ನವಕರ್ನಾಟಕ ಪುಸ್ತಕಗಳ ಲೋಕಾರ್ಪಣೆ

ಬೆಂಗಳೂರು, ಜನವರಿ ೦೧, ೨೦೦೬ : ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿದ ೧೮ ಪುಸ್ತಕಗಳ ಲೋಕಾರ್ಪಣೆಯ ಕಾರ್ಯಕ್ರಮ ಇಂದು ಬೆಂಗಳೂರಿನ ಯವನಿಕ ಸಭಾಂಗಣದಲ್ಲಿ ನೆರವೇರಿತು. ನವಕರ್ನಾಟಕ ಪ್ರಕಾಶನ ಸಂಸ್ಥೆಯವರು ಪ್ರಕಟಿಸುತ್ತಿರುವ ಹೊಸತು ಪತ್ರಿಕೆಯಲ್ಲಿ ಪ್ರಕಟವಾದ ಪ್ರಾತಿನಿಧಿಕ ಲೇಖನಗಳನ್ನು ಆಯ್ದು ಈ ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಈ ಪುಸ್ತಗಳಿಗೆ ಹೊಸತು ವಾಚಿಕೆ ಎಂದು ಹೆಸರಿಸಲಾಗಿದೆ. ‘ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮ’, ‘ಬಾನಿಗೊಂದು ಕೈಪಿಡಿ’, ‘ಪ್ರಚಲಿತ ವಿದ್ಯಮಾನ’, ‘ವೈದ್ಯಲೋಚನ’, ‘ಇದು ನಮ್ಮ ಕರ್ನಾಟಕ’ -ಇತ್ಯಾದಿ ಶೀರ್ಷಿಕೆಗಳಲ್ಲಿ ಈ ಪುಸ್ತಕಗಳು ಸಾಹಿತ್ಯಾಸಕ್ತರಿಗೆ ಲಭ್ಯವಿವೆ. ಹೊಸತು ಪತ್ರಿಕೆಯ ಸಂಪಾದಕ ಡಾ. ಜಿ. ರಾಮಕೃಷ್ಣ ಪ್ರಾಸ್ತಾವಿಕ ಭಾಷಣ ಮಾಡಿ ಹೊಸತು ಪತ್ರಿಕೆಯ ಹೊಸತನ ಏನು ಎಂಬುದನ್ನು ವಿವರಿಸಿದರು. ಹಲವಾರು ಪತ್ರಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿರುವಾಗ ಹೊಸತು ಯಾವ ರೀತಿಯಲ್ಲಿ ತನ್ನದೇ ವಿಚಾರಧಾರೆಗೆ ಖ್ಯಾತವಾಗಿದೆ ಎಂದು ಅವರು ವಿವರಿಸಿದರು. ಬರಗೂರು ರಾಮಚಂದ್ರಪ್ಪ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಭಾಷಣ ಮಾಡಿದರು. ನಮಗೆ ಅಕ್ಷರಗಳ ಆತ್ಮವಿಶ್ವಾಸ ಬೇಕು ಆದರೆ ಅಕ್ಷರದ ಅಹಂಕಾರ ಇರಬಾರದು ಎಂದು ಅವರು ನುಡಿದರು. ಸಂಪಾದಕರುಗಳ ಪರವಾಗಿ ಚಂದ್ರಶೇಖರ ನುಂಗಲಿ ಮತ್ತು ಡಾ. ಬಿ. ಎಸ್. ಶೈಲಜ ಮಾತನಾಡಿದರು. ಡಾ. ಚೆನ್ನವೀರ ಕಣವಿ ಅಧ್ಯಕ್ಷತೆ ವಹಿಸಿದ್ದರು.

Leave a Reply