ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರಿಂದ ಗೋ ಸಂರಕ್ಷಣೆಯ ಇನ್ನೊಂದು ಹೆಜ್ಜೆ.
ಅರಮನೆ ಮೈದಾನದಲ್ಲಿ ನ. ೧೮ಕ್ಕೆ ಲಕ್ಷ ಮಹಿಳೆಯರಿಂದ ಗೋ ಮಾತೆಗೆ ಕೋಟಿ ಆರತಿ
ಬೆಂಗಳೂರು, ನ. ೧೪ – ಗೋ ಸಂರಕ್ಷಣೆಯ ಆಂದೋಲನದಲ್ಲಿ ಮಹಿಳೆಯರ ಪಾತ್ರವನ್ನು ಗುರುತಿಸುವ ದೃಷ್ಟಿಯಿಂದ ಕೋಟಿ ನೀರಾಜನದ ಹೆಸರಿನಲ್ಲಿ ಲಕ್ಷ ಮಹಿಳೆಯರ ಬೃಹತ್ ಸಮಾವೇಶವನ್ನು ನವೆಂಬರ್ ೧೮ರ ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು.
ಅಂದು ಮಧ್ಯಾಹ್ನ ೨ ಗಂಟೆಯಿಂದ ರಾತ್ರಿ ೮ರ ವರೆಗೆ ನಡೆಯಲಿರುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಹಿಳೆಯರು ಏಕಕಾಲಕ್ಕೆ ಜೀವಂತ ಗೋ ಮಾತೆಗೆ ಕೋಟಿ ಆರತಿ ಬೆಳಗಲಿದ್ದಾರೆ ಎಂದು ಗಿರಿನಗರದ ರಾಮಾಶ್ರಮದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀಗಳು ಪ್ರಕಟಿಸಿದರು.
ಹೆಣ್ಣಿನ ನೋವನ್ನು ಹೆಣ್ಣು ಮಾತ್ರ ಅರ್ಥ ಮಾಡಿಕೊಳ್ಳಬಲ್ಲಳು. ಅಂತೆಯೇ ಗೋ ಮಾತೆಯ ಸಂಕಷ್ಟ ಅರಿಯಲು ಮಹಿಳೆಯರಿಂದ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ ಮಾತೆ-ಗೋ ಮಾತೆಯರ ವಿಶಿಷ್ಟ ಸಂಗಮ ಇದಾಗಲಿದೆ ಎಂದ ಶ್ರೀಗಳು, ಘರಕೀ(ಮನೆ) ಮಾತಾ, ಧರತೀ(ಭೂಮಿ)ಮಾತಾ ಹಾಗೂ ಗೋ ಮಾತೆಯರ ಮಹಾ ಸಂಗಮ ಇದೆಂದು ಬಣ್ಣಿಸಿದರು.
ಭಾರತ ವರ್ಷದ ಪ್ರಾತಿನಿಧಿಕ ಕಾರ್ಯಕ್ರಮವಾಗಿ ಇದು ಹೊರ ಹೊಮ್ಮಲಿದ್ದು, ಸಮಗ್ರ ಭಾರತವೇ ಮಹಿಳೆಯರ ರೂಪದಲ್ಲಿ ಗೋ ಮಾತೆಗೆ ಕೃತಜ್ಞತೆಯನ್ನು ಅರ್ಪಿಸುವ ಪರಿಕಲ್ಪನೆಯಡಿಯಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಮೊದಲ ಭಾಗದಲ್ಲಿ ಮಹಾಸಭೆ ನಡೆಯಲಿದ್ದು, ಸಂತರು, ವಿಷಯ ತಜ್ಞರು, ವಿಜ್ಞಾನಿಗಳು, ಕಲಾವಿದರ ಸಮ್ಮಿಲನವನ್ನು ಕಾಣಬಹುದು. ಅಲ್ಲಿ ಗೋವಿನ ಉಪಯುಕ್ತತೆಯ ಬಗ್ಗೆ ವಿಷಯ ಮಂಡನೆಯಾಗಲಿದೆ. ಪರಿಸರ, ಅರಣ್ಯ ತಜ್ಞ ಯಲ್ಲಪ್ಪ ರೆಡ್ಡಿಯವರು ಗೋವಿನ ವೈಜ್ಞಾನಿಕ ಮಹತ್ವದ ಬಗ್ಗೆ ಮಾತನಾಡಲಿದ್ದಾರೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಎಂ. ವಿ. ರಾಜಶೇಖರನ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಪಥಮೇಡದ ದತ್ತ ಶರಣಾನಂದಜಿ, ಬಾಬಾ ರಾಮದೇವ, ಋಷಿಕೇಶದ ಚಿದಾನಂದ ಸರಸ್ವತಿ ಸ್ವಾಮೀಜಿಯವರ ಸಾನ್ನಿಧ್ಯವಿರುತ್ತದೆ ಎಂದು ಹೇಳಿದರು.
