ಸೌಹಾರ್ದ ಸಹಕಾರ ಅಧ್ಯಯನ ಫೆಲೋಶಿಪ್'

ಸಹಕಾರ ರಂಗದ ರಚನಾತ್ಮಕ ಕಾರ್ಯಗಳ ದಾಖಲೀಕರಣ ಹಾಗೂ ಸಾಮಾಜಿಕ ಅಭಿಪ್ರಾಯ ರೂಪಿಸಲು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು ಸೌಹಾರ್ದ ಸಹಕಾರ ಅಧ್ಯಯನ ಫೆಲೋಶಿಪ್ ಆರಂಭಿಸಿದೆ. ಈ ವಿಷಯವನ್ನು ಸಂಯುಕ್ತ ಸಹಕಾರಿ ಪುನರಾಯ್ಕೆಗೊಂಡ ಅಧ್ಯಕ್ಷ ಶ್ರೀ ಮನೋಹರ ಮಸ್ಕಿಯವರು ಪ್ರಕಟಿಸಿದ್ದಾರೆ.

ರಾಜ್ಯದಲ್ಲಿ ಈವರೆಗೂ ಈ ಪ್ರಮಾಣದ ಯಾವುದೇ ಫೆಲೋಶಿಪ್ ಇದೊಂದೇ ಎಂಬುದು ಉಲ್ಲೇಖನೀಯ.
ಒಂದು ವರ್ಷದ ಅವಧಿಯ ಈ ಫೆಲೋಶಿಪ್‌ನ ಒಟ್ಟು ಮೊತ್ತವು ಒಂದು ಲಕ್ಷ ರೂ.ಗಳು. ಈ ಫೆಲೋಶಿಪ್ ಆಯ್ಕೆ ಪ್ರಕ್ರಿಯೆಯು ಏಪ್ರಿಲ್ ಎರಡನೇ ವಾರದಿಂದ ಆರಂಭವಾಗಲಿದ್ದು ಪ್ರತಿ ವರ್ಷ ಒಬ್ಬರಿಗೆ ಈ ಫೆಲೋಶಿಪ್ ನೀಡಲಾಗುವುದು.

ಸೌಹಾರ್ದ ಸಹಕಾರ ಅಧ್ಯಯನ ಫೆಲೋಶಿಪ್ ಆಯ್ಕೆಗಾಗಿ ಒಂದು ಆಯ್ಕೆ ಸಮಿತಿಯನ್ನು ರಚಿಸಲಾಗಿದ್ದು ಈ ಸಮಿತಿಯ ಸದಸ್ಯರಾಗಿ ಹಿರಿಯ ಪತ್ರಕರ್ತ ಶ್ರೀ ನಾಗೇಶ್ ಹೆಗಡೆ, ಚಿಕ್ಕಮಗಳೂರಿನ ಕಾರ್ಪೋರೇಶನ್ ಬ್ಯಾಂಕಿನ ಸ್ವ ಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕ, ಅಭ್ಯುದಯ ಪತ್ರಕರ್ತ ಶ್ರೀ ಅಡ್ಡೂರು ಕೃಷ್ಣರಾವ್ ಮತ್ತು ಹೊಸಪೇಟೆಯ ವಿಕಾಸ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ , ಸಹಕಾರಿ ಧುರೀಣ ಶ್ರೀ ವಿಶ್ವನಾಥ ಹಿರೇಮಠ ಇರುತ್ತಾರೆ.

ಫೆಲೊಶಿಪ್‌ಗಾಗಿ ಅರ್ಜಿ ಸಲ್ಲಿಸುವವರು ಪ್ರತಿವರ್ಷ ಜುಲೈ ೩೦ ರೊಳಗೆ ಸಲ್ಲಿಸಬೇಕು. ಫೆಲೋಶಿಪ್ ಆಯ್ಕೆ ಬಯಸುವವರು ಬರೆದ ಕನಿಷ್ಠ ಮೂರು (೩) ಲೇಖನಗಳು ಕರ್ನಾಟಕದ ಪ್ರಮುಖ ದಿನಪತ್ರಿಕೆ ಅಥವಾ ವಾರಪತ್ರಿಕೆಗಳಲ್ಲಿ ಪ್ರಕಟವಾಗಿರಬೇಕು ಎನ್ನುವುದು ಒಂದು ಮೂಲ ನಿಬಂಧನೆಯಾಗಿದ್ದು ಉಳಿದ ನೀತಿ ನಿಯಮಗಳನ್ನು ಏಪ್ರಿಲ್ ಎರಡನೇ ವಾರ ಪ್ರಕಟಿಸಲಾಗುವುದು. ಆಯ್ಕೆ ಪ್ರಕ್ರಿಯೆಯನ್ನು ಆಗಸ್ಟ್ ೩೧ರೊಳಗೆ ಮುಗಿಸಿ ಆಯ್ಕೆಯಾದವರಿಗೆ ತಿಳಿಸಲಾಗುವುದು. ಆಯ್ಕೆಯಾದವರು ಪ್ರತಿವರ್ಷ ಅಕ್ಟೋಬರ್ ೨ ರಿಂದ ಅಧ್ಯಯನ ಆರಂಭಿಸಬೇಕು ಎಂದು ಸಂಯುಕ್ತ ಸಹಕಾರಿಯ ಪ್ರಕಟನೆ ತಿಳಿಸಿದೆ.

೨೦೦೬ರ ಅಕ್ಟೋಬರ್ ೨ರಿಂದ ಈ ವಾರ್ಷಿಕ ಫೆಲೋಶಿಪ್‌ನ ಮೊದಲ ಅಧ್ಯಯನ ಆರಂಭವಾಗಲಿದೆ. ಫೆಲೋಶಿಪ್ ಕಾಲಾವಧಿಯಲ್ಲಿ ಸಂಬಂಧಿಸಿದಂತೆ ಸಮಗ್ರ ಪ್ರಬಂಧವನ್ನು ಮಂಡಿಸಬೇಕಾಗುತ್ತದಲ್ಲದೆ ಪತ್ರಿಕೆಗಳಲ್ಲಿ ಸಹಕಾರ ರಂಗದ ಬಗ್ಗೆ ಸಾಮಯಿಕ ಲೇಖನಗಳನ್ನು, ನುಡಿಚಿತ್ರಗಳನ್ನು ಬರೆಯಬೇಕಾಗುತ್ತದೆ. ಕನ್ನಡ ಮಾಧ್ಯಮ ಗೊತ್ತಿರುವ ೪೫ ವರ್ಷ ವಯಸ್ಸಿನೊಳಗಿನ ಪತ್ರಕರ್ತರು, ಲೇಖಕರು, ಫ್ರೀಲ್ಯಾನ್ಸ್ ಪತ್ರಕರ್ತರು, ಸಹಕಾರ ರಂಗದಲ್ಲಿ ಅನುಭವವುಳ್ಳ ಯುವಕರು ಯಾವುದೇ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ವಿವರಗಳನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ, ಮೊದಲ ಮಹಡಿ, ನಂ. ೧೩೨, ಕೆ.ಎಚ್. ರಸ್ತೆ, ಬೆಂಗಳೂರು ೫೬೦೦೨೭ ಈ ವಿಳಾಸಕ್ಕೆ ಪತ್ರ ಬರೆದು ಪಡೆಯಬಹುದಾಗಿದೆ.

Leave a Reply