ವಸುಧೇಂದ್ರರ ಪುಸ್ತಕಗಳ ಲೋಕಾರ್ಪಣೆ

ಬೆಂಗಳೂರು, ಆಗಸ್ಟ್ ೨೦, ೨೦೦೬: ವಸುಧೇಂದ್ರ ಅವರು ನಡೆಸಿಕೊಂಡು ಬರುತ್ತಿರುವ ಛಂದ ಪುಸ್ತಕ ಮಾಲಿಕೆಯ ನಾಲ್ಕು ಪುಸ್ತಕಗಳ ಲೋಕಾರ್ಪಣೆ ಇಂದು ಬೆಂಗಳೂರಿನಲ್ಲಿ ಜರುಗಿತು. ಬ್ರೈಲ್ ಲಿಪಿಯಲ್ಲಿ ಮುದ್ರಿಸಿರುವ ಅದೃಶ್ಯ ಕಾವ್ಯ ಪುಸ್ತಕವನ್ನು ಮಧು ಸಿಂಘಾಲ್ ಅವರು ಬಿಡುಗಡೆ ಮಾಡಿದರು. ಸ್ವತಃ ದೃಷ್ಟಿಸೌಲಭ್ಯ ವಂಚಿತರಾದ ಮಧು ಸಿಂಘಾಲ್ ಅವರು ವಸುಧೇಂದ್ರರ ಈ ವಿನೂತನ ಪ್ರಯತ್ನವನ್ನು ಕೊಂಡಾಡಿದರು. ಅಂಧರ ಶಾಲೆಗಳಿಗೆ ಕನ್ನಡದ ಪುಸ್ತಕಗಳು ಬ್ರೈಲ್ ಲಿಪಿಯಲ್ಲಿ ಸಿಗುತ್ತಿಲ್ಲ. ಕೇವಲ ಸರಕಾರವು ಪ್ರಕಟಿಸಿರುವ ಪಠ್ಯ ಪುಸ್ತಗಳು ಮಾತ್ರವೇ ಲಭ್ಯವಿವೆ. ಕನ್ನಡ ಸಾಹಿತ್ಯ ಅತಿ ಶ್ರೀಮಂತವಾಗಿದೆ. ಆದರೆ ಅವು ಯಾವವೂ ದೃಷ್ಟಿಸೌಲಭ್ಯ ವಂಚಿತರಾದವರಿಗೆ ಸಿಗುತ್ತಿಲ್ಲ. ಈ ಕೊರತೆಯನ್ನು ನೀಗುವ ಕೆಲಸ ಆಗಬೇಕಿದೆ ಎಂದು ಅವರು ಹೇಳಿದರು.

ಚೇಳು, ನಮ್ಮಮ್ಮ ಅಂದ್ರೆ ನಂಗಿಷ್ಟ ಮತ್ತು ಮನೀಷೆ ಪುಸ್ತಗಳನ್ನು ಗಿರೀಶ್ ಕಾಸರವಳ್ಳಿ ಅವರು ಬಿಡುಗಡೆ ಮಾಡಿದರು. ಪ್ರಥಮ ಪ್ರತಿಯನ್ನು ಯಾವುದಾದರೂ ವಿಶೇಷ ಸಾಧನೆ ಮಾಡಿದವರಿಗೆ ಅರ್ಪಿಸುವ ಪದ್ಧತಿಯನ್ನು ವಸುಧೇಂದ್ರರು ನಡೆಸಿಕೊಂಡು ಬಂದಿದ್ದಾರೆ. ಅದರಂತೆ ಪ್ರಥಮ ಪ್ರತಿಯನ್ನು ಬರಹ ತಂತ್ರಾಂಶದ ಜನಕರಾದ ಶೇಷಾದ್ರಿವಾಸು ಅವರಿಗೆ ನೀಡಲಾಯಿತು. ಅದನ್ನು ಅವರ ಪರವಾಗಿ ಸತ್ಯಪ್ರಕಾಶ ಕಾಗಿನೆಲೆಯವರು ಸ್ವೀಕರಿಸಿದರು. ಗಿರೀಶ್ ಕಾಸರವಳ್ಳಿಯವರು ಮಧು ಸಿಂಘಾಲ್ ಹೇಳಿದ ಮಾತಿಗೆ ಪ್ರತಿಕ್ರಿಯಿಸಿದರು. ಸುವರ್ಣ ಕರ್ನಾಟಕ ಹೆಸರಿನಲ್ಲಿ ಹಲವು ಕಾರ್ಯಕ್ರಮಗಳನ್ನು ಸರಕಾರ ನಡೆಸುತ್ತಿದೆ. ಕನ್ನಡದ ಸಾಹಿತ್ಯವನ್ನು ಬ್ರೈಲ್ ಲಿಪಿಯಲ್ಲಿ ಪ್ರಕಟಿಸಲು ಸರಕಾರಕ್ಕೆ ನಾನು ಶಿಫಾರಸು ಮಾಡುತ್ತೇನೆ ಎಂದು ಭರವಸೆ ನೀಡಿದರು. ಅಪರ್ಣ ಕಾರ್ಯಕ್ರಮ ನಿರೂಪಿಸಿದರು. ವಸುಧೇಂದ್ರ ವಂದನಾರ್ಪಣೆ ಮಾಡಿದರು.

Leave a Reply