ಎರಡನೇ ಹಂತದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಖ್ಯಾತ ನೃತ್ಯ ದಂಪತಿ ನಿರುಪಮಾ ರಾಜೇಂದ್ರ ತಂಡದಿಂದ ವಿಶೇಷ ನೃತ್ಯ ರೂಪಕವನ್ನು ಆಯೋಜಿಸಲಾಗಿದೆ. ಒಂದು ಗಂಟೆಯ ಅವಧಿಯ ಈ ಕಾರ್ಯಕ್ರಮದಲ್ಲಿ ೭೫ ಕಲಾವಿದರು, ಯುಗಯುಗಾಂತರದಿಂದ ಈವರೆಗೆ ಗೋವು ನಡೆದು ಬಂದ ಹಾದಿಯನ್ನು ಗೀತ ನೃತ್ಯದ ಮೂಲಕ ಅನಾವರಣಗೊಳಿಸಲಿದ್ದಾರೆ. ಅತ್ಯಂತ ವಿಶಿಷ್ಟ ಈ ರೂಪಕದಲ್ಲಿ ಗೊವಿನ ಮಹತ್ವ, ಭಾರತೀಯತೆ ಮತ್ತು ಗೋವಿಗಿರುವ ಸಂಬಂಧ ಇತ್ಯಾದಿಗಳನ್ನು ವ್ಯಾಖ್ಯಾನಿಸಲಾಗುತ್ತದೆ. ಇದಲ್ಲದೇ ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಸಾರಥ್ಯದಲ್ಲಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ ಎಂದು ಶ್ರೀಗಳು ವಿವರಿಸಿದರು.
ಕಾರ್ಯಕ್ರಮದ ಅಂತಿಮ ಘಟ್ಟ ಕೋಟಿ ನೀರಾಜನ. ವೃತ್ತಾಕಾರದ ಸಭಾಂಗಣದ ಮಧ್ಯ ಭಾಗದಿಂದ ಭರತ ಭೂಮಿಯ ಪ್ರತಿಕೃತಿ ಎದ್ದು ಬರುವ ವಿಶೇಷ ತಾಂತ್ರಿಕ ವ್ಯವಸ್ಥೆ ಮಾಡಲಾಗಿದ್ದು, ಇದರ ಮೇಲೆ ಗೋಮಾತೆ ಕರುವಿನೊಂದಿಗೆ ಇರುತ್ತಾಳೆ. ವಿಶ್ವ ಗೋ ಗೀತೆಯ ಹಿನ್ನೆಲೆಯಲ್ಲಿ ಏಕಕಾಲಕ್ಕೆ ಲಕ್ಷಾಂತರ ಮಹಿಳೆಯರು ಗೋ ಮಾತೆಗೆ ಆರತಿ ಬೆಳಗುವುದರೊಂದಿಗೆ ಕಾರ್ಯಕ್ರಮ ಪರಿಸಮಾಪ್ತಿ ಕಾಣಲಿದೆ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು.
ಕಳೆದ ನಾಲ್ಕು ತಿಂಗಳಿನಿಂದ ನಗರದ ನಾನಾ ಬಡಾವಣೆಗಳಲ್ಲಿ ಮಠದಿಂದ ನಡೆದ ಹದಿನೈದಕ್ಕೂ ಹೆಚ್ಚು ಗೋ ಸಂಧ್ಯಾ ಕಾರ್ಯಕ್ರಮದ ಸಮಾರೋಪವಾಗಿ ಕೋಟಿ ನೀರಾಜನ ನಡೆಯುತ್ತಿದ್ದು, ಗೋವು ಮತ್ತು ಮಹಿಳೆಯರ ಸಂಬಂಧವನ್ನು ಪುನರ್ಸ್ಥಾಪಿಸುವುದು ಹಾಗೂ ನಗರ ಪ್ರದೇಶದ ಜನರಲ್ಲಿ ಗೋ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶ. ಕಳೆದ ಏಪ್ರಿಲ್ನಲ್ಲಿ ನಡೆದ ವಿಶ್ವ ಗೋ ಸಮ್ಮೇಳನ ಗೋ ರಥೋತ್ಸವ ಹಾಗೂ ಆರತಿಯೊಂದಿಗೆ ಸಮಾರೋಪ ಕಂಡಿತ್ತು. ಅದರ ಮುಂದುವರಿದ ಭಾಗವಾಗಿ ಈ ಆಂದೋಲನ ಆರತಿಯೊಂದಿಗೆ ಆರಂಭಗೊಳ್ಳುತ್ತಿದೆ ಎಂದು ಶ್ರೀಗಳು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದೇಶದಲ್ಲಿ ಗೋ ಮೂತ್ರದಿಂದ ಆರ್ಥಿಕ ಕ್ರಾಂತಿಯಾಗಬೇಕು. ಅದು ರಕ್ತರಹಿತ ಕ್ರಾಂತಿಯಾಗಿರಬೇಕು. ಮಹಿಳಾ ಸಮುದಾಯವನ್ನು ಗೋ ಆಧಾರಿತ ಉದ್ಯಮದೆಡೆಗೆ ಸೆಳೆಯಬೇಕೆಂಬುದು ತಮ್ಮ ಆಶಯ ಎಂದು ತಿಳಿಸಿದ ಶ್ರೀಗಳು, ದೇಶೀ ತಳಿಯ ಗೋವುಗಳು ಆರ್ಥಿಕವಾಗಿ ಉಪಯುಕ್ತ ಎಂಬುದನ್ನು ದೃಢಪಡಿಸುವ ನಿಟ್ಟಿನಲ್ಲಿ ನಾಡಿನಾದ್ಯಂತ ಮಹಿಳಾ ಸಮುದಾಯವನ್ನು ಸಂಘಟಿಸುವ ಮೊದಲ ಹೆಜ್ಜೆ ಈ ಕೋಟಿ ನೀರಾಜನ ಎಂದರು.
