ಏಡಿಯಾ ಸೊಲ್ಯೂಶನ್ಸ್ ಕಂಪೆನಿಯಲ್ಲಿ ರಾಜ್ಯೋತ್ಸವ
ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಏಡಿಯ ಸೊಲೂಶನ್ಸ್ ಎಂಬ ಹೆಸರಿನ ಮಾಹಿತಿ ತಂತ್ರಜ್ಞಾನ ಕಂಪೆನಿಯಲ್ಲಿ ನವಂಬರ್ ೨೨, ೨೦೦೫ ರಂದು ರಾಜ್ಯೋತ್ಸವವನ್ನು ಆಚರಿಸಲಾಯಿತು. ಇತ್ತೀಚೆಗೆ ಮಾಹಿತಿ ತಂತ್ರಜ್ಞಾನ ಕಂಪೆನಿಗಳಿಂದ ಕನ್ನಡಕ್ಕೆ ಕೊಡುಗೆ ಏನಿಲ್ಲ ಎಂಬ ಕೂಗು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಈ ರೀತಿಯ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶ್ಲಾಘನೀಯ ಕೆಲಸ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಗ್ಗದ ಭಟ್ಟರೆಂದೇ ಖ್ಯಾತಿ ಪಡೆದ ಡಾ. ಲಕ್ಷ್ಮೀನಾರಾಯಣ ಭಟ್ಟರು, ಹೊಸದಿಗಂತ ಪತ್ರಿಕೆಯ ಪ್ರಧಾನ ಸಂಪಾದಕಾರದ ಶ್ರೀ ದು. ಗು. ಲಕ್ಷ್ಮಣ ಮತ್ತು ಕನ್ನಡದ ಪ್ರಪ್ರಥಮ ಅಂತರಜಾಲ ಪತ್ರಿಕೆ ವಿಶ್ವ ಕನ್ನಡದ ಸಂಪಾದಕರಾದ ಡಾ. ಯು. ಬಿ. ಪವನಜರು ಭಾಗವಹಿಸಿದ್ದರು.
ವಿಜಯಲಕ್ಷ್ಮಿಯವರ ಪ್ರಾರ್ಥನೆಯಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಕಂಪೆನಿಯ ಕನ್ನಡ ಉದ್ಯೋಗಿಗಳು ವೃಂದಗಾನದಲ್ಲಿ ಹಚ್ಚೇವು ಕನ್ನಡದ ದೀಪ ಹಾಡನ್ನು ಹಾಡುತ್ತಿದ್ದಂತೆ ಮುಖ್ಯ ಅತಿಥಿಗಳು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿವ ಮೂರ್ತಿ ಅವರು ತಮ್ಮ ಕಂಪೆನಿಯ ಬಗ್ಗೆ ಚುಟುಕಾಗಿ ಕನ್ನಡದಲ್ಲಿ ಮಾಹಿತಿ ನೀಡಿದರು. ಕಂಪೆನಿಯ ಅಧ್ಯಕ್ಷರಾದ ಆನಂದ ಸುದರ್ಶನ ಅವರು ಮಾತನಾಡಿ “ಇತ್ತೀಚೆಗೆ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕಂಪೆನಿಗಳ ಬಗ್ಗೆ ಸರಿಯಾದ ಮಾಹಿತಿ ಜನರಲ್ಲಿ ಇಲ್ಲದೆ ಕೆಲವರು ಐಟಿ ಕಂಪೆನಿಗಳ ವಿರುದ್ಧ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ಇದು ಬದಲಾವಣೆಯಾಗಬೇಕಾದರೆ ಐಟಿಯಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರು ಕೆಲವು ಸಮಾಜ ಸೇವೆಯ ಕೆಲಸಗಳನ್ನೂ ಮಾಡಬೇಕು ಮಾತ್ರವಲ್ಲ ಬಹುಮುಖ್ಯವಾಗಿ ಐಟಿ ಬಗ್ಗೆ ಜನರಿಗೆ ಮಾಹಿತಿ ನೀಡಲು ಕನ್ನಡದಲ್ಲಿ ಲೇಖನಗಳನ್ನು ಬರೆಯಬೇಕು” ಎಂದು ಹೇಳಿದರು.
