ಚೋಷ್ಯಗಳು ವಿಕ್ರಯವಾಗಲಿವೆ. ಇದರೊಂದಿಗೆ ಸದಭಿರುಚಿಯ ನಾನಾವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ, ವಿವಿದ ವಸ್ತುಗಳ ಅಂಗಡಿ ಮುಂಗಟ್ಟುಗಳು ತಿನ್ನುವ, ಉಣ್ಣುವ, ಕುಡಿಯುವ, ಆಹಾರ ಪ್ರದರ್ಶನ ಮಾರಾಟ, ಚಿಂತನೆ, ನೃತ್ಯ ಗಾಯನ, ನಾಟಕ, ಯಕ್ಷಗಾನಾದಿಗಳು ಕಾರ್ಯಕ್ರಮಗಳು ರಸಭರಿತವನ್ನಾಗಿಸಲಿವೆ. ಒಟ್ಟಾರೆ ನಗರದ ಸುಸಂಸ್ಕೃತರಿಗೆ, ಶಾಕಾಹಾರಭೋಜಿಗಳಿಗೆ, ಸಹೃದಯರು ದೇಶೀಯ ಶೈಲಿಯಲ್ಲಿ ವಿದೇಶೀ ಹೊಸವರ್ಷವನ್ನು ಸ್ವಾಗತಿಸಲು ಸದವಕಾಶವಾಗಲಿದೆ.

Leave a Reply