ಕೋಟಿ ನೀರಾಜನದ ಸ್ವಾಗತ ಸಮಿತಿಯ ಅಧ್ಯಕ್ಷೆ ಪ್ರಮೀಳಾ ನೇಸರ್ಗಿ ಮಾತನಾಡಿ, ಮಹಿಳೆಯರನ್ನೇ ಮುಖ್ಯವಾಗಿ ದೃಷ್ಟಿಯಲ್ಲಿಟ್ಟುಕೊಂಡು ಆಯೋಜಿಸಿರುವ ಕೋಟಿ ನೀರಾಜನದಲ್ಲಿ ನಾಡಿನಾದ್ಯಂತದ ಮಹಿಳೆಯರು ಪಾಲ್ಗೊಳ್ಳುತ್ತಿದ್ದು, ಮುಖ್ಯವಾಗಿ ಬೆಂಗಳೂರಿನ ಸುತ್ತ ಮುತ್ತಲ ಜಿಲ್ಲೆಗಳವರಿಗೆ ಆದ್ಯತೆ ಕೊಡಲಾಗಿದೆ ಎಂದರು.
ಜಾತಿ, ವರ್ಗ, ಪಕ್ಷ ಭೇದವಿಲ್ಲದೇ ಎಲ್ಲ ಮಹಿಳೆಯರೂ ಇದರಲ್ಲಿ ಪಾಲುದಾರರಾಗುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಬಡ ವರ್ಗದ ಮಹಿಳೆಯರು ಉತ್ಸುಕರಾಗಿದ್ದಾರೆ. ನಾನಾ ಜಿಲ್ಲೆಗಳಿಂದ ಸ್ವಯಂಪ್ರೇರಿತರಾಗಿ ತಂಡಗಳಲ್ಲಿ ಆಗಮಿಸುತ್ತಿರುವುದು ಇದರ ವಿಶೇಷ ಎಂದರು.
ಸಮಿತಿ ಕಾರ್ಯದರ್ಶಿ ಡಾ. ಶಾರದಾ ಜಯಗೋವಿಂದ್ ಮಾತನಾಡಿ, ಮಠದ ವತಿಯಿಂದ ಮಹಿಳೆಯರ ಸಂಘಟನೆ ನಿರಂತರವಾಗಿ ಮುಂದುವರಿಯಲಿದ್ದು, ಬೀಡಿ, ಊದಿನ ಕಡ್ಡಿ ಉದ್ಯಮದ ಮಾದರಿಯಲ್ಲೇ ಗವ್ಯೋತ್ಪನ್ನ ಉದ್ಯಮದ ಮೂಲಕ ಮಹಿಳೆಯರಿಗೆ ಉದ್ಯೋಗ ಒದಗಿಸುವುದರ ಜತೆಗೆ ಆಕೆಯ ಆರ್ಥಿಕ ಸಬಲತೆಯ ಕನಸನ್ನು ಇದರೊಂದಿಗೆ ಸಾಕಾರಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇಂಥ ದೀರ್ಘಕಾಲೀನ ಯೋಜನೆಗಳಿಗೆ ಕೋಟಿ ನೀರಾಜನ ಮುನ್ನುಡಿ ಎಂದು ತಿಳಿಸಿದರು.
ಕೋಟಿ ನೀರಾಜನ ಸಮಿತಿ ಉಪಾಧ್ಯಕ್ಷೆ ಭಾರತೀ ಪಾಟೀಲ್, ಮಠದ ವಲಯ ಪರಿಷತ್ ಅಧ್ಯಕ್ಷ ಎಂ.ಎನ್. ಭಟ್ ಮದ್ಗುಣಿ, ಮಠದ ಆಡಳಿತಾಧಿಕಾರಿ ಟಿ. ಮಡಿಯಾಲ್, ಮಾಧ್ಯಮ ಸಮನ್ವಯಕಾರ ಪ್ರೊ. ಹರಿಶ್ಚಂದ್ರ ಭಟ್ ಉಪಸ್ಥಿತರಿದ್ದರು.
Be First to Comment