ಡಾ. ಲಕ್ಷ್ಮೀನಾರಾಯಣ ಭಟ್ಟರು ಕವಿ ಡಿವಿಜಿ, ಅವರ ಮಂಕುತಿಮ್ಮನ ಕಗ್ಗ ಮತ್ತು ಜೀವನ ಧರ್ಮಯೋಗ, ಕೆ. ಎಸ್. ನರಸಿಂಹಸ್ವಾಮಿ, ಜಿ. ಪಿ. ರಾಜರತ್ನಂ ಅವರ ಎಂಡ್ಕುಡುಕ ರತ್ನನ ಹಾಡು, ಹೀಗೆ ಕನ್ನಡ ಕವಿಗಳ ವಾಣಿಗಳನ್ನು ಮತ್ತೊಮ್ಮೆ ನೆನಪು ಮಾಡಿಸಿದರು. ಕನ್ನಡ ಪ್ರೇಮವೆಂದರೆ ಇತರೆ ಭಾಷೆಗಳನ್ನು ದ್ವೇಷಿಸುವುದಲ್ಲ ಎಂಬುದನ್ನು ಅವರು ಒತ್ತಿ ಹೇಳಿದರು. ಇನ್ನು ಒಂದು ವರ್ಷದಲ್ಲಿ ಖಂಡಿತವಾಗಿ ಏಡಿಯ ಕಂಪೆನಿಯ ಉದ್ಯೋಗಿಗಳಿಂದ ಮಾಹಿತಿ ತಂತ್ರಜ್ಞಾನದ ಬಗ್ಗೆ ಕನಿಷ್ಠ ಒಂದು ಪುಸ್ತಕ ಮೂಡಿ ಬರಲಿ ಎಂದು ಅವರು ಹಾರೈಸಿದರು. ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಹಿರಿಯೂರು ಹಿರಿಯಣ್ಣಯ್ಯ ಅವರು ಕೂಡಲೆ ಆ ಬಗ್ಗೆ ಆಶ್ವಾಸನೆ ನೀಡಿದರು. ದು. ಗು. ಲಕ್ಷ್ಮಣ ಅವರು ಭಾರತೀಯತ್ವದ ಮಹತ್ವವನ್ನು ವಿವರಿಸಿದರು. ಕನ್ನಡಿಗರ ಮನೆಗಳಲ್ಲಿ ಹೇಗೆ ಅಪ್ಪ ಅಮ್ಮನ ಸ್ಥಾನವನ್ನು ಡ್ಯಾಡಿ ಮಮ್ಮಿಗಳು ಆಕ್ರಮಿಸಿವೆ, ಮಮ್ಮಿ ಎಂದರೆ ಹೆಣ ಎಂಬ ಅರ್ಥವೂ ಇದೆ ಎಂದು ಅವರು ವಿವರಿಸಿದರು. ಪ್ರಪಂಚವನ್ನೆಲ್ಲ ಕುಳಿತಲ್ಲೇ ಸರ್ಫ್ ಮಾಡುವಾಗ ಜೊತೆಯಲ್ಲೆ ಸ್ವಲ್ಪ ಅಂತರ್ಯಾಮಿಯಾಗಿಯೂ ವಿಹಾರ ನಡೆಸಿ ಅಂದರೆ ಸ್ವಲ್ಪ ಆತ್ಮ ವಿಮರ್ಶೆಯನ್ನೂ ಮಾಡಿಕೊಳ್ಳಿ ಎಂದು ಅವರು ಹಿತವಚನ ನುಡಿದರು. ದು. ಗು. ಲಕ್ಷ್ಮಣರ ಭಾಷಣದ ಪೂರ್ತಿ ಪಾಠ ಇಲ್ಲಿದೆ.
ಡಾ. ಯು. ಬಿ. ಪವನಜ ಅವರು “ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ” ಎಂಬ ವಿಷಯವಾಗಿ ಪ್ರಾತ್ಯಕ್ಷಿಕೆ ಸಹಿತವಾಗಿ ವಿವರಿಸಿದರು. ಗಣಕಗಳಲ್ಲಿ ಕನ್ನಡ ಎಂದರೆ ಕೇವಲ ಬೆರಳಚ್ಚು ಮಾಡುವುದಲ್ಲ, ಇಂಗ್ಲೀಶಿನಲ್ಲಿ ಏನೆಲ್ಲ ಸಾದ್ಯವೋ ಅದೆಲ್ಲವೂ ಕನ್ನಡದಲ್ಲೂ ಸಾಧ್ಯ ಎಂದವರು ವಿವರಿಸಿದರು. ಹಣವಿರುವವರು ಕನ್ನಡ ಬಳಸಿದರೆ, ಕನ್ನಡದ ಬಳಕೆಯನ್ನು ಒತ್ತಾಯಿಸಿದರೆ ಇತರೆ ಜನರು ಅದರಲ್ಲೂ ಮುಖ್ಯವಾಗಿ ವ್ಯಾಪಾರಿಗಳು ಕೇಳಿಯೇ ಕೇಳುತ್ತಾರೆ. ಆದುದರಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವ ಕನ್ನಡಿಗರು ಕನ್ನಡದ ಬಳಕೆಯನ್ನು ಜಾಸ್ತಿಯಾಗಿ ಮಾಡಬೇಕು ಮತ್ತು ಇತರರನ್ನು ಕನ್ನಡ ಬಳಸಲು ಒತ್ತಾಯಿಸಬೇಕು ಎಂದು ಅವರು ಕೇಳಿಕೊಂಡರು.
ಕಂಪೆನಿಯ ಉದ್ಯೋಗಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆಶುಭಾಷಣ ಸ್ಪರ್ಧೆ, ಕನ್ನಡ ಗೀತೆಗಳ ಗಾಯನ, ವೀಣಾ ವಾದನ ಇತ್ಯಾದಿಗಳ ನಂತರ ಹಿರಿಯೂರು ಹಿರಿಯಣ್ಣಯ್ಯ ಅವರು ವಂದನಾರ್ಪಣೆ ಸಲ್ಲಿಸಿದರು.